Hanuman Kannada OTT: ಕನ್ನಡದಲ್ಲೂ 'ಹನುಮಾನ್' ಆರ್ಭಟ; ಸ್ಟ್ರೀಮಿಂಗ್ ಡೇಟ್ ಘೋಷಣೆ
ಸಂಕ್ರಾಂತಿ ಸಂಭ್ರಮದಲ್ಲಿ ಬಂದಿದ್ದ ತೆಲುಗಿನ 'ಹನುಮಾನ್' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗೆದ್ದಿತ್ತು. ದೇಶವಿದೇಶಗಳಲ್ಲಿ ಕೂಡ ಸಿನಿಮಾ ತೆರೆಕಂಡು ಸದ್ದು ಮಾಡಿತ್ತು. 30 ಕೋಟಿ ರೂ. ಬಜೆಟ್ ಸಿನಿಮಾ 294 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ತೆಲುಗಿನ ಸೂಪರ್ ಸ್ಟಾರ್‌ಗಳ ಸಿನಿಮಾಗಳನ್ನು ಹಿಂದಿಕ್ಕಿತ್ತು.
ಪ್ರಶಾಂತ್ ವರ್ಮಾ ನಿರ್ದೇಶನದ ಈ ಸೂಪರ್ ಹೀರೊ ಚಿತ್ರದಲ್ಲಿ ತೇಜ ಸಜ್ಜಾ ಹೀರೊ ಆಗಿ ನಟಿಸಿದ್ದಾರೆ. ಚಿತ್ರದ ಮೇಕಿಂಗ್ ಹಾಗೂ ಗ್ರಾಫಿಕ್ಸ್ ಚಿತ್ರಕ್ಕೆ ಪ್ಲಸ್ ಆಗಿತ್ತು. ಪ್ರೇಕ್ಷಕರಿಗೆ ಅದ್ಭುತ ಅನುಭವ ನೀಡಿದ್ದ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ತೆಲುಗು ಮಾತ್ರವಲ್ಲದೇ ಕನ್ನಡ, ಹಿಂದಿ, ತಮಿಳು ಭಾಷೆಗಳಿಗೂ ಸಿನಿಮಾ ಡಬ್ ಆಗಿ ತೆರೆಕಂಡಿತ್ತು. ಈಗಾಗಲೇ ಹಿಂದಿ ವರ್ಷನ್ ಓಟಿಟಿಗೆ ಬಂದಿದೆ. ತೆಲುಗು ವರ್ಷನ್ ಕೂಡ ಜೀ5ನಲ್ಲಿ ವೀಕ್ಷಣೆಗೆ ಸಿಗುತ್ತಿದೆ. ಆದರೆ ಕನ್ನಡ, ತಮಿಳು, ಮಲಯಾಳಂ ಡಿಜಿಟಲ್ ಸ್ಟ್ರೀಮಿಂಗ್ ಯಾವಾಗ ಎಂದು ಸಾಕಷ್ಟು ಜನ ಕೇಳುತ್ತಿದ್ದರು.

