ರಕ್ಷಿತ್ ಶೆಟ್ಟಿ ನಟನೆಯ ಹಿಟ್ ಸಿನಿಮಾಗಳು ಯಾವ ಓಟಿಟಿಯಲ್ಲಿದೆ ಅಂದ್ರೆ?
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ತಮ್ಮ ವಿಭಿನ್ನ ಸಿನಿಮಾಗಳಿಂದ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ನಟನಾಗಿ ಮಾತ್ರವಲ್ಲದೇ ನಿರ್ದೇಶಕರಾಗಿಯೂ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದರು. 'ಉಳಿದವರು ಕಂಡಂತೆ' ಬಳಿಕ 'ರಿಚರ್ಡ್ ಆಂಟನಿ' ಸಿನಿಮಾ ನಿರ್ದೇಶನಕ್ಕೆ ರಕ್ಷಿತ್ ಸಿದ್ಧತೆ ನಡೆಸಿದ್ದಾರೆ. ಇನ್ನು ಸಿಂಪಲ್ ಸ್ಟಾರ್ ನಟನೆಯ ಟಾಪ್ -7 ಚಿತ್ರಗಳನ್ನು ಯಾವ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ವೀಕ್ಷಿಸಬಹುದು ಗೊತ್ತಾ? ಮುಂದೆ ಓದಿ.
ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ
ಸುನಿ ನಿರ್ದೇಶನದಲ್ಲಿ ರಕ್ಷಿತ್ ಶೆಟ್ಟಿ ನಟನೆಯ ಸೂಪರ್ ಹಿಟ್ ಸಿನಿಮಾ ಇದು. ಚಿತ್ರದ ಡೈಲಾಗ್‌ಗಳು ಸಿನರಸಿಕರ ಮನಗೆದ್ದಿತ್ತು. ಕುಶಾಳ್ ಹಾಗೂ ಖುಷಿ ನಡುವೆ ಇಡೀ ಸಿನಿಮಾ ಕಥೆ ಸಾಗುತ್ತದೆ. ಭರತ್ ಬಿ.ಜೆ ಸಂಗೀತ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್ ಆಗಿತ್ತು. ರಕ್ಷಿತ್ ಹಾಗೂ ಸುನಿ ಇಬ್ಬರಿಗೂ ದೊಡ್ಡ ಬ್ರೇಕ್ ಕೊಟ್ಟಿದ್ದ ಸಿನಿಮಾ ಇದು. ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದ ಸುನಿ ಚಿತ್ರಕ್ಕೆ ಹಣ ಸಹ ಹೂಡಿದ್ದರು. ಜಿಯೋ ಹಾಟ್‌ಸ್ಟರ್‌ನಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಿದೆ.

ಕಿರಿಕ್ ಪಾರ್ಟಿ
ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಬ್ಲಾಕ್‌ಬಸ್ಟರ್ ಸಿನಿಮಾ 'ಕಿರಿಕ್ ಪಾರ್ಟಿ'. ರಕ್ಷಿತ್ ಕರಿಯರ್‌ಯನಲ್ಲೇ ದೊಡ್ಡಮಟ್ಟದಲ್ಲಿ ಯಶಸ್ಸು ಕಂಡಿದ್ದ ಸಿನಿಮಾ. ಈ ರೊಮ್ಯಾಂಟಿಕ್ ಕಾಮಿಡಿ ಡ್ರಾಮಾ ಚಿತ್ರಕ್ಕೆ ರಕ್ಷಿತ್ ಕೂಡ ಬಂಡವಾಳ ಹೂಡಿದ್ದರು. ಇಂಜಿನಿಯರ್ ವಿದ್ಯಾರ್ಥಿ ಕರ್ಣ(ರಕ್ಷಿತ್ ಶೆಟ್ಟಿ)ನ ಬಾಳಿಗೆ ಬರುವ ಸಾನ್ವಿ ಜೋಸೆಫ್(ರಶ್ಮಿಕಾ ಮಂದಣ್ಣ) ಹಾಗೂ ಆರ್ಯ(ಸಂಯುಕ್ತಾ ಹೆಗ್ಡೆ)ಳ ಕಥೆ ಚಿತ್ರದಲ್ಲಿದೆ. ಕಾಲೇಜು ಹುಡುಗರ ಹಾಡು ಪಾಡು ಚಿತ್ರದ ಹೈಲೆಟ್. ಅಜನೀಶ್ ಲೋಕನಾಥ್ ಸಂಗೀತ ಚಿತ್ರದ ಜೀವಾಳ. MX ಪ್ಲೇಯರ್‌ನಲ್ಲಿ ಈ ಸಿನಿಮಾ ನೋಡಬಹುದು.
