SRK Plus: ಸ್ವಂತ ಒಟಿಟಿ ಘೋಷಿಸಿದ ಶಾರುಖ್ ಖಾನ್: ಮಗನಿಗಾಗಿ ಬಂಡವಾಳ?
ಶಾರುಖ್ ಖಾನ್‌ರ ಯಾವೊಂದು ಹೊಸ ಸಿನಿಮಾ ಸಹ ಈವರೆಗೆ ಒಟಿಟಿಗೆ ಬಂದಿಲ್ಲ. ಒಟಿಟಿಗಳ ರಿಯಾಲಿಟಿ ಶೋ, ಟಾಕ್ ಶೋಗಳಲ್ಲಿಯೂ ಶಾರುಖ್ ಖಾನ್ ಭಾಗವಹಿಸಿಲ್ಲ. ಒಟಿಟಿಗೆ ಜಾಹೀರಾತನ್ನಷ್ಟೆ ನೀಡಿದ್ದಾರೆ ಎಸ್‌ಆರ್‌ಕೆ, ಆ ಜಾಹೀರಾತಿನಲ್ಲೂ ಶಾರುಖ್‌ರ ಸಿನಿಮಾ ಒಟಿಟಿಯಲ್ಲಿ ಇಲ್ಲದಿರುವುದಕ್ಕೆ ವ್ಯಂಗ್ಯಕ್ಕೆ ಒಳಗಾಗಿದ್ದಾರೆ. ಆದರೆ ಈಗ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಸ್ವತಃ ತಮ್ಮದೇ ಒಟಿಟಿ ಒಂದನ್ನು ಹೊರತರುತ್ತಿರುವುದಾಗಿ ಘೋಷಿಸಿದ್ದಾರೆ.
Recommended Video

ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಪ್ರಕಟಿಸಿರುವ ಶಾರುಖ್ ಖಾನ್ 'ಎಸ್‌ಆರ್‌ಕೆ ಪ್ಲಸ್' ಶೀಘ್ರದಲ್ಲಿ ಬರಲಿದೆ ಎಂದಿದ್ದಾರೆ. ''ಒಟಿಟಿ ದುನಿಯಾದಲ್ಲಿ ಒಂದು ಅದ್ಭುತ ಶೀಘ್ರದಲ್ಲಿಯೇ ನಡೆಯಲಿದೆ'' ಎಂದು ಕ್ಯಾಪ್ಷನ್ ಬರೆದಿದ್ದಾರೆ ಶಾರುಖ್ ಖಾನ್.
ಶಾರುಖ್ ಖಾನ್, ರೆಡ್ ಚಿಲ್ಲೀಸ್ ಹೆಸರಿನ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ ಅದರ ಮೂಲಕ ಹಲವು ಸಿನಿಮಾ, ವೆಬ್ ಸರಣಿ, ಟಿವಿ ಶೋಗಳನ್ನು ನಿರ್ಮಾಣ ಮಾಡುತ್ತಾ ಬಂದಿದ್ದಾರೆ. ಇದೇ ಸಂಸ್ಥೆಯ ಅಡಿಯಲ್ಲಿ ಈಗ ಒಟಿಟಿ ಸಹ ಸ್ಥಾಪಿಸಲು ಹೊರಟಿದ್ದಾರೆ ಶಾರುಖ್.
ಈ ಹಿಂದೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಜೊತೆಗೆ ಕೆಲವು ಸರಣಿ ಜಾಹಿರಾತುಗಳಲ್ಲಿ ಶಾರುಖ್ ಕಾಣಿಸಿಕೊಂಡಿದ್ದರು. ಆಗ ಶಾರುಖ್ ಒಟಿಟಿಗೆ ಪಾದಾರ್ಪಣೆ ಮಾಡಲಿದ್ದಾರೆ ಎನ್ನಲಾಗಿತ್ತು. ಆದರ ಬಳಿಕ ಆರ್ಯನ್ ಖಾನ್ ಪ್ರಕರಣ ನಡೆದ ಕಾರಣ ಆ ಯೋಜನೆ ಕೈಬಿಡಲಾಯಿತು. ಈಗ ಸ್ವಂತವಾಗಿ ಒಟಿಟಿ ತೆರೆಯಲು ಹೊರಟಿದ್ದಾರೆ ಶಾರುಖ್. ತಮ್ಮ ಒಟಿಟಿಗೆ 'ಎಸ್‌ಆರ್‌ಕೆ ಪ್ಲಸ್' ಎಂದು ಹೆಸರಿಟ್ಟಿರುವ ಕಾರಣ ಇದು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ಗೆ ಪ್ರತಿಸ್ಪರ್ಧೆಯಾಗಿ ಮಾಡುತ್ತಿರುವ ಪ್ರಯತ್ನವಾ ಎಂಬ ಅನುಮಾನವೂ ಮೂಡುತ್ತಿದೆ.

