Blink OTT: ಸದ್ದಿಲ್ಲದೇ ಓಟಿಟಿಗೆ ಬಂತು ಸೈನ್ಸ್ ಫಿಕ್ಷನ್ 'ಬ್ಲಿಂಕ್'.. ಆದರೆ..
ಕನ್ನಡದಲ್ಲಿ ಈ ವರ್ಷ ಬೆರಳೆಣಿಯಷ್ಟು ಉತ್ತಮ ಸಿನಿಮಾಗಳು ಬಂದಿವೆ. ಅದರಲ್ಲಿ 'ಬ್ಲಿಂಕ್' ಕೂಡ ಒಂದು. ಹೊಸ ಪ್ರತಿಭೆಗಳೇ ಸೇರಿ ಮಾಡಿದ್ದ ಈ ಸೈನ್ಸ್ ಫಿಕ್ಷನ್ ಸಿನಿಮಾ ಮಾರ್ಚ್ 8ಕ್ಕೆ ತೆರೆಗಪ್ಪಳಿಸಿತ್ತು. ಆರಂಭದಲ್ಲಿ ಚಿತ್ರಕ್ಕೆ ಪ್ರೇಕ್ಷಕರ ಬರ ಎದುರಾಗಿತ್ತು. ಬಳಿಕ ಮೌತ್ ಟಾಕ್‌ನಿಂದ ಚಿತ್ರಕ್ಕೆ ಒಂದು ಹಂತಕ್ಕೆ ಬೆಂಬಲ ಸಿಕ್ಕಿತ್ತು.
ದೀಕ್ಷಿತ್ ಶೆಟ್ಟಿ ಹಾಗೂ ಚೈತ್ರಾ ಆಚಾರ್ 'ಬ್ಲಿಂಕ್' ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಶ್ರೀನಿಧಿ ಬೆಂಗಳೂರು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಜನನಿ ಪಿಕ್ಚರ್ಸ್ ಬ್ಯಾನರ್‌ನಲ್ಲಿ ರವಿಚಂದ್ರ ಎಂಬುವವರು ಚಿತ್ರ ನಿರ್ಮಿಸಿದ್ದಾರೆ. ಅವಿನಾಶ್ ಶಾಸ್ತ್ರಿ ಛಾಯಾಗ್ರಹಣ ಹಾಗೂ ಪ್ರಸನ್ನ ಕುಮಾರ್ ಸಂಗೀತ ಈ ಚಿತ್ರಕ್ಕಿದೆ. ಸಿನಿಮಾ ನೋಡಿದ ಹಲವರು ಮೆಚ್ಚಿ ಕೊಂಡಾಡಿದ್ದರು.

ಬಹಳ ಜನ ಚಿತ್ರಮಂದಿರದಲ್ಲಿ 'ಬ್ಲಿಂಕ್' ಸಿನಿಮಾ ನೋಡಲು ಹಿಂದು ಮುಂದು ನೋಡಿದ್ದರು. ಆದರೆ ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ನೋಡಿ ಓಟಿಟಿಯಲ್ಲಿ ಯಾವಾಗ ಸಿನಿಮಾ ಸ್ಟ್ರೀಮಿಂಗ್ ಆಗುತ್ತದೆ ಎಂದು ಕಾಯುತ್ತಿದ್ದರು. ಇದೀಗ ಸದ್ದಿಲ್ಲದೇ ಸಿನಿಮಾ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಎಂಟ್ರಿ ಕೊಟ್ಟಿದೆ. ಆದರೆ ಭಾರತದಲ್ಲಿ ಸದ್ಯಕ್ಕೆ ಸಿನಿಮಾ ನೋಡಲು ಅವಕಾಶ ಇಲ್ಲ. ಇನ್ನೆರಡು ದಿನಗಳಲ್ಲಿ ಲಭ್ಯವಾಗಬಹುದು.
ಚಿತ್ರದ ನಾಯಕ ಅಪೂರ್ವ ಟೈಮ್ ಟ್ರಾವೆಲಿಂಗ್‌ನಲ್ಲಿ ಸಿಲುಕುವ ಮೂಲಕ ಕಥೆ ಸಾಗುತ್ತದೆ. ಅಲ್ಲಿಂದ ಮುಂದೆ ಆತ ತನ್ನ ಭೂತ, ವರ್ತಮಾನ ಹಾಗೂ ಭವಿಷ್ಯಕ್ಕೆ ಹೋಗಿ ಬರ್ತಾನೆ. ರಂಗಭೂಮಿ ಪ್ರತಿಭೆಗಳು 'ಬ್ಲಿಂಕ್' ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ಚಿತ್ರರಂಗದ ಹಲವರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ನಿರ್ದೇಶಕ ಸಿಂಪಲ್ ಸುನಿ ಅಂತೂ ನನ್ನ 'ಒಂದು ಸರಳಪ್ರೇಮಕಥೆ' ಸಿನಿಮಾ ನೋಡದಿದ್ದರು ಪರವಾಗಿಲ್ಲ ಈ ಸಿನಿಮಾ ನೋಡಿ ಎಂದು ಮನವಿ ಮಾಡಿದ್ದರು.

