Ghost OTT: ಸೆಂಚುರಿ ಸ್ಟಾರ್ 'ಘೋಸ್ಟ್' ಓಟಿಟಿ ಸ್ಟ್ರೀಮಿಂಗ್ ಎಲ್ಲಿ.. ಯಾವಾಗ?
ಶ್ರೀನಿ ನಿರ್ದೇಶನದ 'ಘೋಸ್ಟ್' ಸಿನಿಮಾ ಥಿಯೇಟರ್‌ಗಳಲ್ಲಿ ಭರ್ಜರಿ ಸೌಂಡ್ ಮಾಡ್ತಿದೆ. ಪ್ರೇಕ್ಷಕರಿಂದ ಚಿತ್ರಕ್ಕೆ ಭರ್ಜರೆ ರೆಸ್ಪಾನ್ಸ್ ಸಿಕ್ತಿದ್ದು ನಿಧಾನವಾಗಿ ಸಿನಿಮಾ ಟೇಕಾಫ್ ಆಗುವ ಸುಳಿವು ಸಿಗುತ್ತಿದೆ. ಸೆಂಚುರಿ ಸ್ಟಾರ್ ಆರ್ಭಟ ನೋಡಿ ಸಿನಿಮಾ ರಸಿಕರು ಫಿದಾ ಆಗಿದ್ದಾರೆ.
ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಆಕ್ಷನ್ ಎಂಟರ್‌ಟೈನರ್ 'ಘೋಸ್ಟ್' ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗಪ್ಪಳಿಸಿದೆ. ತೆಲುಗು ಬಿಟ್ಟು ಕನ್ನಡ, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬಂದಿದೆ. ಶಿವಣ್ಣ ಹಾಗೂ ಜಯರಾಂ ಟಾಮ್ ಅಂಡ್ ಜೆರ್ರಿ ಆಟ ನೋಡುಗರಿಗೆ ಮಜಾ ಕೊಡುತ್ತಿದೆ. ಸೆಂಚುರಿ ಸ್ಟಾರ್ ಸ್ಟೈಲ್, ಸ್ವ್ಯಾಗ್ ನೋಡಿ ಅಭಿಮಾನಿಗಳಂತೂ ಥ್ರಿಲ್ಲಾಗಿದ್ದಾರೆ.

ಸೆಂಟ್ರಲ್ ಜೈಲ್‌ವೊಂದನ್ನು ಹೈಜಾಕ್ ಮಾಡುವುದರ ಸುತ್ತಾ 'ಘೋಸ್ಟ್' ಸಿನಿಮಾ ಕತೆ ಸುತ್ತುತ್ತದೆ. ಆದರೆ ಬಹುತೇಕ ಕತೆ ಅಲ್ಲೇ ನಡೆಯೋದು ಕೊಂಚ ಕಸಿವಿಸಿ ಅನ್ನಿಸಿದರೂ ಬಹಳ ವೇಗವಾಗಿ ಸಿನಿಮಾ ಸಾಗುವುದರಿಂದ ಹೊಸ ಅನುಭವ ನೀಡುತ್ತದೆ. ಮಾಮೂಲಿ ಕಮರ್ಷಿಯಲ್ ಸಿನಿಮಾಗಳಿಗಿಂತ ಬಹಳ ವಿಭಿನ್ನವಾಗಿ ಶ್ರೀನಿ ಈ ಸಿನಿಮಾ ಡಿಸೈನ್ ಮಾಡಿದ್ದಾರೆ. 2 ದಿನಗಳಲ್ಲಿ ನಡೆಯುವ ಕತೆ ಸಖತ್ ಮಜಾ ಕೊಡುತ್ತದೆ. ಇನ್ನು ಸೆಕೆಂಡ್ ಹಾಫ್‌ನಲ್ಲಿ ಶಿವಣ್ಣ ಸಿಕ್ಕಾಪಟ್ಟೆ ಯಂಗ್ ಲುಕ್‌ನಲ್ಲಿ ಕಾಣಿಸಿಕೊಳ್ಳುವುದು ಪ್ರೇಕ್ಷಕರಿಗೆ ಥ್ರಿಲ್ ಕೊಡುತ್ತದೆ.
