ಶುಕ್ರವಾರ(ಜುಲೈ 25) ಓಟಿಟಿಗೆ ಬಂತು 4 ಕನ್ನಡ ಚಿತ್ರಗಳು; ಈಗ್ಲೇ ನೋಡಿ
ಕನ್ನಡ ಸಿನಿರಸಿಕರಿಗೆ ಈ ವಾರ ಭರ್ಜರಿ ಮನರಂಜನೆ ಕಾದಿದೆ. ಇತ್ತ ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾಗಳು ಸದ್ದು ಮಾಡ್ತಿವೆ. ಅತ್ತ ಓಟಿಟಿಯಲ್ಲಿ ಕೂಡ 4 ಸಿನಿಮಾಗಳ ಸ್ಟ್ರೀಮಿಂಗ್ ಆರಂಭಿಸಿದೆ.
ಯುವ ರಾಜ್‌ಕುಮಾರ್ ನಟನೆಯ 'ಎಕ್ಕ' ಹಾಗೂ ಕಿರೀಟಿ ನಟನೆಯ 'ಜ್ಯೂನಿಯರ್' ಚಿತ್ರಗಳು 2ನೇ ವಾರಕ್ಕೆ ಕಾಲಿಟ್ಟಿವೆ. ಬಾಕ್ಸಾಫೀಸ್‌ನಲ್ಲಿ ಒಳ್ಳೆ ಪ್ರದರ್ಶನ ಕಾಣುತ್ತಿವೆ. ಈ ವೀಕೆಂಡ್ ದೊಡ್ಡಮಟ್ಟದಲ್ಲಿ ಸಿನಿಮಾಗಳು ಕಲೆಕ್ಷನ್ ಮಾಡುವ ಸಾಧ್ಯತೆಯಿದೆ. 'ಜ್ಯೂನಿಯರ್' ಸಿನಿಮಾ ಕನ್ನಡಕ್ಕಿಂತ ತೆಲುಗು ಬಾಕ್ಸಾಫೀಸ್‌ನಲ್ಲಿ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿದೆ. ಈ ವಾರ 'ಸು ಫ್ರಂ ಸೋ' ಕನ್ನಡ ಸಿನಿಮಾ ಎಲ್ಲರ ಗಮನ ಸೆಳೆದಿದೆ.

ಪ್ರೀಮಿಯರ್ ಶೋಗಳಿಂದಲೇ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿರುವ ಕಾಮಿಡಿ ಎಂಟರ್‌ಟೈನರ್ 'ಸು ಫ್ರಂ ಸೋ' ಈ ವೀಕೆಂಡ್ ಬಾಕ್ಸಾಫೀಸ್ ಶೇಕ್ ಮಾಡುವ ಸುಳಿವು ಸಿಕ್ತಿದೆ. ಜೆಪಿ ತುಮ್ಮಿನಾಡ್ ನಿರ್ದೇಶನದ ಚಿತ್ರದಲ್ಲಿ ಶಾನಿಲ್ ಗೌತಮ್, ಪ್ರಕಾಶ್ ತುಮ್ಮಿನಾಡ್, ಸಂಧ್ಯಾ ಅರೆಕೆರೆ ಸೇರಿ ದೊಡ್ಡ ತಾರಾಗಣವಿದೆ. ಸಿನಿಮಾ ನೋಡಿದವರು ನಕ್ಕು ನಕ್ಕು ಸುಸ್ತಾಗುತ್ತಿದ್ದಾರೆ. 'ಬಂದೂಕ್' ಹಾಗೂ 'ಸ್ವಪ್ನ ಮಂಟಪ' ಎಂಬ ಮತ್ತೆರಡು ಕನ್ನಡ ಸಿನಿಮಾಗಳು ಪ್ರೇಕ್ಷಕರ ಮುಂದೆ ಬಂದಿವೆ. ವೀಕೆಂಡ್ ಓಟಿಟಿಗೆ ಬರ್ತಿರೋ ಕನ್ನಡ ಸಿನಿಮಾಗಳ ಪಟ್ಟಿ ಮುಂದೆ ಓದಿ.
X & Y
ಸತ್ಯಪ್ರಕಾಶ್ ನಿರ್ದೇಶಿಸಿ ನಟಿಸಿರುವ 'X & Y' ಸಿನಿಮಾ ಸದ್ದಿಲ್ಲದೇ ಓಟಿಟಿಗೆ ಬಂದಿದೆ. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಪ್ರತಿ ಬಾರಿ ವಿಭಿನ್ನ ಕಥೆಗಳನ್ನು ಹೊತ್ತು ಪ್ರೇಕ್ಷಕರ ಮುಂದೆ ಬರ್ತಾರೆ. ಈ ಚಿತ್ರದಲ್ಲಿ ಕೂಡ ಅಂಥದ್ದೇ ಕಥೆ ಇದೆ. ಜೂನ್ 28ರಂದು ತೆರೆಗೆ ಬಂದಿದ್ದ ಸಿನಿಮಾ ಇದೀಗ ಸನ್ ನೆಕ್ಸ್ಟ್ ಓಟಿಟಿ ಪ್ಲಾಟ್‌ಫಾರ್ಮ್‌ಗೆ ಬಂದಿದೆ. ಬೃಂದಾ ಆಚಾರ್ಯ, ಅಯಾನಾ, ಸುಂದರ್ ವೀಣಾ ಚಿತ್ರದ ತಾರಾಗಣದಲ್ಲಿದ್ದಾರೆ.

