ಮದ್ವೆಯಾದ ಎರಡೇ ತಿಂಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ- ಚಹಾಲ್ ಮಾಜಿ ಪತ್ನಿ ಧನಶ್ರೀ ಸ್ಫೋಟಕ ಹೇಳಿಕೆ
ಮದುವೆ ಎನ್ನುವುದು ಸಮರಸ ಜೀವನದ ಆರಂಭ. ಜೊತೆಗಾರ ಅಥವಾ ಜೊತೆಗಾರ್ತಿಯ ಆಯ್ಕೆಗೆ ಮದುವೆ ಎನ್ನುವುದು ಸಾಮಾಜಿಕ ಮನ್ನಣೆ ಪಡೆದಿರುವ ಅಡಿಪಾಯ. ಇನ್ನೂ ಮದುವೆ ಎನ್ನುವುದು ಸ್ವರ್ಗದಲ್ಲಿ ನಿಶ್ಚಯವಾಗಿ ಭೂಲೋಕದಲ್ಲಿ ನಡೆಯುವಂತಹದ್ದು ಎನ್ನುವುದು ಹಿರಿಯರ ನಂಬಿಕೆ. ಆದರೆ.. ಈಗೀಗ ಮದುವೆ ಕೇವಲ ಆಡಂಬರಕ್ಕೆ ಮಾತ್ರ ಸೀಮಿತವಾಗುತ್ತಿದೆ. ವೈಭವ ಮತ್ತು ಭವ್ಯತೆಗೆ ಮನಸೋತ ಅನೇಕರು ಮದುವೆಯ ಮಹತ್ವವನ್ನೇ ಮರೆಯುತ್ತಿದ್ದಾರೆ.
ಇನ್ನೂ.. ಬಣ್ಣದ ಲೋಕದಲ್ಲಿ ಈ ಮದುವೆ.. ಮನೆ.. ಜವಾಬ್ದಾರಿಗಳಿಂದ ನುಣುಚಿಕೊಳ್ಳುವ ಪ್ರಯತ್ನವನ್ನು ಹಲವರು ಮಾಡುತ್ತಲೇ ಇರುತ್ತಾರೆ. ಚಿಕ್ಕ ಚಿಕ್ಕ ವಿಚಾರಕ್ಕೆ ತಮ್ಮ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳುತ್ತಾರೆ.

ಇದಕ್ಕೆ ಕೈಗನ್ನಡಿ ಎಂಬಂತೆ ಕಳೆದ ಎರಡು ಮೂರು ವರ್ಷಗಳಲ್ಲಿ ಹಲವಾರು ತಾರೆಯರು ಈ ಮದುವೆಯ ಸಂಕೋಲೆಯಿಂದ ಮುಕ್ತರಾಗಿದ್ದಾರೆ. ತಮ್ಮ ತಮ್ಮ ದಾರಿಯಲ್ಲಿ ಮುನ್ನಡೆಯುತ್ತಿದ್ದಾರೆ. ಮತ್ತೂ ಕೆಲವರು ಮದುವೆ ಮುರಿದು ಬಿದ್ದ ನಂತರ ಮುಂದಕ್ಕೋಗದೇ ಪರಸ್ಪರ ಕೆಸರೆರಚುತ್ತಿದ್ದಾರೆ. ಉದಾಹರಣೆಗೆ ಯಜುವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾ.
ಹೌದು, ಎಲ್ಲರಿಗೆ ಗೊತ್ತಿರುವಂತೆ ಭಾರತ ತಂಡದ ಕ್ರಿಕೆಟರ್ ಯಜುವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾ ಅವರ ದಾಂಪತ್ಯ ಮುರಿದು ಬಿದ್ದಿದೆ. ನಾನೊಂದು ತೀರ.. ನೀನೊಂದು ತೀರ.. ಎನ್ನುವಂತೆ ಇಬ್ಬರು ದೂರವಾಗಿದ್ದಾರೆ.
ಆದರೆ.. ಹಾದಿ ಬೀದಿಯಲ್ಲಿ ಇಬ್ಬರು ರಂಪ ರಾಮಾಯಣ ಮಾಡುತ್ತಿದ್ದಾರೆ. ಸಂದರ್ಶನ ಕೊಡುವ ನೆಪದಲ್ಲಿ ಪರಸ್ಪರ ಕೆಸರು ಎರಚುತ್ತಿದ್ದಾರೆ. ಹೀಗಿರುವಾಗ ಇದೀಗ ಧನಶ್ರೀ ವರ್ಮಾ ಮತ್ತೊಮ್ಮೆ ಯಜುವೇಂದ್ರ ಚಹಾಲ್ ಕುರಿತು ಮಾತನಾಡಿದ್ಧಾರೆ.
