Gandhada Gudi OTT: ಪುನೀತ್ ಕೊನೆಯ ಚಿತ್ರ 'ಗಂಧದಗುಡಿ' ಓಟಿಟಿ ದಿನಾಂಕ ಘೋಷಣೆ; ಯಾವ ಓಟಿಟಿಯಲ್ಲಿ ಬಿಡುಗಡೆ?
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಕನಸಿನ ಕೂಸು ಗಂಧದ ಗುಡಿ ಡಾಕ್ಯು ಚಿತ್ರ ಬಿಡುಗಡೆಯಾಗಿ ಎಲ್ಲರ ಮನ ಗೆದ್ದಿತ್ತು. ಈ ಸಿನಿಮಾ ನೋಡಿ ಹೊರಬಂದ ಸಿನಿ ರಸಿಕರು ಜನರ ಮನ ಗೆದ್ದ ವಿಶ್ವಮಾನವ ಪುನೀತ್ ರಾಜ್‌ಕುಮಾರ್‌ಗೆ ಇದಕ್ಕಿಂತ ಉತ್ತಮ ಬೀಳ್ಕೊಡುಗೆ, ವಿದಾಯ ಮತ್ತೊಂದಿಲ್ಲ ಎಂದಿದ್ದರು. ಇದಕ್ಕೂ ಮುನ್ನ ತೆರೆಕಂಡಿದ್ದ ಪುನೀತ್ ರಾಜ್‌ಕುಮಾರ್ ನಟನೆಯ ಹಲವು ಕಮರ್ಷಿಯಲ್ ಚಿತ್ರಗಳಲ್ಲಿ ಪುನೀತ್ ರಾಜ್‌ಕುಮಾರ್ ನಿರ್ವಹಿಸಿದ್ದ ಪಾತ್ರವನ್ನು, ನಟನೆಯನ್ನು ಕಂಡಿದ್ದ ಜನ ಮೊದಲ ಬಾರಿಗೆ ಪುನೀತ್ ಅವರನ್ನು ಪುನೀತ್ ಅವರನ್ನಾಗಿಯೇ ದೊಡ್ಡ ಪರದೆ ಮೇಲೆ ಕಂಡಿದ್ದರು.
ಪುನೀತ್ ರಾಜ್‌ಕುಮಾರ್ ನಿಧನ ಹೊಂದಿದ ಬಳಿಕ ಅವರು ನಟಿಸಿ ಹೋಗಿದ್ದ ಮೂರು ಚಿತ್ರಗಳು ತೆರೆಗೆ ಬರುವುದು ಬಾಕಿ ಇತ್ತು. ಈ ಪೈಕಿ ಜೇಮ್ಸ್ ಹಾಗೂ ಲಕ್ಕಿ ಮ್ಯಾನ್ ಪಕ್ಕಾ ಕಮರ್ಷಿಯಲ್ ಚಿತ್ರಗಳಾಗಿದ್ದವು. ಜೇಮ್ಸ್ ಚಿತ್ರದಲ್ಲಿ ಪುನೀತ್ ನಿರ್ವಹಿಸಿದ್ದ ಪಾತ್ರದ ಸಂಪೂರ್ಣ ಶೂಟಿಂಗ್ ಆಗಿರಲಿಲ್ಲ. ಹೀಗಾಗಿಯೇ ಕೆಲ ದೃಶ್ಯಗಳಲ್ಲಿ ಪುನೀತ್ ರಾಜ್‌ಕುಮಾರ್ ಬದಲಾಗಿ ಡ್ಯೂಪ್ ಬಳಸಲಾಗಿತ್ತು. ಇದು ಪುನೀತ್ ರಾಜ್‌ಕುಮಾರ್ ಬದಲಾಗಿ ಸಿನಿಮಾ ಇತಿಹಾಸದಲ್ಲಿಯೇ ಬಳಸಿದ ಮೊದಲ ಡ್ಯೂಪ್ ಕೂಡ ಹೌದು.