ಶುಭ ಕೋರಿದ ಸಲ್ಮಾನ್ ಖಾನ್
ಶಾರುಖ್ ಖಾನ್ ತಮ್ಮ ಹೊಸ ಒಟಿಟಿ ಫ್ಲಾಟ್‌ಫಾರ್ಮ್ ಘೋಷಣೆಯ ಸೂಚನೆ ನೀಡುತ್ತಿದ್ದಂತೆ ಅವರ ಆತ್ಮೀಯ ಗೆಳೆಯ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಟ್ವಿಟ್ಟರ್ ಮೂಲಕ ಶಾರುಖ್ ಖಾನ್‌ಗೆ ಶುಭ ಕೋರಿದ್ದಾರೆ. ''ಇಂದಿನ ಪಾರ್ಟಿ ನಿನ್ನ ಕಡೆಯಿಂದ, ಹೊಸ ಒಟಿಟಿ ಅಪ್ಲಿಕೇಶನ್ ಪ್ರಾರಂಭ ಮಾಡುತ್ತಿರುವ ನಿನಗೆ ಶುಭಾಶಯ'' ಎಂದಿದ್ದಾರೆ. ಸಲ್ಮಾನ್ ಖಾನ್ ಮಾತ್ರವೇ ಅಲ್ಲ ನಿರ್ದೇಶಕ ಅನುರಾಗ್ ಕಶ್ಯಪ್ ಹಾಗೂ ಇತರ ಕೆಲವು ಬಾಲಿವುಡ್ ಮಂದಿ ಸಹ ಶಾರುಖ್ ಖಾನ್‌ಗೆ ಶುಭಾಶಯ ತಿಳಿಸಿದ್ದಾರೆ.

ಆರ್ಯನ್ ಖಾನ್‌ಗಾಗಿ ಒಟಿಟಿ ಪ್ರಾರಂಭಿಸಿದರೇ ಎಸ್‌ಆರ್‌ಕೆ
ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸಿನಿಮಾ ಪದವಿ ಪೂರೈಸಿದ್ದು, ಹೊಸ ವೆಬ್ ಸರಣಿಯೊಂದನ್ನು ನಿರ್ದೇಶನ ಮಾಡುವ ಯೋಜನೆಯಲ್ಲಿದ್ದಾರೆ. ಈ ಬಗ್ಗೆ ಕೆಲವು ಒಟಿಟಿಗಳನ್ನು ಸಂಪರ್ಕ ಸಹ ಮಾಡಿದ್ದರು ಎಂಬ ಸುದ್ದಿ ಕೆಲ ದಿನಗಳ ಹಿಂದಷ್ಟೆ ಹರಿದಾಡಿತ್ತು. ಇದೀಗ ಹಠಾತ್ತನೆ ಶಾರುಖ್ ಖಾನ್ ತಮ್ಮದೇ ಹೊಸ ಒಟಿಟಿ ಅಪ್ಲಿಕೇಶನ್ ಬಿಡುಗಡೆ ಮಾಡಿದ್ದು, ಇದೇ ಒಟಿಟಿಯಲ್ಲಿ ಆರ್ಯನ್ ನಿರ್ದೇಶನದ ವೆಬ್ ಸರಣಿ ಪ್ರಸಾರವಾಗುವ ಸಾಧ್ಯತೆ ಇದೆ. ಮಗನಿಗಾಗಿಯೇ ಎಸ್‌ಆರ್‌ಕೆ ಒಟಿಟಿ ಅಪ್ಲಿಕೇಶನ್ ನಿರ್ಮಿಸಿದ್ದಾರೆ ಎಂಬ ಮಾತುಗಳೂ ಇವೆ.

ಯಶಸ್ಸು ಗಳಿಸಲಿದೆಯೇ ಒಟಿಟಿ?
ಭಾರತದಲ್ಲಿ ಈಗಾಗಲೇ ನೆಟ್‌ಫ್ಲಿಕ್ಸ್, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್, ಅಮೆಜಾನ್ ಪ್ರೈಂ, ಸೋನಿ ಲಿವ್, ಜೀ5, ಆಹಾ ಇನ್ನೂ ಹಲವಾರು ಒಟಿಟಿಗಳು ಪ್ರೇಕ್ಷಕರಿಗೆ ಕಂಟೆಂಟ್ ಹಂಚುತ್ತಿವೆ. ಇವುಗಳ ನಡುವೆ ಶಾರುಖ್ ಖಾನ್‌ರ ಹೊಸ ಒಟಿಟಿ ಹೊಸದೇನನ್ನು ನೀಡಬಲ್ಲದು ಮತ್ತೆ ಹೇಗೆ ಯಶಸ್ಸು ಸಾಧಿಸಬಹುದು ಎಂಬುದನ್ನು ಕಾದು ನೋಡಬೇಕಿದೆ.

ಶಾರುಖ್‌ರ ಮುಂಬರುವ ಸಿನಿಮಾಗಳು
ಸಿನಿಮಾಗಳ ವಿಷಯಕ್ಕೆ ಮರಳುವುದಾದರೆ ಶಾರುಖ್ ಖಾನ್ ನಟನೆಯ ಹೊಸ ಸಿನಿಮಾ 'ಪಠಾಣ್' ಬಿಡುಗಡೆಗೆ ಸಜ್ಜಾಗುತ್ತಿದೆ. ಶಾರುಖ್ ಜೊತೆಗೆ ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ನಟಿಸಿರುವ ಈ ಸಿನಿಮಾ ಗೂಢಚಾರಿಯ ಕತೆಯನ್ನು ಹೊಂದಿದ್ದು ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಹಾಗೂ ಹೃತಿಕ್ ರೋಷನ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾವು 2023 ಜನವರಿ 23ಕ್ಕೆ ಬಿಡುಗಡೆ ಆಗಲಿದೆ. ಇದರ ಜೊತೆಗೆ ತಮಿಳಿನ ನಿರ್ದೇಶಕ ಅಟ್ಲಿ ನಿರ್ದೇಶನದ ಹೊಸ ಸಿನಿಮಾದಲ್ಲಿ ಶಾರುಖ್ ನಟಿಸುತ್ತಿದ್ದು ಸಿನಿಮಾದ ಚಿತ್ರೀಕರಣ ಈಗಾಗಲೇ ಆರಂಭವಾಗಲಿದೆ.


Click it and Unblock the Notifications











