ಅಂತೂ ಇಂತೂ ಓಟಿಟಿಗೆ ಬಂದೇಬಿಡ್ತು 'ಬ್ಯಾಡ್ ಮ್ಯಾನರ್ಸ್' ಹಾಗೂ 'O2'; ಈಗ್ಲೇ ನೋಡಿ
ಕನ್ನಡ ಚಿತ್ರರಂಗದ ಮತ್ತೆ ಸದ್ದು ಮಾಡ್ತಿದೆ. ತೆರೆಮೇಲೆ ಅಲ್ಲ. ಓಟಿಟಿಯಲ್ಲಿ. ಡಿಜಿಟಲ್ ಫ್ಲಾಟ್‌ಫಾರ್ಮ್‌ನಲ್ಲಿ ಕನ್ನಡ ಕಂಟೆಂಡ್ ಬರೋದು ಅಪರೂಪ ಎನ್ನುವ ಆರೋಪವಿದೆ. ಆದರೆ ಕಳೆದ ಎರಡು ವಾರಗಳಲ್ಲಿ ಇಂಟ್ರೆಸ್ಟಿಂಗ್ ಸಿನಿಮಾಗಳು ಬಂದು ವೀಕ್ಷಕರನ್ನು ರಂಜಿಸುತ್ತಿವೆ.
ಇತ್ತೀಚಿಗೆ 'ಯುವ', 'ಬ್ಲಿಂಕ್', 'ಅವತಾರ ಪುರುಷ'-2, 'ಶಾಖಾಹಾರಿ', 'ಜೂನಿ' ರೀತಿಯ ಸಿನಿಮಾಗಳು ವೀಕ್ಷಕರನ್ನು ರಂಜಿಸಿವೆ. ಅದರಲ್ಲೂ 'ಬ್ಲಿಂಕ್' ಹಾಗೂ 'ಶಾಖಾಹಾರಿ' ಚಿತ್ರಗಳ ಆರ್ಭಟ ಜೋರಾಗಿದೆ. ಇವೆಲ್ಲದರ ನಡುವೆ ಮತ್ತೆರಡು ಬಹುನಿರೀಕ್ಷಿತ ಸಿನಿಮಾಗಳು ಓಟಿಟಿಗೆ ಲಗ್ಗೆ ಇಟ್ಟಿವೆ. ಯಾವುದೇ ಅನೌನ್ಸ್‌ಮೆಂಟ್ ಇಲ್ಲದೇ ಸದ್ದಿಲ್ಲದೇ ಸ್ಟ್ರೀಮಿಂಗ್ ಆರಂಭಿಸಿವೆ. ಕೆಲವರು ಈಗಾಗಲೇ ಸಿನಿಮಾಗಳನ್ನು ನೋಡಿದ್ದಾರೆ.

ದುನಿಯಾ ಸೂರಿ ಹಾಗೂ ಅಭಿಷೇಕ್ ಅಂಬರೀಶ್ ಕಾಂಬಿನೇಷನ್ 'ಬ್ಯಾಡ್ ಮ್ಯಾನರ್ಸ್' ಸಿನಿಮಾ ಕೊನೆಗೂ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಬಂದಿದೆ. ಕಳೆದ ವರ್ಷ ತೆರೆಕಂಡಿದ್ದ ಸಿನಿಮಾ ಬಹಳ ತಡವಾಗಿ ಸ್ಮಾಲ್‌ಸ್ಕ್ರೀನ್‌ಗೆ ಬಂದಂತಾಗಿದೆ. ಇನ್ನು ಪುನೀತ್ ರಾಜ್‌ಕುಮಾರ್ ಕಥೆ ಕೇಳಿ ಒಪ್ಪಿ ಮಾಡಿಸಿದ್ದ 'O2' ಸಿನಿಮಾ ಕೂಡ ಓಟಿಟಿ ಚಂದಾದಾರರ ಮುಂದೆ ಬಂದಿದೆ.
ಕಳೆದ ವರ್ಷ ನವೆಂಬರ್ 24ಕ್ಕೆ ತೆರೆಗಪ್ಪಳಿಸಿದ್ದ 'ಬ್ಯಾಡ್ ಮ್ಯಾನರ್ಸ್' ಸಿನಿಮಾ ಇದೀಗ ಸನ್‌ನೆಕ್ಸ್ಟ್ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ. ಇನ್ನು ಆಶಿಕಾ ರಂಗನಾಥ್ ಮುಖ್ಯಭೂಮಿಕೆಯಲ್ಲಿರುವ ಥ್ರಿಲ್ಲರ್ ಸಿನಿಮಾ 'O2' ಅಮೇಜಾನ್ ಪ್ರೈಂನಲ್ಲಿ ಸಿಗುತ್ತಿದೆ. ಸೂರಿ ನಿರ್ದೇಶನದ 'ಬ್ಯಾಡ್ ಮ್ಯಾನರ್ಸ್' ಬಾಕ್ಸ್‌ಆಫೀಸ್‌ನಲ್ಲಿ ಸದ್ದು ಮಾಡಿರಲಿಲ್ಲ. ಆದರೆ ಸೂರಿ ಅಭಿಮಾನಿಗಳು ಓಟಿಟಿಯಲ್ಲಿ ಚಿತ್ರಕ್ಕಾಗಿ ಕಾಯುತ್ತಿದ್ದರು.
ಇನ್ನು ಆಶಿಕಾ ರಂಗನಾಥ್ ನಟನೆಯ 'O2' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಸಿನಿಮಾ ನೋಡಿದವರು ಮೆಚ್ಚಿಕೊಂಡಿದ್ದರು. ನೀವು ನೋಡಿ ಎಂದು ಸಲಹೆ ನೀಡಿದ್ದರು. ಆದರೆ ಜನ ಮಾತ್ರ ಚಿತ್ರಮಂದಿರಕ್ಕೆ ಬಂದಿರಲಿಲ್ಲ. ಓಟಿಟಿಯಲ್ಲಿ ಬರುತ್ತೋ ನೋಡೋಣ ಬಿಡು ಎಂದುಕೊಂಡಿದ್ದರು. ಹಾಗಾಗಿ ಎರಡೂ ಸಿನಿಮಾಗಳನ್ನು ಈಗ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ನೋಡಲು ಸಿನಿರಸಿಕರು ಮುಗಿಬಿದ್ದಿದ್ದಾರೆ.
ಸೆಟ್ಟೇರಿದ ದಿನದಿಂದಲೂ 'ಬ್ಯಾಡ್ ಮ್ಯಾನರ್ಸ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿತ್ತು. 'ಪಾಪ್‌ಕಾರ್ನ್ ಮಂಕಿ ಟೈಗರ್' ಬಳಿಕ ಸೂರಿ ತಡವಾಗಿ ತೆರೆಗೆ ತಂದ ಸಿನಿಮಾ ಇದು. 'ಅಮರ್' ಆಗಿ ಚಿತ್ರರಂಗಕ್ಕೆ ಬಂದಿದ್ದ ಅಭಿ ಸೋತಿದ್ದರು. ಹಾಗಾಗಿ 2ನೇ ಸಿನಿಮಾ ಕುತೂಹಲ ಮೂಡಿಸಿತ್ತು. ಸೂರಿ ಅಭಿಮಾನಿಗಳು ಚಿತ್ರವನ್ನು ಒಪ್ಪಿಕೊಂಡರು. ಆದರೆ ಕನ್‌ಫ್ಯೂಸ್ ಮಾಡಲು ಸ್ಕ್ರೀನ್‌ಪ್ಲೇ, ಸಣ್ಣ ಕಥೆಯನ್ನು ಸುತ್ತಿಬಳಸಿ ಹೇಳಿದ್ದ ಪರಿ ಸಾಮಾನ್ಯ ಪ್ರೇಕ್ಷಕರಿಗೆ ಇಷ್ಟವಾಗಿರಲಿಲ್ಲ.

