Krishnam Pranaya Sakhi Ott: 'ಕೃಷ್ಣಂ ಪ್ರಣಯ ಸಖಿ' ಓಟಿಟಿ ರಿಲೀಸ್ ಡೇಟ್ ಘೋಷಣೆ
ಕನ್ನಡ ಸಿನಿರಸಿಕರು ಈ ವರ್ಷ ಓಟಿಟಿಯಲ್ಲಿ ಯಾವುದೇ ಚಿತ್ರಕ್ಕಾಗಿ ಇಷ್ಟು ಕಾಯಲಿಲ್ಲ. ಅಷ್ಟರಮಟ್ಟಿಗೆ 'ಕೃಷ್ಣಂ ಪ್ರಣಯ ಸಖಿ' ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಈ ವರ್ಷ ಸಿನಿಮಾ ಓಟಿಟಿಗೆ ಬರುವುದೇ ಅನುಮಾನ ಎನ್ನುವ ಊಹಾಪೋಹ ಶುರುವಾಗಿತ್ತು. ಅಂತೂ ಸ್ಟ್ರೀಮಿಂಗ್ ಡೇಟ್ ಘೋಷಣೆ ಆಗಿದೆ.
ಶ್ರೀನಿವಾಸ್ ರಾಜು ನಿರ್ದೇಶನದ ರೊಮ್ಯಾಂಟಿ ಫ್ಯಾಮಿಲಿ ಎಂಟರ್‌ಟೈನರ್ 'ಕೃಷ್ಣಂ ಪ್ರಣಯ ಸಖಿ' ಸಿನಿಮಾ ಆಗಸ್ಟ್ 15ಕ್ಕೆ ತೆರೆಗೆ ಬಂದಿತ್ತು. ಭರ್ಜರಿ ಪ್ರದರ್ಶನ ಕಂಡು ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. ಗೋಲ್ಡನ್ ಸ್ಟಾರ್ ಗಣೇಶ್ ಬಹಳ ದಿನಗಳ ನಂತರ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಚಿತ್ರದಲ್ಲಿ ಮಾಳವಿಕಾ ನಾಯರ್ ಹಾಗೂ ಶರಣ್ಯ ಶೆಟ್ಟಿ ನಾಯಕಿಯಾಗಿ ಮಿಂಚಿದ್ದಾರೆ.

ಸಾಧು ಕೋಕಿಲ, ರಂಗಾಯಣ ರಘು, ಅವಿನಾಶ್, ಶಶಿಕುಮಾರ್, ಶ್ರುತಿ, ಅಶೋರ್, ರಾಮಕೃಷ್ಣ ರೀತಿ ಅನುಭವಿ ಕಲಾವಿದರ ದಂಡೇ ಚಿತ್ರದಲ್ಲಿದೆ. ಸಿಂಪಲ್ ಕಥೆಯನ್ನು ಬಹಳ ಸೊಗಸಾಗಿ ತೆರೆಗೆ ತಂದು ಚಿತ್ರತಂಡ ಗೆದ್ದಿತ್ತು. ಅರ್ಜುನ್ ಜನ್ಯಾ ಸಂಗೀತ ಚಿತ್ರಕ್ಕೆ ಪ್ಲಸ್ ಆಗಿತ್ತು. ಮುಖ್ಯವಾಗಿ 'ದ್ವಾಪರ' ಹಾಡು ಹಿಟ್ ಆಗಿ ಬಹಳ ಸದ್ದು ಮಾಡಿತ್ತು. ಬೆಂಗಳೂರು, ಮೈಸೂರು ಇಟಲಿ, ಮಾಲ್ತಾ ಹಾಗೂ ವಿಯೆಟ್ನಾಂನಲ್ಲಿ 'ಕೃಷ್ಣಂ ಪ್ರಣಯ ಸಖಿ' ಸಿನಿಮಾ ಚಿತ್ರೀಕರಣ ನಡೆದಿತ್ತು.
ತ್ರಿಶೂಲ್ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಪ್ರಶಾಂತ್ ಜಿ ರುದ್ರಪ್ಪ 'ಕೃಷ್ಣಂ ಪ್ರಣಯ ಸಖಿ' ಚಿತ್ರ ನಿರ್ಮಿಸಿದ್ದಾರೆ. ಕ್ರೈಂ ಥ್ರಿಲ್ಲರ್ ಸಿನಿಮಾಗಳನ್ನು ಕಟ್ಟಿಕೊಟ್ಟು ಗೆದ್ದಿದ್ದ ನಿರ್ದೇಶಕ ಶ್ರೀನಿವಾಸ್ ರಾಜು ಈ ಬಾರಿ ರೊಮ್ಯಾಂಟಿಕ್ ಕತೆ ಹೇಳಿ ಕಮಾಲ್ ಮಾಡಿದ್ದಾರೆ. ಬೇರೆ ಸಿನಿಮಾಗಳ ಹೋಲಿಕೆ ಕಂಡರೂ ಕನ್ನಡದಲ್ಲಿ ಕೃಷ್ಣನ ಕಥೆಗೆ ಪ್ರೇಕ್ಷಕರು ಫಿದಾ ಆಗಿದ್ದರು.
