ನಾಲ್ಕು ವರ್ಷಗಳ ನಂತರ ಸದ್ದಿಲ್ಲದೇ ಓಟಿಟಿಗೆ ಬಂತು ಖ್ಯಾತ ನಾಯಕಿಯ ಬದುಕಿನ ಸತ್ಯ ಕಥೆ..
ಚಿತ್ರಮಂದಿರಕ್ಕೆ ಚಿತ್ರವೊಂದು ಬಂದು ನಾಲ್ಕು ವಾರವಾಗಿರಲ್ಲ ಆಗಲೇ ಆ ಚಿತ್ರವನ್ನು ಓಟಿಟಿಯಲ್ಲಿ ಪ್ರಸಾರ ಮಾಡುವ ದಿನಗಳಿವು. ಇಂತಹ ದಿನಗಳಲ್ಲಿ ಒಂದಲ್ಲ, ಎರಡಲ್ಲ, ನಾಲ್ಕೂವರೆ ವರ್ಷದ ನಂತರ ಚಿತ್ರವೊಂದು ಓಟಿಟಿಯಲ್ಲಿ ಬಿಡುಗಡೆಯಾಗಿದೆ. ಸದ್ದಿಲ್ಲದೇ ಚಿತ್ರ ಪ್ರಸಾರವಾಗುತ್ತಿದೆ.
ವಿಶೇಷ ಅಂದರೆ ಹೀಗೆ ಪ್ರಸಾರವಾಗುತ್ತಿರುವ ಚಿತ್ರ ಕಲಾತ್ಮಕ ಚಿತ್ರ ಅಲ್ಲ, ಹೊಸಬರ ಸಿನಿಮಾ ಕೂಡ ಅಲ್ಲ. ಬದಲಿಗೆ ಭಾರತದ ಖ್ಯಾತ ತಾರೆಯ ಬದುಕಿನ ಕಥೆಯನ್ನು ಒಳಗೊಂಡ ಚಿತ್ರ ಇದು. ಇನ್ನು, ಈ ಚಿತ್ರದಲ್ಲಿರುವವರೆಲ್ಲರು ದೊಡ್ಡ ದೊಡ್ಡ ಸ್ಟಾರ್‌ಗಳೇ. ಆದರೂ.. ಈ ಚಿತ್ರಕ್ಕೆ ಐದು ವರ್ಷದ ನಂತರ ಓಟಿಟಿಯಲ್ಲಿ ಬಿಡುಗಡೆಯ ಭಾಗ್ಯ ಸಿಕ್ಕಿದೆ.

ಹೌದು, 90ರ ದಶಕದಲ್ಲಿ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ನೀಲಿ ತಾರೆಯಾಗಿ ಜನಮನ ಗೆದ್ದವರು ಶಕೀಲಾ. ಒಂದು ಲೆಕ್ಕಾಚಾರದ ಪ್ರಕಾರ ಮಲಯಾಳಂ ಚಿತ್ರರಂಗದಲ್ಲಿ ಶಕೀಲಾ ಅಭಿನಯದ ಹೆಚ್ಚು ಕಡಿಮೆ ನೂರು ಪೋರ್ನ್ ಚಿತ್ರಗಳು ಆ ಕಾಲದಲ್ಲಿ ತಯಾರಾಗಿದ್ದವು. ಇಷ್ಟೇ ಅಲ್ಲ ಈ ಚಿತ್ರಗಳು ಮಲಯಾಳಂ ಚಿತ್ರರಂಗದ ಸ್ಟಾರ್ ಹೀರೋಗಳಾದ ಮುಮ್ಮೂಟಿ ಮತ್ತು ಮೋಹನ್ ಲಾಲ್ ಅವರ ಚಿತ್ರಗಳಿಗೆ ಸೆಡ್ಡು ಹೊಡೆದು ಗಳಿಕೆಯಲ್ಲಿ ಹಿಂದಿಕ್ಕುತ್ತಿದ್ದವು ಎಂಬ ಉಲ್ಲೇಖ ಮಲಯಾಳಂ ಚಿತ್ರರಂಗದ ಇತಿಹಾಸದಲ್ಲಿದೆ.
ಆದರೆ ಆ ನಂತರ ವಯಸ್ಕರ ಚಿತ್ರಗಳಿಂದ ಅಂತರ ಕಾಪಾಡಿಕೊಂಡು ಬಂದ ಶಕೀಲಾ, ಮುಖ್ಯವಾಹಿನಿ ಚಿತ್ರಗಳತ್ತ ಹೊರಳಿದರು. ಇದಕ್ಕೆ ಪೂರಕವಾಗಿ 'ಬಾಸ್ ಎಂಗಿರಾ ಭಾಸ್ಕರನ್' .. 'ಸಕಲಕಲಾ ವಲ್ಲಭನ್' ನಂತಹ ತಮಿಳು ಚಿತ್ರಗಳಲ್ಲಿನ ಇವರ ಅಭಿನಯಕ್ಕೆ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು.
