ಇವತ್ತು(ಏಪ್ರಿಲ್ 11) ಒಂದೇ ದಿನ ಓಟಿಟಿಗೆ ಬಂದಿವೆ 4 ಹಿಟ್ ಸಿನಿಮಾಗಳು; ಇಲ್ಲಿದೆ ಲಿಸ್ಟ್
ಮಹಾವೀರ ಜಯಂತಿ ಗುರುವಾರ(ಏಪ್ರಿಲ್ 10), 2ನೇ ಶನಿವಾರ(ಏಪ್ರಿಲ್ 12), ಭಾನುವಾರ(ಏಪ್ರಿಲ್ 13), ಅಂಬೇಡ್ಕರ್ ಜಯಂತಿ ಸೋಮವಾರ(ಏಪ್ರಿಲ್ 14) ಹೀಗೆ ಸಾಲು ಸಾಲು ರಜೆಗಳಿವೆ. ಇನ್ನು ಮುಂದಿನ ಗುಡ್‌ಫ್ರೈಡೇ(ಏಪ್ರಿಲ್ 18) ರಜೆ ಕೂಡ ಸಿಗಲಿದೆ. ಇದೇ ಕಾರಣಕ್ಕೆ ಇಂಟ್ರೆಸ್ಟಿಂಗ್ ಸಿನಿಮಾಗಳನ್ನು ಈ ವೀಕೆಂಡ್ ಬಿಡುಗಡೆ ಮಾಡಲಾಗಿದೆ.
ಕನ್ನಡದಲ್ಲಿ 'ವಿದ್ಯಾಪತಿ', 'ವಾಮನ' ಹಾಗೂ 'ಅಜ್ಞಾತವಾಸಿ' ಸಿನಿಮಾಗಳ ಬಿಡುಗಡೆ ಆಗಿದೆ. ತಮಿಳಿನ 'ಗುಡ್ ಬ್ಯಾಡ್ ಅಗ್ಲಿ', ತೆಲುಗಿನ 'ಜಾಕ್', ಮಲಯಾಳಂ 'ಬಜೂಕ', ಬಾಲಿವುಡ್‌ನ 'ಜಾಟ್' ಹೀಗೆ ಸಾಕಷ್ಟು ಸಿನಿಮಾಗಳು ಈ ವಾರ ತೆರೆಗೆ ಬಂದಿದೆ. ಇತ್ತ ಓಟಿಟಿಯಲ್ಲಿ ಕೂಡ ಇಂಟ್ರೆಸ್ಟಿಂಗ್ ಸಿನಿಮಾ ಹಾಗೂ ವೆಬ್ ಸೀರಿಸ್‌ಗಳು ಸ್ಟ್ರೀಮಿಂಗ್ ಆರಂಭಿಸಿವೆ.

ಚಿತ್ರಮಂದಿರಗಳಲ್ಲಿ ಶುಕ್ರವಾರ ಸಿನಿಮಾ ಬಿಡುಗಡೆ ಆಗುವುದು ವಾಡಿಕೆ. ವೀಕೆಂಡ್ ಆರಂಭವಾಗುವ ಕಾರಣ ಓಟಿಟಿಯಲ್ಲಿ ಕೂಡ ಶುಕ್ರವಾರ ಮಧ್ಯರಾತ್ರಿಯಿಂದಲೇ ಬಹುತೇಕ ಸಿನಿಮಾ, ವೆಬ್ ಸೀರಿಸ್ ರಿಲೀಸ್ ಆಗುತ್ತವೆ. ಇವತ್ತು(ಏಪ್ರಿಲ್ 11) ಕೆಲ ಬ್ಲಾಕ್‌ಬಸ್ಟರ್ ಸಿನಿಮಾಗಳು ಓಟಿಟಿಗೆ ಬಂದಿವೆ. ಅದರಲ್ಲೂ ಬಹಳ ದಿನಗಳಿಂದ ಕಾಯುತ್ತಿದ್ದ 'ಛಾವ' ಸಿನಿಮಾ ಕೊನೆಗೂ ಸ್ಟ್ರೀಮಿಂಗ್ ಆರಂಭಿಸಿದೆ.
'ಛಾವ'
ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ಛಾವ' ಸಿನಿಮಾ ಇದೀಗ ಓಟಿಟಿಗೆ ಬಂದಿದೆ. ಲಕ್ಷ್ಮಣ್ ಉಟೇಕರ್ ನಿರ್ದೇಶನದ ಈ ಐತಿಹಾಸಿಕ ಕಥಾಹಂದರದ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಅದ್ಭುತ ರೆಸ್ಪಾನ್ಸ್ ಪಡೆದುಕೊಂಡು 700 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿತ್ತು. ಚಿತ್ರದಲ್ಲಿ ಛತ್ರಪತಿ ಶಿವಾಜಿಯ ಮಗ ಸಾಂಬಾಜಿ ಪಾತ್ರದಲ್ಲಿ ವಿಕ್ಕಿ ಅಬ್ಬರಿಸಿದ್ದರು.

