ತೆಲುಗು, ತಮಿಳಿನಲ್ಲೂ ಶುರುವಾಯಿತು ಭೀಮ್ನಳ್ಳಿ 'ಕಾಟೇರ'ನ ಆರ್ಭಟ
ಕನ್ನಡದಲ್ಲಿ ತೆರೆಕಂಡು 'ಕಾಟೇರ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದು ಗೊತ್ತೇಯಿದೆ. ಸಿನಿಮಾ 100 ದಿನ ಪೂರೈಸಿದ ಬೆನ್ನಲ್ಲೇ ಟಿವಿಗೂ ಬಂದಿತ್ತು. ಸಿನಿಮಾ 50 ದಿನದ ಕಂಪ್ಲೀಟ್ ಮಾಡುವ ಮುನ್ನ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗಿತ್ತು. ಆದರೂ ಜನ ಒಂದಷ್ಟು ದಿನ ಥಿಯೇಟರ್‌ನಲ್ಲಿ ಸಿನಿಮಾ ವೀಕ್ಷಿಸಿದ್ದರು.
ಸದ್ಯ ಪ್ಯಾನ್ ಇಂಡಿಯಾ ಸಿನಿಮಾಗಳ ಆರ್ಭಟ ಜೋರಾಗಿದೆ. ಯಾವುದೇ ಸ್ಟಾರ್ ನಟನ ಸಿನಿಮಾ ಆದರೂ 5 ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರಮಂದಿರಕ್ಕೆ ಬರುತ್ತಾ ಎನ್ನುವ ಚರ್ಚೆ ಶುರುವಾಗುತ್ತದೆ. 'ಕಾಟೇರ' ಚಿತ್ರದ ವಿಚಾರದಲ್ಲೂ ಇದೇ ಪ್ರಶ್ನೆ ಎದ್ದಿತ್ತು. ಆದರೆ ಇತ್ತೀಚೆಗೆ ದರ್ಶನ್ ಪ್ಯಾನ್ ಇಂಡಿಯಾ ಸಿನಿಮಾಗಳ ಬಗ್ಗೆ ಆಸಕ್ತಿ ತೋರಿಸುತ್ತಿಲ್ಲ. ಕರ್ನಾಟಕದ ನನ್ನ ಕೋಟೆ, ಕನ್ನಡದಲ್ಲಿ ಮಾತ್ರ ಸಿನಿಮಾ ಮಾಡ್ತೀನಿ ಎನ್ನುತ್ತಾರೆ.

70ರ ದಶಕದ ಹಳ್ಳಿಗಳ ನೈಜ ಚಿತ್ರಣ ಕಟ್ಟಿಕೊಟ್ಟಿದ್ದ 'ಕಾಟೇರ' ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ಉಳುವವನೆ ಭೂಮಿಯ ಒಡೆಯ ಕಾಯ್ದೆಯ ಸುತ್ತಾ ಚಿತ್ರದ ಕಥೆ ಸುತ್ತಿತ್ತು. ಯೂನಿವರ್ಸಲ್ ಸಬ್ಜೆಕ್ಟ್ ಆಗಿದ್ದರೂ ಚಿತ್ರತಂಡ ಏಕಕಾಲಕ್ಕೆ 5 ಭಾಷೆಗಳಲ್ಲಿ ಸಿನಿಮಾ ರಿಲೀಸ್ ಮಾಡಲು ಮನಸ್ಸು ಮಾಡಿರಲಿಲ್ಲ. ಆದರೆ ಕನ್ನಡದಲ್ಲಿ ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ನೋಡಿ ಬೇರೆ ಭಾಷೆಗಳಿಗೆ ಡಬ್ ಮಾಡುವ ಪ್ರಯತ್ನ ನಡೀತು.
ಕನ್ನಡದಲ್ಲೇ ಕೆಲ ಪರಭಾಷಿಕರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಇದೀಗ ಸಿನಿಮಾ ತೆಲುಗು, ತಮಿಳಿಗೆ ಡಬ್ ಆಗಿ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಜೀ5ನಲ್ಲಿ ತೆಲುಗು, ತಮಿಳು ವರ್ಷನ್ ಸದ್ಯ ಲಭ್ಯವಿದೆ. ಕರ್ನಾಟಕದಲ್ಲಿ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದು ನೋಡಿ ಪರಭಾಷಿಕರು ಸಿನಿಮಾ ಡಬ್ ಮಾಡಿ ರಿಲೀಸ್ ಮಾಡುವಂತೆ ಕೇಳಿದ್ದರು. ಕೊನೆಗೂ ಸಿನಿಮಾ ತೆಲುಗು, ತಮಿಳು ಪ್ರೇಕ್ಷಕರ ಮುಂದೆ ಹೋಗಿದೆ.
