ಕನ್ನಡದ ಬಗ್ಗೆ ಡಿಸ್ನಿ ಹಾಟ್‌ಸ್ಟಾರ್ ತಾತ್ಸಾರ: ಆಕ್ರೋಶ
ಕೊರೊನಾ ಕಾಲದಲ್ಲಿ ಒಟಿಟಿಗಳು ಹಿಂದೆಂದಿಗಿಂತಲೂ ಬಹುಪಟ್ಟು ಸಕ್ರಿಯವಾಗಿವೆ. ಒಟಿಟಿ ಮಾರುಕಟ್ಟೆಯಲ್ಲಿ ನಂಬರ್ ಒನ್ ಎನಿಸಿಕೊಳ್ಳಲು ದೊಡ್ಡ ಸಂಸ್ಥೆಗಳ ನಡುವೆ ಕಿತ್ತಾಟ ನಡೆಯುತ್ತಿದೆ.
ಅದರಲ್ಲಿಯೂ ನೆಟ್‌ಫ್ಲಿಕ್ಸ್, ಡಿಸ್ನಿ ಹಾಟ್‌ಸ್ಟಾರ್, ಅಮೆಜಾನ್ ಪ್ರೈಂ, ಎಚ್‌ಬಿಓ ಅಂಥ ವಿದೇಶಿ ಒಟಿಟಿಗಳು ಭಾರತದ ಮಾರುಕಟ್ಟೆ ಮೇಲೆ ಕಣ್ಣಿಟ್ಟಿದ್ದು, ಭಾರತದ ಮನೊರಂಜನಾ ಮಾರುಕಟ್ಟೆಯ ಮೇಳೆ ಪಾರುಪತ್ಯ ಸಾಧಿಸಲು ಯತ್ನಿಸುತ್ತಿವೆ.
ಭಾರತದಲ್ಲಿ ಹಲವು ಭಾಷೆಗಳಲ್ಲಿ ಮನೊರಂಜನೆ ಸರಕು ನಿರ್ಮಾಣವಾಗುತ್ತದೆ. ಹಾಗಾಗಿ ಪ್ರಾದೇಶಿಕ ಕಂಟೆಂಟ್‌ಗೆ ಅಂತಾರಾಷ್ಟ್ರೀಯ ಒಟಿಟಿಗಳು ಗಮನ ನೀಡುತ್ತಿವೆ. ಹಿಂದಿ ಮಾತ್ರವೇ ಅಲ್ಲದೆ, ಕನ್ನಡ, ತೆಲುಗು, ತಮಿಳು, ಮಲಯಾಳಂ, ಮರಾಠಿ ಭಾಷೆಗಳ ಕಂಟೆಂಟ್ ಅನ್ನು ಖರೀದಿಸಿ ಒಟಿಟಿ ವೇದಿಕೆ ಮೂಲಕ ವಿತರಿಸುತ್ತಿವೆ. ಆದರೆ ಈ ಮಲ್ಟಿನ್ಯಾಷನಲ್ ಒಟಿಟಿಗಳಿಗೆ ಭಾರತದಲ್ಲಿ ಸಿಗುವ ಲಾಭದ ಬಗ್ಗೆ ಕಾಳಜಿ ಇದೆಯೇ ಹೊರತು, ಇಲ್ಲಿನ ಭಾಷೆ, ಸಂಸ್ಕೃತಿ ಬಗ್ಗೆ ಅಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಜಾಹೀರಾತು ನೀಡಿದೆ ಹಾಟ್‌ಸ್ಟಾರ್
ವಿಶ್ವದ ಬೃಹತ್ ಒಟಿಟಿಗಳಲ್ಲಿ ಒಂದಾಗಿರುವ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಒಟಿಟಿ, ಭಾರತದಲ್ಲಿ ತಮ್ಮ ಮಾರುಕಟ್ಟೆ ವಿಸ್ತರಣೆ ಪ್ರಯತ್ನದಲ್ಲಿದ್ದು, ಭಾರತದ ಸ್ಥಳೀಯ ಭಾಷೆಗಳ ಕಂಟೆಂಟ್ ಅನ್ನು ನೀಡಲು ಆರಂಭಿಸಿದೆ. ನಾವು ಪ್ರಾದೇಶಿಕ ಭಾಷೆಗೆ ಆದ್ಯತೆ ನೀಡುತ್ತಿದ್ದೇನೆ ಎಂಬುದನ್ನು ತೋರ್ಪಡಿಸಿಕೊಳ್ಳಲು ಸಾಮಾಜಿಕ ಜಾಲತಾಣದಲ್ಲಿ ಕೆಲವು ಜಾಹೀರಾತುಗಳನ್ನು ಸಹ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ನೀಡಿದೆ.

