OTT Releases This Week: ಈ ವಾರ 'ಥಗ್ ಲೈಫ್', 'ಸಿದ್ಲಿಂಗು- 2' ಜೊತೆ ಓಟಿಟಿಗೆ ಬಂದ ಚಿತ್ರಗಳ ಲಿಸ್ಟ್
ವೀಕೆಂಡ್ ಬಂದೇ ಬಿಡ್ತು. ಅತ್ತ ಚಿತ್ರಮಂದಿರಗಳಲ್ಲಿ ಇತ್ತ ಓಟಿಟಿಯಲ್ಲಿ ಸಾಕಷ್ಟು ಸಿನಿಮಾಗಳು ರಂಜಿಸೋಕೆ ಬರ್ತಿವೆ. ಕನ್ನಡದಲ್ಲಿ ಈ ವಾರ 'ಕ್ಯಾಪಿಟಲ್ ಸಿಟಿ', 'ಜಂಗಲ್ ಮಂಗಲ್', 'ಕಪಟನಾಟಕ ಸೂತ್ರಧಾರಿ', 'ಪೆನ್‌ಡ್ರೈವ್', 'ತಪಸ್ಸಿ', 'ಹೆಬ್ಬುಲಿ ಕಟ್' ಎಂಬ ಸಿನಿಮಾಗಳು ತೆರೆಗಪ್ಪಳಿಸಿವೆ.
ಈ 5 ಸಿನಿಮಾಗಳು ಸೇರಿ ಈ ವರ್ಷ 133 ಕನ್ನಡ ಚಿತ್ರಗಳು ಬಿಡುಗಡೆ ಆದಂತಾಗಿದೆ. ಆದರೆ ಈವರೆಗೆ ಒಂದೇ ಒಂದು ಸಿನಿಮಾ ಹಿಟ್ ಆಗಿಲ್ಲ. ಜುಲೈ 18ಕ್ಕೆ ಬರುತ್ತಿರುವ 'ಎಕ್ಕ' ಸಿನಿಮಾ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಇತ್ತ ಓಟಿಟಿಯಲ್ಲಿ ಕೂಡ ಕನ್ನಡ ಸಿನಿಮಾಗಳು ದೊಡ್ಡದಾಗಿ ಸದ್ದು ಮಾಡ್ತಿಲ್ಲ. ಆಗೊಮ್ಮೆ ಈಗೊಮ್ಮೆ ಒಂದೊಂದು ಇಂಟ್ರೆಸ್ಟಿಂಗ್ ಸಿನಿಮಾ ಓಟಿಟಿ ವೀಕ್ಷಕರ ಮುಂದೆ ಬರ್ತಿದೆ.

ಪ್ರತಿ ವಾರದಂತೆ ಈ ವಾರ ಕೂಡ ಒಂದಷ್ಟು ಇಂಟ್ರೆಸ್ಟಿಂಗ್ ಸಿನಿಮಾಗಳು ಹಾಗೂ ವೆಬ್ ಸೀರಿಸ್ ಓಟಿಟಿಗೆ ಎಂಟ್ರಿ ಕೊಡ್ತಿದೆ. ಒಂದು ಕನ್ನಡ ಸಿನಿಮಾ ಕೂಡ ಈ ಲಿಸ್ಟ್‌ನಲ್ಲಿ ಇದೆ. ಪ್ರೈಂ ವೀಡಿಯೋ, ನೆಟ್‌ಫ್ಲಿಕ್ಸ್, ಜೀ5, ಹಾಟ್‌ಸ್ಟರ್ ಓಟಿಟಿ ಪ್ಲಾಟ್‌ಫಾರ್ಮ್‌ಗೆ ಎಂಟ್ರಿ ಕೊಡುತ್ತಿರುವ ಸಿನಿಮಾಗಳ ಲಿಸ್ಟ್ ಮುಂದೆ ಓದಿ.
ಅಮೇಜಾನ್ ಪ್ರೈಂ
1. ಸಿದ್ಲಿಂಗು-2
ವಿಜಯ ಪ್ರಸಾದ್ ನಿರ್ದೇಶನದಲ್ಲಿ ಲೂಸ್ ಮಾದ ಯೋಗಿ ನಟನೆಯ 'ಸಿದ್ಲಿಂಗು-2' ಸಿನಿಮಾ ಕೊನೆಗೂ ಓಟಿಟಿಗೆ ಬಂದಿದೆ. ಫೆಬ್ರವರಿ 14ಕ್ಕೆ ತೆರೆಗೆ ಬಂದಿದ್ದ ಸಿನಿಮಾ ನಾಲ್ಕು ತಿಂಗಳ ಬಳಿಕ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಯೋಗಿ ಜೊತೆಗೆ ಸೋನು ಗೌಡ, ಸುಮನ್ ರಂಗನಾಥ್ ಚಿತ್ರದ ತಾರಾಗಣದಲ್ಲಿದ್ದಾರೆ.