ಇನ್ನು ಜೇಮ್ಸ್ ಚಿತ್ರಕ್ಕೆ ಪುನೀತ್ ಡಬ್ಬಿಂಗ್ ಸಹ ಮಾಡಿರಲಿಲ್ಲ. ಹೀಗಾಗಿ ಪುನೀತ್ ಅಣ್ಣ ಶಿವ ರಾಜ್‌ಕುಮಾರ್ ಅವರ ದನಿಯನ್ನು ಪುನೀತ್ ಪಾತ್ರಕ್ಕೆ ಬಳಸಲಾಗಿತ್ತು. ಅತ್ತ ಲಕ್ಕಿ ಮ್ಯಾನ್ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಅವರ ದನಿ ಇತ್ತಾದರೂ ಡಬಿಂಗ್ ಆಗಿರಲಿಲ್ಲ. ತಂತ್ರಜ್ಙಾನ ಬಳಸಿ ಶೂಟಿಂಗ್ ಸಮಯದಲ್ಲಿ ರೆಕಾರ್ಡ್ ಆಗಿದ್ದ ಆಡಿಯೊವನ್ನೇ ಬಳಸಲಾಗಿತ್ತು. ಹೀಗೆ ಉಳಿದಿದ್ದ ಮೂರು ಚಿತ್ರಗಳ ಪೈಕಿ ಎರಡು ಚಿತ್ರಗಳು ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಗೆ ಸಂಪೂರ್ಣ ತೃಪ್ತಿ ತಂದಿರಲಿಲ್ಲ.
ಆದರೆ ಗಂಧದ ಗುಡಿ ಈ ಬೇಸರವನ್ನು ಹೋಗಲಾಡಿಸಿತ್ತು. ಇದರಲ್ಲಿ ಪುನೀತ್ ರಾಜ್‌ಕುಮಾರ್ ಸಂಪೂರ್ಣವಾಗಿ ತೆರೆಮೇಲೆ ಇದ್ದರು ಹಾಗೂ ಅವರದ್ದೇ ಧ್ವನಿ ಸಹ ಇತ್ತು. ಪುನೀತ್ ರಾಜ್‌ಕುಮಾರ್ ಅವರನ್ನು ಭೇಟಿಯಾಗಿದ್ದವರು ಅವರು ತುಂಬಾ ಸಿಂಪಲ್ ಎಂದು ಹೊಗಳಿದ್ದನ್ನು ಕೇಳಿದ್ದ ಹಲವರಿಗೆ ನಿಜಕ್ಕೂ ಅವರು ಅಷ್ಟು ಸಿಂಪಲ್ ಜೀವನ ನಡೆಸ್ತಾರಾ ಎಂಬ ಪ್ರಶ್ನೆಯೂ ಇತ್ತು. ಈ ಪ್ರಶ್ನೆಗೆ ಇದೇ ಗಂಧದಗುಡಿಯಲ್ಲಿ ಉತ್ತರವೂ ಸಹ ಸಿಕ್ಕಿತ್ತು.

ಪುನೀತ್ ರಾಜ್‌ಕುಮಾರ್ ಚಿತ್ರದಲ್ಲಿ ಜೀವಿಸಿದ್ರು. ಕಾಡಿಗೆ ಹೊಸಬನಾಗಿದ್ದ ಪುನೀತ್ ರಾಜ್‌ಕುಮಾರ್ ಕಾಡನ್ನು ಅರಿಯಲು ಮಾಡುತ್ತಿದ್ದ ಯತ್ನ ಅವರಲ್ಲಿನ ಮುಗ್ದ ಮಗುವನ್ನು ಹೊರಹಾಕಿತ್ತು. ಕೇವಲ ಚಿತ್ರಗಳಲ್ಲಿ ಮಾತ್ರವಲ್ಲದೇ ಈ ಜರ್ನಿಯಲ್ಲಿಯೂ ಸಹ ಪುನೀತ್ ರಾಜ್‌ಕುಮಾರ್ ಸಂದೇಶವನ್ನು ನೀಡಿದ್ದರು. ಪುನೀತ್ ಜೀವಿಸಿದ್ದ ಪರಿ ಕಂಡು ಇಂಥ ವ್ಯಕ್ತಿಯನ್ನು ಕಳೆದುಕೊಂಡೆವಲ್ಲ ಎಂದು ಕಣ್ಣೀರು ಹಾಕಿದ್ದವರೇ ಹೆಚ್ಚು.ಒಂದೆಡೆ ಪುನೀತ್ ವ್ಯಕ್ತಿತ್ವ ಜನರನ್ನು ಮೌನಕ್ಕೊಳಗಾಗುವಂತೆ ಮಾಡಿದರೆ ಗಂಧದ ಗುಡಿಯಲ್ಲಿ ತೋರಿಸಲಾಗಿದ್ದ ಬಹುತೇಕ ಮಂದಿ ಕಾಣದ ರಾಜ್ಯದ ವನ್ಯ ಸಂಪತ್ತನ್ನು ಕಂಡು ಸಿನಿ ರಸಿಕರು ರೋಮಾಂಚನಕ್ಕೊಳಗಾಗಿದ್ದರು.
ವೈಲ್ಡ್ ಕರ್ನಾಟಕಕ್ಕೆ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದ ಅಮೋಘವರ್ಷ ಅಪ್ಪು ಜತೆ ಸೇರಿ ಅದ್ಭುತವಾಗಿ ಕಾಡನ್ನು ಜನರಿಗೆ ತೋರಿಸಿದ್ದರು. ರಾಜ್ಯದಲ್ಲಿ ಇಂಥಹ ಸ್ಥಳಗಳೂ ಸಹ ಇವೆಯಾ ಎಂದು ಜನರು ಮೂಕವಿಸ್ಮಿತರಾಗುವ ಹಾಗೆ ಮಾಡಿದ್ದರು. ಹೀಗೆ ಎಮೋಷನಲ್ ಪಯಣ ಎನಿಸಿಕೊಂಡಿದ್ದ ಗಂಧದಗುಡಿ ಚಿತ್ರಮಂದಿರದಲ್ಲಿ ಯಶಸ್ವಿ ಪ್ರದರ್ಶನ ಕಂಡ ಬಳಿಕ ಇದೀಗ ಓಟಿಟಿಗೆ ಬರಲು ತಯಾರಾಗಿದೆ. ಅಮೆಜಾನ್ ಪ್ರೈಮ್ ವಿಡಿಯೊ ಓಟಿಟಿ ವೇದಿಕೆಯಲ್ಲಿ ಚಿತ್ರ ಇದೇ ಮಾರ್ಚ್ 17ರಂದು ಪುನೀತ್ ಹುಟ್ಟುಹಬ್ಬದ ಪ್ರಯುಕ್ತ ಸ್ಟ್ರೀಮ್ ಆಗಲಿದೆ.


Click it and Unblock the Notifications











