ಈ ವಾರ 4 ಕನ್ನಡ ಸಿನಿಮಾಗಳು ಓಟಿಟಿಗೆ ಬಂದಿದೆ; ಮಿಸ್ ಮಾಡ್ದೆ ನೋಡಿ
ಕನ್ನಡ ಸಿನಿಮಾಗಳು ಇತ್ತೀಚೆಗೆ ಒಟ್ಟೊಟ್ಟಿಗೆ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿವೆ. ಈ ವಾರ ಒಂದಲ್ಲ ಎರಡಲ್ಲ ನಾಲ್ಕು ಚಿತ್ರಗಳು ರಿಲೀಸ್ ಆಗಿ ಸದ್ದು ಮಾಡ್ತಿವೆ. ಇನ್ನು ಪರಭಾಷೆಯ ಬ್ಲಾಕ್‌ಬಸ್ಟರ್ ಸಿನಿಮಾಗಳು ಕೂಡ ಕನ್ನಡಕ್ಕೆ ಡಬ್ ಆಗಿ ವೀಕ್ಷಣೆಗೆ ಲಭ್ಯವಿದೆ. ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ತಿದೆ.
ಇನ್ನು ಐಪಿಎಲ್ ಮುಗಿದಿಲ್ಲ. ಹಾಗಾಗಿ ಯಾವುದೇ ದೊಡ್ಡ ಸಿನಿಮಾಗಳು ತೆರೆಗೆ ಬರ್ತಿಲ್ಲ. ಮುಂದಿನ ತಿಂಗಳು 'ಎಕ್ಕ' ಬಿಟ್ಟರೆ ಸದ್ಯ ಯಾವುದೇ ಸ್ಟಾರ್ ನಟರ ಸಿನಿಮಾ ಬಿಡುಗಡೆಗೆ ಸಿದ್ಧವಿಲ್ಲ. ಹಾಗಾಗಿ ಸಿನಿರಸಿಕರು ಮನರಂಜನೆಗಾಗಿ ಓಟಿಟಿಯಲ್ಲೇ ಅವಲಂಭಿಸುವಂತಾಗಿದೆ. ಈ ವಾರ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಬ್ಲಾಕ್‌ಬಸ್ಟರ್ ಸಿನಿಮಾಗಳ ಸದ್ದು ಜೋರಾಗಿದೆ.

ರಂಗಾಯಣ ರಘು ನಟನೆಯ 'ಅಜ್ಞಾತವಾಸಿ' ಹಾಗೂ ರವಿಬಸ್ರೂರು ನಿರ್ದೇಶನದ 'ವೀರಚಂದ್ರಹಾಸ' ಚಿತ್ರಗಳು ಓಟಿಟಿಗೆ ಬಂದಿರುವುದು ಗೊತ್ತೇಯಿದೆ. ಇದೀಗ ಮತ್ತೆರಡು ಸಿನಿಮಾಗಳು ಸದ್ದಿಲ್ಲದೇ ಸ್ಟ್ರೀಮಿಂಗ್ ಆರಂಭಿಸಿವೆ. ಆ ಬಗ್ಗೆ ಮುಂದೆ ಓದಿ.
ಅಜ್ಞಾತವಾಸಿ
ಹೇಮಂತ್ ರಾವ್ ನಿರ್ಮಾಣದ 'ಅಜ್ಞಾತವಾಸಿ' ಸಿನಿಮಾ ಚಿತ್ರಮಂದಿರಗಳಲ್ಲಿ ಗೆದ್ದಿತ್ತು. ಸಣ್ಣ ಮಟ್ಟದಲ್ಲಿ ಪ್ರಚಾರ ಮಾಡಿ ಬಿಡುಗಡೆ ಮಾಡಿದ್ದರೂ ಪ್ರೇಕ್ಷಕರು ಸಿನಿಮಾ ನೋಡಿ ಮೆಚ್ಚಿದ್ದರು. ಕೆಲವರು ಸಿನಿಮಾ ಬಹಳ ಸ್ಲೋ ಎಂದು ಹೇಳಿದ್ದರು. 3 ದಿನಗಳ ಹಿಂದೆ ಈ ಕ್ರೈಂ ಥ್ರಿಲ್ಲರ್ ಸಿನಿಮಾ ಜೀ-5ಗೆ ಎಂಟ್ರಿ ಕೊಟ್ಟಿದೆ.
