ಡಿಸ್ನಿಗೆ ಒಂದೆಡೆ ಭಾರಿ ನಷ್ಟ, ಇನ್ನೊಂದೆಡೆ ಭಾರಿ ಲಾಭ!
ವಿಶ್ವದ ಶ್ರೀಮಂತ ಮನೊರಂಜನಾ ಸಂಸ್ಥೆಗಳಲ್ಲಿ ಒಂದಾದ ಡಿಸ್ನಿ, ತಾನೇಕೆ ಅತ್ಯುತ್ತಮ ಎಂಬುದನ್ನು ಮತ್ತೆ ಸಾಬೀತುಪಡಿಸಿದೆ.
ಕೋವಿಡ್ ಸಮಯದಲ್ಲಿ ವಿಶ್ವದ ಬಹುತೇಕ ದೊಡ್ಡ ದೊಡ್ಡ ಸಿನಿಮಾ ನಿರ್ಮಾಣ ಸಂಸ್ಥೆಗಳು 70-80% ನಷ್ಟ ಅನುಭವಿಸಿ ಹೈರಾಣಾಗಿವೆ. ಆದರೆ ಡಿಸ್ನಿ ಈ ಪರಿಸ್ಥಿತಿಯನ್ನು ಜಾಣತನದಿಂದ ನಿಭಾಯಿಸಿ ಲಾಭ ಗಳಿಸಿಕೊಂಡಿದೆ.
ಇತರೆ ಸಿನಿಮಾ ನಿರ್ಮಾಣ ಸಂಸ್ಥೆಗಳಂತೆ ಡಿಸ್ನಿ ಸಿನಿಮಾ ನಿರ್ಮಾಣ ಸಂಸ್ಥೆ ಸಹ 50% ಕ್ಕೂ ಹೆಚ್ಚಿನ ನಷ್ಟ ಅನುಭವಿಸಿದೆ. ಆದರೆ ಅದೇ ಸಮಯದಲ್ಲಿ ತನ್ನ ಒಟಿಟಿ ವೇದಿಕೆಯಾಗಿರುವ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಮೂಲಕ ಹೆಚ್ಚಿನ ಲಾಭವನ್ನು ಪಡೆದುಕೊಂಡು ಒಟ್ಟಾರೆಯಾಗಿ ಲಾಭದಲ್ಲಿಯೇ ಮುನ್ನಡೆದಿದೆ.

ಕಳೆದ ಹಣಕಾಸು ವರ್ಷದಲ್ಲಿ ಡಿಸ್ನಿ ಎಂಟರ್ಟೈನ್‌ಮೆಂಟ್ 470 ಮಿಲಿಯನ್ ಡಾಲರ್ ಲಾಭ ಗಳಿಸಿದೆ ಭಾರತದ ರುಪಾಯಿ ಲೆಕ್ಕದಲ್ಲಿ 3645 ಕೋಟಿ. ಆದರೆ ಅದಕ್ಕೂ ಹಿಂದಿನ ಹಣಕಾಸು ವರ್ಷದಲ್ಲಿ ಡಿಸ್ನಿ ಎಂಟರ್ಟೈನ್‌ಮೆಂಟ್ ಗಳಿಸಿದ್ದ ನಿವ್ವಳ ಲಾಭ 7075 ಕೋಟಿ ರು.
ಆದರೆ ಇದೇ ಸಮಯದಲ್ಲಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನ ಚಂದಾದಾರರ ಸಂಖ್ಯೆ ಭಾರಿ ದೊಡ್ಡ ಮಟ್ಟದಲ್ಲಿ ಏರಿಕೆಯಾಗಿದ್ದು, 14 ಕೋಟಿಗೂ ಹೆಚ್ಚು ಸಂಖ್ಯೆಯ ಹೊಸ ಚಂದಾದಾರರನ್ನು ಗಳಿಸಿಕೊಂಡಿದೆ. ಇತರೆ ವೇದಿಕೆಗಳ ಮೂಲಕ ಡಿಸ್ನಿಗೆ ಚಂದಾದಾರಾಗಿರುವವರ ಸಂಖ್ಯೆ 20 ಕೋಟಿಯನ್ನು ದಾಟುತ್ತದೆ!
ಡಿಸ್ನಿ ಥೀಮ್ ಪಾರ್ಕ್‌ಗಳು ಕೋವಿಡ್‌ನಿಂದಾಗಿ ಮುಚ್ಚಿದ್ದ ಕಾರಣ ಅವುಗಳಿಂದ ಹೆಚ್ಚಿನ ಆದಾಯ ಕಳೆದ ಎರಡು ವರ್ಷಗಳಲ್ಲಿ ಬಂದಿಲ್ಲ. ಆದರೆ ಕೋವಿಡ್ ಭೀತಿ ಕಡಿಮೆ ಆಗುತ್ತಿದ್ದಂತೆ ಡಿಸ್ನಿ ಪಾರ್ಕ್‌ಗಳಿಗೆ ಜನಹರಿವು ಹೆಚ್ಚಾಗಿದೆ ಎಂದು ಡಿಸ್ನಿ ತನ್ನ ವಾರ್ಷಿಕ ವರದಿಯಲ್ಲಿ ಹೇಳಿದೆ.
ತನ್ನ ಪ್ರತಿಸ್ಪರ್ಧಿ ನೆಟ್‌ಫ್ಲಿಕ್ಸ್‌ಗಿಂತಲೂ ವೇಗವಾಗಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಚಂದಾದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿದೆ.


Click it and Unblock the Notifications