ಈ ಹಿಂದೆ ಯೋಗಿ ಹಾಗೂ ರಮ್ಯಾ ನಟಿಸಿದ್ದ 'ಸಿದ್ಲಿಂಗು' ಸಿನಿಮಾ ಹಿಟ್ ಆಗಿತ್ತು. ದಶಕದ ಬಳಿಕ ಆ ಚಿತ್ರದ ಸೀಕ್ವೆಲ್ ತೆರೆಗೆ ತರಲಾಗಿದೆ. ಪಕ್ಕಾ ವಿಜಯ್ ಪ್ರಸಾದ್ ಸ್ಟೈಲ್ ಕಾಮಿಡಿ ಎಂಟರ್‌ಟೈನರ್ ಸಿನಿಮಾ ಇದು. ಅನೂಪ್ ಸಿಳೀನ್ ಸಂಗೀತ ಚಿತ್ರಕ್ಕಿದೆ. ಸಿನಿಮಾ ತೆರೆಗೆ ಬಂದಾಗ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಆದರೆ ಸಿನಿಮಾ ಗೆಲ್ಲಲಿಲ್ಲ. ವೀಕೆಂಡ್ ಮನೆಯಲ್ಲೇ ಸಿನಿಮಾ ನೋಡಿ ಎಂಜಾಯ್ ಮಾಡಿ.

2. ಉಪ್ಪುಕಪ್ಪುರಂಬು(ಕನ್ನಡ ಡಬ್)
ಸಾಮಾನ್ಯವಾಗಿ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡು ತಿಂಗಳ ಬಳಿಕ ಸಿನಿಮಾಗಳು ಓಟಿಟಿಗೆ ಬರುತ್ತದೆ. ಕೆಲ ಸಿನಿಮಾಗಳು ನೇರವಾಗಿ ಡಿಜಿಟಲ್ ಎಂಟ್ರಿ ಕೊಡುತ್ತವೆ. ತೆಲುಗಿನ 'ಉಪ್ಪುಕಪ್ಪುರಂಬು' ಸಿನಿಮಾ ಕೂಡ ಸದ್ದಿಲ್ಲದೇ ನೇರವಾಗಿ ಪ್ರೈಂ ವೀಡಿಯೋಗೆ ಬಂದಿದೆ. ಕೀರ್ತಿ ಸುರೇಶ್ ಚಿತ್ರದ ನಾಯಕಿಯಾಗಿ ಮಿಂಚಿದ್ದಾರೆ.
ಇದೊಂದು ಫನ್ ಎಂಟರ್‌ಟೈನರ್ ಸಿನಿಮಾ. ಹಾಸ್ಯನಟ ಸುಹಾನ್ ಚಿತ್ರದ ಮತ್ತೊಂದು ಮುಖ್ಯ ಪಾತ್ರದಲ್ಲಿ ಮಿಂಚಿದ್ದಾರೆ. ಕಾಲ್ಪನಿಕ ಊರಿನಲ್ಲಿ ಈ ಕಥೆ ನಡೆಯುತ್ತದೆ. ಅನಿ ಸಶಿ ಎಂಬುವವರು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸಣ್ಣ ಪುಟ್ಟ ತಪ್ಪುಗಳ ನಡುವೆಯೂ ಸಿನಿಮಾ ನೋಡುಗರಿಗೆ ಮಜಾ ಕೊಡ್ತಿದೆ. ಕನ್ನಡಕ್ಕೂ ಡಬ್ ಆಗಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ.
3. ದಿ ಹೆಡ್ಸ್ ಆಫ್ ಸ್ಟೇಟ್(ಹಾಲಿವುಡ್ ಸಿನಿಮಾ)
ಇಲ್ಯಾ ನೈಶುಲ್ಲರ್ ನಿರ್ದೇಶನದ ಈ ಹಾಲಿವುಡ್ ಆಕ್ಷನ್ ಕಾಮಿಡಿ ಸಿನಿಮಾ ಈಗಾಗಲೇ ಪ್ರೈಂ ವೀಡಿಯೋಗೆ ಬಂದಿದೆ. ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಕೂಡ ಚಿತ್ರದಲ್ಲಿ ನಟಿಸಿದ್ದಾರೆ. ಹಾಗಾಗಿ ಸಹಜವಾಗಿಯೇ 'ದಿ ಹೆಡ್ಸ್ ಆಫ್ ಸ್ಟೇಟ್' ಸಿನಿಮಾ ಕುತೂಹಲ ಮೂಡಿಸಿದೆ. ಈ ಸಿನಿಮಾ ಕೂಡ ನೇರವಾಗಿ ಪ್ರೈಂ ವೀಡಿಯೋಗೆ ಬಂದುಬಿಟ್ಟಿದೆ.