ಮರಾಠ ಸಾಮ್ರಾಜ್ಯದ ಕಥೆ ಚಿತ್ರದಲ್ಲಿದೆ. ತಂದೆಯ ಅಗಲಿಕೆ ಬಳಿಕ ಸಾಂಬಾಜಿ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದ್ದು ಮುಖ್ಯವಾಗಿ ಮೊಘಲರ ದಾಳಿಯನ್ನು ಹಿಮ್ಮೆಟ್ಟಿಸಿದ ಕಥೆಯನ್ನು ಕಟ್ಟಿಕೊಡಲಾಗಿದೆ. ಕೊನೆಗೆ ಮೋಸದಿಂದ ಸಾಂಬಾಜಿಯನ್ನು ಔರಂಗಜೇಬ್ ಸೆರೆ ಹಿಡಿದು ಚಿತ್ರಹಿಂಸೆ ಕೊಟ್ಟು ಕೊಂದಿದ್ದನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಸಾಂಬಾಜಿ ಪತ್ನಿ ಯೇಸುಬಾಯಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಿದೆ.
ಹಿಂದಿ ಭಾಷೆಯಲ್ಲಿ ಮಾತ್ರ 'ಛಾವ' ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ದಕ್ಷಿಣದ ಭಾಷೆಗಳಿಗೂ ಸಿನಿಮಾ ಡಬ್ ಮಾಡಿ ಓಟಿಟಿಯಲ್ಲಿ ರಿಲೀಸ್ ಮಾಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ತೆಲುಗು ಭಾಷೆಗೆ ಡಬ್ ಆಗಿ ಸಿನಿಮಾ ತೆರೆಕಂಡಿದೆ. ಆದರೆ ಹಿಂದಿನ ವರ್ಷನ್ ಮಾತ್ರ ಸದ್ಯಕ್ಕೆ ಓಟಿಟಿಯಲ್ಲಿ ಲಭ್ಯವಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಆಡಿಯೋ ಶೀಘ್ರದಲ್ಲೇ ಸಿಗುವ ಸಾಧ್ಯತೆಯಿದೆ.
ಕೋರ್ಟ್
ಶಿವಾಜಿ, ಪ್ರಿಯದರ್ಶಿ ನಟನೆಯ ತೆಲುಗಿನ 'ಕೋರ್ಟ್' ಸಿನಿಮಾ ಇತ್ತೀಚೆಗೆ ಬಿಡುಗಡೆ ಆಗಿ ಗೆದ್ದಿತ್ತು. ಈ ಕೋರ್ಟ್ ಡ್ರಾಮಾ ಸಿನಿಮಾ ನೋಡಲು ಸಾಕಷ್ಟು ಓಟಿಟಿ ರಿಲೀಸ್‌ಗೆ ಕಾಯುತ್ತಿದ್ದರು. ನೆಟ್‌ಫ್ಲಿಕ್ಸ್‌ನಲ್ಲೇ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಿದೆ. ತೆಲುಗು ನಟ ನಾನಿ ಈ ಚಿತ್ರದ ಬೆಂಬಲಕ್ಕೆ ನಿಂತಿದ್ದರು. ಮಾರ್ಚ್ 14ಕ್ಕೆ ತೆರೆಕಂಡಿದ್ದ ಸಿನಿಮಾ ತಿಂಗಳಿಗೂ ಮುನ್ನ ಒಟಿಟಿಗೆ ಬಂದಿದೆ.
ಚೋರಿ-2
ಬಾಲಿವುಡ್ ಹಾರರ್ ಸಿನಿಮಾ 'ಚೋರಿ-2' ಸಿನಿಮಾ ನೇರವಾಗಿ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ವಿಶಾಲ್ ಫುರಿಯ ನಿರ್ದೇಶನದ ಈ ಹಾರರ್ ಥ್ರಿಲ್ಲರ್ ಚಿತ್ರದಲ್ಲಿ ನುಶ್ರತ್ ಭರುಚ್ಚ, ಸೋಹಾ ಅಲಿಖಾನ್, ಗಶ್ಮೀರ್ ಮಹಾಜನಿ ನಟಿಸಿದ್ದಾರೆ. 4 ವರ್ಷಗಳ ಹಿಂದೆ ಬಂದಿದ್ದ 'ಚೋರಿ' ಚಿತ್ರದ ಸೀಕ್ವೆಲ್ ಇದಾಗಿದೆ.
