'ಕೋಲ್ಡ್ ಪ್ಲೇ' ಕಾರ್ಯಕ್ರಮಕ್ಕೆ ಟಿಕೆಟ್ ಸಿಕ್ತಿಲ್ವಾ ? ಮನೆಯಲ್ಲಿಯೇ ನೋಡಬಹುದು ಸಂಗೀತ ಸಂಜೆ..!
ಭಾರತದಲ್ಲಿ ಡಿಜಿಟಲ್ ವೇದಿಕೆ ಜನ್ಮವೆತ್ತಿ ಹದಿನೈದು-ಹದಿನಾರು ವರ್ಷಗಳಾಗಿವೆ. 2008ರಲ್ಲಿ ಮೊದಲ ಬಾರಿ ರಿಲಯನ್ಸ್ ಬಿಗ್‌ಫ್ಲಿಕ್ಸ್ ಎಂಬ ಹೆಸರಿನಲ್ಲಿ ಓಟಿಟಿ ಲೋಕಕ್ಕೆ ಮುನ್ನುಡಿ ಬರೆಯಿತು. ಆ ನಂತರ ನೆಕ್ಸ್ ಜಿಟಿವಿ, 2013ರಲ್ಲಿ ಡಿಟ್ಟೋ, 2015ರಲ್ಲಿ ಹಾಟ್ ಸ್ಟಾರ್ ಆ ನಂತರ ಅಮೆಜಾನ್ ಹೀಗೆ ಕೆಲವೇ ವರ್ಷಗಳ ಅಂತರದಲ್ಲಿ ಎಣಿಕೆಗೆ ನಿಲುಕದ ಸಂಖ್ಯೆಯಲ್ಲಿ ಓಟಿಟಿ ವೇದಿಕೆಗಳು ಹುಟ್ಟಿಕೊಂಡವು. ಕೊರೊನಾ ಕಾಲಘಟ್ಟ ಡಿಜಿಟಲ್ ಲೋಕಕ್ಕೆ ಅವಕಾಶದ ದಿಡ್ಡಿ ಬಾಗಿಲಾಯಿತು.
ಮಿಲೇನಿಯಲ್ಸ್ ಅಂದರೆ 18 ರಿಂದ 35ರ ವಯೋಮಾನದವರನ್ನೇ ಗುರಿಯಾನ್ನಾಗಿಸಿಕೊಂಡು ದಿನಗಳೆದಂತೆ ವೇಗವಾಗಿ ಬೆಳೆಯುತ್ತಿರುವ ಈ ಓಟಿಟಿ ವೇದಿಕೆಯಲ್ಲಿ ಈಗ ಮತ್ತೊಂದು ಕ್ರಾಂತಿಕಾರಿ ಹೆಜ್ಜೆಗೆ ಡಿಸ್ನಿ + ಹಾಟ್ ಸ್ಟಾರ್ ನಾಂದಿ ಹಾಡಿದೆ. ಮನೆಯಲ್ಲಿಯೇ ಕುಳಿತು ಕೋಲ್ಡ್ ಪ್ಲೇ ತಂಡದ ಹಾಡಿಗೆ ಹೆಜ್ಜೆ ಹಾಕುವ ಸುವರ್ಣ ಅವಕಾಶವನ್ನು ಪ್ರೇಕ್ಷಕರಿಗೆ ನೀಡಲು ಮುಂದಾಗಿದೆ.

ಹೌದು, ಮನುಷ್ಯಕುಲದ ವ್ಯಾಕುಲಗಳನ್ನು ದೂರ ಮಾಡುವ ಶಕ್ತಿ ಸಂಗೀತಕ್ಕೆ ಇದೆ. ಅದರಲ್ಲಿಯೂ ಭಾರತದಲ್ಲಿ ಸಂಗೀತ ಪರಂಪರೆ ವಿಭಿನ್ನ. ವೈವಿಧ್ಯಮಯ ಸಂಗೀತ ಪ್ರಕಾರಗಳನ್ನು ಹೊಂದಿರುವ ಭಾರತದಲ್ಲಿ ಪಾಶ್ಚಾತ್ಯ ಸಂಗೀತಕ್ಕೆ ಕುಣಿದು ಕುಪ್ಪಳಿಸುವ ಬಹುದೊಡ್ಡ ವರ್ಗವೇ ಇದೆ. ಇದಕ್ಕೆ ಒಂದು ಉದಾಹರಣೆ ಎಂಬಂತೆ ಈ ಜನವರಿ 26ರಂದು ಗಣರಾಜ್ಯೋತ್ಸವದ ಪ್ರಯುಕ್ತ ಅಹಮದಾಬಾದ್‌ನ ನರೇಂದ್ರ ಮೋಡಿ ಕ್ರೀಡಾಂಗಣದಲ್ಲಿ ಕೋಲ್ಡ್ ಪ್ಲೇ ತಂಡ ಸಂಗೀತ ಸಂಜೆಯನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಯುವ ಸಮೂಹ ತುದಿಗಾಲಿನಲ್ಲಿ ನಿಂತಿದೆ. ಟಿಕೆಟ್ ಸಿಗದೇ ಪರದಾಡುತ್ತಿದೆ.