ಹೌದು, ಅಸಲಿಗೆ ''ಅಮೆಜಾನ್''ನಲ್ಲಿ ''ಬಿಗ್ ಬಾಸ್'' ಕಾರ್ಯಕ್ರಮವನ್ನೇ ಹೋಲುವ ಒಂದು ಕಾರ್ಯಕ್ರಮ ಶುರುವಾಗಿದೆ. ''ರೈಸ್ ಅಂಡ್ ಫಾಲ್'' ಎನ್ನುವುದು ಈ ಕಾರ್ಯಕ್ರಮದ ಹೆಸರು. ಸದ್ಯ ಈ ಮನೆಯಲ್ಲಿ ಧನಶ್ರೀ ವರ್ಮಾ ಮತ್ತೊಮ್ಮೆ ಚಹಾಲ್ ಹೆಸರೇಳದೇ ಬಾಂಬ್ ಸಿಡಿಸಿದ್ದಾರೆ.

ದ್ಯಾನಿಶ್ ಸೇಠ್ ಅವರ ಸಹೋದರಿ ಕುಬ್ರಾ ಸೇಠ್ ಜೊತೆ ಮಾತನಾಡುವ ಸಮಯದಲ್ಲಿ ಧನಶ್ರೀ ಅವರಿಗೆ ಕುಬ್ರಾ ಸೇಠ್ ವ್ಯೆಯಕ್ತಿಕ ಪ್ರಶ್ನೆ ಕೇಳಿದ್ದಾರೆ. ಇನ್ನೂ ಈ ಸಂಬಂಧ ಮುಂದುವರೆಯಲು ಸಾಧ್ಯ ಇಲ್ಲ, ನಾನು ತಪ್ಪು ಮಾಡಿದೆ ಎನ್ನುವ ವಿಚಾರ ನಿಮಗೆ ಗೊತ್ತಾಗಿದ್ದು ಯಾವಾಗ ಎಂದು ಧನಶ್ರೀಗೆ ಕುಬ್ರಾ ಕೇಳಿದ್ದಾರೆ. ಇದಕ್ಕೆ ಧನಶ್ರೀ ಮೊದಲನೇ ವರ್ಷದಲ್ಲಿಯೇ ಗೊತ್ತಾಯ್ತು. ಕೇವಲ ಎರಡೇ ತಿಂಗಳಿನಲ್ಲಿ ಅವನನ್ನ ನಾನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದೇ ಎಂದು ಹೇಳಿದ್ದಾರೆ. ಧನಶ್ರೀ ಅವರ ಈ ಮಾತು ಕೇಳಿ ಕುಬ್ರಾ ಶಾಕ್ ಆಗಿದ್ದಾರೆ.
ಸದ್ಯ ಧನಶ್ರೀ ವರ್ಮಾ ಮತ್ತು ಕುಬ್ರಾ ಸೇಠ್ ನಡುವೆ ನಡೆದ ಈ ಮಾತುಕತೆಯ ತುಣುಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಲವು ಅಭಿಪ್ರಾಯಗಳು ಕೂಡ ವ್ಯಕ್ತವಾಗುತ್ತಿವೆ. ಕೆಲವರು ಧನಶ್ರೀ ವರ್ಮಾ ಪರ ವಕಾಲತ್ತು ವಹಿಸಿದರೆ ಇನ್ನೂ ಕೆಲವರು ಚಹಾಲ್‌ಗೆ ಮಾನಸಿಕ ಕಿರುಕುಳ ನೀಡಬೇಕೆಂಬ ಉದ್ದೇಶದಿಂದಲೇ ಧನಶ್ರೀ ಈ ತರಹದ ಆರೋಪಗಳನ್ನು ಮಾಡುತ್ತಿದ್ದಾರೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇಬ್ಬರಲ್ಲಿ ಯಾರು ಯಾರಿಗೆ ಮೋಸ ಮಾಡಿದರು ಎನ್ನುವುದೇ ನಮಗೆ ಅರ್ಥ ಆಗುತ್ತಿಲ್ಲ ಎಂದು ಕೂಡ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ಹೀಗೆ ಧನಶ್ರೀ ವರ್ಮಾ ಅವರ ಈ ಮಾತುಗಳ ಕುರಿತು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾದ ಚರ್ಚೆ ಶುರುವಾಗಿದೆ. ಮಾಜಿ ಪತ್ನಿಯ ಈ ಮಾತುಗಳಿಗೆ ಯುಜುವೇಂದ್ರ ಚಹಾಲ್ ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ''ರೈಸ್ ಆಂಡ್ ಫಾಲ್'' ಕಾರ್ಯಕ್ರಮದ ಮೂಲಕ ಮುಂದೆ ಮತ್ತೆ ಚಹಾಲ್ ಮೇಲೆ ಧನಶ್ರೀ ಆರೋಪಗಳನ್ನು ಮಾಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











