ವೀಕೆಂಡ್ 3 ಕನ್ನಡ ಚಿತ್ರಗಳು ಓಟಿಟಿಗೆ ಬಂದಿದೆ; ಒಂದು ಸಸ್ಪೆನ್ಸ್ ಥ್ರಿಲ್ಲರ್ ಕೂಡ
ಚಿತ್ರಮಂದಿರಗಳಲ್ಲಿ 'ಕಾಂತಾರ- 1' ಆರ್ಭಟದ ನಡುವೆ ಓಟಿಟಿಯಲ್ಲಿ ಒಂದಷ್ಟು ಇಂಟ್ರೆಸ್ಟಿಂಗ್ ಸಿನಿಮಾಗಳು ಸ್ಟ್ರೀಮಿಂಗ್ ಆಗುತ್ತಿದೆ. ತೆಲುಗಿನ 'ಮಿರಾಯ್', ಬಾಲಿವುಡ್ 'ವಾರ್- 2' ಚಿತ್ರಗಳು ಓಟಿಟಿ ವೀಕ್ಷಕರನ್ನು ರಂಜಿಸುತ್ತಿದೆ. ಕನ್ನಡದ 3 ಸಿನಿಮಾಗಳು ಓಟಿಟಿಗೆ ಬಂದಿರುವುದು ವಿಶೇಷ.
ಯಾವುದೇ ಮಾಹಿತಿ ಇಲ್ಲದೇ ಏಕಾಏಕಿ ಕನ್ನಡ ಸಿನಿಮಾಗಳನ್ನು ಓಟಿಟಿಗೆ ತರುವ ಕೆಲಸ ಮುಂದುವರೆದಿದೆ. ಅಮೇಜಾನ್ ಹಾಗೂ ನೆಟ್‌ಫ್ಲಿಕ್ಸ್ ಸಂಸ್ಥೆಗಳು ಕನ್ನಡ ಸಿನಿಮಾ ರೈಟ್ಸ್ ಕೊಂಡುಕೊಳ್ಳಲು ಹಿಂದು ಮುಂದು ನೋಡುತ್ತವೆ. ಸಣ್ಣ ಪುಟ್ಟ ಓಟಿಟಿಗ ವೇದಿಕೆಗಳಲ್ಲಿ ಕನ್ನಡ ಸಿನಿಮಾಗಳು ಹೆಚ್ಚು ಜನರನ್ನು ತಲುಪುತ್ತಿಲ್ಲ. ಅದೇ ಕಾರಣಕ್ಕೆ ಕನ್ನಡ ವೆಬ್ ಸೀರಿಸ್‌ಗಳ ಸಂಖ್ಯೆ ಕೂಡ ಕಮ್ಮಿಯಿದೆ.

ಈ ವೀಕೆಂಡ್ 3 ಕನ್ನಡ ಸಿನಿಮಾಗಳು ಓಟಿಟಿಗೆ ಬಂದಿವೆ. ಅದರಲ್ಲಿ ಗ್ರಾಮೀಣ ಸೊಗಡಿನ ಒಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಕೂಡ ಇದೆ.
1. ರಿಪ್ಪನ್ ಸ್ವಾಮಿ
ವಿಜಯ್ ರಾಘವೇಂದ್ರ ನಟನೆಯ 'ರಿಪ್ಪನ್ ಸ್ವಾಮಿ' ಸಿನಿಮಾ ಅಮೇಜಾನ್ ಪ್ರೈಂ ವಿಡಿಯೋದಲ್ಲಿ ರಿಲೀಸ್ ಆಗಿದೆ. ಮಲೆನಾಡಿನಲ್ಲಿ ಒಬ್ಬ ನಿಗೂಢ ಮತ್ತು ವಿಚಿತ್ರ ವ್ಯಕ್ತಿಯ ಸಾವಿನ ಸುತ್ತ ನಡೆಯುವ ತನಿಖೆಯ ಕಥೆ ಇದು. ಒಂದು ಸಾವಿನ ಸುತ್ತಾ ಕಥೆ ಬಿಚ್ಚಿಕೊಳ್ಳುತ್ತದೆ. ಅದು ಆತ್ಮಹತ್ಯೆನಾ ಅಥವಾ ಕೊಲೆನಾ? ಎನ್ನುವ ತನಿಖೆಯ ಹಾದಿಯಲ್ಲಿ ಸಿನಿಮಾ ಸಾಗುತ್ತದೆ.