'ಕಂಟ್ರಿ ಪಿಸ್ತೂಲ್' ಸುತ್ತಾ ಸುತ್ತುವ ಕಥೆ ಎಲ್ಲೆಲ್ಲೋ ಹೋಗಿ ಗೊಂದಲ ಮೂಡಿಸಿತ್ತು. ಮೊದಲ ಚಿತ್ರಕ್ಕೆ ಹೋಲಿಸಿದರೆ ಅಭಿಷೇಕ್ ಸುಧಾರಿಸಿದ್ದರು. ನಾಯಕಿಯಾಗಿ ರಚಿತಾ ರಾಮ್ ಮಿಂಚಿದರೂ ಅವರ ಪಾತ್ರಕ್ಕೆ ಹೆಚ್ಚಿನ ಮಹತ್ವ ಇರಲಿಲ್ಲ. ಇನ್ನುಳಿದಂತೆ ತಾರಾ, ಶರತ್ ಲೋಹಿತಾಶ್ವ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಜಯಣ್ಣ- ಭೋಗೇಂದ್ರ 'ಬ್ಯಾಡ್ ಮ್ಯಾನರ್ಸ್' ಚಿತ್ರವನ್ನು ನಿರ್ಮಿಸಿದ್ದಾರೆ.
ಪುನೀತ್ ರಾಜ್‌ಕುಮಾರ್ ಕಥೆ ಕೇಳಿ ಒಪ್ಪಿ ತಮ್ಮ ಬ್ಯಾನರ್‌ನಲ್ಲಿ ಆರಂಭಿಸಿದ್ದ ಕೊನೆಯ ಸಿನಿಮಾ 'O2'. ಆಶಿಕಾ ರಂಗನಾಥ್ ಜೊತೆ ಪ್ರವೀಣ್ ತೇಜ, ರಾಘವ್ ನಾಯಕ್, ಸಿರಿ ರವಿಕುಮಾರ್, ಗೋಪಾಲ್ ದೇಶಪಾಂಡೆ, ಪ್ರಕಾಶ್ ಬೆಳವಾಡಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಒಂದು 'ಪ್ರೇಮಕಥೆ' ಜೊತೆಗೆ ಮತ್ತೊಂದು ಸಂಶೋಧನೆ ಕಥೆ. ಇವೆರಡನ್ನು ಸೇರಿಸಿ ಪ್ರಶಾಂತ್ ರಾಜೇಂದ್ರ ಹಾಗೂ ರಾಘವ್ ನಾಯಕ್ ಚಿತ್ರ ಕಥೆ ಕಟ್ಟಿಕೊಟ್ಟಿದ್ದಾರೆ. ಎರಡೂ ಸಿನಿಮಾಗಳು ಸದ್ಯ ಓಟಿಟಿಗೆ ಬಂದಿದ್ದು ವೀಕೆಂಡ್‌ನಲ್ಲಿ ಮಿಸ್ ಮಾಡದೇ ನೋಡಿ ಎಂಜಾಯ್ ಮಾಡಿ.


Click it and Unblock the Notifications