ರಾಕ್ಷಸ
ಪ್ರಜ್ವಲ್ ದೇವರಾಜ್ ನಟನೆಯ ಹಾರರ್ ಸಿನಿಮಾ 'ರಾಕ್ಷಸ'. ನಿರ್ದೇಶಕ ಲೋಹಿತ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಫೆಬ್ರವರಿ 27ಕ್ಕೆ ತೆರೆಗೆ ಬಂದಿದ್ದ ಸಿನಿಮಾ ಇದೀಗ ಸನ್ ನೆಕ್ಸ್ಟ್ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಮಧ್ಯರಾತ್ರಿಯಿಂದಲೇ ಸ್ಟ್ರೀಮಿಂಗ್ ಆರಂಭಿಸಿದೆ. ಹಾರರ್ ಜೊತೆಗೆ ಲೈಮ್ ಲೂಪ್ ಕಾನ್ಸೆಪ್ಟ್ ಬಳಸಿ ಈ ಸಿನಿಮಾ ಕಟ್ಟಿಕೊಡಲಾಗಿದೆ. ಕನ್ನಡದ ಜೊತೆಗೆ ತೆಲುಗಿಗೂ ಸಿನಿಮಾ ಡಬ್ ಆಗಿ ಓಟಿಟಿಗೆ ಬಂದಿದೆ.
ವಿಷ್ಣುಪ್ರಿಯ
ಶ್ರೇಯಸ್ ಮಂಜು ಹಾಗೂ ಪ್ರಿಯಾ ವಾರಿಯರ್ ನಟನೆಯ 'ವಿಷ್ಣುಪ್ರಿಯ' ಸಿನಿಮಾ ಫೆಬ್ರವರಿ 21ಕ್ಕೆ ತೆರೆಗಪ್ಪಳಿಸಿತ್ತು. ರಾತ್ರಿಯಿಂದ ಅಮೇಜಾನ್ ಪ್ರೈಂ ವೀಡಿಯೋದಲ್ಲಿ ಈ ರೊಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ಕೆ. ಮಂಜು ಮಗನಿಗಾಗಿ ಮಾಡಿದ್ದ ಸಿನಿಮಾ ಇದು. ಪ್ರೇಕ್ಷಕರು, ವಿಮರ್ಶಕರಿಂದ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಆದರೆ ಬಾಕ್ಸಾಫೀಸ್‌ನಲ್ಲಿ ಸಿನಿಮಾ ಗೆದ್ದಿರಲಿಲ್ಲ. 90ರ ದಶಕದ ಕಥೆ ಚಿತ್ರದಲ್ಲಿದ್ದು ಮಲಯಾಳಂ ನಿರ್ದೇಶಕ ವಿ. ಕೆ ಪ್ರಕಾಶ್ ಆಕ್ಷನ್ ಕಟ್ ಹೇಳಿದ್ದಾರೆ.
ಗೌರಿ
ಇಂದ್ರಜಿತ್ ಲಂಕೇಶ್ ನಿರ್ಮಿಸಿ ನಿರ್ದೇಶಿಸಿದ್ದ ಸಿನಿಮಾ 'ಗೌರಿ' ಕಳೆದ ವಾರವೇ ಓಟಿಟಿಗೆ ಬಂದಿತ್ತು. ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆರಂಭಿಸಿತ್ತು. ಆದರೆ ಚಂದಾದಾರರು 99 ರೂಪಾಯಿ ಹಣ ಪಾವತಿಸಿ ಸಿನಿಮಾ ನೋಡಬೇಕಿತ್ತು. ಈ ವೀಕೆಂಡ್ ಸಿನಿಮಾ ಉಚಿತವಾಗಿ ವೀಕ್ಷಣೆಗೆ ಸಿಗಲಿದೆ. ಚಿತ್ರದಲ್ಲಿ ಇಂದ್ರಜಿತ್ ಲಂಕೇಶ್ ಮಗ ಸಮರ್ಜಿತ್ ಹಾಗೂ ಸಾನ್ಯಾ ಅಯ್ಯರ್ ನಾಯಕ, ನಾಯಕಿಯಾಗಿ ಮಿಂಚಿದ್ದಾರೆ. ಇದೊಂದು ಮ್ಯೂಸಿಕಲ್ ಲವ್ ಸ್ಟೋರಿ ಸಿನಿಮಾ ಆಗಿದೆ. ಜನವರಿ 31ಕ್ಕೆ ಸಿನಿಮಾ ತೆರೆಗೆ ಬಂದಿತ್ತು.
