ಹೊಚ್ಚ ಹೊಸ ಕನ್ನಡ ಸಿನಿಮಾ ಓಟಿಟಿಗೆ; ವೀಕೆಂಡ್ ಮನೆಯಲ್ಲೇ ಸಿನಿಮಾ ನೋಡಿ
ಈ ವಾರ ಚಿತ್ರಮಂದಿರಗಳಲ್ಲಿ ಮೂರು ಕನ್ನಡ ಸಿನಿಮಾಗಳು ತೆರೆಗೆ ಬರ್ತಿವೆ. ರಾಧಿಕಾ ಕುಮಾರಸ್ವಾಮಿ ನಟನೆಯ 'ಭೈರಾದೇವಿ' ಸಿನಿಮಾ ನಿರೀಕ್ಷೆ ಮೂಡಿಸಿದೆ. ಹೊಸಬರ 'ಗೋಪಿಲೋಲ' ಎನ್ನುವ ಚಿತ್ರವೂ ತೆರೆಗೆ ಬರ್ತಿದೆ. ಓಟಿಟಿಯಲ್ಲೂ ಹೊಸ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ.
ಕನ್ನಡ ಸಿನಿಮಾ, ವೆಬ್ ಸೀರಿಸ್ ಹೆಚ್ಚು ಓಟಿಟಿಗೆ ಬರಲ್ಲ ಎನ್ನುವ ಆರೋಪವಿದೆ. ಕೆಲವರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿರುತ್ತಾರೆ. ಆಗೊಮ್ಮೆ ಈಗೊಮ್ಮೆ ಒಂದೊಂದು ಸಿನಿಮಾ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಬರುತ್ತದೆ. ಈಗಾಗಲೇ ತಮಿಳಿನ 'GOAT' ಸಿನಿಮಾ ಕನ್ನಡಕ್ಕೆ ಡಬ್ ಆಗಿ ಸ್ಟ್ರೀಮಿಂಗ್ ಆರಂಭಿಸಿದೆ.

ಈ ವಾರ ಕನ್ನಡದ 'ಪೌಡರ್' ಸಿನಿಮಾ ಓಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ತಿಂಗಳ ಹಿಂದೆ ಈ ಡಾರ್ಕ್ ಕಾಮಿಡಿ ಸಿನಿಮಾ ತೆರೆಗೆ ಬಂದಿತ್ತು. ಕಳೆದ 'ಫ್ಯಾಮಿಲಿ ಡ್ರಾಮ' ಎನ್ನುವ ಡಾರ್ಕ್ ಕಾಮಿಡಿ ಸಿನಿಮಾ ಓಟಿಟಿಗೆ ಬಂದು ವೀಕ್ಷಕರನ್ನು ರಂಜಿಸಿದೆ. ಮಧ್ಯರಾತ್ರಿಯಿಂದಲೇ(ಅಕ್ಟೋಬರ್ 4) 'ಪೌಡರ್' ಸಿನಿಮಾ ಅಮೇಜಾನ್ ಪ್ರೈಂನಲ್ಲಿ ವೀಕ್ಷಣೆಗೆ ಸಿಗಲಿದೆ.
ಈ ಹಿಂದೆ 'ಗುಲ್ಟು' ಸಿನಿಮಾ ಕಟ್ಟಿಕೊಟ್ಟಿದ್ದ ಜನಾರ್ಧನ್ ಚಿಕ್ಕಣ್ಣ 'ಪೌಡರ್' ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದಾರೆ. ದಿಗಂತ್, ಧನ್ಯಾ ರಾಮ್‌ಕುಮಾರ್ ಹಾಗೂ ಶರ್ಮಿಳಾ ಮಾಂಡ್ರೆ ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಆಗಸ್ಟ್ 23ಕ್ಕೆ ಸಿನಿಮಾ ತೆರೆಗೆ ಬಂದಿತ್ತು. ಸಿನಿಮಾ ನೋಡಿದವರು ಮೆಚ್ಚಿಕೊಂಡರೂ ದೊಡ್ಡಮಟ್ಟದಲ್ಲಿ ಗೆಲ್ಲಲಿಲ್ಲ.