ತರುಣ್ ಸುಧೀರ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ 'ಕಾಟೇರ' ಚಿತ್ರದಲ್ಲಿ ದರ್ಶನ್ ಕುಲುಮೆಯಲ್ಲಿ ಕೆಲಸ ಮಾಡುವ ವ್ಯಕ್ತಿ ಪಾತ್ರದಲ್ಲಿ ನಟಿಸಿದ್ದಾರೆ. ಕಥೆಗೆ ಬಹಳ ಒತ್ತು ನೀಡಿದ್ದು ದರ್ಶನ್ ಹೀರೊಯಿಸಂ ಬಿಟ್ಟು ಕೇವಲ ಪಾತ್ರವಾಗಿ ಮಾತ್ರ ಕಾಣಿಸಿಕೊಂಡಿದ್ದಾರೆ. ಮಾಲಾಶ್ರೀ ಪುತ್ರಿ ಆರಾಧನಾ ನಾಯಕಿಯಾಗಿ ಮಿಂಚಿದ್ದು ಜಗಪತಿ ಬಾಬು, ವಿನೋದ್ ಆಳ್ವ, ಅಚ್ಯುತ್ ಕುಮಾರ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.

ವಿ. ಹರಿಕೃಷ್ಣ ಸಂಗೀತ, ರಾಮ್‌ಲಕ್ಷ್ಮಣ್ ಆಕ್ಷನ್ 'ಕಾಟೇರ' ಚಿತ್ರಕ್ಕಿದೆ. ಜಡೇಶ್ ಹಂಪಿ ಜೊತೆ ಸೇರಿ ತರುಣ್ ಕಥೆ ಚಿತ್ರಕಥೆ ಬರೆದು ಸಿನಿಮಾ ನಿರ್ದೇಶಿಸಿದ್ದರು. ಮಾಸ್ತಿ ಸಂಭಾಷಣೆ ಚಿತ್ರಕ್ಕೆ ಪ್ಲಸ್ ಆಗಿತ್ತು. ಓಟಿಟಿ ಟ್ರೆಂಡ್ ಶುರುವಾದ ಬಳಿಕ ಹೆಚ್ಚು ಭಾಷೆಗಳಿಗೆ ಸಿನಿಮಾಗಳನ್ನು ಡಬ್ ಮಾಡಿ ರಿಲೀಸ್ ಮಾಡುವ ಪ್ರಕ್ರಿಯೆ ಶುರುವಾಗಿದೆ. ಇತ್ತೀಚೆಗೆ ಕನ್ನಡದ ಹಲವು ಸಿನಿಮಾಗಳು ತೆಲುಗು, ತಮಿಳಿಗೆ ಡಬ್ ಆಗಿ ಓಟಿಟಿಗೆ ಬಂದಿತ್ತು.
ಕನ್ನಡದಲ್ಲಿ 'ಕಾಟೇರ' ಸಿನಿಮಾ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿರುವ ಅಂದಾಜಿದೆ. ರಾಕ್‌ಲೈನ್ ವೆಂಕಟೇಶ್ ಸಿನಿಮಾ ನಿರ್ಮಾಣ ಮಾಡಿದ್ದರು. ಟೀಸರ್, ಟ್ರೈಲರ್, ಸಾಂಗ್ಸ್‌ನಿಂದ ಗಮನ ಸೆಳೆದಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಪ್ರಭಾಸ್ ನಟನೆಯ 'ಸಲಾರ್' ಚಿತ್ರಕ್ಕೂ ಜಗ್ಗದೇ ಕರ್ನಾಟಕದಲ್ಲಿ ಸಿನಿಮಾ ಸದ್ದು ಮಾಡಿತ್ತು. ಚೆನ್ನೈ, ಹೊಸೂರು, ಹೈದರಾಬಾದ್‌ನಲ್ಲಿ ಕೆಲ ಶೋಗಳನ್ನು ಕನ್ನಡ ವರ್ಷನ್ ರಿಲೀಸ್ ಆಗಿತ್ತು.
ಹೊರ ದೇಶಗಳಲ್ಲಿ ಕೂಟ 'ಕಾಟೇರ' ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ದುಬೈನಲ್ಲಿ ನಡೆದ ಚಿತ್ರದ ಸ್ಪೆಷಲ್ ಪ್ರೀಮಿಯರ್ ಶೋಗೆ ನಟ ದರ್ಶನ್, ನಿರ್ದೇಶಕ ತರುಣ್ ಸುಧೀರ್ ಕೂಡ ಹೋಗಿದ್ದರು. ಅಲ್ಲಿನ ಕನ್ನಡಿಗರು ಇಬ್ಬರಿಗೂ ವಿಶೇಷ ಬಿರುದು ನೀಡಿ ಗೌರವಿಸಿದ್ದರು. ಸದ್ಯ ದರ್ಶನ್ 'ಡೆವಿಲ್' ಚಿತ್ರದಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