777 ಚಾರ್ಲಿ
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗೆದ್ದ ಸಿನಿಮಾ '777 ಚಾರ್ಲಿ'. ಒಂದು ಶ್ವಾನ ಹಾಗೂ ನಾಯಕ ಕರ್ಣನ ನಡುವಿನ ಭಾವನಾತ್ಮಕ ಕಥೆ ಈ ಚಿತ್ರಲ್ಲಿದೆ. ಕಿರಣ್ ರಾಜ್ ಚೊಚ್ಚಲ ನಿರ್ದೇಶನದಲ್ಲೇ ಗೆದ್ದಿದ್ದರು. ಈ ಚಿತ್ರಕ್ಕೆ ಕೂಡ ನಟ ರಕ್ಷಿತ್ ಶೆಟ್ಟಿ ಬಂಡವಾಳ ಹೂಡಿದ್ದರು. ಸಿನಿಮಾ 100 ಕೋಟಿ ರೂ.ಗೂ ಅಧಿಕ ಬ್ಯುಸಿನೆಸ್ ಮಾಡಿದ್ದಾಗಿ ಚಿತ್ರತಂಡವೇ ಹೇಳಿತ್ತು. ಅಮೇಜಾನ್ ಪ್ರೈಂ ವೀಡಿಯೋದಲ್ಲಿ ಸಿನಿಮಾ ವೀಕ್ಷಿಸಬಹುದು.
ಅವನೇ ಶ್ರೀಮನ್ನಾರಾಯಣ
ಬಾಕ್ಸಾಫೀಸ್‌ನಲ್ಲಿ 'ಅವನೇ ಶ್ರೀಮನ್ನಾರಾಯಣ' ಸಿನಿಮಾ ಮುಗ್ಗರಿಸಿತ್ತು. ಆದರೆ ಚಿತ್ರತಂಡದ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಲೇಬೇಕು. ಚಿತ್ರದಲ್ಲಿ ಇನ್ಸ್‌ಪೆಕ್ಟರ್ ನಾರಾಯಣ ಪಾತ್ರದಲ್ಲಿ ರಕ್ಷಿತ್ ನಟಿಸಿದ್ದರು. ಚಿತ್ರಕ್ಕಾಗಿ ಹೊಸ ಪ್ರಪಂಚವನ್ನೇ ಸೃಷ್ಟಿಸಲಾಗಿತ್ತು. ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ಸಿನಿಮಾ ನೋಡಿ ಮೆಚ್ಚಿದ್ದರು. ಆದರೆ ಸಿನಿಮಾ ದೊಡ್ಡಮಟ್ಟದಲ್ಲಿ ಗೆಲ್ಲಲಿಲ್ಲ. ಜಿಯೋ ಸಿನಿಮಾ ಹಾಗೂ ಪ್ರೈಂ ವೀಡಿಯೋದಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ.