ಶಿವಣ್ಣನಿಗೆ ಮಲಯಾಳಂ ನಟ ಜಯರಾಂ ಹಾಗೂ ಬಾಲಿವುಡ್ ನಟ ಅನುಪಮ್ ಕೇರ್ ಸಾಥ್ ಸಿಕ್ಕಿದೆ. ಶ್ರೀನಿ ಕೂಡ ಮಹೇಶ್ ದಾಸ್ ಆಗಿ ಸಣ್ಣ ಝಲಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಶಾಂತ್ ನಾರಾಯಣ್, ಅರ್ಚನಾ ಜೋಯಿಸ್, ಸತ್ಯ ಪ್ರಕಾಶ್ ಚಿತ್ರದ ತಾರಾಗಣದಲ್ಲಿದ್ದಾರೆ. ಅರ್ಜುನ್ ಜನ್ಯಾ ಸಂಗೀತ ಚಿತ್ರಕ್ಕೆ ಪೂರಕವಾಗಿದೆ. ಒಟ್ಟಾರೆಯಾಗಿ 'ಘೋಸ್ಟ್' ಸಿನಿಮಾ ಪ್ರೇಕ್ಷಕರ ಮನಗೆಲ್ಲುವಲ್ಲಿ ಸಕ್ಸಸ್ ಕಂಡಿದೆ. ಆದರೆ ಬಾಕ್ಸಾಫೀಸ್‌ನಲ್ಲಿ ಸಿನಿಮಾ ಯಾವ ರೀತಿ ಸದ್ದು ಮಾಡುತ್ತದೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತಿದೆ. ಕರ್ನಾಟಕದಲ್ಲಿ ಸಿನಿಮಾ ಮೊದಲ ದಿನ 8 ಕೋಟಿ ರೂ. ಕಲೆಕ್ಷನ್ ಮಾಡುವ ನಿರೀಕ್ಷೆಯಿದೆ.
'ಘೋಸ್ಟ್' ಸಿನಿಮಾ ಡಿಜಿಟಲ್ ಹಾಗೂ ಸ್ಯಾಟಲೈಟ್ ರೈಟ್ಸ್ ಜೀ ಸಂಸ್ಥೆ ಪಾಲಾಗಿದೆ. ಜೀ 5ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಅದೇ ರೀತಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಸಾಮಾನ್ಯವಾಗಿ ಯಾವುದೇ ಸಿನಿಮಾ ಥಿಯೇಟರ್‌ಗಳಲ್ಲಿ ಬಿಡುಗಡೆಯಾದ 49 ದಿನಗಳ ಬಳಿಕ ಓಟಿಟಿ ಸ್ಟ್ರೀಮಿಂಗ್‌ಗೆ ಒಪ್ಪಂದವಾಗುತ್ತದೆ. ನವೆಂಬರ್ ಕೊನೆ ವಾರ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ 'ಘೋಸ್ಟ್' ಸಿನಿಮಾ ಓಟಿಟಿಗೆ ಬರುವ ಸಾಧ್ಯತೆಯಿದೆ. ಅದಕ್ಕಿಂತ ಮುನ್ನ ಬಂದರೂ ಅಚ್ಚರಿ ಪಡಬೇಕಿಲ್ಲ.
'ಘೋಸ್ಟ್' ಸಿನಿಮಾ ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳಿಗೂ ಡಬ್ ಆಗಿದ್ದು ಎಲ್ಲಾ ವರ್ಷನ್‌ಗಳು ಜೀ5ನಲ್ಲೇ ಬರುವ ಸುಳಿವು ಸಿಗುತ್ತಿದೆ. ತೆಲುಗಿನಲ್ಲಿ ಒಂದು ವಾರ ತಡವಾಗಿ ಥಿಯೇಟರ್‌ಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಸಾಮಾನ್ಯವಾಗಿ ವರ್ಷಕ್ಕೆ ಶಿವಣ್ಣನ 2-3 ಸಿನಿಮಾಗಳು ರಿಲೀಸ್ ಆಗುತ್ತಿದ್ದವು. ಆದರೆ ಈ ವರ್ಷ 'ಘೋಸ್ಟ್' ಬಿಟ್ಟರೆ ಮತ್ಯಾವುದೇ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿಲ್ಲ.
ಮತ್ತೊಂದು ಕನ್ನಡ ಸಿನಿಮಾ ಮೂಲಕ ಈ ವರ್ಷ ಶಿವಣ್ಣ ಪ್ರೇಕ್ಷಕರ ಮುಂದೆ ಬರದೇ ಇದ್ದರೂ ತಮಿಳಿನ 'ಕ್ಯಾಪ್ಟನ್ ಮಿಲ್ಲರ್' ಚಿತ್ರದಿಂದ ರಂಜಿಸಲಿದ್ದಾರೆ. ಧನುಷ್ ನಟನೆಯ 'ಕ್ಯಾಪ್ಟನ್ ಮಿಲ್ಲರ್' ಚಿತ್ರದ ಮುಖ್ಯವಾದ ಪಾತ್ರದಲ್ಲಿ ಸೆಂಚುರಿ ಸ್ಟಾರ್ ಅಬ್ಬರಿಸಿದ್ದಾರೆ. ಡಿಸೆಂಬರ್ 15ಕ್ಕೆ ಈ ಸಿನಿಮಾ ತೆರೆಗೆ ಬರಲಿದೆ. ಕನ್ನಡಕ್ಕೂ ಡಬ್ ಆಗಿ ರಿಲೀಸ್ ಆಗುವ ಸುಳವು ಸಿಗುತ್ತಿದೆ.


Click it and Unblock the Notifications










