ಭಾರತ-ಪಾಕ್ ನಡುವೆ ಯುದ್ಧದ ಕಾರ್ಮೋಡ ; ಚಿತ್ರಮಂದಿರದ ಬದಲು ನೇರವಾಗಿ ಓಟಿಟಿಯಲ್ಲಿ ಬಿಡುಗಡೆಯಾಗಲಿದೆ ಈ ಸಿನಿಮಾ !
ಪಹಲ್ಗಾಮ್ ನಲ್ಲಿ ನಡೆದ ದಾಳಿಗೆ ಭಾರತ ಸರಿಯಾದ ಉತ್ತರ ನೀಡಿದೆ. ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ಹೇಳಿದಂತೆ ಕಡಿಮೆ ಅಂದರೂ ಕೂಡ ಈ ಕಾರ್ಯಾಚರಣೆಯಲ್ಲಿ ನೂರು ಮಂದಿ ಭಯೋತ್ಪಾದಕರು ಹತರಾಗಿದ್ದಾರೆ. ಪಾಕಿಸ್ತಾನವೇನಾದರೂ ಪ್ರತೀಕಾರದ ಕ್ರಮ ಕೈಗೊಂಡರೆ ಭಾರತ ಸರಿಯಾದ ಉತ್ತರ ನೀಡಲಿದೆ ಎಂದು ಸರ್ವ ಪಕ್ಷಗಳ ಸಭೆಯಲ್ಲಿ ಹೇಳಿದ್ದಾರೆ.
ಇನ್ನು ಆಪರೇಷನ್ ಸಿಂಧೂರ್ ಕುರಿತು ಭಾಷೆಯ ಭೇದ ಭಾವ ಇಲ್ಲದೇ ಚಿತ್ರರಂಗದ ಹಲವರು ಕೂಡ ಮಾತನಾಡಿದ್ದಾರೆ. ಭಾರತದ ಸೇನೆಗೆ ಸೆಲ್ಯೂಟ್ ಹೊಡೆದಿದ್ದಾರೆ.ಇದರ ನಡುವೆ ಇಲ್ಲೊಂದು ಚಿತ್ರತಂಡ ಸದ್ಯದ ಪರಿಸ್ಥಿತಿಯನ್ನು ಗಮನಿಸಿ ತಮ್ಮ ಚಿತ್ರದ ಬಿಡುಗಡೆಯನ್ನೇ ರದ್ದುಗೊಳಿಸಿದೆ. ಚಿತ್ರವನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುವ ನಿರ್ಧಾರದಿಂದ ಹಿಂದೆ ಸರಿದು ನೇರವಾಗಿ ಓಟಿಟಿಯಲ್ಲಿಯೇ ತಮ್ಮ ಚಿತ್ರವನ್ನು ಬಿಡುಗಡೆ ಮಾಡಲು ಮುಂದಾಗಿದೆ.

ಹೌದು, ಅಸಲಿಗೆ ಎಲ್ಲವೂ ಅಂದುಕೊಂಡತೆ ಆಗಿದ್ದರೆ ಈ ಮೇ 09ಕ್ಕೆ ರಾಜ್ ಕುಮಾರ್ ರಾವ್ ಮತ್ತು ವಮಿಕಾ ಗಬ್ಬಿ ಅಭಿನಯದ ಭೂಲ್ ಚುಕ್ ಮಾಫ್ ಚಿತ್ರ ಬಿಡುಗಡೆಯಾಗಬೇಕಿತ್ತು. ಚಿತ್ರತಂಡ ಅದ್ದೂರಿಯಾಗಿ ಚಿತ್ರದ ಪ್ರಚಾರವನ್ನು ಕೂಡ ಮಾಡಿತ್ತು.
ಇನ್ನು ರಾಜ್ ಕುಮಾರ್ ರಾವ್ ಮತ್ತು ವಮಿಕಾ ಗಬ್ಬಿ ಕೂಡ ತಮ್ಮ ಚಿತ್ರ, ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿರುವ ಖುಷಿಯಲ್ಲಿ ಅನೇಕ ಕಡೆ ತೆರಳಿ ಚಿತ್ರದ ಪ್ರಚಾರವನ್ನು ಮಾಡಿದ್ದರು. ಸಿಕ್ಕ ಸಿಕ್ಕ ಯೂಟ್ಯೂಬ್ ವಾಹಿನಿಗಳಿಂದ ಹಿಡಿದು ಎಲ್ಲಾ ರಾಷ್ಟ್ರೀಯ ವಾಹಿನಿಗಳಿಗೆ ಸಂದರ್ಶನವನ್ನು ಕೂಡ ನೀಡಿದ್ದರು. ಇದೇ ಮೇ 9ಕ್ಕೆ ಚಿತ್ರ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ ಬಂದು ನೋಡಿ ಹರಸಿ ಹಾರೈಸಿ ಎಂದು ಮನವಿಯನ್ನು ಕೂಡ ಮಾಡಿಕೊಂಡಿದ್ದರು.
