ಸದ್ದು ಗದ್ದಲವಿಲ್ಲದೇ ಓಟಿಟಿಗೆ ಬಂತು 'ಎರಡು ಕ್ಲೈಮ್ಯಾಕ್ಸ್' ಇರುವ ಸಿನಿಮಾ, ಮಿಸ್ ಮಾಡದೇ ನೋಡಿ !
ಕೊರೊನಾ ನಂತರ ಅಸಂಖ್ಯಾತ ಜನ ಓಟಿಟಿಗೆ ಶರಣಾಗಿದ್ದಾರೆ. ಪ್ರೇಕ್ಷಕರ ಈ ಬದಲಾದ ಅಭಿರುಚಿಗೆ ಅನುಗುಣವಾಗಿ ಚಿತ್ರರಂಗದವರು ಕೂಡ ಕೇವಲ ಓಟಿಟಿಯನ್ನೇ ಗಮನದಲ್ಲಿಟ್ಟಕೊಂಡು ಚಿತ್ರವನ್ನು ಮಾಡುತ್ತಿದ್ದಾರೆ. ಇನ್ನು ಇದರ ನಡುವೆ ಚಿತ್ರಮಂದಿರಗಳ ಸಮಸ್ಯೆ.. ಪ್ರದರ್ಶನದ ಸಂಖ್ಯೆ ಮತ್ತು ಸಮಯದಲ್ಲಿ ಮಾಡಲಾಗುವ ತಾರತಮ್ಯದಿಂದ ಚಿತ್ರಮಂದಿರದಲ್ಲಿ ಯಶಸ್ವಿ ಪ್ರದರ್ಶನ ಕಾಣಬೇಕಿದ್ದ ಚಿತ್ರಗಳು ಕೂಡ ಸೋಲುತ್ತಿವೆ. ಕೇವಲ ಕನ್ನಡದಲ್ಲಿ ಮಾತ್ರ ಅಲ್ಲ.
ಪರಭಾಷೆಯಲ್ಲಿ ಕೂಡ ಇದೇ ತರಹದ ವಾತಾವರಣ ಇದೆ. ಇದೆಲ್ಲದರಾಚೆ ಚಿತ್ರಮಂದಿರದಲ್ಲಿ ಗೆದ್ದ ಚಿತ್ರಗಳನ್ನು ಓಟಿಟಿಯಲ್ಲಿ ಕೂಡ ಮತ್ತೆ ಮತ್ತೆ ನೋಡುವಂತಹ ವಾತಾವರಣ ನಿರ್ಮಾಣವಾಗುತ್ತಿದೆ. ಚಿತ್ರಮಂದಿರದಲ್ಲಿ ಮೋಡಿ ಮಾಡಿದ ಚಿತ್ರಗಳು ಓಟಿಟಿಯಲ್ಲಿ ಕೂಡ ಕ್ರೇಜ್ ಹುಟ್ಟು ಹಾಕುವಲ್ಲಿ ಯಶಸ್ವಿಯಾಗುತ್ತಿವೆ. ಇದಕ್ಕೆ ಹೌಸ್‌ಫುಲ್ 5 ಸದ್ಯದ ಉದಾಹರಣೆ.

ಹೌದು, ಹೌಸ್‌ಫುಲ್ 5.. ಅಕ್ಷಯ್ ಕುಮಾರ್ ಅಭಿನಯದ ಈ ವರ್ಷದ ಬ್ಲಾಕ್ ಬಸ್ಟರ್ ಸಿನಿಮಾ. ಕೇವಲ ಅಕ್ಷಯ್ ಕುಮಾರ್ ಮಾತ್ರವಲ್ಲ ಅಕ್ಷಯ್ ಕುಮಾರ್ ಜೊತೆ ರಿತೇಶ್ ದೇಶಮುಖ್, ಅಭಿಷೇಕ್ ಬಚ್ಚನ್, ಡಿನೋ ಮೋರಿಯಾ, ಫರ್ದಿನ್ ಖಾನ್, ಶ್ರೇಯಸ್ ತಲ್ಪಡೆ, ಜಾಕಿ ಶ್ರಾಫ್, ಸಂಜಯ್ ದತ್, ನಾನಾ ಪಾಟೇಕರ್, ಜಾನಿ ಲಿವರ್, ಚಂಕಿ ಪಾಂಡೆ, ಜಾಕ್ವೆಲಿನ್ ಫರ್ನಾಂಡಿಸ್, ಚಿತ್ರಾಂಗದಾ ಸಿಂಗ್, ನರ್ಗಿಸ್ ಫಕ್ರಿ, ಸೌಂದರ್ಯ ಶರ್ಮಾ, ಸೋನಮ್ ಬಾಜ್ವಾ, ರಂಜಿತ್, ನಿಕಿತಿನ್ ಧೀರ್.. ಹೀಗೆ ಒಂದೂವರೆ ಡಜನ್‌ಗಿಂತ ಹೆಚ್ಚಿನ ಸ್ಟಾರ್‌ಗಳನ್ನೊಂದಿರುವ ಚಿತ್ರ ಇದು.
ತರುಣ್ ಮನ್ಸುಖಾನಿ ನಿರ್ದೇಶನ ಮತ್ತು ಸಾಜಿದ್ ನಾಡಿಯಾದ್ವಾಲಾ ನಿರ್ಮಾಣದಲ್ಲಿ ಸಿದ್ಧವಾಗಿ ಕಳೆದ ಜೂನ್ 5ರಂದು ಬಿಡುಗಡೆಯಾಗಿದ್ದ ಈ ಚಿತ್ರ ಇದೀಗ ಸದ್ದು ಗದ್ದಲ ಇಲ್ಲದೇ ಇಂದು { ಜುಲೈ 18 } ಅಮೆಜಾನ್ ಪ್ರೈಂನಲ್ಲಿ ಬಿಡುಗಡೆಯಾಗಿದೆ. ಆದರೆ.. ಈ ಚಿತ್ರವನ್ನು ಉಚಿತವಾಗಿ ನೋಡುವ ಅವಕಾಶ ಇಲ್ಲ. ಯಾಕೆಂದರೆ..ಅಮೆಜಾನ್‌ನ ಚಂದಾದಾರರಾಗಿದ್ದರು ಕೂಡ ಹೆಚ್ಚಿನ ಚಂದಾ ನೀಡುವಂತೆ ಇಲ್ಲಿ ಷರತ್ತನ್ನು ಹಾಕಲಾಗಿದೆ.
ಹೌದು, ಅಸಲಿಗೆ ಹೌಸ್‌ಫುಲ್ 5 ಚಿತ್ರದ ಮೂಲಕ ವಿಶೇಷವಾದ ಪ್ರಯೋಗವನ್ನು ಬಾಲಿವುಡ್ ಮಾಡಿತ್ತು. ಎರಡು ಬೇರೆ ಬೇರೆ ಕ್ಲೈಮ್ಯಾಕ್ಸ್‌ಗಳನ್ನು ಈ ಚಿತ್ರ ಹೊಂದಿತ್ತು. ಹೌಸ್‌ಫುಲ್ ಎ ಮತ್ತು ಹೌಸ್‌ಫುಲ್ ಬಿ ಹೆಸರಿನಲ್ಲಿ ಚಿತ್ರವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಎರಡು ಚಿತ್ರಗಳ ಕೊನೆಯ 20 ನಿಮಿಷದ ಕಥೆ ಸಂಪೂರ್ಣ ತದ್ವಿರುದ್ದವಾಗಿತ್ತು.

