ಬಿಗ್‌ಬಾಸ್ ಓಟಿಟಿ ಕಾರ್ಯಕ್ರಮದಲ್ಲಿ ಮಹಿಳಾ ಸ್ಪರ್ಧಿಯ ದೇಹಕ್ಕೆ ಕೈಹಾಕಿದ ಮಾಡೆಲ್; ನೆಟ್ಟಿಗರ ಆಕ್ರೋಶ
ಭಾರತದಲ್ಲಿ ಅತಿಹೆಚ್ಚು ಜನಪ್ರಿಯತೆ ಪಡೆದುಕೊಂಡ ಟಿವಿ ರಿಯಾಲಿಟಿ ಶೋಗಳಲ್ಲಿ ಮುಂದಿನ ಸಾಲಿನಲ್ಲಿ ನಿಲ್ಲುವುದು ಬಿಗ್ ಬಾಸ್ ರಿಯಾಲಿಟಿ ಶೋ. ಈ ರಿಯಾಲಿಟಿ ಶೋ ಎಷ್ಟು ಮನರಂಜನೆ ನೀಡುತ್ತೋ ಅಷ್ಟೇ ವಿವಾದಗಳಿಗೂ ಸಹ ಒಳಗಾದ ಸಾಕಷ್ಟು ಉದಾಹರಣೆಗಳಿವೆ.
ಹೀಗೆ ವಿವಿಧ ಕಾರಣಗಳಿಂದ ನೋಡುಗರ ಗಮನವನ್ನು ಸೆಳೆಯುವ ಬಿಗ್ ಬಾಸ್ ಕಾರ್ಯಕ್ರಮದ ಓಟಿಟಿ ಹಿಂದಿ ವರ್ಷನ್‌ನ ಎರಡನೇ ಸೀಸನ್ ಇದೀಗ ಆರಂಭವಾಗಿದೆ. ಜೂನ್ 17ರಿಂದ ಈ ಹಿಂದಿ ಬಿಗ್ ಬಾಸ್ ಓಟಿಟಿ ವರ್ಷನ್‌ನ ಎರಡನೇ ಆವೃತ್ತಿ ಶುರುವಾಗಿದ್ದು, ಈ ಬಾರಿ ಬಾಲಿವುಡ್ ನಟ ಸಲ್ಮಾನ್ ಖಾನ್ ನಿರೂಪಣೆಯ ಜವಾಬ್ದಾರಿಯನ್ನು ಹೊರುವ ಮೂಲಕ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಕಾಲಿಟ್ಟಿದ್ದಾರೆ.

ಈ ಬಾರಿ ಒಟ್ಟು 13 ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದು, ವಿವಿಧ ಕ್ಷೇತ್ರಗಳ ಹಲವಾರು ಹೆಸರುವಾಸಿಗಳು ಮನೆ ಪ್ರವೇಶಿಸಿದ್ದಾರೆ. ಇನ್ನು ಪ್ರತಿ ಬಾರಿಯಂತೆ ಈ ಬಾರಿಯೂ ಸಹ ಬಿಗ್ ಬಾಸ್ ಓಟಿಟಿ ಮೊದಲ ವಾರದಲ್ಲಿಯೇ ಹಲವಾರು ವಿವಾದಗಳಿಗೆ ಸುದ್ದಿಯಾಗಿದೆ. ಈ ಪೈಕಿ ಮಾಡೆಲ್ ಹಾಗೂ ನಟನಾಗಿರುವ ಜದ್ ಹದೀದ್ ತನ್ನ ಸಹ ಸ್ಪರ್ಧಿ ಆಕಾಂಕ್ಷ ಪೂರಿ ಜತೆ ಹದ್ದು ಮೀರಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಹೌದು, ಆಕಾಂಕ್ಷ ಪೂರಿ ಜತೆ ಮಾತನಾಡುವಾಗ ಜದ್ ಹದೀದ್ ಆಕೆಯ ದೇಹ ಮುಟ್ಟಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದರಿಂದ ಆಕಾಂಕ್ಷ ಪೂರಿ ಸಹ ಮುಜುಗರಕ್ಕೊಳಗಾಗಿದ್ದು, ನೆಟ್ಟಿಗರು ಮಾಡೆಲ್‌ನ ಈ ಅನುಚಿತ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೊವನ್ನು ಹಂಚಿಕೊಳ್ಳುತ್ತಿರುವ ನೆಟ್ಟಿಗರು ಜದ್ ಹದೀದ್ ವರ್ತನೆ ಕುರಿತು ಮಾತನಾಡಿ ವಾರ್ನಿಂಗ್ ನೀಡಬೇಕು ಎಂದು ಬರೆದುಕೊಂಡು ಟ್ವೀಟ್ ಮಾಡಿದ್ದಾರೆ. ಇನ್ನು ಆಕಾಂಕ್ಷ ಪೂರಿ ಸಹ ಜದ್ ಹದೀದ್ ಜತೆ ಸಲುಗೆಯಿಂದಲೇ ಇದ್ದು, ಈ ಘಟನೆಯಿಂದ ಮಾತ್ರ ಮುಜುಗರ ಅನುಭವಿಸಿದ್ದಂತೂ ನಿಜ.
ಇನ್ನು ಈ ಬಿಗ್ ಬಾಸ್ ಓಟಿಟಿ ಪ್ರತಿದಿನ ರಾತ್ರಿ 9 ಗಂಟೆಗೆ ಜಿಯೋ ಸಿನಿಮಾದಲ್ಲಿ ಸ್ಟ್ರೀಮ್ ಆಗುತ್ತಿದ್ದು, ಉಚಿತವಾಗಿ ಈ ಶೋವನ್ನು ವೀಕ್ಷಿಸಬಹುದಾಗಿದೆ.
More from Filmibeat