ಬಿಗ್‌ಬಾಸ್ ಆರಂಭಕ್ಕೆ ಮುನ್ನ, ಮಾಜಿ ವಿಜೇತರ ನೆನಪುಗಳ ಮೆರವಣಿಗೆ
ಬಿಗ್‌ಬಾಸ್ ಒಟಿಟಿ ಕನ್ನಡ ಕೆಲವೇ ಗಂಟೆಗಳಲ್ಲಿ ಪ್ರಾರಂಭವಾಗಲಿದೆ. ಬಿಗ್‌ಬಾಸ್ ಮನೆಯ ಪರಿಚಯವನ್ನು ನಟ ಸುದೀಪ್ ಈಗಾಗಲೇ ಮಾಡಿಕೊಟ್ಟಿದ್ದಾರೆ.
ಇಂದು ಸಂಜೆ ಏಳು ಗಂಟೆಗೆ ಅಧಿಕೃತವಾಗಿ ಬಿಗ್‌ಬಾಸ್ ಕನ್ನಡ ಒಟಿಟಿ ಪ್ರಾರಂಭವಾಗಲಿದೆ. ಆದರೆ ಅದಕ್ಕೆ ಮುನ್ನ ಬಿಗ್‌ಬಾಸ್‌ನ ಈ ಸೀಸನ್‌ಗೆ ಪ್ರವೇಶಿಕೆಯಾಗಿ ಈ ಹಿಂದಿನ ಬಿಗ್‌ಬಾಸ್ ಸೀಸನ್‌ಗಳಲ್ಲಿ ಗೆದ್ದ ವಿನ್ನರ್‌ಗಳನ್ನು ಕರೆತಂದು ಸಂದರ್ಶನ ಮಾಡಲಾಗುತ್ತಿದೆ.
ವೂಟ್‌ನಲ್ಲಿ 'ಬಿಗ್‌ಬಾಸ್ ಕರ್ಟನ್ ರೈಸರ್' ಹೆಸರಿನ ಶೋ ಲೈವ್‌ನಲ್ಲಿ ಪ್ರಸಾರವಾಗುತ್ತಿದ್ದು, ಬಿಗ್‌ಬಾಸ್ ಮೊದಲ ಸೀಸನ್ ವಿನ್ನರ್ ವಿಜಯ ರಾಘವೇಂದ್ರ ಇಂದ ಆರಂಭಿಸಿ, ಆಧುನಿಕ ಕೃಷಿಕ ಶಶಿ, ಕೊನೆಯ ಸೀಸನ್‌ನ ವಿನ್ನರ್ ಪಾವಗಡ ಮಂಜು, ಒಳ್ಳೆ ಹುಡುಗ ಪ್ರಥಮ್, ಚಂದನ್ ಶೆಟ್ಟಿ ಇನ್ನೂ ಹಲವರ ಸಂದರ್ಶನಗಳು ಒಂದರ ಹಿಂದೊಂದರಂತೆ ಪ್ರಸಾರವಾಗುತ್ತಿದೆ.

ನೆನಪು ಹಂಚಿಕೊಂಡ ವಿಜಯ ರಾಘವೇಂದ್ರ
ವಿಜಯ ರಾಘವೇಂದ್ರ ಮೊದಲ ಬಿಗ್‌ಬಾಸ್‌ನ ನೆನಪುಗಳನ್ನು ಹಂಚಿಕೊಂಡಿದ್ದು ಮಾತ್ರವೇ ಅಲ್ಲದೆ ಆಗ ತಮ್ಮೊಂದಿಗೆ ಬಿಗ್‌ಬಾಸ್ ಮನೆಯಲ್ಲಿದ್ದ ಬ್ರಹ್ಮಾಂಡ ಗುರೂಜಿ, ನಿವೇದಿತಾ, ಅರುಣ್ ಸಾಗರ್, ತಿಲಕ್ ಇನ್ನಿತರರ ಧ್ವನಿ ಹಾವ ಭಾವ ನಕಲು ಸಹ ಮಾಡಿ ರಂಜಿಸಿದರು. ಅಲ್ಲದೆ ಮೊದಲ ಸೀಸನ್‌ನ ಕೆಲವು ಅಪರೂಪದ ಸಂಗತಿಗಳನ್ನು ಸಹ ಅವರು ನೆನಪು ಮಾಡಿಕೊಂಡರು. ಈ ಬಾರಿ ಬಿಗ್‌ಬಾಸ್ ಮನೆಯೊಳಗೆ ಹೋಗುತ್ತಿರುವ ಸ್ಪರ್ಧಿಗಳಿಗೆ ಶುಭಾಶಯ ಸಹ ಹೇಳಿದರು.

