ಇಬ್ಬರು ಸ್ಟಾರ್‌ಗಳ ಜುಗಲಬಂದಿ ; 8 ವಾರಗಳ ನಂತರ ಓಟಿಟಿಗೆ ಬಂತು ಕಾಮಿಡಿ ಸಿನಿಮಾ - ಎಲ್ಲಿ ? ಯಾವಾಗ ? ಇಲ್ಲಿದೆ ಮಾಹಿತಿ
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಚಿತ್ರವನ್ನು ಪ್ರೇಕ್ಷಕರು ಚಿತ್ರಮಂದಿರದಲ್ಲಿಯೇ ನೋಡುತ್ತಿದ್ದರು. ನಗರದ ಸುತ್ತಮುತ್ತ ಇದ್ದ ಹಳ್ಳಿಯ ಜನ ಟ್ರ್ಯಾಕ್ಟರ್.. ಎತ್ತಿನ ಬಂಡಿಯಲ್ಲಿ ಬಂದು ತಮ್ಮ ನೆಚ್ಚಿನ ನಾಯಕನ-ನಿರ್ದೇಶಕನ-ನಾಯಕಿಯ ಚಿತ್ರವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಆದರೆ.. ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಅಂಗೈಯಲ್ಲಿಯೇ ಮನರಂಜನೆ ಇದೆ. ಚಿತ್ರಮಂದಿರದಲ್ಲಿ ಚಿತ್ರ ನೋಡಲು ಆಗದೇ ಇದ್ದರೆ...
ಮೊದಲಿನಂತೆ ಟಿವಿಯಲ್ಲಿ ಬರುವವರೆಗೆ ಈಗ ಕಾಯಬೇಕು ಅಂತೇನು ಇಲ್ಲ. ಚಿತ್ರ ಒಂದು ಚಿತ್ರಮಂದಿರಕ್ಕೆ ಬಂದು ತಿಂಗಳಾಗಿರುವುದಿಲ್ಲ. ಅಷ್ಟರಲ್ಲಿಯೇ ಮನೆಯಲ್ಲಿಯೇ ಅಥವಾ ತಾವು ಇರುವ ಜಾಗದಲ್ಲಿ ಕುಳಿತು ಚಿತ್ರವನ್ನು ನೋಡುವ ವ್ಯವಸ್ಥೆ ಈಗ ಲಭ್ಯ ಇದೆ.