ಸದ್ಯ ಓಟಿಟಿಯಲ್ಲಿ ಕೂಡ ಈ ಎರಡು ಕ್ಲೈಮ್ಯಾಕ್ಸ್ ಗಳು ಕೂಡ ಲಭ್ಯ ಇವೆ. ಆದರೆ.. ಅದಕ್ಕೆ ಅಮೆಜಾನ್ ಪ್ರೈಂನವರು ₹349 ರೂಪಾಯಿ ನೀಡುವಂತೆ ಪ್ರೇಕ್ಷಕರಲ್ಲಿ ಮನವಿ ಮಾಡಿದ್ದಾರೆ. ₹698ರೂಪಾಯಿಯನ್ನು ನೀಡಿದರೆ ಹೌಸ್‌ಫುಲ್ ಎ ಮತ್ತು ಹೌಸ್‌ಫುಲ್ ಬಿ ಈ ಎರಡು ಆವೃತ್ತಿಗಳನ್ನು ನೀವು ಮನೆಯಲ್ಲಿ ನಿಮ್ಮ ಮನೆಮಂದಿಯ ಜೊತೆ ಕುಳಿತು ಆರಾಮಾಗಿ ನೋಡಬಹುದು.
ಅಂದ್ಹಾಗೇ ಹೌಸ್‌ಫುಲ್ 5 ಬಾಲಿವುಡ್‌ನ ಹಿಟ್ ಫ್ರಾಂಚೈಸಿ ಹೌಸ್‌ಫುಲ್‌ನ 5ನೇ ಭಾಗ. 2010ರಲ್ಲಿ ಮೊದಲ ಬಾರಿ ಹೌಸ್‌ಫುಲ್ ತೆರೆಗೆ ಬಂದಿತ್ತು. ಆ ನಂತರ 2012.. 2016 ಮತ್ತು 2019ರಲ್ಲಿ ಬೇರೆ ಬೇರೆ ಭಾಗಗಳು ಬಿಡುಗಡೆಯಾಗಿದ್ದವು. ಅಕ್ಷಯ್ ಕುಮಾರ್ ಜೊತೆ ರಿತೇಶ್ ದೇಶ್‌ಮುಖ್ ಮೊದಲಿಂದ ಈ ಫ್ರಾಂಚೈಸಿಯ ಭಾಗವಾಗಿದ್ದು ಈ ಬಾರಿ ಆಗಲೇ ಹೇಳಿದಂತೆ ಹಲವು ಸ್ಟಾರ್‌ಗಳನ್ನು ಸೇರಿಸಿಕೊಳ್ಳಲಾಗಿತ್ತು. ಇಂತಹ ಹೌಸ್‌ಫುಲ್ 5 ಸದ್ಯ ಬಾಡಿಗೆಗೆ ಅಮೆಜಾನ್‌ನಲ್ಲಿ ಲಭ್ಯ ಇದ್ದು ಆಗಸ್ಟ್ 1ರ ನಂತರ ಈ ಚಿತ್ರ ಉಚಿತವಾಗಿ ನೋಡಲು ಸಿಗುವ ಸಾಧ್ಯತೆ ಇದೆ.


Click it and Unblock the Notifications