ಪ್ರವಿಂಕೂಡು ಶಪ್ಪು
ಮಲಯಾಳಂ ಬ್ಲಾಕ್‌ಮ್ಯಾಜಿಕ್ ಥ್ರಿಲ್ಲರ್ ಸಿನಿಮಾ 'ಪ್ರವಿಂಕೂಡು ಶಪ್ಪು' ಕೂಡ ಓಟಿಟಿಗೆ ಎಂಟ್ರಿ ಕೊಟ್ಟಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಜನವರಿ 16ರಂದು ಈ ಸಿನಿಮಾ ತೆರೆಗೆ ಬಂದಿತ್ತು. ಸೋನಿ ಲಿವ್ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಈ ಸಿನಿಮಾ ರಿಲೀಸ್ ಆಗಿದೆ. ಅಂದಾಜು 5 ಕೋಟಿ ಬಜೆಟ್ ಸಿನಿಮಾ 18 ಕೋಟಿ ಕಲೆಕ್ಷನ್ ಮಾಡಿ ಹಿಟ್ ಲಿಸ್ಟ್ ಸೇರಿತ್ತು.
ಪೆರುಸು
ತಮಿಳಿನ ಅಡಲ್ಟ್ ಕಾಮೆಡಿ ಸಿನಿಮಾ 'ಪೆರುಸು' ಇದೀಗ ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ. ಇಲ್ಲಾಂಗೊ ರಾಮ್ ನಿರ್ದೇಶನದ ಚಿತ್ರದಲ್ಲಿ ವೈಭವ್, ಸುನೀಲ್ ರೆಡ್ಡಿ, ದೀಪಾ ಶಂಕರ್ ಪ್ರಧಾನ ಭೂಮಿಕೆಯಲ್ಲಿ ನಟಿಸಿದ್ದಾರೆ. ಕನ್ನಡ, ತಮಿಳು, ಮಲಯಾಳಂ, ತೆಲುಗು ಭಾಷೆಗಳಿಗೂ ಸಿನಿಮಾ ಡಬ್ ಆಗಿ ಸ್ಟ್ರೀಮಿಂಗ್ ಆಗುತ್ತಿದೆ.
ಷನ್ಮುಖ
ಮಾರ್ಚ್ 21ಕ್ಕೆ ತೆರೆಗೆ ಬಂದಿದ್ದ ತೆಲುಗಿನ 'ಷನ್ಮುಖ' ಚಿತ್ರಕ್ಕೂ ಇವತ್ತೇ ಓಟಿಟಿ ಸ್ಟ್ರೀಮಿಂಗ್ ಭಾಗ್ಯ ಲಭಿಸಿದೆ. ಸಾಯಿಕುಮಾರ್ ಪುತ್ರ ಆದಿ ಈ ಚಿತ್ರದಲ್ಲಿ ಹೀರೊ ಆಗಿ ನಟಿಸಿದ್ದಾರೆ. ಡಿವೋಷನಲ್ ಥ್ರಿಲ್ಲರ್ ಚಿತ್ರದಲ್ಲಿ ಅವಿಕಾ ಗೌರ್ ನಾಯಕಿಯಾಗಿ ಮಿಂಚಿದ್ದಾರೆ. ಸಬ್ಪ್ರೋ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಚಿತ್ರಕ್ಕೆ ರವಿ ಬಸ್ರೂರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಸದ್ಯ ಅಹಾ ಓಟಿಟಿಯಲ್ಲಿ ಈ ಸಿನಿಮಾ ರಿಲೀಸ್ ಆಗಿದೆ.
ಮನಮೇ
ಶರ್ವಾನಂದ್ ಹಾಗೂ ಕೃತಿ ಶೆಟ್ಟಿ ನಟನೆಯ 'ಮನಮೇ' ಸಿನಿಮಾ ಕಳೆದ ವರ್ಷ ತೆರೆಗೆ ಬಂದಿತ್ತು. ಶ್ರೀರಾಮ್ ಆದಿತ್ಯ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಅಹಾ ಓಟಿಟಿಯಲ್ಲಿ ಸಿನಿಮಾ ಇಂದಿನಿಂದ ಸ್ಟ್ರೀಮಿಂಗ್ ಆಗುತ್ತಿದೆ. ತನಿಕೇಲ ಭರಣಿ, ವೆನ್ನೆಲ ಕಿಶೋರ್, ಸೀರತ್ ಕಪೂರ್, ಸಚಿನ್ ಖಂಡೇಕರ್ ಸೇರಿ ದೊಡ್ಡ ತಾರಾಗಣ ಈ ರೊಮ್ಯಾಂಟಿಕ್ ಕಾಮೆಡಿ ಚಿತ್ರದಲ್ಲಿದೆ. ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ 25 ಕೋಟಿ ಕಲೆಕ್ಷನ್ ಮಾಡಿದ್ದಾಗಿ ವರದಿ ಆಗಿತ್ತು.


Click it and Unblock the Notifications











