ಈ ವಾರ ಒಟಿಟಿಯಲ್ಲಿ ಬಿಡುಗಡೆ ಆಗುತ್ತಿರುವ ಸಿನಿಮಾಗಳ ಪಟ್ಟಿ
ಚಿತ್ರಮಂದಿರಗಳಿಗೆ ಪ್ರಬಲ ಪೈಪೋಟಿಯನ್ನೇ ಒಟಿಟಿ ನೀಡುತ್ತಿದೆ. ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಉಚ್ರಾಯ ಸ್ಥಿತಿ ತಲುಪಿದ್ದ ಒಟಿಟಿ ಈಗ ಹಲವು ಜನರ ಮನೊರಂಜನೆಯ ಪ್ರಮುಖ ಮಾಧ್ಯಮವಾಗಿ ಮಾರ್ಪಟ್ಟಿದೆ.
ಸಿನಿಮಾಗಳು ಚಿತ್ರಮಂದಿರ ದಾಟಿಕೊಂಡು ಒಟಿಟಿಗೆ ಬಂದಾಗಲಷ್ಟೆ ಕಾದು ನೋಡುವ ವೀಕ್ಷಕರ ಒಂದು ವರ್ಗವೂ ಇದೀಗ ಹುಟ್ಟಿಕೊಂಡಿದೆ. ಒಟಿಟಿ ನೀಡುವ ಆಯ್ಕೆಯ ಸ್ವಾತಂತ್ರ್ಯದ ಪ್ರತಿಫಲ ಇದು.
ಅಂತೆಯೇ ಒಟಿಟಿಗಳು ಸಹ ನಾ ಮುಂದು ತಾ ಮುಂದು ಎಂದು ತನ್ನ ಸಬ್‌ಸ್ಕ್ರೈಬರ್‌ಗಳಿಗೆ ಹೊಸ-ಹೊಸ ಸಿನಿಮಾಗಲು, ವೆಬ್ ಸರಣಿಗಳನ್ನು ನೀಡುತ್ತಿವೆ. ಇತ್ತೀಚೆಗಂತೂ ಈ ಸ್ಪರ್ಧೆ ಹೆಚ್ಚಾಗಿದೆ. ಸ್ಪರ್ಧೆ ಹೆಚ್ಚಾದಷ್ಟು ವೀಕ್ಷಕ ಪ್ರಭುವಿಗೆ ಒಳ್ಳೆಯ ಸಿನಿಮಾಗಳು ಬೆರಳ ತುದಿಯಲ್ಲಿಯೇ ಸಿಗುವಂತಾಗಿದೆ. ಇದೀಗ ಮತ್ತೊಂದು ವಾರಾಂತ್ಯ ಬಂದಿದ್ದು, ಒಟಿಟಿಗಳಲ್ಲಿ ಹಲವು ಸಿನಿಮಾಗಳು, ವೆಬ್ ಸರಣಿಗಳು ಬಿಡುಗಡೆ ಆಗುತ್ತಿವೆ. ಇಲ್ಲಿದೆ ಪಟ್ಟಿ...

'ದಿ ಗ್ರೇ ಮ್ಯಾನ್' ನೆಟ್‌ಫ್ಲಿಕ್ಸ್‌ನಲ್ಲಿ
ಹಾಲಿವುಡ್ ಸಿನಿಮಾ ಆದರೂ ಈ ಸಿನಿಮಾ ಬಗ್ಗೆ ಭಾರತದಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಇತ್ತು. ತಮಿಳಿನ ಸ್ಟಾರ್ ನಟ ಧನುಶ್ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ಹಾಗಾಗಿಯೇ ಸಿನಿಮಾದ ಬಗ್ಗೆ ನಿರೀಕ್ಷೆ ದಪ್ಪಟ್ಟಾಗಿತ್ತು. ಸಿನಿಮಾವು ಜುಲೈ 22 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಿದೆ. 'ಅವೇಂಜರ್ಸ್' ಸಿನಿಮಾ ಖ್ಯಾತಿಯ ರೂಸ್ಸೊ ಸಹೋದರರು ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಕ್ರಿಸ್ ಇವಾನ್ಸ್, ರ್ಯಾನ್ ಗೋಸ್ಲಿಂಗ್ ನಟಿಸಿದ್ದಾರೆ.

ಹೊಸ ತೆಲುಗು ಸಿನಿಮಾಗಳು
ತೆಲುಗು ಸಿನಿಮಾ 'ಏಜೆಂಟ್ ಆನಂದ್ ಸಂತೋಶ್' ಆಹಾ ಒಟಿಟಿಯಲ್ಲಿ ಬಿಡುಗಡೆ ಆಗುತ್ತಿದೆ. ಈ ಸಿನಿಮಾ ನೇರವಾಗಿ ಆಹಾ ಒಟಿಟಿಯಲ್ಲಿ ತೆರೆಗೆ ಬಂದಿದೆ. ಇದೇ ವಾರ ತೆಲುಗಿನ ಎಫ್ 3 ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ತೆರೆಗೆ ಬಂದಿದೆ. ವೆಂಕಟೇಶ್, ಸಾಯಿ ಧರಮ್ ತೇಜ್ ನಟನೆಯ ಕಾಮಿಡಿ ಸಿನಿಮಾ ಎಫ್ 3 ಜುಲೈ 22 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ.

