ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದ್ದ 'ಮಾರ್ಟಿನ್'ಗೆ ಬಿತ್ತು ಮತ್ತೊಂದು ಪೆಟ್ಟು!
ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಚಿತ್ರಕ್ಕೆ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಿದೆ. ಸಿನಿಮಾ ತೆರೆಕಂಡು ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಅಕ್ಟೋಬರ್ 11ಕ್ಕೆ ತೆರೆಗೆ ಬಂದಿದ್ದ ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿದ್ದ ಚಿತ್ರಕ್ಕೆ ಸೋಲು ಎದುರಾಗಿತ್ತು.
ಭಾರೀ ಬಜೆಟ್‌ನಲ್ಲಿ 'ಮಾರ್ಟಿನ್' ಸಿನಿಮಾ ಕಟ್ಟಿಕೊಡಲಾಗಿತ್ತು. ಹಣ ನೀರಿನಂತೆ ಚೆಲ್ಲಿ ನಿರ್ಮಾಪಕ ಉದಯ್ ಕೆ ಮೆಹ್ತಾ ಸಿನಿಮಾ ನಿರ್ಮಿಸಿದ್ದರು. ದೊಡ್ಡಮಟ್ಟದಲ್ಲಿ ಪ್ರಮೋಷನ್ ಮಾಡಿದ್ದರು. ದ್ವಿಪಾತ್ರದಲ್ಲಿ ನಟಿಸಿ ಧ್ರುವ ಸರ್ಜಾ ಅಬ್ಬರಿಸಿದ್ದರು. ಅರ್ಜುನ್ ಸರ್ಜಾ ಕಥೆ ಬರೆದ ಕಥೆಗೆ ಚಿತ್ರಕಥೆ ಬರೆದು ಎ.ಪಿ ಅರ್ಜುನ್ ಆಕ್ಷನ್ ಕಟ್ ಹೇಳಿದ್ದರು. ಗೋಪಿನಾಥ್ ಕೃಷ್ಣಮೂರ್ತಿ ಎಂಬುವವರ ಜೊತೆ ಸೇರಿ ಅರ್ಜುನ್ ಸಂಭಾಷಣೆ ಸಹ ಬರೆದಿದ್ದಾರೆ.

ಆಕ್ಷನ್, ಮೇಕಿಂಗ್ ಎಲ್ಲಾ ಚೆನ್ನಾಗಿದ್ದರೂ 'ಮಾರ್ಟಿನ್' ಪ್ರೇಕ್ಷಕರನ್ನು ರಂಜಿಸುವಲ್ಲಿ ಸೋತಿದ್ದ. ಧ್ರುವ ಸರ್ಜಾ ಪರ್ಫಾರ್ಮನ್ಸ್ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಅತಿಯಾದ ಆರ್ಭಟವೇ ನೋಡುಗರಿಗೆ ಕಿರಿಕಿರಿ ಉಂಟು ಮಾಡಿತ್ತು. 'ಮಾರ್ಟಿನ್' ಸಿನಿಮಾ ಬಗ್ಗೆ ಕೆಲವರು ಟೀಕೆ ಮಾಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್ ಸಹ ಎದುರಿಸುವಂತಾಯಿತು.
'ಅದ್ಧೂರಿ', 'ಬಹದ್ಧೂರ್' ಹಾಗೂ 'ಭರ್ಜರಿ' ರೀತಿಯ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ಕೊಟ್ಟ ಧ್ರುವ ಸರ್ಜಾ ಮೇಲೆ ಭಾರೀ ನಿರೀಕ್ಷೆಯಿತ್ತು. 'ಪೊಗರು' ಸಿನಿಮಾ ಕೂಡ ನಿರಾಸೆ ಮೂಡಿಸಿತ್ತು. 3 ವರ್ಷಗಳ ಬಳಿಕ ಬಂದ 'ಮಾರ್ಟಿನ್' ಕೂಡ ನಿರೀಕ್ಷೆ ಸುಳ್ಳಾಗಿಸಿತ್ತು. ಅಂದಾಜು 80 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಮೊದಲ 2 ದಿನಕ್ಕೆ ಕರ್ನಾಟಕದಲ್ಲಿ 22 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಚಿತ್ರತಂಡ ಹೇಳಿತ್ತು. ಬಳಿಕ ಗಳಿಕೆ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ.
ಪರಭಾಷೆಗಳಲ್ಲಿ ಕೂಡ 'ಮಾರ್ಟಿನ್' ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೆಲ್ಲದರ ನಡುವೆ ಸಿನಿಮಾ ಇದೀಗ ಓಟಿಟಿ ಸ್ಟ್ರೀಮಿಂಗ್‌ಗೆ ಸಜ್ಜಾಗಿದೆ. ಈಗಾಗಲೇ ಯುಕೆ ಹಾಗೂ ಯುಎಸ್‌ಎ ಅಲ್ಲಿ ಸಿನಿಮಾ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ. ಸದ್ಯಕ್ಕೆ ಅಲ್ಲಿ ಹಣ ಪಾವತಿಸಿ ಸಿನಿಮಾ ವೀಕ್ಷಿಸುವ ಅವಕಾಶವಿದೆ. ಇನ್ನೊಂದು ವಾರದಲ್ಲಿ ಭಾರತದಲ್ಲಿರುವ ಪ್ರೈಂ ವೀಡಿಯೋ ಚಂದಾದಾರರು ಸಿನಿಮಾ ವೀಕ್ಷಿಸಬಹುದು.