ಜಿಯೋ ಹಾಟ್‌ಸ್ಟರ್
1. ಗುಡ್ ವೈಫ್(ವೆಬ್ ಸೀರಿಸ್)
ತಮಿಳಿನ 'ಗುಡ್ ವೈಫ್' ಎಂಬ ವೆಬ್ ಸೀರಿಸ್ ಕನ್ನಡಕ್ಕೂ ಡಬ್ ಆಗಿ ಸ್ಟ್ರೀಮಿಂಗ್ ಆರಂಭಿಸಿದೆ. ಹಾಲಿವುಡ್‌ನಲ್ಲಿ ಬಂದಿದ್ದ 'ದಿ ಗುಡ್ ವೈಫ್' ಸೀರಿಸ್ ಆಧರಿಸಿ ಭಾರತದಲ್ಲಿ ಇದನ್ನು ಕಟ್ಟಿಕೊಡಲಾಗಿದೆ. ಪ್ರಿಯಾಮಣಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಜಿಯೋ ಹಾಟ್‌ಸ್ಟರ್‌ನಲ್ಲಿ ನೀವು ಈಗ್ಲೇ ಈ ಲೀಗಲ್ ಪೊಲಿಟಿಕಲ್ ಡ್ರಾಮಾ ಸೀರಿಸ್ ನೋಡಬಹುದು. ತಮಿಳು, ಕನ್ನಡ ಸೇರಿ 5 ಭಾಷೆಗಳಲ್ಲಿ 'ಗುಡ್ ವೈಫ್' ಕಥೆ ವೀಕ್ಷಣೆಗೆ ಲಭ್ಯವಿದೆ.
ಜೀ5
1. ಕಾಳೀಧರ್ ಲಪತ್ತಾ(ಹಿಂದಿ ಸಿನಿಮಾ) ಜುಲೈ 4
ಸೋನಿಲಿವ್
1. ದಿ ಹಂಟ್- ರಾಜೀವ್ ಗಾಂಧಿ ಹತ್ಯ ಕೇಸ್(ಹಿಂದಿ ವೆಬ್ ಸೀರಿಸ್)
ನೆಟ್‌ಫ್ಲಿಕ್ಸ್
1. ಥಗ್ ಲೈಫ್
ಕಮಲ್ ಹಾಸನ್ ನಟನೆಯ 'ಥಗ್ ಲೈಫ್' ತಮಿಳು ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೋತಿತ್ತು. ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆ ಆಗಲೇ ಇಲ್ಲ. ಇದೀಗ ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ತೆರೆಕಂಡ 26 ದಿನಕ್ಕೆ ಸಿನಿಮಾ ಓಟಿಟಿಗೆ ಬರುವಂತಾಗಿದೆ. ಮಣಿರತ್ನಂ ಮ್ಯಾಜಿಕ್ ಕೂಡ ನಡೆಯಲೇ ಇಲ್ಲ.
ಜೂನ್ 5ಕ್ಕೆ ತೆರೆಕಂಡಿದ್ದ ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಂದಾಜು 200 ಕೋಟಿ ರೂ. ಬಜೆಟ್ ಸಿನಿಮಾ 50 ಕೋಟಿ ರೂ. ಕಲೆಕ್ಷನ್ ಮಾಡಲು ವಿಫಲವಾಗಿದೆ ಎಂದು ಬಾಕ್ಸಾಫೀಸ್ ಪಂಡಿತರು ಹೇಳುತ್ತಿದ್ದಾರೆ. ತಿಂಗಳಿಗೂ ಮುನ್ನ ಸಿನಿಮಾ ಓಟಿಟಿಗೆ ಬಂದು ಮತ್ತಷ್ಟು ಮುಖಭಂಗವಾಗಿದೆ.
2. ಅಟ್ಯಾಕ್ ಆನ್ ಲಂಡನ್- ಹಂಟಿಂಗ್ ದಿ 7/7 ಬಾಂಬರ್ಸ್(ವೆಬ್ ಸೀರಿಸ್) ಜುಲೈ 1
3. ದಿ ಓಲ್ಡ್ ಗಾರ್ಡ್- 2(ಹಾಲಿವುಡ್ ಸಿನಿಮಾ) ಜುಲೈ 2


Click it and Unblock the Notifications