ಸಣ್ಣಪುಟ್ಟ ತಪ್ಪುಗಳನ್ನು ಪಕ್ಕಕ್ಕಿಟ್ಟು ನೋಡಿದರೆ 'ಬ್ಲಿಂಕ್' ಒಂದೊಳ್ಳೆ ಅನುಭವ ನೀಡುವ ಸಿನಿಮಾ. ರಂಗಭೂಮಿ ಪ್ರತಿಭೆಗಳು ಸೇರಿ ಮಾಡಿರುವುದರಿಂದ ಆ ಛಾಯೆ ಅಲ್ಲಲ್ಲಿ ಕಾಣುತ್ತಿದೆ. ದೀಕ್ಷಿತ್ ಅಭಿನಯ ಚಿತ್ರದಲ್ಲಿ ಹೈಲೆಟ್ ಎನಿಸಿಕೊಳ್ಳುತ್ತದೆ. ತನ್ನ ಭೂತ-ವರ್ತಮಾನ ಹಾಗೂ ಭವಿಷ್ಯದ ತೊಳಲಾಟದಲ್ಲಿ ಸಿಲುಕಿ ಒದ್ದಾಡುವ ನಾಯಕ ಅಪೂರ್ವ ಪಾತ್ರದಲ್ಲಿ ಇಷ್ಟವಾಗುತ್ತಾರೆ.
ಕನ್ನಡದಲ್ಲಿ ಟೈಮ್ ಟ್ರಾವೆಲಿಂಗ್ ಕಾನ್ಸೆಪ್ಟ್ ಸಿನಿಮಾಗಳು ಕಮ್ಮಿ. 'ಬ್ಲಿಂಕ್' ಭಾರತದ ಮೊದಲ ಮ್ಯೂಸಿಕಲ್ ಸೈನ್ಸ್ ಫಿಕ್ಷನ್ ಸಿನಿಮಾ ಎನಿಸಿಕೊಂಡಿದೆ. ಹಾಗಾಗಿ ಈ ಜಾನರ್ ಹೊಸ ಅನುಭವ ನೀಡುತ್ತಾರೆ. ಸಹ ಕಲಾವಿದರಾಗಿ ಸುರೇಶ್ ಅನಗಳ್ಳಿ, ವಜ್ರಧೀರ್ ಜೈನ್, ಗೋಪಾಲ ದೇಶಪಾಂಡೆ, ಕಿರಣ್ ನಾಯಕ್ ಅಭಿನಯವೂ ಚಿತ್ರಕ್ಕೆ ಪೂರಕವಾಗಿದೆ.
ಓಟಿಟಿಯಲ್ಲಿ ಕನ್ನಡ ಕಂಟೆಂಟ್ ಕಮ್ಮಿ. ಆಗೊಂದು ಈಗೊಂದು ಸಿನಿಮಾಗಳು ಬರುತ್ತವೆ. ದೊಡ್ಡ ಸಿನಿಮಾಗಳು ಬಿಟ್ಟರೆ ಸಣ್ಣ ಸಿನಿಮಾಗಳನ್ನು ಓಟಿಟಿ ಸಂಸ್ಥೆಗಳು ಕೇಳುವುದಿಲ್ಲ. ಒಂದು ವೇಳೆ ಖರೀದಿಸಿದರೂ ಪೇ ಫಾರ್ ವೀವ್ ಪದ್ಧತಿಯಲ್ಲಿ ಕೊಂಡುಕೊಳ್ಳುತ್ತಾರೆ. ಕೆಲ ಸಿನಿಮಾಗಳು ಯಾವುದೇ ಅನೌನ್ಸ್‌ಮೆಂಟ್ ಇಲ್ಲೇ ಪ್ರೈಂ ವೀಡಿಯೋಗೆ ಬಂದುಬಿಡುತ್ತದೆ.
ಇದೀಗ 'ಬ್ಲಿಂಕ್' ಸಿನಿಮಾ ಅಮೇಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಆದರೆ ಸದ್ಯಕ್ಕೆ ಯುಕೆ ಹಾಗೂ ಯೂಎಸ್ ಪ್ರೈಂ ಚಂದಾದಾರರು ಮಾತ್ರ ಸಿನಿಮಾ ವೀಕ್ಷಿಸಬಹುದಾಗಿದೆ. ವಿದೇಶದಲ್ಲಿರುವ ಕೆಲವರು ಈಗಾಗಲೇ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಆದಷ್ಟು ಬೇಗ ಭಾರತದಲ್ಲೂ ಸಿನಿಮಾ ಸ್ಟ್ರೀಮಿಂಗ್ ಮಾಡಿ ಎಂದು ಕೆಲವರು ಕೇಳುತ್ತಿದ್ದಾರೆ.


Click it and Unblock the Notifications