'ಕೃಷ್ಣಂ ಪ್ರಣಯ ಸಖಿ' ಸಿನಿಮಾ ಅಂದಾಜು 25 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸದ್ದು ಮಾಡಿತ್ತು. ಆಗಸ್ಟ್ 9ಕ್ಕೆ ತೆರೆಗೆ ಬಂದಿದ್ದ ದುನಿಯಾ ವಿಜಯ್ 'ಭೀಮ' ಮಾಸ್ ಪ್ರೇಕ್ಷಕರ ಮನಗೆದ್ದಿತ್ತು. ಮರುವಾರವೇ ಬಂದ ಈ ಸಿನಿಮಾ ಫ್ಯಾಮಿಲಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತಂದಿತ್ತು. ಹೌಸ್‌ಫುಲ್ ಪ್ರದರ್ಶನ ಕಂಡು ಸದ್ದು ಮಾಡಿತ್ತು.
ಶ್ರೀಮಂತ ಮನೆತನದ ಹುಡುಗ ಕೃಷ್ಣ, ಅನಾಥಶ್ರಮದಲ್ಲಿರುವ ಪ್ರಣಯಳ ಪ್ರೀತಿಲಿ ಬೀಳುತ್ತಾನೆ. ತಾನೊಬ್ಬ ಕಾರ್ ಡ್ರೈವರ್ ಎಂದು ಪರಿಚಯಿಸಿಕೊಂಡು ಆಕೆಗೆ ಹತ್ತಿರವಾಗುತ್ತಾನೆ. ಅಷ್ಟಕ್ಕೆ ಕಥೆ ಮುಗಿಯಲ್ಲ, ಒಂದಷ್ಟು ಟ್ವಿಸ್ಟ್‌ಗಳನ್ನು ಕೊಟ್ಟು ಸಿಂಪಲ್ ಕಥೆಯನ್ನು ಕೂತೂಹಲಭರಿತವಾಗಿ ಹೆಣೆದಿದ್ದಾರೆ. ಕೃಷ್ಣನ ಪಾತ್ರದಲ್ಲಿ ಎಂದಿನ ತಮ್ಮ ಲವಲವಿಕೆ ನಟನೆಯಿಂದ ಗಣೇಶ್ ಇಷ್ಟವಾಗುತ್ತಾರೆ.
ಸಾಕಷ್ಟು ಜನ ಈಗಾಗಲೇ ಬೆಳ್ಳಿಪರದೆಯಲ್ಲಿ 'ಕೃಷ್ಣಂ ಪ್ರಣಯ ಸಖಿ' ಸಿನಿಮಾ ನೋಡಿದ್ದಾರೆ. ಮತ್ತೆ ಕೆಲವರು ಓಟಿಟಿ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಅಮೇಜಾನ್ ಪ್ರೈಂ ವಿಡಿಯೋಗೆ ಸಿನಿಮಾ ರೈಟ್ಸ್ ಮಾರಾಟವಾಗಿ ಎನ್ನಲಾಗಿತ್ತು. ಬಳಿಕ ಉದಯ ಟಿವಿ ಚಿತ್ರದ ಡಿಜಿಟಲ್ ಹಾಗೂ ಸ್ಯಾಟಲೈಟ್ ರೈಟ್ಸ್ ಕೊಂಡುಕೊಂಡಿರುವುದು ಪಕ್ಕಾ ಆಗಿತ್ತು. ಅದೇ ಕಾರಣಕ್ಕೆ ಸಿನಿಮಾ ಮುಂದಿನ ವರ್ಷ ಓಟಿಟಿಗೆ ಬರುತ್ತದೆ ಎನ್ನುವ ಊಹಾಪೋಹ ಶುರುವಾಗಿತ್ತು.
ದಿಢೀರನೆ ಸನ್ ನೆಕ್ಸ್ಟ್ ಸ್ವೀಟ್ ಶಾಕ್ ಕೊಟ್ಟಿದೆ. ನವೆಂಬರ್ 29 ಅಂದ್ರೆ ಮುಂದಿನ ಶುಕ್ರವಾರ ಸಿನಿಮಾ ಓಟಿಟಿ ಸ್ಟ್ರೀಮಿಂಗ್ ಖಚಿಪಡಿಸಿದೆ. ಅಧಿಕೃತವಾಗಿ ಈ ವಿಚಾರ ಘೋಷಣೆ ಆಗಿದೆ. ಟ್ರೈಲರ್ ಬಿಡುಗಡೆ ಮಾಡದೇ 'ಕೃಷ್ಣಂ ಪ್ರಣಯ ಸಖಿ' ಚಿತ್ರ ತೆರೆಗೆ ತರಲಾಗಿತ್ತು. ಇದೀಗ ಸನ್ ನೆಕ್ಸ್ಟ್ ಸಣ್ಣ ಟ್ರೈಲರ್ ಸಹ ರಿಲೀಸ್ ಮಾಡಿದೆ. ಗಣೇಶ್ ಅಭಿಮಾನಿಗಳು ಈ ಸುದ್ದಿ ಕೇಳಿ ಖುಷಿಯಾಗಿದ್ದಾರೆ.


Click it and Unblock the Notifications