ಸಸಿ ತೆಗೆದುಕೊಂಡು ಹೋಗಿದ್ದ ಶಶಿ
ಶಶಿ ಹಾಗೂ ಪಾವಗಡ ಮಂಜು ಒಟ್ಟಾಗಿ ಸಂದರ್ಶನದಲ್ಲಿ ಭಾಗವಹಿಸಿದ್ದರು. ತಾವು ವಿಜೇತರೆಂದು ಘೋಷಿಸಿದ ಸಂದರ್ಭದಲ್ಲಿ ತಮಗಾದ ಅನುಭವವನ್ನು ಅವರು ಹಂಚಿಕೊಂಡರು. ಶಶಿ, ತಾವು ಬಿಗ್‌ಬಾಸ್ ಮನೆಯಿಂದ ತೆಗೆದುಕೊಂಡು ಹೋದ ಗಿಡವೊಂದನ್ನು ಸಾವಿರ ಗಿಡಗಳನ್ನಾಗಿ ಪರಿವರ್ತಿಸಿ ಹಲವರಿಗೆ ಹಂಚಿದ ವಿಷಯ ಹಂಚಿಕೊಂಡರು. ಮಂಜು ಪಾವಗಡ ತಮ್ಮದೇ ಶೈಲಿಯಲ್ಲಿ ಬಿಗ್‌ಬಾಸ್ ಮನೆಯೊಳಗೆ ನಡೆದ ಸಂಗತಿಗಳನ್ನು, ತಾವು ಹೊರಗೆ ಬಂದ ಬಳಿಕ ಆದ ಬದಲಾವಣೆಗಳನ್ನು ಹಂಚಿಕೊಂಡರು.

ಡಬ್ಬದ ಕತೆ ಹೇಳಿದ ಚಂದನ್
ಇನ್ನು ಪ್ರಥಮ್ ಹಾಗೂ ಚಂದನ್ ಶೆಟ್ಟಿ ಒಟ್ಟಿಗೆ ಸಂದರ್ಶನದಲ್ಲಿ ಭಾಗವಹಿಸಿದ್ದರು. ಚಂದನ್ ಶೆಟ್ಟಿ, ತಮಗೆ ಬಿಗ್‌ಬಾಸ್ ಮನೆಯಲ್ಲಿ ಸಿಕ್ಕಿದ ಡಬ್ಬ ಅನ್ನು ತಮ್ಮೊಂದಿಗೆ ಸಂದರ್ಶನಕ್ಕೆ ತಂದಿದ್ದಲ್ಲದೆ ಅದೇ ಡಬ್ಬವನ್ನು ಬಡಿಯುತ್ತಾ ಬಿಗ್‌ಬಾಸ್ ಮನೆಯಲ್ಲಿ ತಾವು ಹಾಡಿದ ಹಾಡುಗಳನ್ನು ಹಾಡಿದರು. ಡಬ್ಬದ ಹಿಂದಿನ ಆಸಕ್ತಿಕರ ಕತೆಯನ್ನು ಹಂಚಿಕೊಂಡರು. ತಾವು ಸಂಗೀತಗಾರನಾಗಿ ಇನ್ನಷ್ಟು ಜನಪ್ರಿಯನಾಗಲು ಬಿಗ್‌ಬಾಸ್ ಹೇಗೆ ಸಹಾಯ ಮಾಡಿತೆಂದು ಹೇಳಿದರು. ತಮ್ಮ ಹಾಗೂ ನಿವೇದಿತಾ ಮದುವೆಗೆ ಕಾರಣವಾದ ಈ ಶೋಗೆ ಧನ್ಯವಾದವನ್ನೂ ಹೇಳಿದರು.

ಬಿಗ್‌ಬಾಸ್‌ಗೆ ಸದಾ ಋಣಿ ಎಂದ ಪ್ರಥಮ್
ಇನ್ನು ಪ್ರಥಮ್ ಅಂತೂ ಬಿಗ್‌ಬಾಸ್ ತನ್ನ ಜೀವನದಲ್ಲಿ ಎಷ್ಟು ಪ್ರಮುಖ ಪಾತ್ರ ವಹಿಸಿದೆ ಎಂಬುದನ್ನು ನೆನಪು ಮಾಡಿಕೊಟ್ಟರು. ಅಲ್ಲದೆ ತಾವು ಬಿಗ್‌ಬಾಸ್ ಮನೆಗೆ ಹೋಗುವ ಮುನ್ನ ದೇವೇಗೌಡರು, ಈಶ್ವರಪ್ಪ, ಶೋಭಾ ಕರಂದ್ಲಾಜೆ ಇನ್ನಿತರರು ವಿಡಿಯೋದಲ್ಲಿ ಶುಭಾಶಯ ಹೇಳಿದ್ದನ್ನು ನೆನಪು ಮಾಡಿಕೊಂಡರು. ಹಾಗೂ ಶಿವರಾಜ್ ಕುಮಾರ್ ನೀಡಿದ ಸಹಕಾರ ಹಾಗೂ ಸುದೀಪ್ ನೀಡಿದ ಬೆಂಬಲ ನೆನಪು ಮಾಡಿಕೊಂಡರು. ಸಾಮಾನ್ಯ ವ್ಯಕ್ತಿಯಾಗಿ ಒಳಗೆ ಹೋಗಿ ಇಂದು ಜನಪ್ರಿಯ ವ್ಯಕ್ತಿಯಾಗಿರುವುದಕ್ಕೆ ಬಿಗ್‌ಬಾಸ್ ಕಾರಣ ಎಂದರು ಪ್ರಥಮ್. ಬಿಗ್‌ಬಾಸ್ ಒಟಿಟಿ ಕನ್ನಡ ಸೀಸನ್ ಒಂದು ಆಗಸ್ಟ್ 6 ರಂದು ಸಂಜೆ ಏಳು ಗಂಟೆಗೆ ಪ್ರಸಾರವಾಗಲಿದೆ. ಸತತವಾಗಿ 42 ದಿನಗಳ ಕಾಲ ದಿನದ 24 ಗಂಟೆಯೂ ಲೈವ್‌ನಲ್ಲಿ ಶೋ ಪ್ರಸಾರವಾಗಲಿದೆ.


Click it and Unblock the Notifications