ಆದರೆ ಈಗ ಚಿತ್ರತಂಡ ತಮ್ಮ ಚಿತ್ರವನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡದಿರಲು ನಿರ್ಧಾರ ಮಾಡಿದೆ.ದೇಶದೆಲ್ಲೆಡೆ ಯುದ್ಧದ ವಾತಾವರಣ ಇರುವುದರಿಂದ ಚಿತ್ರದ ಬಿಡುಗಡೆಯ ದಿನಾಂಕವನ್ನು ಮುಂದಕ್ಕೂಡಿದೆ. ಚಿತ್ರವನ್ನು ಚಿತ್ರಮಂದಿರದ ಬದಲು ಮೇ 16ಕ್ಕೆ ನೇರವಾಗಿ ಅಮೆಜಾನ್ ಫ್ರೈಮ್‌ನಲ್ಲಿ ನಮ್ಮ ಚಿತ್ರ ಬಿಡುಗಡೆಯಾಗಲಿದೆ ಎಂದು ಘೋಷಿಸಿದೆ.
ಈ ಕುರಿತು ಪ್ರಕಟಣೆಯನ್ನು ಹೊರಡಿಸಿರುವ ಚಿತ್ರದ ನಿರ್ಮಾಣ ಸಂಸ್ಥೆ ದೇಶದೆಲ್ಲೆಡೆ ಸದ್ಯ ಮಾಕ್ ಡ್ರಿಲ್ ನಡೆಯುತ್ತಿದೆ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿ ನಾವು { ಮ್ಯಾಡಾಕ್ ಫಿಲ್ಮ್ಸ್ } ಮತ್ತು ಅಮೆಜಾನ್ ಎಂಜಿಎಂ ಜೊತೆಗೂಡಿ ನಮ್ಮ ಭೂಲ್ ಚುಕ್ ಮಾಫ್ ಚಿತ್ರವನ್ನು ಚಿತ್ರಮಂದಿರಗಳ ಬದಲು ನೇರವಾಗಿ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ ಎಂದು ಹೇಳಿದೆ. ಮೇ 9ರ ಬದಲು ಈ ಮೇ 16ರಂದು ಭೂಲ್ ಚುಕ್ ಮಾಫ್ ಚಿತ್ರ ಅಮೆಜಾನ್ ಪ್ರೈಂನಲ್ಲಿ ಪ್ರಸಾರವಾಗಲಿದೆ ಎಂದು ತಿಳಿಸಿದೆ.
ಮುಂದುವರೆದು ಭೂಲ್ ಚುಕ್ ಮಾಫ್ ಚಿತ್ರವನ್ನು ಚಿತ್ರಮಂದಿರದಲ್ಲಿಯೇ ಬಿಡುಗಡೆ ಮಾಡುವ ಉದ್ದೇಶದಿಂದಲೇ ನಿರ್ಮಾಣ ಮಾಡಲಾಗಿತ್ತು. ಪ್ರೇಕ್ಷಕರ ಜೊತೆ ಚಿತ್ರಮಂದಿರದಲ್ಲಿ ಈ ಚಿತ್ರದ ಬಿಡುಗಡೆಯನ್ನು ನಾವು ಸಂಭ್ರಮಿಸಲು ಉತ್ಸುಕರಾಗಿದ್ದೆವು, ಆದರೆ ನಮಗೆ ಸದ್ಯ ದೇಶದ ಹಿತ ಮತ್ತು ನಾಗರೀಕರ ಸುರಕ್ಷತೆ ಮೊದಲ ಆಧ್ಯತೆ ಈ ಕಾರಣಕ್ಕೆ ಚಿತ್ರವನ್ನು ಚಿತ್ರಮಂದಿರದ ಬದಲು ಈಗ ನೇರವಾಗಿ ಓಟಿಟಿಯಲ್ಲಿ ಬಿಡುಗಡೆ ಮಾಡಲು ಮುಂದಾಗಿರುವುದಾಗಿ ಹೇಳಿದೆ.
ಅಂದ್ಹಾಗೇ ಕರಣ್ ಶರ್ಮಾ ನಿರ್ದೇಶನದ ಭೂಲ್ ಚುಕ್ ಮಾಫ್ ಚಿತ್ರದಲ್ಲಿ ರಾಜ್ ಕುಮಾರ್ ರಾವ್ ಮತ್ತು ವಮಿಕಾ ಗುಬ್ಬಿ ಮಾತ್ರವಲ್ಲದೇ ಯುಜುವೇಂದ್ರ ಚಹಾಲ್ ಅವರ ಮಾಜಿ ಪತ್ನಿ ಧನಶ್ರೀ ವರ್ಮಾ ಕೂಡ ಇದ್ದಾರೆ. ಚಿತ್ರದಲ್ಲಿ ಹಾಡೊಂದಕ್ಕೆ ಹೆಜ್ಜೆಯನ್ನು ಹಾಕಿದ್ದಾರೆ.


Click it and Unblock the Notifications











