05 ತಿಂಗಳ ನಂತರ ಓಟಿಟಿಗೆ ಬಂತು 'ರಣವಿಕ್ರಮ' ನಾಯಕಿಯ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ...!
ದಿ ಕೇರಳ ಸ್ಟೋರಿ ಚಿತ್ರ ಹೊರತು ಪಡಿಸಿದರೆ ಎಷ್ಟೇ ಪಡಿಪಾಟಲು ಪಟ್ಟರೂ ಅವಕಾಶಗಳು ದೊರೆಯದೇ, ಗೆಲುವನ್ನು ಕಾಣದೇ, ಅದಾ ಶರ್ಮಾ ನರಳುತ್ತಿದ್ದಾರೆ ಎನ್ನುವ ಮಾತು ಹಿಂದಿ ಉದ್ಯಮದಲ್ಲಿ ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ದಿ ಕೇರಳ ಸ್ಟೋರಿ ಚಿತ್ರಕ್ಕೂ ಮುನ್ನ ಹಾಗೂ ನಂತರ ಬಂದ ಅದಾ ಶರ್ಮಾ ಚಿತ್ರಗಳು ಮಕಾಡೆ ಮಲಗಿವೆ.
ಇನ್ನೂ ಮೊದಲಿಂದ ಕೂಡ ಅದಾಗೆ ದಕ್ಷಿಣ ಭಾರತದ ಚಿತ್ರರಂಗದ ಮೇಲೆ ಒಲವು ಜಾಸ್ತಿ. ಬಾಲಿವುಡ್‌ನಲ್ಲಿ ಅವಕಾಶಗಳ ಕೊರತೆಯಾದಾಗ, ಚಿತ್ರ ಕೈ ಹಿಡಿಯದೇ ಇದ್ದಾಗ ಅದಾ ಶರ್ಮಾ ಸೀದಾ ದಕ್ಷಿಣದ ಕಡೆ ಮುಖ ಮಾಡುತ್ತಾರೆ. ಇಲ್ಲಿನ ಚಿತ್ರಗಳಲ್ಲಿ ಅಭಿನಯಿಸಿ ತಮ್ಮ ಅದೃಷ್ಟ ಪರೀಕ್ಷೆಯನ್ನು ಕೂಡ ಮಾಡಿಕೊಳ್ಳುತ್ತಾರೆ. ಇಂಥಾ ಅದಾ ಶರ್ಮಾ ಅಭಿನಯದ ಕ್ರಿಮಿನಲ್ Or ಡೆವಿಲ್ ಚಿತ್ರ ಕಳೆದ ಮೇನಲ್ಲಿ ಬಿಡುಗಡೆಯಾಗಿತ್ತು. ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರ ಈಗ ಓಟಿಟಿ ಅಂಗಳಕ್ಕೆ ಬಂದಿದೆ.

ಹೌದು. ಕ್ರಿಮಿನಲ್ Or ಡೆವಿಲ್.. ಅದಾ ಶರ್ಮಾ ಅಭಿನಯದ ತೆಲುಗು ಚಿತ್ರ. ಕೃಷ್ಣ ಅನ್ನಂ ನಿರ್ದೇಶನದ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾದಲ್ಲಿ ವಿಶ್ವಂತ್ ನಾಯಕನ ಪಾತ್ರ ನಿರ್ವಹಿಸಿದ್ದರು. ಚಿತ್ರದಲ್ಲಿ ಅಜ್ಜಿಯ ಜೊತೆ ಹಳ್ಳಿಯಲ್ಲಿ ವಾಸ ಮಾಡುವ ನಾಯಕ ವಿಶ್ವಂತ್‌ಗೆ ಪ್ರೇತಾತ್ಮಗಳನ್ನು ಕಂಡರೆ ಎಲ್ಲಿಲ್ಲದ ಭಯ. ಆದರೂ ಕೂಡ ಅದೊಂದು ರಾತ್ರಿ ಧೈರ್ಯ ಮಾಡಿ ಡೆವಿಲ್ ಎಂಬ ಹಾರರ್ ಚಿತ್ರವನ್ನು ನೋಡುತ್ತಾನೆ. ಅಲ್ಲಿಂದ ಭಯ ಇನ್ನೂ ಹೆಚ್ಚಾಗುತ್ತೆ. ಈ ಕಡೆ ರಕ್ಷಾ ಎಂಬ ಪಾತ್ರವನ್ನು ನಿರ್ವಹಿಸಿರುವ ಅದಾ ಶರ್ಮಾ ಹುಡುಗಿಯರನ್ನು ಅಪಹರಿಸುತ್ತಿರುತ್ತಾರೆ. ಪೊಲೀಸರಿಂದ ತಪ್ಪಿಸಿಕೊಳ್ಳುತ್ತಾ ಚಿತ್ರದ ನಾಯಕನನ್ನು ಒತ್ತೆಯಾಳಾಗಿ ಇಟ್ಟುಕೊಳ್ಳುತ್ತಾರೆ. ಮುಂದೇನಾಗುತ್ತೆ ಎನ್ನುವುದು ಚಿತ್ರದ ಕಥೆ.