ಎಡಗೈಯೇ ಅಪಘಾತಕ್ಕೆ ಕಾರಣ
ದಿಗಂತ್ ನಟನೆಯ 'ಎಡಗೈಯೇ ಅಪಘಾತಕ್ಕೆ ಕಾರಣ' ಸಿನಿಮಾ ಇದೀಗ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಟೈಟಲ್‌ನಿಂದಲೇ ಕುತೂಹಲ ಹುಟ್ಟಾಕ್ಕಿದ್ದ ಸಿನಿಮಾ ಜೂನ್ 13ರಂದು ತೆರೆಗೆ ಬಂದಿತ್ತು. ಸಮರ್ಥ್ ಕೊಡ್ಕಲ್ ನಿರ್ದೇಶನದ ಈ ಕಾಮಿಡಿ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದ ಮುಖ್ಯ ಪಾತ್ರಗಳಲ್ಲಿ ನಿಧಿ ಸುಬ್ಬಯ್ಯ, ರಾಧಿಕಾ ನಾರಾಯಣ್ ಬಣ್ಣ ಹಚ್ಚಿದ್ದಾರೆ.
ಈ ಚಿತ್ರದ ನಾಯಕ ಲೊಡ್ಡೆ ಲೋಹಿತ್(ದಿಗಂತ್) ಎಡಚನಾಗಿರುತ್ತಾನೆ. ಇದೇ ಕಾರಣಕ್ಕೆ ಸಾಕಷ್ಟು ಸಮಸ್ಯೆ ಎದುರಿಸುತ್ತಿರುತ್ತಾನೆ. ಒಮ್ಮೆ ಸ್ನೇಹಿತೆಯ ಆಹ್ವಾನದ ಮೇರೆಗೆ ರೊಮ್ಯಾಂಟಿಕ್ ಡೇಟ್‌ಗೆ ಆಕೆಯ ಫ್ಲಾಟ್‌ಗೆ ಹೋಗುತ್ತಾನೆ. ಅಲ್ಲಿ ಒಂದಷ್ಟು ಹೆಣಗಳು ಬೀಳುತ್ತವೆ. ಅದಕ್ಕೆಲ್ಲಾ ಲೋಹಿತನ ಎಡಗೈ ಕಾರಣವಾಗುತ್ತಾ? ಅಷ್ಟು ಏನಿದು ಕಥೆ ಎನ್ನುವುದನ್ನು ಸಿನಿಮಾದಲ್ಲೇ ನೋಡಬೇಕು.
ಕೆಂಡ
ಸಹದೇವ್ ಕೆಲವಡಿ ನಿರ್ದೇಶನದ 'ಕೆಂಡ' ಸಿನಿಮಾ ವಿಶ್ವಮಟ್ಟದಲ್ಲಿ ಸದ್ದು ಮಾಡಿದ್ದು ಗೊತ್ತೇಯಿದೆ. ಬಹುತೇಕ ಹೊಸ ಪ್ರತಿಭೆಗಳು ಚಿತ್ರದಲ್ಲಿ ನಟಿಸಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಿದ್ಧಸೂತ್ರಗಳನ್ನು ಬದಿಗಿಟ್ಟು ಹೊಸ ರೀತಿಯಲ್ಲಿ 'ಕೆಂಡ' ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಸದ್ಯ 99 ರೂಪಾಯಿ ಪಾವತಿಸಿ ಪ್ರೈಂ ಚಂದಾದಾರರು ಸಿನಿಮಾ ವೀಕ್ಷಿಸಬಹುದು. ಶೀಘ್ರದಲ್ಲೇ ಉಚಿತವಾಗಿ ನೋಡುವ ಅವಕಾಶ ಸಿಗಲಿದೆ.
ದಿ ಜಡ್ಜ್‌ಮೆಂಟ್
ರವಿಚಂದ್ರನ್, ದಿಗಂತ್ ಹಾಗೂ ಧನ್ಯಾ ರಾಮ್‌ಕುಮಾರ್ ನಟನೆಯ 'ದಿ ಜಡ್ಜ್‌ಮೆಂಟ್' ಸಿನಿಮಾ ಕಳೆದ ವರ್ಷ ತೆರೆಗೆ ಬಂದಿತ್ತು. ಒಂದು ಅತ್ಯಾಚಾರ, ಕೊಲೆ ಪ್ರಕರಣದ ಸುತ್ತಾ ನಡೆಯುವ ಕೋರ್ಟ್ ಡ್ರಾಮಾ ಸಿನಿಮಾ ಇದು. ಚಿತ್ರದಲ್ಲಿ ವಕೀಲನ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸಿದ್ದಾರೆ. ಸದ್ಯ ಪ್ರೈಂ ಚಂದಾದಾರರು ಹಣ ಪಾವತಿಸಿ ಸಿನಿಮಾ ನೋಡಬಹುದು. ಇನ್ನೆರಡು ದಿನಗಳಲ್ಲಿ ಯಾವುದೇ ಹಣ ಪಾವತಿಸದೇ ಉಚಿತವಾಗಿ ನೋಡಬಹುದು.


Click it and Unblock the Notifications