ಒಬ್ಬ ಸಾಮಾನ್ಯ ವ್ಯಕ್ತಿಗೆ ಹನುಮಂತನ ಕೃಪೆಯಿಂದ ಸೂಪರ್ ಪವರ್ ಸಿಕ್ಕರೆ ಏನಾಗುತ್ತದೆ? ಆ ಪವರ್ ಬಳಸಿ ಆತ ನನ್ನ ಊರನ್ನು, ತನ್ನವರನ್ನು ಹೇಗೆ ರಕ್ಷಿಸಿಕೊಳ್ಳುತ್ತಾನೆ? ಇನ್ನು ಆ ಪವರ್ ಕಸಿದುಕೊಳ್ಳಲು ನಡೆಯುವ ಕುತಂತ್ರಗಳು ಏನು? ಎನ್ನುವ ಕಥೆಯನ್ನು ಪ್ರಶಾಂತ್ ವರ್ಮ ಹೇಳಿದ್ದಾರೆ. ತೇಜಾ ಸಜ್ಜಾ ಜೊತೆಗೆ ಅಮೃತಾ ಅಯ್ಯರ್, ವರಲಕ್ಷ್ಮಿ ಶರತ್‌ಕುಮಾರ್, ಸಮುದ್ರ ಖನಿ, ವಿನಯ್ ರಾಯ್ 'ಹನುಮಾನ್' ಚಿತ್ರದ ತಾರಾಗಣದಲ್ಲಿದ್ದಾರೆ. ಯುವ ನಟನ ಸಿನಿಮಾವೊಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರಗಪ್ಪಳಿಸಿ ಸಕ್ಸಸ್ ಕಂಡಿದ್ದು ವಿಶೇಷ.
ಸದ್ಯ 'ಹನುಮಾನ್' ಸಕ್ಸಸ್ ಬೆನ್ನಲ್ಲೇ 'ಜೈ ಹನುಮಾನ್' ಎನ್ನುವ ಸೀಕ್ವೆಲ್ ಘೋಷಣೆ ಮಾಡಲಾಗಿದೆ. ಪ್ರಶಾಂತ್ ವರ್ಮಾ ತಮ್ಮ ಹನುಮಾನ್ ಸಿನಿಮ್ಯಾಟಿಕ್ ಯೂನಿವರ್ಸ್‌ನಲ್ಲಿ ಹಲವು ಕಥೆಗಳನ್ನು ಹೇಳಲು ನಿರ್ಧರಿಸಿದ್ದಾರೆ. ಈ ಚಿತ್ರದ ಸಕ್ಸಸ್ ಬಳಿಕ ದೊಡ್ಡ ಮಟ್ಟದಲ್ಲಿ ಸ್ಟಾರ್ ನಟರನ್ನು ಬಳಸಿಕೊಂಡು ಮುಂದಿನ ಸಿನಿಮಾಗಳನ್ನು ಕಟ್ಟಿಕೊಡುವ ಪ್ರಯತ್ನ ಮಾಡುತ್ತಿದ್ದಾರೆ.
ಅಂದಹಾಗೆ ಏಪ್ರಿಲ್ 5ರಿಂದ ಡಿಸ್ನಿ ಹಾಟ್‌ಸ್ಟರ್‌ನಲ್ಲಿ 'ಹನುಮಾನ್' ಕನ್ನಡ, ತಮಿಳು ಹಾಗೂ ಮಲಯಾಳಂ ವರ್ಷನ್ ಸ್ಟ್ರೀಮಿಂಗ್ ಆಗಲಿದೆ. ಸ್ವತಃ ನಿರ್ದೇಶಕ ಪ್ರಶಾಂತ್ ವರ್ಮ ಸೋಶಿಯಲ್ ಮೀಡಿಯಾದಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ. ಈಗಾಗಲೇ ಹಿಂದಿ ಹಾಗೂ ತೆಲುಗು ವರ್ಷನ್‌ಗೆ ಓಟಿಟಿಯಲ್ಲಿ ಒಳ್ಳೆ ರೆಸ್ಪಾನ್ಸ್ ಸಿಗುತ್ತಿದೆ. ಕೆಲವರು ಪ್ರಾದೇಶಿಕ ಭಾಷೆಗಳಲ್ಲಿ ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದರು. ಮುಂದಿನ ವಾರವೇ ಆ ಅವಕಾಶ ಸಿಗುತ್ತಿದೆ.

ಈ ವರ್ಷ ಸಂಕ್ರಾಂತಿ ತೆಲುಗಿನಲ್ಲಿ ಮಹೇಶ್ ಬಾಬು ನಟನೆಯ 'ಗುಂಟೂರು ಖಾರಂ', ನಾಗಾರ್ಜುನ 'ನಾ ಸಾಮಿ ರಂಗಾ', ವಿಕ್ಟರಿ ವೆಂಕಟೇಶ್ 'ಸೈಂಧವ್' ಸಿನಿಮಾ ತೆಗೆಗೆ ಬಂದಿತ್ತು. ತಮಿಳಿನಲ್ಲಿ ಧನುಷ್ ನಟನೆಯ 'ಕ್ಯಾಪ್ಟನ್ ಮಿಲ್ಲರ್' ರಿಲೀಸ್ ಆಗಿತ್ತು. ಆದರೆ ಎಲ್ಲವನ್ನು ಮೀರಿ 'ಹನುಮಾನ್' ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು. ಮೊದಲಿಗೆ ಈ ಚಿತ್ರಕ್ಕೆ ಸ್ಕ್ರೀನ್ ಕೊಡಲು ಹಿಂದು ಮುಂದು ನೋಡಿದವರು ಬಳಿಕ ದೊಡ್ಡ ಸಿನಿಮಾಗಳನ್ನು ತೆಗೆದು 'ಹನುಮಾನ್' ಸಿನಿಮಾ ಪ್ರದರ್ಶಿಸಿದ್ದರು.
ನಟ ಶಿವರಾಜ್‌ಕುಮಾರ್ ಕೂಡ ಬೆಂಗಳೂರಿನಲ್ಲಿ 'ಹನುಮಾನ್' ಸಿನಿಮಾ ವೀಕ್ಷಿಸಿ ಚಿತ್ರತಂಡದ ಬೆನ್ನು ತಟ್ಟಿದ್ದರು. ಸಂಕ್ರಾಂತಿ ಸಂಭ್ರಮದಲ್ಲಿ ಕರ್ನಾಟಕದಲ್ಲೂ 'ಹನುಮಾನ್' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು.


Click it and Unblock the Notifications