ಉಳಿದವರು ಕಂಡಂತೆ
ರಕ್ಷಿತ್ ಶೆಟ್ಟಿ ನಿರ್ದೇಶಿಸಿ ನಟಿಸಿದ ಏಕೈಕ ಸಿನಿಮಾ 'ಉಳಿದವರು ಕಂಡಂತೆ' ಸನ್‌ನೆಕ್ಸ್ಟ್‌ನಲ್ಲಿ ನೋಡಬಹುದು. ಕಮರ್ಷಿಯಲ್ ಆಗಿ ಈ ಸಿನಿಮಾ ಗೆಲ್ಲಲಿಲ್ಲ. ಆದರೆ ಕಲ್ಟ್ ಸಿನಿಮಾ ಎನಿಸಿಕೊಂಡಿದೆ. ಅದೇ ಕಾರಣಕ್ಕೆ ಬಾಕ್ಸಾಫೀಸ್‌ನಲ್ಲಿ ಸೋತರೂ ಸೀಕ್ವೆಲ್ ಮಾಡುವ ಪ್ರಯತ್ನ ನಡೀತಿದೆ. ಶೀಘ್ರದಲ್ಲೇ 'ರಿಚರ್ಡ್ ಆಂಟನಿ' ಸಿನಿಮಾ ಶುರುವಾಗಲಿದೆ. ಸದ್ಯ ಚಿತ್ರದ ಸ್ಕ್ರಿಪ್ಟ್ ಕೆಲಸಗಳಲ್ಲಿ ಸಿಂಪಲ್ ಸ್ಟಾರ್ ಬ್ಯುಸಿಯಾಗಿದ್ದಾರೆ.
ಸಪ್ತಸಾಗರದಾಚೆ ಎಲ್ಲೋ
ಹೇಮಂತ್ ರಾವ್ ನಿರ್ದೇಶದಲ್ಲಿ ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ನಟನೆಯ 'ಸಪ್ತಸಾಗರದಾಚೆ ಎಲ್ಲೋ' ಸಿನಿಮಾ ಗೆಲುವಿನ ದಡ ಸೇರಿತ್ತು. ಎರಡು ಭಾಗಗಳಾಗಿ ಸಿನಿಮಾ ತೆರೆಗೆ ಬಂದಿತ್ತು. ಮನು ಹಾಗೂ ಪ್ರಿಯಾ ಪಾತ್ರಗಳಲ್ಲಿ ಇಬ್ಬರ ನಟನೆ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಎರಡು ಭಾಗಗಳಾಗಿ ಕಥೆ ಎಳೆದಿದ್ದು ಕೆಲವರಿಗೆ ಬೇಸರ ತಂದಿತ್ತು. ಸದ್ಯ ಅಮೇಜಾನ್ ಪ್ರೈಂ ವೀಡಿಯೋದಲ್ಲಿ 2 ಸಿನಿಮಾ ನೋಡಬಹುದು.
ಗೋಧಿ ಬಣ್ಣ ಸಾಧಾರಣ ಮೈಕಟ್ಟು
ಅನಂತ್ ನಾಗ್ ಹಾಗೂ ರಕ್ಷಿತ್ ಶೆಟ್ಟಿ ನಟನೆಯ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರಕ್ಕೂ ಒಳ್ಳೆ ಪ್ರತಿಕ್ರಿಯೆ ಸಿಕ್ಕಿತ್ತು. ಹೇಮಂತ್ ರಾವ್ ಈ ಚಿತ್ರದ ಮೂಲಕ ನಿರ್ದೇಶಕರಾಗಿ ಪರಿಚಿತರಾಗಿದ್ದರು. ಪುಷ್ಕರ್ ಮಲ್ಲಿಕಾರ್ಜುನಯ್ಯ ಚಿತ್ರಕ್ಕೆ ಹಣ ಹೂಡಿದ್ದರು. ಅಂದಾಜು 2.50 ಕೋಟಿ ರೂ, ಬಜೆಟ್ ಸಿನಿಮಾ 12 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಸದ್ದು ಮಾಡಿತ್ತು. ಜಿಯೋ ಹಾಟ್‌ಸ್ಟರ್‌ನಲ್ಲಿ ಈ ಸಿನಿಮಾ ವೀಕ್ಷಣೆಗೆ ಲಭ್ಯವಿದೆ.


Click it and Unblock the Notifications











