ಒಟಿಟಿಗೆ 'ಗರುಡ ಗಮನ ವೃಷಭ ವಾಹನ': ಶೀಘ್ರ ಪ್ರಸಾರ
2021ರ ಭಾರತದ ಅತ್ಯುತ್ತಮ ಸಿನಿಮಾಗಳಲ್ಲಿ 'ಗರುಡ ಗಮನ ವೃಷಭ ವಾಹನ' ಸಹ ಒಂದು. ಕನ್ನಡದ ಈ ಸಿನಿಮಾ ರಾಷ್ಟ್ರಮಟ್ಟದ ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿದೆ.
ರಾಜ್ ಬಿ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಈ ಸಿನಿಮಾ ನವೆಂಬರ್ 19ರಂದು ಬಿಡುಗಡೆ ಆಗಿ ಒಳ್ಳೆಯ ಪ್ರದರ್ಶನ ಕಂಡಿತು. ಸಿನಿಮಾವು ಚಿತ್ರಮಂದಿರಗಳಲ್ಲಿ ಹಿಟ್ ಎನಿಸಿಕೊಂಡಿತು. ರಾಜ್ ಬಿ ಶೆಟ್ಟಿಯ ನಟನೆ ಹಾಗೂ ನಿರ್ದೇಶನ ಎರಡಕ್ಕೂ ಒಳ್ಳೆಯ ಪ್ರಶಂಸೆಗಳು ಧಕ್ಕಿದವು.
ಚಿತ್ರಮಂದಿರದಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಂಡ 'ಗರುಡ ಗಮನ ವೃಷಭ ವಾಹನ' ಇದೀಗ ಒಟಿಟಿಗೆ ಬರುತ್ತಿದೆ. ಸಿನಿಮಾವು ಜೀ 5 ಕನ್ನಡ ಒಟಿಟಿಯಲ್ಲಿ ಸ್ಟ್ರೀಮ್ ಆಗಲಿದ್ದು, ಒಟಿಟಿಯಲ್ಲಿ ಯಾವ ದಿನ ಬಿಡುಗಡೆ ಆಗಲಿದೆ ಎಂಬುದು ಇನ್ನೂ ಘೋಷಣೆಯಾಗಿಲ್ಲ.

ಜೀ5ನಲ್ಲಿ 'ಗರುಡ ಗಮನ ವೃಷಭ ವಾಹನ' ಸಿನಿಮಾ ಬಿಡುಗಡೆ ಆಗಲಿರುವ ಬಗ್ಗೆ ಈಗಾಗಲೇ ಜೀ5 ಜಾಹೀರಾತುಗಳನ್ನು, ಪ್ರೋಮೋಗಳನ್ನು ಪ್ರಕಟಿಸಿದೆ. ಆದರೆ ಯಾವ ದಿನದಂದು ಬಿಡುಗಡೆ ಆಗಲಿದೆ ಎಂಬುದನ್ನು ಘೋಷಿಸಿಲ್ಲ. ಬದಲಿಗೆ ಅತಿ ಶೀಘ್ರದಲ್ಲಿಯೇ ಜೀ5ನಲ್ಲಿ ಸಿನಿಮಾ ಪ್ರದರ್ಶನಗೊಳ್ಳಲಿದೆ ಎಂದು ಜಾಹೀರಾತು ಪ್ರಕಟಿಸಿದೆ.
'ಗರುಡ ಗಮನ ವೃಷಭ ವಾಹನ' ಸಿನಿಮಾವನ್ನು ಚಿತ್ರತಂಡವು ಎ ಮತ್ತು ಬಿ ಸೆಂಟರ್‌ಗಳಲ್ಲಿ ಮಾತ್ರವೇ ಬಿಡುಗಡೆ ಮಾಡಿತ್ತು. ಹಲವು ತಾಲ್ಲೂಕು ಕೇಂದ್ರದ ಚಿತ್ರಮಂದಿರಗಳಲ್ಲಿ ಸಹ ಈ ಸಿನಿಮಾ ಬಿಡುಗಡೆ ಆಗಿರಲಿಲ್ಲ. ಹಾಗಾಗಿ ಹಲವಾರು ಮಂದಿ ಸಿನಿಮಾವನ್ನು ಚಿತ್ರಮಂದಿರದಲ್ಲಿ ವೀಕ್ಷಿಸಲು ಸಾಧ್ಯವಾಗಿರಲಿಲ್ಲ. ಇದೀಗ ಜೀ5ಗೆ ಸಿನಿಮಾ ಮಾರಾಟಗೊಂಡಿದ್ದು ಚಿತ್ರಮಂದಿರದಲ್ಲಿ ವೀಕ್ಷಿಸಲು ಸಾಧ್ಯವಾಗದವರು ಮೊಬೈಲ್, ಲ್ಯಾಪ್‌ಟಾಪ್ ಹಾಗೂ ಟಿವಿಗಳಲ್ಲಿ ಸಿನಿಮಾವನ್ನು ವೀಕ್ಷಿಸಬಹುದಾಗಿದೆ.
