GOAT OTT; ಓಟಿಟಿಯಲ್ಲಿ ವಿಜಯ್ 'ಗೋಟ್' ಸಿನಿಮಾ ಎಲ್ಲಿ? ಯಾವಾಗ ಸ್ಟ್ರೀಮಿಂಗ್?
ದಳಪತಿ ವಿಜಯ್ ನಟನೆಯ 'ಗೋಟ್'(GOAT) ಸಿನಿಮಾ ತೆರೆಕಂಡು ಸದ್ದು ಮಾಡ್ತಿದೆ. ಪ್ರೇಕ್ಷಕರಿಂದ ಮಿಶ್ರಪ್ರತಿಕ್ರಿಯೆ ಸಿಕ್ಕರೂ ಬಾಕ್ಸಾಫೀಸ್‌ನಲ್ಲಿ ಸಿನಿಮಾ ಗಳಿಕೆ ಚೆನ್ನಾಗಿದೆ. ಗಣೇಶ ಹಬ್ಬದ ವೀಕೆಂಡ್ ರಜೆ ಚಿತ್ರಕ್ಕೆ ಪ್ಲಸ್ ಆಗಿದೆ. ಅಂದಾಜು 400 ಕೋಟಿ ರೂ. ಬಜೆಟ್ ಚಿತ್ರದಲ್ಲಿ ವಿಜಯ್ ಡಬಲ್ ರೋಲ್ ಪ್ಲೇ ಮಾಡಿದ್ದಾರೆ.
ಗುರುವಾರ ತೆರೆಕಂಡ 'ಗೋಟ್' ಚಿತ್ರ ಮೊದಲ 3 ದಿನಕ್ಕೆ 200 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಹೇಳಲಾಗ್ತಿದೆ. ತಮಿಳುನಾಡಿನಲ್ಲಿ ಸಿನಿಮಾ ಗಳಿಕೆ ಚೆನ್ನಾಗಿದೆ. ಉಳಿದ ಭಾಗಗಳಲ್ಲಿ ನಿರೀಕ್ಷಿಸಿದ ಮಟ್ಟದಲ್ಲಿ ಸಿನಿಮಾ ಕಲೆಕ್ಷನ್ ಮಾಡ್ತಿಲ್ಲ. ಕರ್ನಾಟಕದಲ್ಲೂ ದೊಡ್ಡಮಟ್ಟದಲ್ಲಿ ದಳಪತಿ ನಟನೆಯ ಸಿನಿಮಾ ತೆರೆಗೆ ಬಂದಿದೆ.

ವೆಂಕಟ್ ಪ್ರಭು ಈ ಆಕ್ಷನ್ ಎಂಟರ್‌ಟ್ರೈನರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. 3 ದಿನಕ್ಕೆ ಹಿಂದಿ ವರ್ಷನ್ ಮಾತ್ರ 7. 6 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ವರದಿಯಾಗಿದೆ. ವಿಜಯ್ ಅಭಿಮಾನಿಗಳಿಗೆ ಸಿನಿಮಾ ಇಷ್ಟವಾಗಿದೆ. ಸ್ನೇಹಾ, ಪ್ರಶಾಂತ್, ಪ್ರಭುದೇವಾ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಎಜಿಎಸ್ ಎಂಟರ್‌ಟ್ರೈನ್‌ಮೆಂಟ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ತಂದೆ- ಮಗನಾಗಿ ವಿಜಯ್ ಡಬಲ್ ಧಮಾಕ ನೋಡಬಹುದು.
ದಳಪತಿ ವಿಜಯ್ ರಾಜಕೀಯರಂಗ ಪ್ರವೇಶಿಸುತ್ತಿದ್ದಾರೆ. ಹಾಗಾಗಿ 'ಗೋಟ್' ಅವರ ಕೊನೆ ಸಿನಿಮಾ ಎನ್ನಲಾಗ್ತಿದೆ. ಇದೇ ಕಾರಣಕ್ಕೆ ಅಭಿಮಾನಿಗಳು ಸಿನಿಮಾ ನೋಡಲು ಮುಗಿಬೀಳುತ್ತಿದ್ದಾರೆ. ಚಿತ್ರದ ಟೀಸರ್, ಸಾಂಗ್ ಅಷ್ಟಾಗಿ ಸದ್ದು ಮಾಡಲಿಲ್ಲ. ಆದರೆ ಆಕ್ಷನ್ ಪ್ಯಾಕ್ಡ್ ಟ್ರೈಲರ್ ಹಿಟ್ ಆಗಿತ್ತು. ಸಿನಿಮಾ ಬಗ್ಗೆ ಹೈಪ್ ಕ್ರಿಯೇಟ್ ಆಗುವಂತೆ ಮಾಡಿತ್ತು. ಆದರೆ ಸಿನಿಮಾ ಪ್ರೇಕ್ಷಕರನ್ನು ಅಷ್ಟಾಗಿ ರಂಜಿಸುತ್ತಿಲ್ಲ.
ಭಯೋತ್ಪಾದನೆ ನಿಗ್ರಹ ದಳದ ಸೀಕ್ರೆಟ್ ಏಜೆಂಟ್ ಗಾಂಧಿ ಪಾತ್ರದಲ್ಲಿ ವಿಜಯ್ ಬಣ್ಣ ಹಚ್ಚಿದ್ದಾರೆ. ತನ್ನ ಸೇವಾ ಅವಧಿಯಲ್ಲಿ ಆತ ಭಾಗಿ ಆಗುವ ಆಪರೇಷನ್‌ಗಳು, ಅದಕ್ಕೆ ಪ್ರತಿಯಾಗಿ ಉಗ್ರರು ಆತನ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗುತ್ತಾರೆ. ಅದರಿಂದ ಆತನ ಏನೆಲ್ಲಾ ಕಳೆದುಕೊಳ್ಳಬೇಕಾಗುತ್ತದೆ? ಕೊನೆಗೆ ಹೇಗೆ ಹೋರಾಟ ನಡೆಸಿ ಗೆಲ್ಲುತ್ತಾನೆ ಎನ್ನುವುದು ಸಿನಿಮಾ ಕಥೆ.

ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಗುತ್ತಿದ್ದಂತೆ ಓಟಿಟಿ ಸ್ಟ್ರೀಮಿಂಗ್ ಯಾವಾಗ ಎನ್ನುವ ಚರ್ಚೆ ಶುರುವಾಗಿದೆ. ನೆಟ್‌ಫ್ಲಿಕ್ಸ್ ಸಂಸ್ಥೆ ಭಾರೀ ಮೊತ್ತಕ್ಕೆ 'ಗೋಟ್' ಚಿತ್ರದ ಡಿಜಿಟಲ್ ರೈಟ್ಸ್ ಕೊಂಡುಕೊಂಡಿದೆ. ಇತ್ತೀಚೆಗೆ ದೊಡ್ಡ ಸಿನಿಮಾಗಳು ತಿಂಗಳಿಗೂ ಮುನ್ನ ಓಟಿಟಿಗೆ ಬರ್ತಿದೆ. ಆ ಲೆಕ್ಕದಲ್ಲಿ 'ಗೋಟ್' ಸಿನಿಮಾ ಕೂಡ ಅಕ್ಟೋಬರ್ ಎರಡನೇ ವಾರದಲ್ಲಿ ಸ್ಟ್ರೀಮಿಂಗ್ ಆಗುವ ಸಾಧ್ಯತೆಯಿದೆ.
ಈ ಚಿತ್ರಕ್ಕಾಗಿ ವಿಜಯ್ ಬರೋಬ್ಬರಿ 200 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ನಿರ್ಮಾಪಕರು ಹೇಳಿದ್ದಾರೆ. 'ಗೋಟ್' ಬಳಿಕ ದಳಪತಿ ವಿಜಯ್ ಮುಂದಿನ ಸಿನಿಮಾ ಯಾವುದು? ಎನ್ನುವ ಬಗ್ಗೆ ಖಚಿತ ಮಾಹಿತಿ ಇಲ್ಲ. ಮತ್ತೊಂದು ಕಡೆ ವಿಜಯ್ ತಮ್ಮ ರಾಜಕೀಯ ಪಕ್ಷದ ಕೆಲಸಗಳತ್ತ ಮುಖ ಮಾಡಿದ್ದಾರೆ. 'ತಮಿಳಗ ವೆಟ್ರಿ ಕಳಗಂ' ಹೆಸರಿನ ಪ್ರಾದೇಶಿಕ ಪಕ್ಷವನ್ನು ಸ್ಥಾಪಿಸುತ್ತಿದ್ದಾರೆ.
ಮುಂದಿನ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ದಳಪತಿ ಸ್ಪರ್ಧಿಸುತ್ತಾರೆ ಎನ್ನಲಾಗ್ತಿದೆ. ಅಭಿಮಾನಿಗಳಂತೂ ವಿಜಯ್ ಮುಂದಿನ ಸಿಎಂ ಎನ್ನುತ್ತಿದ್ದಾರೆ. ಇನ್ನು ಇತ್ತೀಚೆಗೆ ತಮ್ಮ ಪಕ್ಷದ ಧ್ವಜ, ಚಿಹ್ನೆಯನ್ನು ಕೂಡ ಅವರು ಅನಾವರಣ ಮಾಡಿದ್ದರು. ಈಗಾಗಲೇ ತಮಿಳುನಾಡಿನಾದ್ಯಂತ ಪಾದಯಾತ್ರೆ ನಡೆಸಿ ವಿಜಯ್ ಪಕ್ಷ ಸಂಘಟನೆಗೆ ಪ್ಲ್ಯಾನ್ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.
ಕರುಣಾನಿಧಿ, ಜಯಲಲಿತಾ ಬಳಿಕ ತಮಿಳುನಾಡು ರಾಜಕೀಯರಂಗದಲ್ಲಿ ತಾರಾ ವರ್ಚಸ್ಸು ಇರುವ ನಾಯಕರ ಕೊರತೆ ಎದ್ದು ಕಾಣುತ್ತಿದೆ. ಒಬ್ಬ ಮಾಸ್ ಲೀಡರ್ ಅವಶ್ಯಕತೆ ಇದೆ ಎಂದು ಕೆಲವರು ಮಾತನಾಡುತ್ತಿದ್ದಾರೆ. ಆ ಹಾದಿಯಲ್ಲಿ ವಿಜಯ್ ಮನ್ನಡೆಯುತ್ತಿದ್ದಾರೆ.


Click it and Unblock the Notifications