ಸೋನಿ ಲಿವ್‌ನಲ್ಲಿ ಎರಡು ಸಿನಿಮಾಗಳು
ಸೋನಿ ಲಿವ್ ಒಟಿಟಿಯಲ್ಲಿ ಮೀಮ್ ಬೋಯ್ಸ್ ವೆಬ್ ಸರಣಿ ಮತ್ತು ಡಾ ಅರೋರ ಸಿನಿಮಾ ಈ ವಾರ ಬಿಡುಗಡೆ ಆಗುತ್ತಿವೆ. ಹಾಸ್ಯ ಪ್ರಧಾನ ಕತೆಯುಳ್ಳ 'ಮೀಮ್ ಬಾಯ್ಸ್' ಮಿಶ್ರ ವಿಮರ್ಶೆಯನ್ನು ಪಡೆದುಕೊಂಡಿದೆ. ಇನ್ನು ಡಾ ಅರೋರಾ ಹಿಂದಿ ಸಿನಿಮಾ ಪುರುಷರ ಲೈಂಗಿಕ ವಾಂಚೆಗಳ ಬಗೆಗಿನ ಸಿನಿಮಾ ಆಗಿದೆ. ಈ ಸಿನಿಮಾ ಲೈಂಗಿಕ ರೋಗ ತಜ್ಞನೊಬ್ಬನ ಕತೆಯನ್ನು ಒಳಗೊಂಡಿದೆ.

ಜೀ 5ನಲ್ಲಿ ಕನ್ನಡ ಸಿನಿಮಾ
ಜೀ 5 ನಲ್ಲಿ ಕನ್ನಡ ಸಿನಿಮಾ ಒಂದು ಬಿಡುಗಡೆ ಆಗಿದೆ. 'ಆಪರೇಷನ್ ಅಲಮಲೇಲಮ್ಮ' ಸಿನಿಮಾ ಖ್ಯಾತಿಯ ರಿಷಿ ನಟಿಸಿರುವ 'ನೋಡಿ ಸ್ವಾಮಿ ಇವ್ನು ಇರೋದು ಹೀಗೆ' ಸಿನಿಮಾ ಜೀ 5ನಲ್ಲಿ ತೆರೆ ಕಂಡಿದೆ. ಹಾಸ್ಯ ಪ್ರಧಾನವಾದ ಈ ಸಿನಿಮಾದಲ್ಲಿ ರೆಬಾ ಮೋನಿಕಾ ನಾಯಕಿಯಾಗಿದ್ದಾರೆ. ಸಿನಿಮಾವನ್ನು ಜೇಕಬ್ ವರ್ಗಿಸ್ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಕೆಲವು ಒಳ್ಳೆಯ ಕನ್ನಡ ಸಿನಿಮಾಗಳನ್ನು ಜೇಕಬ್ ಕನ್ನಡಕ್ಕೆ ನೀಡಿದ್ದಾರೆ. ಈ ಸಿನಿಮಾದ ಜೊತೆಗೆ 'ಮೊಂಟಾನಾ ಸ್ಟೋರಿ' ಎಂಬ ಇಂಗ್ಲೀಷ್ ಸಿನಿಮಾ ಸಹ ಬಿಡುಗಡೆ ಆಗಿದೆ.

ಹಾಟ್‌ಸ್ಟಾರ್‌ನಲ್ಲಿ ಏನಿದೆ ಹೊಸತು
ಡಿಸ್ನಿ ಹಾಟ್ ಸ್ಟಾರ್‌ನಲ್ಲಿ ಪರಂಪರಾ 2 ವೆಬ್ ಸರಣಿ ಬಿಡುಗಡೆ ಆಗಿದೆ. ಕುಟುಂಬ ಗೌರವದ ವಿಷಯಗಳನ್ನಿಟ್ಟುಕೊಂಡು ಮಾಡಿದ್ದ ವೆಬ್ ಸರಣಿಯ ಮೊದಲ ಭಾಗ ಜನಪ್ರಿಯತೆ ಗಳಿಸಿದ ಬೆನ್ನಲ್ಲೆ ಇದೀಗ ವೆಬ್ ಸರಣಿಯ ಎರಡನೇ ಭಾಗ ಬಿಡುಗಡೆ ಆಗಿದೆ. 'ಘರ್‌ವಾಪ್ಸಿ' ಹೆಸರಿನ ಹೊಸಬರ ಹಿಂದಿ ಸಿನಿಮಾ ಸಹ ಬಿಡುಗಡೆ ಆಗಿದೆ.

ಅಮೆಜಾನ್ ಪ್ರೈಂನಲ್ಲಿ ಹೊಸದೇನು?
ಅಮೆಜಾನ್ ಪ್ರೈಂನಲ್ಲಿ 'ಗಾಸಿಪ್ ಗರ್ಲ್' ಹೆಸರಿನ ಥ್ರಿಲ್ಲರ್ ವೆಬ್ ಸರಣಿ ಬಿಡುಗಡೆ ಆಗಿದೆ. ರೊಮ್ಯಾಂಟಿಕ್ ಕತೆಯ ಜೊತೆಗೆ ಥ್ರಿಲ್ಲರ್ ಅಂಶಗಳನ್ನು ಈ ವೆಬ್ ಸರಣಿ ಒಳಗೊಂಡಿದೆ. ಜೊತೆಗೆ ಅಮೆಜಾನ್ ಪ್ರೈಂನಲ್ಲಿ 'ಎನಿಥಿಂಗ್ ಈಸ್ ಪಾಸಿಬಲ್' ಹೆಸರಿನ ಇಂಗ್ಲೀಷ್ ಸಿನಿಮಾ ಸಹ ಬಿಡುಗಡೆ ಆಗಿದೆ.


Click it and Unblock the Notifications