ಇಂತಹ ಕಥಾಹಂದರ ಹೊಂದಿರುವ ಈ ಚಿತ್ರ ಈ ವರ್ಷದಲ್ಲಿ ಮೇ ತಿಂಗಳಿನಲ್ಲಿ ಬಿಡುಗಡೆಯಾಗಿತ್ತು. ಪ್ರೇಕ್ಷಕರ ಹೃದಯವನ್ನು ಗೆಲ್ಲುವಲ್ಲಿ ವಿಫಲವಾಗಿತ್ತು. ಆದರೆ ಕೆಲ ವಿಮರ್ಷಕರ ಹೃದಯವನ್ನು ಚಿತ್ರ ಗೆದ್ದಿತ್ತು. ಅದರಲ್ಲಿಯೂ ಅದಾ ಶರ್ಮಾ ಅಭಿನಯವನ್ನು ಅನೇಕರು ಕೊಂಡಾಡಿದ್ದರು. ಆದರೂ ಕೂಡ ಈ ಚಿತ್ರಕ್ಕೆ ಅದ್ಯಾಕೋ ಓಟಿಟಿಯಲ್ಲಿ ಬೆಲೆ ಸಿಕ್ಕಿರಲಿಲ್ಲ. ಆದರೆ ಈಗ ಕ್ರಿಮಿನಲ್ Or ಡೆವಿಲ್ ಚಿತ್ರದ ಓಟಿಟಿ ಹಕ್ಕು ಬಿಕರಿಯಾಗಿದೆ. ತೆಲುಗು ನಿರ್ಮಾಪಕ ಅಲ್ಲು ಅರವಿಂದ್ ಒಡೆತನದ ಆಹಾದಲ್ಲಿ ಈ ಚಿತ್ರ ಇಂದಿನಿಂದ ಪ್ರಸಾರವಾಗಲಿದೆ.
ಇನ್ನುಳಿದಂತೆ ಈ ಚಿತ್ರಕ್ಕೆ ಆರ್ ಆರ್ ಧ್ರುವನ್ ಸಂಗೀತ ನಿರ್ದೇಶನ ಇದೆ. ಸತೀಶ್ ಈ ಚಿತ್ರವನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಮುದ್ದು ಕೃಷ್ಣ ಚಿತ್ರದ ಕಥೆಯನ್ನು ಬರೆದಿದ್ದು, ಗಿರಿಧರ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರಮಂದಿರದಲ್ಲಿ ಅಷ್ಟಾಗಿ ಸದ್ದು ಮಾಡದ ಈ CD- ಕ್ರಿಮಿನಲ್ Or ಡೆವಿಲ್ ಚಿತ್ರಕ್ಕೆ ಓಟಿಟಿಯಲ್ಲಿ ಉತ್ತಮವಾದ ಪ್ರತಿಕ್ರಿಯೆ ಸಿಗುವ ನಿರೀಕ್ಷೆ ಚಿತ್ರತಂಡಕ್ಕೆ ಇದೆ. ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗುತ್ತೆ ಎನ್ನುವ ಭರವಸೆ ಅದಾ ಶರ್ಮಾ ಅವರಿಗೂ ಕೂಡ ಇದೆ.


Click it and Unblock the Notifications