ಹೀಗಾಗಿಯೇ ಹಲವರು ತಮ್ಮ ಇಷ್ಟದ ಸ್ಟಾರ್‌ನ ಚಿತ್ರ ಬಂದರೆ..ಅಥವಾ ಯಾವುದಾದರೂ ಚಿತ್ರ ಗಮನ ಸೆಳೆದರೆ.. ಭರವಸೆ ಮೂಡಿಸಿದ್ದರೆ.. ಆ ಚಿತ್ರವನ್ನು ನೋಡಲು ಚಿತ್ರಮಂದಿರಕ್ಕೆ ಹೋಗುವ ಬದಲು, ಕೇವಲ ನಾಲ್ಕು ವಾರ ಅಷ್ಟೇ ತಾನೇ..? ಎಂದುಕೊಂಡು ಮನೆಯಲ್ಲಿಯೇ ನೋಡಿದರೇ ಆಯ್ತು ಎಂದುಕೊಳ್ಳುತ್ತಾರೆ. ತಾಳ್ಮೆಯಿಂದ ಕಾಯುತ್ತಾರೆ. ಹೀಗೆ ಕಾಯುತ್ತಿರುವವರ ಕಣ್ಮುಂದೆ ಈಗ ''ದೇ ದೇ ಪ್ಯಾರ್ ದೇ 2'' ಬರಲಿದೆ.
ಹೌದು, ''ದೇ ದೇ ಪ್ಯಾರ್ ದೇ 2''.. ಅಜಯ್ ದೇವಗನ್.. ರಕುಲ್ ಪ್ರೀತ್ ಸಿಂಗ್.. ಆರ್. ಮಾಧವನ್ ಅಭಿನಯದ ಸಿನಿಮಾ. ಕಳೆದ ವರ್ಷ ನವೆಂಬರ್ 14ರಂದು ತೆರೆಗೆ ಬಂದ ಈ ಹಾಸ್ಯಭರಿತ ಮನರಂಜನೆ ಚಿತ್ರ ಅಪಾರವಾದ ನಿರೀಕ್ಷೆಯನ್ನು ಮೂಡಿಸಿತ್ತು. ಆದರೆ.. ಟ್ರೇಡ್ ವಿಶ್ಲೇಷಕರು ಅಂದುಕೊಂಡಂತೆ ಅನ್ಶುಲ್ ಶರ್ಮಾ ನಿರ್ದೇಶನದ ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಲಿಲ್ಲ.
ದೇ ದೇ ಪ್ಯಾರ್ ದೇ 2 ಕಥಾಹಂದರವೇನು ?
2019ರಲ್ಲಿ ತೆರೆಗೆ ಬಂದಿದ್ದ ''ದೇ ದೇ ಪ್ಯಾರ್ ದೇ'' ಚಿತ್ರ ಎಲ್ಲಿಗೆ ಮುಕ್ತಾಯವಾಗಿತ್ತೋ, ಅಲ್ಲಿಂದಲೇ ''ದೇ ದೇ ಪ್ಯಾರ್ ದೇ 2'' ಚಿತ್ರದ ಕಥೆ ಶುರುವಾಗುತ್ತೆ. ಮೊದಲ ಭಾಗದಲ್ಲಿ ಆಶಿಶ್ ( ಅಜಯ್ ದೇವಗನ್ ) ತನ್ನ ಮನೆಯವರಿಗೆ ಆಯೇಷಾ ( ರಕುಲ್ ಪ್ರೀತ್ ಸಿಂಗ್ ) ಪರಿಚಯ ಮಾಡಿಸಿರುತ್ತಾನೆ. ತನಗಿಂತ ಚಿಕ್ಕ ಹುಡುಗಿ ಜೊತೆ ತಾನು ಮದುವೆಯಾಗಲು ಮನೆಯವರ ಮನ ಒಲಿಸಿರುತ್ತಾನೆ. ಈ ಬಾರಿ ಆಯೇಷಾ ಸರದಿ.
ಆಯೇಶಾ ತನ್ನ ತಂದೆ ರಾಕೇಶ್ ಖುರಾನ (ಆರ್ ಮಾಧವನ್) ಮತ್ತು ತಾಯಿ ಅಂಜು ಖುರಾನಾ (ಗೌತಮಿ ಕಪೂರ್)ಗೆ ಪರಿಚಯ ಮಾಡಿಸಿದಾಗ ಆಯೇಶಾ ಪೋಷಕರಿಗೆ ಆಘಾತವಾಗುತ್ತೆ. ತನ್ನ ವಯಸ್ಸಿನ ವ್ಯಕ್ತಿಯ ಜೊತೆ ತನ್ನ ಮಗಳು ಮದುವೆಯಾಗುವ ಯೋಚನೆ ಮಾಡಿದ್ದಾಳೆ ಎಂದು ತಿಳಿದು ತಂದೆಗೆ ಮುಜುಗರವಾಗುತ್ತೆ.

ಹೀಗಾಗಿಯೇ ಆಯೇಶಾ ಮತ್ತು ಆಶಿಶ್‌ನ ಹೇಗಾದರೂ ಮಾಡಿ ದೂರ ಮಾಡಬೇಕೆಂದು ಆಯೇಶಾ ತಂದೆ ಮತ್ತು ತಾಯಿ ನಿರಂತರ ಪ್ರಯತ್ನ ಮಾಡಲು ಶುರು ಮಾಡುತ್ತಾರೆ. ತಮ್ಮ ಈ ಪ್ರಯತ್ನದಲ್ಲಿ ಇವರು ಯಶಸ್ವಿ ಆಗ್ತಾರಾ..? ಆಯೇಶಾ ಜೊತೆ 51 ವರ್ಷದ ಆಶಿಶ್ ಮದುವೆಯಾಗುತ್ತಾನಾ ..? ಎನ್ನುವುದೇ ಚಿತ್ರದ ತಿರುಳು.
ಎಲ್ಲಿ ಮತ್ತು ಯಾವಾಗ ನೋಡಬಹುದು ?
ಹೀಗೆ ಹಾಸ್ಯದ ರಸದೌತಣವನ್ನು ಉಣಬಡಿಸುವ ಕಥಾಹಂದರವನ್ನು ಹೊಂದಿರುವ ''ದೇ ದೇ ಪ್ಯಾರ್ ದೇ 2'' ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡ 8 ವಾರಗಳ ನಂತರ ಓಟಿಟಿಗೆ ಬಂದಿದೆ. ಇದೇ ಜನವರಿ 9ರಿಂದ ''ನೆಟ್‌ಪ್ಲಿಕ್ಸ್''ನಲ್ಲಿ ಪ್ರಸಾರವಾಗಲಿದೆ. ಆರ್ ಮಾಧವನ್ ಮತ್ತು ಅಜಯ್ ದೇವಗನ್ ಅವರ ಅಭಿಮಾನಿಗಳು ಹಾಗೂ ಸಿನಿಮಾ ಆಸಕ್ತರು ಈ ಜನವರಿ 9ರಿಂದ ಚಿತ್ರವನ್ನು ಮನೆಯಲ್ಲಿಯೇ ಕುಳಿತು ನೋಡಬಹುದು.


Click it and Unblock the Notifications











