CCL 2023: ಮೊದಲ ಇನ್ನಿಂಗ್ಸ್ ಮುಕ್ತಾಯ; ಕೃಷ್ಣ, ಪ್ರದೀಪ್ ಅಬ್ಬರಕ್ಕೆ ಮಂಕಾದ ಚೆನ್ನೈ ರೈನೋಸ್

ಸದ್ಯ ಹತ್ತನೇ ಆವೃತ್ತಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಜರುಗುತ್ತಿದೆ. ಈ ಬಾರಿಯ ಟೂರ್ನಿಯಲ್ಲಿ ಕರ್ನಾಟಕ ಬುಲ್ಡೋಜರ್ಸ್, ತೆಲುಗು ಟೈಟಾನ್ಸ್, ಬೆಂಗಾಲ್ ಟೈಗರ್ಸ್, ಭೋಜ್‌ಪುರಿ ದಬಾಂಗ್ಸ್, ಚೆನ್ನೈ ರೈನೋಸ್, ಕೇರಳ ಸ್ಟ್ರೈಕರ್ಸ್, ಮುಂಬೈ ಹೀರೊಸ್ ಹಾಗೂ ಪಂಜಾಬ್ ದೆ ಶೇರ್ ಹೀಗೆ ಒಟ್ಟು ಎಂಟು ತಂಡಗಳು ಕಣಕ್ಕಿಳಿದಿವೆ.
ಪ್ರಸ್ತುತ ಲೀಗ್ ಹಂತದ ಪಂದ್ಯಗಳು ಜರುಗುತ್ತಿದ್ದು, ಒಟ್ಟು 16 ಲೀಗ್ ಪಂದ್ಯಗಳ ಪೈಕಿ 9 ಪಂದ್ಯಗಳು ಮುಗಿದಿವೆ. ಇಂದು ( ಮಾರ್ಚ್ 4 ) ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 9ನೇ ಪಂದ್ಯದಲ್ಲಿ ತೆಲುಗು ವಾರಿಯರ್ಸ್ ಹಾಗೂ ಪಂಜಾಬ್ ದೆ ಶೇರ್ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ತೆಲುಗು ವಾರಿಯರ್ಸ್ ವಿರುದ್ಧ ಪಂಜಾಬ್ ದೆ ಶೇರ್ ತಂಡ 6 ವಿಕೆಟ್‌ಗಳ ಜಯ ಸಾಧಿಸಿದ್ದು, ಟೂರ್ನಿಯಲ್ಲಿನ ತನ್ನ ಮೂರನೇ ಪಂದ್ಯದಲ್ಲಿ ಗೆಲುವಿನ ಖಾತೆ ತೆರೆದಿದೆ. ಇತ್ತ ತೆಲುಗು ವಾರಿಯರ್ಸ್ ಟೂರ್ನಿಯಲ್ಲಿ ಮೊದಲ ಬಾರಿಗೆ ಸೋಲನ್ನು ಅನುಭವಿಸಿದೆ.
ಇನ್ನು ಈ ದಿನದ ಎರಡನೇ ಪಂದ್ಯ ಆರಂಭವಾಗಿದ್ದು, ಟೂರ್ನಿಯ ಈ ಹತ್ತನೇ ಲೀಗ್ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಹಾಗೂ ಚೆನ್ನೈ ರೈನೊಸ್ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕ ಪ್ರದೀಪ್ ಬೌಲಿಂಗ್ ಆಯ್ದುಕೊಂಡು ಎದುರಾಳಿ ಚೆನ್ನೈ ರೈನೊಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದರು.
ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ರೈನೋಸ್ ಮೊದಲ ಇನ್ನಿಂಗ್ಸ್‌ನಲ್ಲಿ 10 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 85 ರನ್ ಗಳಿಸಿತು. ಚೆನ್ನೈ ಪರ ರಮಣ 20, ವಿಕ್ರಾಂತ್ 23 ( ರಿಟೈರ್ಡ್ ಹರ್ಟ್ ), ಪೃಥ್ವಿ 4, ವಿಷ್ಣು ವಿಶಾಲ್ ಅಜೇಯ 22 ಹಾಗೂ ಶಾಂತನು ಅಜೇಯ 1 ರನ್ ಕಲೆ ಹಾಕಿದರು. ಕರ್ನಾಟಕ ಬುಲ್ಡೋಜರ್ಸ್ ಪರ ಡಾರ್ಲಿಂಗ್ ಕೃಷ್ಣ ಒಂದು ವಿಕೆಟ್ ಪಡೆದರು ಹಾಗೂ ಜಯರಾಮ್ ಪೃಥ್ವಿ ಅವರನ್ನು ರನ್‌ಔಟ್ ಮಾಡಿದರು.
ಇತ್ತ ಕರ್ನಾಟಕ ಬುಲ್ಡೋಜರ್ಸ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೇ 109 ರನ್ ಕಲೆಹಾಕಿ 24 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ. ಕರ್ನಾಟಕ ಬುಲ್ಡೋಜರ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ಪ್ರದೀಪ್ ಬೋಗಾದಿ 2 ಸಿಕ್ಸರ್, 3 ಬೌಂಡರಿಗಳ ಸಹಿತ 27 ಎಸೆತಗಳಲ್ಲಿ ಅಜೇಯ 46 ರನ್ ಗಳಿಸಿದರೆ, ಡಾರ್ಲಿಂಗ್ ಕೃಷ್ಣ 1 ಸಿಕ್ಸರ್ ಹಾಗೂ ಬರೋಬ್ಬರಿ 9 ಬೌಂಡರಿಗಳ ಸಹಿತ 33 ಎಸೆತಗಳಲ್ಲಿ ಅಜೇಯ 62 ರನ್ ಗಳಿಸಿದರು.