ಕಿಶೋರ್ ಮೂಡಬಿದಿರೆ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ವಿಜಯ್ ರಾಘವೇಂದ್ರ ಜೊತೆ ಅಶ್ವಿನಿ ಚಂದ್ರಶೇಖರ್, ಪ್ರಕಾಶ್ ತುಮ್ಮಿನಾಡ್, ವಜ್ರಧೀರ್ ಜೈನ್ ತಾರಾಗಣದಲ್ಲಿದ್ದಾರೆ. ಸಣ್ಣಕೊಪ್ಪದ ಜಮೀನ್ದಾರ ರಿಪ್ಪನ್ ಸ್ವಾಮಿ(ವಿಜಯ್ ರಾಘವೇಂದ್ರ) ಜೀವನದ ಏಳುಬೀಳಿನ ಕಥೆ ಚಿತ್ರದಲ್ಲಿದೆ. ಊರೆಲ್ಲಾ ವಿರೋಧಿಗಳನ್ನು ಕಟ್ಟಿಕೊಂಡ ಆತ ಹೇಗೆ ಅದನ್ನೆಲ್ಲಾ ಹೆದರಿಸುತ್ತಾನೆ ಎನ್ನುವುದನ್ನು ಸಿನಿಮಾದಲ್ಲೇ ನೋಡಬೇಕು. ಬಹಳ ಕೋಪಿಷ್ಠ, ಕಟುಕ, ಗರ್ವಿ ಸ್ವಾಮಿಯಾಗಿ ವಿಜಯ್ ರಾಘವೇಂದ್ರ ಅಬ್ಬರಿಸಿದ್ದಾರೆ.
2. ಮಾಂಕ್ ದಿ ಯಂಗ್
ವಿಂಟೇಜ್ ಫ್ಯಾಮಿಲಿ ಥ್ರಿಲ್ಲರ್ ಕಥಾಹಂದರದ ಸಿನಿಮಾ ಇದು. 3 ವರ್ಷಗಳ ಹಿಂದೆ ರಿಷಬ್ ಶೆಟ್ಟಿ ಚಿತ್ರದ ಪೋಸ್ಟರ್ ರಿಲೀಸ್ ಮಾಡಿ ತಂಡಕ್ಕೆ ಶುಭ ಕೋರಿದ್ದರು. ಫೆಬ್ರವರಿ 28ರಂದು ತೆರೆಗೆ ಬಂದಿದ್ದ ಈ ಸಿನಿಮಾ ಈಗ ಸಿನಿಬಜಾರ್ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಫ್ಯಾಂಟಸಿ-ಥ್ರಿಲ್ಲರ್ ಅಂಶಗಳು ಚಿತ್ರದಲ್ಲಿದೆ. ಚಿತ್ರಕ್ಕೆ ಮಾಸ್ಚಿತ್ ಸೂರ್ಯ ಆಕ್ಷನ್ ಕಟ್ ಹೇಳಿದ್ದು ಐದು ಜನ ನಿರ್ಮಾಪಕರು ಈ ಚಿತ್ರದಲ್ಲಿ ನಟಿಸಿದ್ದಾರೆ. ಸರೋವರ್ ಮತ್ತು ಸೌಂದರ್ಯ ಗೌಡ ಲೀಡ್ ರೋಲ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.
1969ರಲ್ಲಿ ಚಿತ್ರದ ಕಥೆ ಶುರುವಾಗುತ್ತದೆ. ಬಳಿಕ ವಿವಿಧ ಕಾಲಘಟ್ಟಗಳಲ್ಲಿ ಚಿತ್ರದ ಕಥೆ ಸಾಗುತ್ತದೆ. ಸುಪ್ರೀತ್ ಫಲ್ಗುಣ ಸಂಗೀತ 'ಮಾಂಕ್ ದಿ ಯಂಗ್' ಚಿತ್ರಕ್ಕಿದೆ. ಟೈಟಲ್‌ನಿಂದಲೇ ಕುತೂಹಲ ಕೆರಳಿಸುವ ಸಿನಿಮಾ ಇದೀಗ ಓಟಿಟಿಯಲ್ಲಿ ವೀಕ್ಷಣೆಗೆ ಸಿಗುತ್ತದೆ.
3. ಎಲ್ಲಿಗೆ ಪಯಣ ಯಾವುದೋ ದಾರಿ
ಖ್ಯಾತ ನಟ, ನಿರ್ದೇಶಕ ಕಾಶಿನಾಥ್ ಪುತ್ರ ಅಭಿಮನ್ಯು ಚಿತ್ರರಂಗದಲ್ಲಿ ಗುರ್ತಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಎರಡ್ಮೂರು ಸಿನಿಮಾಗಳಲ್ಲಿ ನಟಿಸಿದರೂ ಪ್ರಯೋಜನವಾಗಲಿಲ್ಲ. 'ಎಲ್ಲಿಗೆ ಪಯಣ ಯಾವುದೋ ದಾರಿ' ಸಿನಿಮಾ ವರ್ಷದ ಹಿಂದೆ ಬಿಡುಗಡೆ ಆಗಿತ್ತು. ಇದೀಗ ಪ್ರೈಂ ವೀಡಿಯೋದಲ್ಲಿ ವೀಕ್ಷಣೆಗೆ ಲಭ್ಯವಿದೆ.
ಅಭಿಮನ್ಯು ಈ ಚಿತ್ರದಲ್ಲಿ ಲವರ್ ಬಾಯ್ ಪಾತ್ರ ಮಾಡಿದ್ದಾರೆ. ಸಿನಿಮಾ ಮೇಲೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಗೆಲ್ಲಲಿಲ್ಲ. ಈಗ ಸಿನಿಮಾ ಓಟಿಟಿಗೆ ಬಂದಿದೆ. ಸ್ಪೂರ್ತಿ, ರಾಜ ಬೆಳವಾಡಿ, ಶೋಭನ್ ಕಿರಣ್ ಚಿತ್ರದ ತಾರಾಗಣದಲ್ಲಿದ್ದಾರೆ.


Click it and Unblock the Notifications