ರಂಗಾಯಣ ರಘು, ಆರ್ಮುಗರ ರವಿಶಂಕರ್ ಹಾಗೂ ನಾಗಭೂಷಣ್ ಸಹ 'ಪೌಡರ್' ಚಿತ್ರದ ತಾರಾಗಣದಲ್ಲಿದ್ದಾರೆ. ಚೀನಾದಿಂದ ಬರುವ ಭಾರೀ ಮೌಲ್ಯದ ಡ್ರಗ್ಸ್ ಮೈಸೂರಿನ ಸೂಪರ್ ಮಾರ್ಕೆಟ್ ಸೇರುತ್ತದೆ. ಸೂರ್ಯ(ದಿಗಂತ್) ಅಲ್ಲಿ ಕೆಲಸ ಮಾಡಿಕೊಂಡಿರುತ್ತಾನೆ. ಮತ್ತೇರಿಸುವ ಪೌಡರ್ ಹಾಗೂ ಮುಖಕ್ಕೆ ಹಚ್ಚುವ ಪೌಡರ್ ಅದಲು ಬದಲಾಗಿ ಏನೆಲ್ಲಾ ರಾದ್ಧಾಂತವಾಗುತ್ತದೆ ಎನ್ನುವುದು 'ಪೌಡರ್' ಚಿತ್ರದ ಇನ್ನುಳಿದ ಕಥೆ.
ಮೈಂಡ್‌ಲೆಸ್ ಕಾಮಿಡಿ ಚಿತ್ರದಲ್ಲಿ ಹೇರಳವಾಗಿದೆ. ಅಂದರೆ ಯಾಕೆ? ಏನು? ಎಂದು ಯಾರು ಕೇಳುವಂತಿಲ್ಲ. ಯಾವುದಕ್ಕೂ ಲಾಜಿಕ್ ಇರಲ್ಲ. ನೋಡುಗರು ಸನ್ನಿವೇಶಗಳನ್ನು ನೋಡುತ್ತಾ ನಗಬೇಕು ಅಷ್ಟೆ. ಶರ್ಮಿಳಾ ಮಾಂಡ್ರೆ ಜಬರ್ದಸ್ತ್ ಪಾತ್ರದಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಾರೆ. ಸೂರ್ಯನ ಪ್ರೇಯಸಿ ಪಾತ್ರದಲ್ಲಿ ಧನ್ಯಾ ರಾಮ್‌ಕುಮಾರ್ ಕಾಣಿಸಿಕೊಂಡಿದ್ದಾರೆ.
ರಂಗಾಯಣ ರಘು ಜೊತೆ ಸೇರಿ ಗೋಪಾಲಕೃಷ್ಣ ದೇಶಪಾಂಡೆ 'ಪೌಡರ್' ಚಿತ್ರದಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಾರೆ. ಕೆಆರ್‌ಜಿ ಸ್ಟುಡಿಯೋಸ್ ಹಾಗೂ ಟಿವಿಎಫ್ ಸಂಸ್ಥೆಗಳು ಜಂಟಿಯಾಗಿ 'ಪೌಡರ್' ಚಿತ್ರವನ್ನು ನಿರ್ಮಿಸಿವೆ. ಶಾಂತಿ ಸಾಗರ್, ಅದ್ವೈತ್ ಗುರುಮೂರ್ತಿ ಛಾಯಾಗ್ರಹಣ ಚಿತ್ರಕ್ಕಿದೆ. ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡಿದ್ದಾರೆ.
ಡ್ರಗ್ಸ್ ರೀತಿಯ ಗಂಭೀರ ವಿಚಾರವನ್ನು ಆಯ್ಕೆ ಮಾಡಿಕೊಂಡಿದ್ದರೂ ಫನ್ ಎಂಟರ್‌ಟೈನರ್ ಸಿನಿಮಾ ಕಟ್ಟಿಕೊಡಲಾಗಿದೆ. ನೋಡುಗರನ್ನು ನಗಿಸುವುದೇ ಚಿತ್ರದ ಪರಮೋದ್ದೇಶ. ಇನ್ನು ಕಲಾವಿದರ ನಟನೆಗೂ ಅದಕ್ಕೆ ಜೊತೆಯಾಗಿದೆ. ಚಿತ್ರಕ್ಕೆ ದೀಪಕ್ ವೆಂಕಟೇಶನ್ ಕಥೆ, ಚಿತ್ರಕಥೆ ಬರೆದಿದ್ದಾರೆ. ಮೈಸೂರಿನಲ್ಲೇ ಬಹುತೇಕ ಚಿತ್ರೀಕರಣ ನಡೆದಿತ್ತು. ವೀಕೆಂಡ್‌ನಲ್ಲಿ ಫ್ಯಾಮಿಲಿ ಜೊತೆ ಮನೆಯಲ್ಲೇ ಕೂತು ಎಂಜಾಯ್ ಮಾಡಲು 'ಪೌಡರ್' ಸಿನಿಮಾ ಒಳ್ಳೆ ಆಯ್ಕೆ.


Click it and Unblock the Notifications