ಜನಾರ್ಧನ್ ಚಿಕ್ಕಣ್ಣ ನಿರ್ದೇಶನದ ಸಿನಿಮಾ ಪ್ರೇಕ್ಷಕರನ್ನು ಸೀಟಿನ ತುದಿಗೆ ತಂದು ಕೂರಿಸುವಂತಿದೆ. ರಂಗಾಯಣ ರಘು ಜೊತೆಗೆ ಪಾವನಾ ಗೌಡ, ಸಿದ್ದು ಮೂಲಿಮನಿ, ರವಿಶಂಕರ್ ಗೌಡ, ಶರತ್ ಲೋಹಿತಾಶ್ವ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಚರಣ್ ರಾಜ್ ಸಂಗೀತ ಚಿತ್ರಕ್ಕಿದೆ. ನಾಲ್ಕೇರಿ ಎಂಬ ಊರಿನ ಪೊಲೀಸ್ ಠಾಣೆ ಸುತ್ತಾ ಸಿನಿಮಾ ಕಥೆ ಸಾಗುತ್ತದೆ.
ಆ ಊರಿನ ಪೊಲೀಸ್ ಠಾಣೆಯಲ್ಲಿ 25 ವರ್ಷ ಯಾವುದೇ ಅಪರಾಧ ಪ್ರಕರಣಗಳು ದಾಖಲಾಗಿರುವುದಿಲ್ಲ. ಒಮ್ಮೆ ದಿಢೀರನೆ ಊರಿನ ಜಮೀನ್ದಾರನ ಕೊಲೆಯಾಗುತ್ತದೆ. ಅದರ ಜೊತೆಗೆ ಮತ್ತೊಂದು ಜೀವವೂ ಹೋಗಿಬಿಡುತ್ತದೆ. ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸ್ ಅಧಿಕಾರಿ ಗೋವಿಂದು ತನ್ನ ಅಜ್ಞಾತವಾಸದ ಸತ್ಯ ಬಿಚ್ಚಿಡುವ ಕಥೆ ಚಿತ್ರದಲ್ಲಿದೆ.

ವೀರಚಂದ್ರಹಾಸ
ಸಿನಿಮಾ ಇತಿಹಾಸದಲ್ಲೇ ಅದ್ಭುತ ಪ್ರಯತ್ನ 'ವೀರಚಂದ್ರಹಾಸ'. ಸಂಗೀತ ನಿರ್ದೇಶಕ ರವಿ ಬಸ್ರೂರು ಕನಸಿನ ಸಿನಿಮಾ ಇದು. ಒಂದು ಚೌಕಟ್ಟಿನಲ್ಲಿ ಮಾಡುತ್ತಿದ್ದ ಯಕ್ಷಗಾನವನ್ನು ಬೆಳ್ಳಿ ಪರದೆ ಮೇಲೆ ತಂದಿರುವ ಸಿನಿಮಾ 'ವೀರಚಂದ್ರಹಾಸ'. ಚಿತ್ರದಲ್ಲಿ ಶಿವರಾಜ್‌ಕುಮಾರ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.
ಯಕ್ಷಗಾನದಲ್ಲಿ ಜನಪ್ರಿಯವಾಗಿರುವ 'ವೀರಚಂದ್ರಹಾಸ'ನ ಕಥೆಯನ್ನೇ ಸಿನಿಮಾ ಮಾಡಲಾಗಿದೆ. ಶಿಥಿಲ್ ಶೆಟ್ಟಿ, ನಾಗಶ್ರೀ ಜಿ ಎಸ್, ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ , ಉದಯ ಕಡಬಾಳ್, ರವೀಂದ್ರ ದೇವಾಡಿಗ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಡಾ. ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಅವರನ್ನು ಎಐ ತಂತ್ರಜ್ಞಾನದಲ್ಲಿ ಕೆಲ ಕ್ಷಣಗಳು ತೆರೆಮೇಲೆ ತೋರಿಸುವ ಪ್ರಯತ್ನ ಮಾಡಲಾಗಿದೆ. ಅಮೇಜಾನ್ ಪ್ರೈಂ ವೀಡಿಯೋದಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ.