ಕನ್ನಡ ಭಾಷೆಗೆ ಪರಭಾಷೆ ನಟನ ಚಿತ್ರ!
ಇಂಥಹುದೇ ಒಂದು ಜಾಹೀರಾತಿನಲ್ಲಿ. 'ಭಾಷೆ ಯಾವುದಾದರೂ ಆಗಿರಲಿ, ಕತೆಗಳು ನಿಲ್ಲುವುದಿಲ್ಲ' ಎಂಬ ಕ್ಯಾಪ್ಷನ್ ಅಡಿ. ವಿವಿಧ ಭಾಷೆಗಳ ಸಿನಿಮಾ ರಂಗದ ಸಿನಿಮಾಗಳ ಚಿತ್ರಗಳನ್ನು ಪ್ರದರ್ಶಿಸಲಾಗಿದೆ. ತೆಲುಗು ಭಾಷೆಗೆ 'ಬಾಹುಬಲಿ' ಸಿನಿಮಾದ ಚಿತ್ರ. ತಮಿಳಿಗೆ ಧನುಶ್ ನಟನೆಯ 'ಮಾರಿ' ಸಿನಿಮಾದ ಚಿತ್ರ. ಹಿಂದಿಗೆ ಅಜಯ್ ದೇವಗನ್ ನಟನೆಯ 'ದೃಶ್ಯಂ' ಸಿನಿಮಾದ ದೃಶ್ಯ. ಪಂಜಾಬಿಗೆ 'ಜಟ್ ಔರ್ ಜೂಲಿಯೆಟ್' ಸಿನಿಮಾ ದೃಶ್ಯ, ಮಲಯಾಳಂಗೆ ಸಾಯಿ ಪಲ್ಲವಿ ನಟನೆಯ 'ಪ್ರೇಮಂ' ಸಿನಿಮಾದ ಚಿತ್ರವನ್ನು ನೀಡಲಾಗಿದೆ. ಆದರೆ ಕನ್ನಡದ ಸಿನಿಮಾ ರಂಗಕ್ಕೆ ಮಾತ್ರ ಬೇರೆ ಭಾಷೆಯ ಸಿನಿಮಾದ ಚಿತ್ರ ನೀಡಲಾಗಿದೆ.

ಪ್ರಾದೇಶಿಕ ಸಿನಿಮಾ ರಂಗದ ಬಗ್ಗೆ ಅಜ್ಞಾನ
ಕನ್ನಡ ಸಿನಿಮಾಕ್ಕೆ ತೆಲುಗು ನಟ ನಾನಿ ನಟಿಸಿರುವ 'ಜೆರ್ಸಿ' ಸಿನಿಮಾದ ಚಿತ್ರವನ್ನು ನೀಡಲಾಗಿದೆ. ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಕನ್ನಡ ಸಿನಿಮಾಗಳು ಇಲ್ಲವೆಂದೇನಿಲ್ಲ. 'ಸಂಗೊಳ್ಳಿ ರಾಯಣ್ಣ', 'ಗಾಳಿಪಟ', 'ಮುಂಗಾರು ಮಳೆ', 'ಮಾಣಿಕ್ಯ', 'ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ' ಇನ್ನು ಹಲವು ಸಿನಿಮಾಗಳಿವೆ. ಆದರೆ ಡಿಸ್ನಿ ಹಾಟ್‌ಸ್ಟಾರ್‌ನವರು ಕನ್ನಡ ಸಿನಿಮಾದ ಜಾಹೀರಾತಿಗೆ ತೆಲುಗು ಸಿನಿಮಾದ ನಟನ ಚಿತ್ರವನ್ನು ಬಳಸಿರುವುದು ಪ್ರಾದೇಶಿಕ ಭಾಷೆಗಳು, ಹಾಗೂ ಪ್ರಾದೇಶಿಕ ಸಿನಿಮಾ ರಂಗಗಳ ಬಗ್ಗೆ ಅವರಿಗಿರುವ ಅಜ್ಞಾನವನ್ನು ಸೂಚಿಸುತ್ತಿದೆ.

23 ಲಕ್ಷ ಕೋಟಿ ಖರ್ಚು ಮಾಡಲಿದೆ ಡಿಸ್ನಿ ಪ್ಲಸ್
ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ವಿಶ್ವದ ಬೃಹತ್ ಒಟಿಟಿಗಳಲ್ಲಿ ಒಂದಾಗಿದ್ದು ಭಾರತ ಮಾತ್ರವಲ್ಲದೆ ವಿಶ್ವದೆಲ್ಲೆಡೆ ತನ್ನ ಮಾರುಕಟ್ಟೆಯನ್ನು ವಿಸ್ತರಿಸಲು ಯತ್ನಿಸುತ್ತಿದೆ. 2022ರಲ್ಲಿ ಕಂಟೆಂಟ್‌ಗಾಗಿ ಸರಿ ಸುಮಾರು 23 ಲಕ್ಷ ಕೋಟಿ ಹಣವನ್ನು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಖರ್ಚು ಮಾಡಲಿದೆ. ಡಿಸ್ನಿ ಹಾಟ್‌ಸ್ಟಾರ್ ಈಗಾಗಲೇ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಅತಿ ಹೆಚ್ಚು ಚಂದಾದಾರರನ್ನು ಹೊಂದಿರುವ ಒಟಿಟಿ. ಲೈವ್ ಟಿವಿ, ಅತ್ಯುತ್ತಮ ಹಾಲಿವುಡ್ ಸಿನಿಮಾ, 'ಗೇಮ್ ಆಫ್ ಥ್ರೋನ್ಸ್' ಹಾಗೂ ಇತರೆ ಜನಪ್ರಿಯ ವೆಬ್ ಸರಣಿಯನ್ನು ಡಿಸ್ನಿ ಹಾಟ್‌ಸ್ಟಾರ್ ಹೊಂದಿದೆ. ಇದರ ಜೊತೆಗೆ ಇನ್ನಷ್ಟು ಒರಿಜಿನಲ್ ಕಂಟೆಂಟ್ ಹಾಗೂ ಪ್ರಾದೇಶಿಕ ಭಾಷೆಗಳ ಕಂಟೆಂಟ್ ಕಡೆಗೆ ಡಿಸ್ನಿ ಹಾಟ್‌ಸ್ಟಾರ್ ಗಮನ ನೀಡಲಿದೆ.


Click it and Unblock the Notifications