ಭಾರತದಲ್ಲಿ 'ಮಾರ್ಟಿನ್' ಓಟಿಟಿ ಸ್ಟ್ರೀಮಿಂಗ್‌ಗೂ ಮುನ್ನ ಶಾಕ್ ಎದುರಾಗಿದೆ. ಈಗಾಗಲೇ ಸಿನಿಮಾ ಆನ್‌ಲೈನ್‌ನಲ್ಲಿ ಸೋರಿಕೆ ಆಗಿದೆ. ಹೌದು ಯಾರೋ ಕಿಡಿಗೇಡಿಗಳು ಸಿನಿಮಾ HD ಪ್ರಿಂಟ್ ಪೈರಸಿ ಮಾಡಿ ಹರಿಬಿಟ್ಟಿದ್ದಾರೆ. ಇದರಿಂದ ಓಟಿಟಿ ರಿಲೀಸ್ ಮುನ್ನ ಕೆಲವರು ಸಿನಿಮಾ ನೋಡಲು ಆರಂಭಿಸಿದ್ದಾರೆ. ಇದು ಸಹಜವಾಗಿಯೇ ಪ್ರೈಂ ವೀಡಿಯೋದಲ್ಲಿ ಸಿನಿಮಾ ವೀಕ್ಷಿಸುವವರ ಸಂಖ್ಯೆ ಕಮ್ಮಿ ಆಗುವಂತೆ ಮಾಡುತ್ತದೆ.
ಕಳೆದೆರಡು ದಿನಗಳಿಂದ 'ಮಾರ್ಟಿನ್' ಸಿನಿಮಾ ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ. ಈ ವಾರ ಓಟಿಟಿಗೆ ಬರಬೇಕಿತ್ತು. ಅಷ್ಟರಲ್ಲೇ ಇಂತಹ ಎಡವಟ್ಟು ಆಗಿದೆ. ಸಿನಿಮಾ ಪೈರಸಿ ಆಗುವುದು ಹೊಸದೇನು ಅಲ್ಲ. ಕೆಲ ಸಿನಿಮಾಗಳನ್ನು ಬಿಡುಗಡೆಗೂ ಮುನ್ನ ಪೈರಸಿ ಮಾಡಿರುವ ಉದಾಹರಣೆ ಇದೆ. ಪ್ರೈಂ ವೀಡಿಯೋ ಕೆಲವೊಮ್ಮೆ ವಿದೇಶಗಳಲ್ಲಿ ಮೊದಲು ಓಟಿಟಿ ಸ್ಟ್ರೀಮಿಂಗ್ ಆರಂಭಿಸುವುದರಿಂದ ಇಂತಹ ಸಮಸ್ಯೆ ಎದುರಾಗುವುದು ಇದೆ.
ಇದಕ್ಕೂ ಮುನ್ನ ಕೆಲ ಚಿತ್ರಗಳನ್ನ ಇದೇ ರೀತಿ ಮೊದಲು ಯುಎಸ್, ಯುಕೆ ದೇಶಗಳಲ್ಲಿ ಬಾಡಿಗೆ ಆಧಾರದಲ್ಲಿ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟು ಬಳಿಕ ಭಾರತದಲ್ಲಿ ರಿಲೀಸ್ ಮಾಡಿದ್ದಾರೆ. ಅದೇ ರೀತಿ 'ಮಾರ್ಟಿನ್' ಚಿತ್ರದ ವಿಚಾರದಲ್ಲೂ ಮಾಡಲಾಗಿದೆ. ಅಲ್ಲಿಂದಲೇ ಯಾರೋ ಸಿನಿಮಾ ಲೀಕ್ ಮಾಡಿರುವ ಸಾಧ್ಯತೆಯಿದೆ. ಸಿನಿಮಾ ಅಧಿಕೃತವಾಗಿ ಓಟಿಟಿಗೆ ಬಂದ ಮೇಲೆ ಯಾವ ರೀತಿ ಸದ್ದು ಮಾಡುತ್ತದೆ ಕಾದು ನೋಡಬೇಕಿದೆ.


Click it and Unblock the Notifications