ನಿಮಿತ್ತ ಮಾತ್ರ
ರೋಷನ್ ಡಿಸೋಜಾ ನಿರ್ದೇಶನದ 'ನಿಮಿತ್ತ ಮಾತ್ರ' ಸಿನಿಮಾ ಫೆಬ್ರವರಿ 14ಕ್ಕೆ ತೆರೆಗೆ ಬಂದಿತ್ತು. ಇದೀಗ ಸಿನಿಮಾ ಸನ್‌ನೆಕ್ಸ್ಟ್ ಓಟಿಟಿ ಪ್ಲಾಟ್‌ಫಾರ್ಮ್‌ಗೆ ಲಗ್ಗೆ ಇಟ್ಟಿದೆ. ಇದು ಕನ್ನಡದ ಮೊದಲ ಪ್ಯಾರಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ ಎನಿಸಿಕೊಂಡಿದೆ. ಪೂರ್ಣಚಂದ್ರ ಮೈಸೂರು, ಸಂಗೀತ ರಾಜೀವ್ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ.
15 ವರ್ಷಗಳ ಹಿಂದೆ ಮಂಗಳೂರಿನಲ್ಲಿ ನಡೆದ ಘಟನೆಗಳ ಸುತ್ತಾ ನಿಮಿತ್ತ ಮಾತ್ರ ಚಿತ್ರದ ಕಥೆ ಸುತ್ತುತ್ತದೆ. ಪತ್ರಕರ್ತ ವಿಕ್ರಂ(ಪೂರ್ಣಚಂದ್ರ ಮೈಸೂರು) ಸರಣಿ ಹತ್ಯೆಗಳ ನಿಗೂಢ ಸತ್ಯವನ್ನು ಭೇದಿಸುವುದೇ ಸಿನಿಮಾ ಕಥೆ. ಸಾಕಷ್ಟು ಟರ್ನ್, ಟ್ವಿಸ್ಟ್ ಜೊತೆ ಜೊತೆಗೆ ಸಿನಿಮಾ ಕಥೆ ಸಾಗುತ್ತದೆ.
ಮೈ ಹೀರೊ
ಅಂತರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಸದ್ದು ಮಾಡಿರುವ 'ಮೈ ಹೀರೊ' ಸಿನಿಮಾ ಇದೀಗ ಓಟಿಟಿಗೆ ಎಂಟ್ರಿ ಕೊಟ್ಟಿದೆ. ಹಾಲಿವುಡ್ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ನಿರಂಜನ್ ದೇಶಪಾಂಡೆ, ಅಂಕಿತಾ ಅಮರ್, ತನುಜಾ ಕೃಷ್ಣಪ್ಪ, ನವೀನ್ ಬೊಂದೇಲ್, ಪ್ರಕಾಶ್ ಬೆಳವಾಡಿ ಹಾಗೂ ಬಾಲನಟ ವೇದಿಕ್ ಚಿತ್ರದ ತಾರಾಗಣದಲ್ಲಿದ್ದಾರೆ.
ಹಾಲಿವುಡ್ ಕಲಾವಿದರಾದ ಎರಿಕ್ ರಾಬರ್ಟ್ಸ್, ಜಿಲಾಲಿ ರಜ್ ಕಲ್ಲಹ್ ಕೂಡ 'ಮೈ ಹೀರೊ' ಬಳಗದಲ್ಲಿದ್ದಾರೆ. ಅವಿನಾಶ್ ವಿಜಯ್ ಕುಮಾರ್ ಚಿತ್ರವನ್ನು ನಿರ್ಮಿಸಿ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಬಹುತೇಕ ಪಾತ್ರಗಳು ಇಂಗ್ಲೀಷ್‌ನಲ್ಲೇ ಮಾತನಾಡುತ್ತದೆ. ಸದ್ಯ ಅಮೇಜಾನ್ ಪ್ರೈಂ ವೀಡಿಯೋದಲ್ಲಿ ಸಿನಿಮಾ ನೋಡಬಹುದು.


Click it and Unblock the Notifications