ಇದನ್ನರಿತ ಡಿಸ್ನಿ + ಹಾಟ್ ಸ್ಟಾರ್ ಈಗ ಅಹಮದಾಬಾದ್‌ನಲ್ಲಿ ನಡೆಯಲಿರುವ ಕೋಲ್ಡ್ ಪ್ಲೇ ಕನ್ಸರ್ಟ್‌ನ ಲೈವ್ ಪ್ರಸಾರ ಮಾಡಲು ಸಿದ್ಧವಾಗಿದೆ. ಈ ಮೂಲಕ ಸಂಗೀತ ಪ್ರಿಯರಿಗೆ, ಕೋಲ್ಡ್ ಪ್ಲೇ ಬ್ಯಾಂಡನ್ ಅಭಿಮಾನಿಗಳಿಗೆ ಮನೆಯಲ್ಲಿಯೇ ಸಂಗೀತದ ಅಲೆಯಲ್ಲಿ ತೇಲಿಸಲು ಮುಂದಾಗಿದೆ. ಈ ಕುರಿತು ಮಾತನಾಡಿರುವ ಜಿಯೋ ಸ್ಟಾರ್ ಸ್ಫೋರ್ಟ್ಸ್‌ನ ಸಿಇಓ ಸಂಜೋಗ್ ಗುಪ್ತಾ ದೇಶಾದ್ಯಂತ ಕೋಲ್ಡ್ ಪ್ಲೇ ತಂಡದ ಹಾಡುಗಳನ್ನು ತಲುಪಿಸುವ ಜವಾಬ್ಧಾರಿಯನ್ನು ನಾವು ವಹಿಸಿಕೊಂಡಿದ್ದಕ್ಕೆ ನಮಗೆ ಖುಷಿಯ ಜೊತೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ. ಎಲ್ಲರಿಗೂ ಕೂಡ ಲಭ್ಯವಾಗುವಂತೆ ನಾವು ಕೋಲ್ಡ್ ಪ್ಲೇ ಸಂಗೀತ ಸಂಜೆಯನ್ನು ಪ್ರಸಾರ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಇನ್ನೂ ಈ ಕುರಿತು ಮಾತನಾಡಿರುವ ಕೋಲ್ಡ್ ಪ್ಲೇ ತಂಡದ ಪ್ರಮುಖ ಗಾಯಕ ಕ್ರಿಸ್ ಮಾರ್ಟಿನ್ ಅಹಮದಾಬಾದ್‌ನಲ್ಲಿನ ಕಾರ್ಯಕ್ರಮಕ್ಕೆ ನಮ್ಮ ತಂಡ ತುಂಬಾ ಉತ್ಸುಕವಾಗಿದೆ. ಡಿಸ್ನಿ + ಹಾಟ್ ಸ್ಟಾರ್ ಮೂಲಕ ನೀವು ಇರುವ ಸ್ಥಳದಿಂದನೇ ನಮ್ಮ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಬಹುದು ಎಂದು ಹೇಳಿದ್ದಾರೆ.
ಅಂದ್ಹಾಗೇ ಜನವರಿ 26ರಂದು ಅಹಮದಾಬಾದ್‌ನಲ್ಲಿ ಸಂಗೀತದ ರಸದೌತಣ ಬಡಿಸುವ ಮುನ್ನ ಮುಂಬೈನಲ್ಲಿ ಕೋಲ್ಡ್ ಪ್ಲೇ ಕಾರ್ಯಕ್ರಮ ನಡೆಯಲಿದೆ. ಜನವರಿ 18, 19 ಮತ್ತು 21ರಂದು ಸಹಸ್ರಾರು ಸಂಖ್ಯೆಯ ಜನರ ಮುಂದೆ ಕೋಲ್ಡ್ ಪ್ಲೇ ತಂಡ ಕುಣಿದು ಕುಪ್ಪಳಿಸಲಿದೆ. ತಮ್ಮ ಪ್ರಿಯತಮೆ ಜೊತೆ ಕ್ರಿಸ್ ಮಾರ್ಟಿನ್ ಭಾರತಕ್ಕೆ ಈಗಾಗಲೇ ಆಗಮಿಸಿದ್ದು ನಾಳೆಯಿಂದ ಮುಂಬೈನಲ್ಲಿ ನಡೆಯಲಿರುವ ಈ ಸಂಗೀತ ಉತ್ಸವದಿಂದ ಟ್ರಾಫಿಕ್ ಕಿರಿಕಿರಿ ಉಂಟಾಗಲಿದೆ. ಇನ್ನು. ಅಹಮದಾಬಾದ್‌ನಲ್ಲಿ ಜನವರಿ 26ರಂದು ಕೋಲ್ಡ್ ಪ್ಲೇ ಕನ್ಸರ್ಟ್ ಇರುವ ಹಿನ್ನೆಲೆ ಮುಂಬೈನಿಂದ ಅಹಮದಾಬಾದ್‌ಗೆ ವಿಶೇಷ ರೈಲುಗಳನ್ನು ಕೂಡ ಬಿಡಲಾಗಿದೆ. ಇನ್ನು ಅಹಮದಾಬಾದ್‌ನಲ್ಲಿ ಹೋಟೆಲ್ ಟಿಕೆಟ್ ದರ ಗಗನಕ್ಕೇರಿವೆ.


Click it and Unblock the Notifications