'ಗರುಡ ಗಮನ ವೃಷಭ ವಾಹನ' ಸಿನಿಮಾದ ಪ್ರೆಸೆಂಟರ್ ಆಗಿರುವ ರಕ್ಷಿತ್ ಶೆಟ್ಟಿ, ಸಿನಿಮಾ ಬಿಡುಗಡೆಗೆ ಮುನ್ನ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ''ಒಟಿಟಿಗಳು ಕನ್ನಡದ ಸಿನಿಮಾಕ್ಕೆ ಬಹಳ ನಿಕೃಷ್ಟ ಬೆಲೆ ಕೇಳುತ್ತವೆ. ನಿಮಗೆ ಮಾರುಕಟ್ಟೆ ಇಲ್ಲ ಎನ್ನುತ್ತವೆ. ಸಿನಿಮಾವನ್ನು ಪ್ರದರ್ಶನವನ್ನೇ ಮಾಡದೆ ಮಾರುಕಟ್ಟೆ ಇಲ್ಲ ಎಂದರೆ ಅದು ಹೇಗೆ ಸಾಧ್ಯ. ಈ ಬಗ್ಗೆ ನಾನು ದೊಡ್ಡ ಒಟಿಟಿಯ ವ್ಯವಸ್ಥಪಕರೊಬ್ಬರೊಟ್ಟಿಗೆ ಜಗಳವೇ ಮಾಡಿದೆ. ಅವರು ಕೇಳಿದ ಮೊತ್ತಕ್ಕೆ ನಾನು ನಮ್ಮ ಸಿನಿಮಾವನ್ನು ಕೊಡಲಿಲ್ಲ. ಈಗ ಅವರು ಕೇಳಿದ್ದಕ್ಕಿಂತಲೂ ಒಳ್ಳೆಯ ಮೊತ್ತಕ್ಕೆ ಡಿಜಿಟಲ್ ಹಕ್ಕು ಸೇಲ್ ಆಗಿದೆ'' ಎಂದಿದ್ದರು. ಆದರೆ ಆಗ ಅವರು ಸಿನಿಮಾವನ್ನು ಜೀ5ಗೆ ಮಾರಾಟ ಮಾಡಿರುವ ವಿಷಯ ಹೇಳಿರಲಿಲ್ಲ.
ಇತ್ತೀಚಿನ ದಿನಗಳಲ್ಲಿ ಜೀ5 ಒಟಿಟಿಯು ಕನ್ನಡದ ಹಲವು ಸಿನಿಮಾಗಳನ್ನು ಖರೀದಿಸಿ ಬಿಡುಗಡೆ ಮಾಡುತ್ತಿದೆ. ರವಿಚಂದ್ರನ್ ನಟಿಸಿ, ಗಿರಿರಾಜ್ ನಿರ್ದೇಶನ ಮಾಡಿರುವ 'ಕನ್ನಡಿಗ' ಸಿನಿಮಾವನ್ನು ನೇರವಾಗಿ ಜೀ5 ತಮ್ಮ ವೇದಿಕೆಯಲ್ಲಿ ಬಿಡುಗಡೆ ಮಾಡಿತ್ತು. ಅದರ ಬಳಿಕ ಶಿವರಾಜ್ ಕುಮಾರ್ ನಟನೆಯ 'ಭಜರಂಗಿ 2' ಸಿನಿಮಾವನ್ನು ಬಿಡುಗಡೆ ಮಾಡಿತು. ಇದೀಗ 'ಗರುಡ ಗಮನ ವೃಷಭ ವಾಹನ' ಸಿನಿಮಾವನ್ನು ಬಿಡುಗಡೆ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಿನಿಮಾಗಳನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.


Click it and Unblock the Notifications











