Dhurandhar-2 Ott: ಬ್ಲಾಕ್‌ಬಸ್ಟರ್ 'ಧುರಂಧರ್-2' ಓಟಿಟಿ ಲೆಕ್ಕಾಚಾರ; ಎಲ್ಲಿ, ಯಾವಾಗ ಸ್ಟ್ರೀಮಿಂಗ್?
ಆದಿತ್ಯಧರ್ ನಿರ್ದೇಶನದ 'ಧುರಂಧರ್-2' ಸಿನಿಮಾ ಗೆಲುವಿನ ನಾಗಾಲೋಟ ಮುಂದುವರೆದಿದೆ. 5ನೇ ದಿನ ಅಂದರೆ ಫಸ್ಟ್ ವೀಕೆಂಡ್ ಮುಗಿದು ಮೊದಲ ಸೋಮವಾರ ಕೂಡ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ತಿದೆ. ಸದ್ಯಕ್ಕೆ ಚಿತ್ರದ ಆರ್ಭಟಕ್ಕೆ ಬ್ರೇಕ್ ಹಾಕುವವರೇ ಇಲ್ಲ. ಸಾವಿರಾರು ಸ್ಕ್ರೀನ್‌ಗಳಲ್ಲಿ ಸಿನಿಮಾ ತೆರೆಗೆ ಬಂದು ಸದ್ದು ಮಾಡ್ತಿದೆ. ಒಂದು ವರ್ಗದ ಪ್ರೇಕ್ಷಕರು ಮಾತ್ರ ಇದು ಪ್ರೊಪಾಗಂಡ ಸಿನಿಮಾ ಎಂದು ಟೀಕಿಸುತ್ತಿದೆ.
'ಧುರಂಧರ್-2' ಚಿತ್ರದ ಬಗ್ಗೆ ಪರ ವಿರೋಧ ಚರ್ಚೆ ಜೋರಾಗಿದೆ. ಬಹುತೇಕರು ಅದ್ಭುತ ಸಿನಿಮಾ ಎಂದು ತಲೆ ಮೇಲೆ ಹೊತ್ತು ಮರೆಸುತ್ತಿದ್ದಾರೆ. ಕೆಲವರು ಮಾತ್ರ ಇದು ಬಿಜೆಪಿ ರಾಜಕೀಯ ಪ್ರಚಾರ, ಸತ್ಯದ ಜೊತೆಗೆ ಕಾಲ್ಪನಿಕ ವಿಚಾರಗಳನ್ನು ಹೆಚ್ಚು ಬೆರಸಿ ಸಿನಿಮಾ ಮಾಡಿದ್ದಾರೆ. ದೇಶಾಭಿಮಾನದ ಹೆಸರಿನಲ್ಲಿ ತಪ್ಪು ಸಂದೇಶ ರವಾನಿಸುತ್ತಿದ್ದಾರೆ ಅಂತೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ. ರಮ್ಯಾ, ಪ್ರಕಾಶ್ ರೈ ಸೇರಿದಂತೆ ಕೆಲವರು ಟೀಕಿಸಿದರೆ ರಾಜಮೌಳಿ, ರಾಮ್‌ಚರಣ್, ಅಲ್ಲು ಅರ್ಜುನ್ ಸೇರಿ ಕೆಲ ತಾರೆಯರು ಕೊಂಡಾಡುತ್ತಿದ್ದಾರೆ.

ಸಿನಿಮಾ ತೆರೆಕಂಡು 2ನೇ ವಾರದತ್ತ ಮುನ್ನುಗ್ಗುತ್ತಿದೆ. ಈಗಾಗಲೇ 400 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದೆ ಎಂದು ಅಂದಾಜಿಸಲಾಗ್ತಿದೆ. ಕೆಲವರು ಮಾತ್ರ ಓಟಿಟಿಯಲ್ಲಿ ಸಿನಿಮಾ ನೋಡೋಣ ಎಂದು ಸುಮ್ಮನಾಗುತ್ತಿದ್ದಾರೆ. ನಟಿ ರಮ್ಯಾ ಕೂಡ ಚಿತ್ರಮಂದಿರದಲ್ಲಿ ಸಿನಿಮಾ ನೋಡಿದರೆ ಹಣ ವ್ಯರ್ಥ. ಓಟಿಟಿಯಲ್ಲಿ ನೋಡಿದ್ರೆ ಕೊನೆಪಕ್ಷ ಬೇಡದಿದ್ದರೆ ಆಫ್ ಮಾಡಬಹುದು ಎನ್ನುವ ಅರ್ಥದಲ್ಲಿ ವ್ಯಂಗ್ಯವಾಡಿದ್ದಾರೆ.
ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿರುವ 'ಧುರಂಧರ್- 2' ಸಿನಿಮಾ ಓಟಿಟಿಗೆ ಬರೋದು ಯಾವಾಗ? ಎನ್ನುವ ಚರ್ಚೆ ಶುರುವಾಗಿದೆ. ಹಿಂದಿ ಸಿನಿಮಾಗಳು ತೆರಕಂಡ 60 ದಿನಗಳ ಬಳಿಕ ಓಟಿಟಿಗೆ ಬರುತ್ತವೆ. ದಕ್ಷಿಣದ ಸಿನಿಮಾಗಳು ತಿಂಗಳಿಗೂ ಮುನ್ನ ಡಿಜಿಟಲ್ ಫ್ಲಾಟ್‌ಫಾರ್ಮ್‌ಗೆ ಎಂಟ್ರಿ ಕೊಡುತ್ತಿದ್ದವು. ಇದೀಗ ಎಲ್ಲಾ ಕಡೆ 60 ದಿನಗಳ ನಿಯಮ ಪಾಲಿಸಲು ಫಿಲ್ಮ್ ಮೇಕರ್ಸ್ ನಿರ್ಧರಿಸಿದ್ದಾರೆ. ಅಂದಹಾಗೆ ಜಿಯೋ ಹಾಟ್‌ಸ್ಟರ್‌ಗೆ ಚಿತ್ರದ ಓಟಿಟಿ ರೈಟ್ಸ್ ಮಾರಾಟವಾಗಿದೆ. ಕ್ರೇಜ್‌ಗೆ ತಕ್ಕಂತೆ 150 ಕೋಟಿ ರೂ.ಗೆ ವ್ಯವಹಾರ ಖುದುರಿಸಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಮಾರ್ಚ್ 19ಕ್ಕೆ 'ಧುರಂಧರ್- 2' ಸಿನಿಮಾ ತೆರೆಗಪ್ಪಳಿಸಿದೆ. 60 ದಿನಗಳ ಬಳಿಕ ಅಂದರೆ ಮೇ 15ರ ನಂತರ ಮೊಬೈಲ್, ಟಿವಿಗಳಲ್ಲಿ ಈ ಸ್ಪೈ ಥ್ರಿಲ್ಲರ್ ಸಿನಿಮಾ ನೋಡಬಹುದು. ಸದ್ಯಕ್ಕಂತೂ ಓಟಿಟಿಗೆ ಸಿನಿಮಾ ಬರಲ್ಲ ಎನ್ನುವುದು ಖಾತ್ರಿಯಾಗಿದೆ. ಡಿಸೆಂಬರ್ 5ರಂದು ತೆರೆಗೆ ಬಂದಿದ್ದ 'ಧುರಂಧರ್' ಸಿನಿಮಾ 1300 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಜನವರಿ 30ರಂದು ಸಿನಿಮಾ ಓಟಿಟಿಗೆ ಬಂದಿತ್ತು. 85 ಕೋಟಿ ರೂ.ಗೆ ನೆಟ್‌ಫ್ಲಿಕ್ಸ್ ರೈಟ್ಸ್ ಕೊಂಡುಕೊಂಡಿದ್ದಾಗಿ ಹೇಳಲಾಗಿತ್ತು.
ಓಟಿಟಿಯಲ್ಲಿ 10 ನಿಮಿಷ ದೃಶ್ಯಗಳಿಗೆ ಕತ್ತರಿ ಹಾಕಲಾಗಿತ್ತು. ಕೆಲ ಡೈಲಾಗ್‌ಗಳನ್ನು ಮ್ಯೂಟ್ ಮಾಡಿದ್ದರು. ಇದು ಸಿನಿರಸಿಕರ ಬೇಸರಕ್ಕೆ ಕಾರಣವಾಗಿದ್ದು ಸುಳ್ಳಲ್ಲ. ಅಂದಹಾಗೆ 'ಧುರಂಧರ್' ಸಿನಿಮಾ ಹಿಂದಿಯಲ್ಲಿ ಮಾತ್ರ ತೆರೆಗೆ ಬಂದಿತ್ತು. ಬಳಿಕ ದಕ್ಷಿಣದ ಭಾಷೆಗಳಲ್ಲಿ ಡಬ್ ಮಾಡಿ ಓಟಿಟಿಗೆ ಬಿಟ್ಟಿದ್ದರು. ಸೀಕ್ವೆಲ್ ಅನ್ನು ಏಕಕಾಲಕ್ಕೆ 5 ಭಾಷೆಗಳಲ್ಲಿ ತರಲಾಗಿದೆ.
ಕರ್ನಾಟಕದಲ್ಲಿ ಕೂಡ 'ಧುರಧಂರ್'-2 ಸಿನಿಮಾ ಆರ್ಭಟ ಜೋರಾಗಿದೆ. ಎಲ್ಲೆಲ್ಲೂ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಬುಧವಾರದ ಪ್ರೀಮಿಯರ್ ಶೋಗಳು ಸೇರಿ ಮೊದಲ 4 ದಿನಕ್ಕೆ ಕರ್ನಾಟದಲ್ಲಿ ಸಿನಿಮಾ 50 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ಗುಸುಗುಸು ಶುರುವಾಗಿದೆ.
ವಿಶೇಷ ಸೂಚನೆ: 'ಧುರಧಂರ್'-2 ಸಿನಿಮಾ ಓಟಿಟಿ ರಿಲೀಸ್ ಡೇಟ್ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಹೊರಬಂದಿಲ್ಲ. ಮೇ 16ರಂದು ಸ್ಟ್ರೀಮಿಂಗ್ ಆಗಬಹುದು ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ.


Click it and Unblock the Notifications