ಹೀಗೆ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಕಾಯ್ದುಕೊಂಡಿರುವ ಕರ್ನಾಟಕ ಬುಲ್ಡೋಜರ್ಸ್ ಎರಡನೇ ಇನ್ನಿಂಗ್ಸ್‌ನಲ್ಲಿ ಯಾವ ರೀತಿ ಬೌಲಿಂಗ್ ಮಾಡಲಿದೆ ಹಾಗೂ ಮಂಕಾಗಿರುವ ಚೆನ್ನೈ ರೈನೋಸ್ ಉತ್ತಮ ಬ್ಯಾಟಿಂಗ್ ಮಾಡಿ ಪುಟಿದೇಳುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಚೆನ್ನೈ ರೈನೋಸ್ ಆಡುವ 11ರ ಬಳಗ: ಆರ್ಯ (ನಾಯಕ), ವಿಕ್ರಾಂತ್, ಅಶೋಕ್ ಸೆಲ್ವನ್, ಶಾಂತನು, ಪೃಥ್ವಿ, ವಿಷ್ಣು ವಿಶಾಲ್, ರಮಣ, ಶಿವ, ಭರತ್, ದಸರಾತಿ ಮತ್ತು ಆಧವ್ ಕಣ್ಣದಾಸನ್.
ಕರ್ನಾಟಕ ಬುಲ್ಡೋಜರ್ಸ್ ಆಡುವ ಬಳಗ: ಪ್ರದೀಪ್ ಬೋಗಾದಿ ( ನಾಯಕ ), ಜಯರಾಮ್ ಕಾರ್ತಿಕ್, ಕಿಚ್ಚ ಸುದೀಪ್ ( ವಿಕೆಟ್ ಕೀಪರ್ ), ಡಾರ್ಲಿಂಗ್ ಕೃಷ್ಣ, ಸುನಿಲ್ ರಾವ್, ಗಣೇಶ್, ರಾಜೀವ್ ಹನು, ಅರುಣ್, ಪೆಟ್ರೋಲ್ ಪ್ರಸನ್ನ ಹಾಗೂ ಕರಣ್


Click it and Unblock the Notifications