ಇಂಥಾ ಶಕೀಲಾ ಅವರ ಜೀವನಾಧಾರಿತ ಚಿತ್ರವನ್ನು ಕನ್ನಡದ ಖ್ಯಾತ ನಿರ್ದೇಶಕ ಇಂದ್ರಜಿಲ್ ಲಂಕೇಶ್ ನಿರ್ದೇಶನವನ್ನು ಮಾಡಿದ್ದರು. ಬಾಲಿವುಡ್‌ನ ಪ್ರಖ್ಯಾತ ನಾಯಕಿ ರಿಚಾ ಚಡ್ಡಾ, ಶಕೀಲಾ ಪಾತ್ರವನ್ನು ನಿರ್ವಹಿಸಿದ್ದರು. ಪಂಕಜ್ ತ್ರಿಪಾಠಿ, ಎಸ್ತರ್ ನೊರಾನ, ರಾಜೀವ್ ಪಿಳ್ಳೈ, ಶಿವರಾಣಾ, ಸಂದೀಪ್ ಮಲಾನಿ ಸೇರಿ ಅನೇಕರು ಈ ಚಿತ್ರದಲ್ಲಿದ್ದರು.
ಇನ್ನು ವೀರ್ ಸಮರ್ಥ್ ಈ ಚಿತ್ರಕ್ಕೆ ಸಂಗೀತವನ್ನು ನೀಡಿದ್ದರೆ ಸಂತೋಷ್ ರೈ ಪಾತಾಜೆ ಚಿತ್ರದ ಛಾಯಾಗ್ರಹಣದ ಜವಾಬ್ಧಾರಿಯನ್ನು ವಹಿಸಿಕೊಂಡಿದ್ದರು. ಸಾಮಿ ನಾನ್ವಾನಿ ಮತ್ತು ಶರವಣ ಪ್ರಸಾದ್ ಚಿತ್ರಕ್ಕೆ ಬಂಡವಾಳ ಹೂಡಿದ್ದರು. ಡಿಸೆಂಬರ್ 25-2020ರಂದು ಈ ಚಿತ್ರವನ್ನು ಹಿಂದಿಯ ಜೊತೆ ಜೊತೆಯಲ್ಲಿ ಕನ್ನಡ, ತೆಲುಗು, ತಮಿಳಿನಲ್ಲಿ ಬಿಡುಗಡೆ ಮಾಡಲಾಗಿತ್ತು. ಈಗ ಹೆಚ್ಚು ಕಡಿಮೆ ನಾಲ್ಕೂವರೆ ವರ್ಷಗಳ ನಂತರ ಅಮೆಜಾನ್ ಫ್ರೈಂನಲ್ಲಿ ಬಿಡುಗಡೆ ಮಾಡಲಾಗಿದೆ.
ಅಂದ್ಹಾಗೇ 08 ತಿಂಗಳ ಹಿಂದೆಯಷ್ಟೇ ಶಕೀಲಾ ಚಿತ್ರವನ್ನು ಶೀಮಾರೋ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಜೂನ್ 26-2024ರಂದು ಯೂಟ್ಯೂಬ್‌ಗೆ ಬಂದ ಈ ಚಿತ್ರಕ್ಕೆ ಇಲ್ಲಿಯವರೆಗೆ 7,44,113 ವೀವ್ಸ್ ಸಿಕ್ಕಿದೆ. ಈಗ ಅಮೆಜಾನ್‌ನಲ್ಲಿ ಚಿತ್ರವನ್ನು ಪ್ರಸಾರಮಾಡಲಾಗಿದೆ. ಸದ್ಯ ಚಿತ್ರ ಹಿಂದಿ ಭಾಷೆಯಲ್ಲಿ ಮಾತ್ರ ಲಭ್ಯ ಇದ್ದು ಮುಂಬರುವ ದಿನಗಳಲ್ಲಿ ಕನ್ನಡ ಸೇರಿ ಬೇರೆ ಬೇರೆ ಭಾಷೆಯಲ್ಲಿ ನೋಡುವ ಅವಕಾಶ ಸಿಗುವ ಸಾಧ್ಯತೆ ಇದೆ.
ಒಟ್ನಲ್ಲಿ ಶಕೀಲಾ ಅವರ ಹುಟ್ಟಿನಿಂದ ಹಿಡಿದು ಅವರ 42ನೇ ವಯಸ್ಸಿನವರೆಗೆ ಅವರ ಬದುಕಿನ ನೋವು-ನಲಿವಿನ ಕಥೆಗೆ ಇಂದ್ರಜಿತ್ ಲಂಕೇಶ್ ಈ ಚಿತ್ರದ ಮೂಲಕ ಕೈಗನ್ನಡಿ ಹಿಡಿಯುವ ಪ್ರಯತ್ನ ಮಾಡಿದ್ದಾರೆ. ನಾಲ್ಕೂವರೆ ವರ್ಷದ ನಂತರ ಓಟಿಟಿಗೆ ಬಂದ ಈ ಚಿತ್ರವನ್ನು ಪ್ರೇಕ್ಷಕರು ಈಗ ಹೇಗೆ ಸ್ವೀಕರಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











