ಓಟಿಟಿಗೆ ಬಂತು 'ಜುರಾಸಿಕ್ ವರ್ಲ್ಡ್ ರೀಬರ್ತ್' ಸಿನಿಮಾ; ಮಿಸ್ ಮಾಡ್ದೆ ಮಕ್ಕಳಿಗೆ ತೋರ್ಸಿ
ಹಾಲಿವುಡ್ ಡೈನೊಸಾರ್ ಸರಣಿ ಸಿನಿಮಾಗಳು ಭಾರತದಲ್ಲಿ ಕೂಡ ಸದ್ದು ಮಾಡುತ್ತವೆ. ದೈತ್ಯ ಜೀವಿಗಳ ಆರ್ಭಟದ ಸಿನಿಮಾ ನೋಡುಗರಿಗೆ ಅದ್ಭುತ ಅನುಭವ ನೀಡುತ್ತದೆ. ಮಕ್ಕಳಿಗಂತೂ ಇದು ಹಾಟ್ ಫೇವರಿಟ್. ಅದೇ ಕಾರಣಕ್ಕೆ ಆಗಾಗ್ಗೆ ಈ ಸೈನ್ಸ್ ಫಿಕ್ಷನ್ ಆಕ್ಷನ್ ಜಾನರ್ ಸಿನಿಮಾಗಳನ್ನು ತೆರೆಗೆ ತರಲಾಗುತ್ತದೆ. ಸರಣಿಯ ಲೇಟೆಸ್ಟ್ ಸಿನಿಮಾ 'ಜುರಾಸಿಕ್ ವರ್ಲ್ಡ್ ರೀಬರ್ತ್'.
ಗ್ಯಾರೆತ್ ಎಡ್ವರ್ಡ್ಸ್ ನಿರ್ದೇಶನದ ಈ ಸಿನಿಮಾ ತಿಂಗಳ ಹಿಂದೆ ತೆರೆಗೆ ಬಂದಿತ್ತು. ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಇದೀಗ ತಿಂಗಳಿಗೂ ಮುನ್ನ ಸಿನಿಮಾ ಓಟಿಟಿಗೆ ಬಂದಿದೆ. ಸ್ಕಾರ್ಲೆಟ್ ಜೋಹಾನ್ಸನ್, ಮಹೆರ್ಷಲಾ ಅಲಿ, ಜೊನಾಥನ್ ಬೈಲಿ, ರೂಪರ್ಟ್ ಫ್ರೆಂಡ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಯೂನಿವರ್ಸಲ್ ಪಿಕ್ಚರ್ಸ್ ಹಾಗೂ ಆಂಬ್ಲಿನ್ ಎಂಟರ್ಟೈನ್ಮೆಂಟ್ ಸಂಸ್ಥೆಗಳು ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡಿವೆ.

'ಜುರಾಸಿಕ್ ವರ್ಲ್ಡ್' ಸರಣಿಯ 7ನೇ ಸಿನಿಮಾ ಇದು. 'ಜುರಾಸಿಕ್ ವರ್ಲ್ಡ್ ಡೊಮಿನಿಯನ್' ಚಿತ್ರದ ಮುಂದುವರೆದ ಭಾಗ ಇದು. 2022ರಲ್ಲಿ ಈ ಸಿನಿಮಾ ಬಂದಿತ್ತು. ಆ ಚಿತ್ರದ ಕತೆ ಎಲ್ಲಿಗೆ ಮುಕ್ತಾಯವಾಗಿತ್ತೋ ಅಲ್ಲಿಂದ 3 ವರ್ಷಗಳ ಬಳಿಕ 'ಜುರಾಸಿಕ್ ವರ್ಲ್ಡ್: ರೀಬರ್ತ್' ಕತೆ ಶುರುವಾಗುತ್ತದೆ.
ಬಾಕ್ಸಾಫೀಸ್ ಕಲೆಕ್ಷನ್
ಭಾರತದಲ್ಲೇ 'ಜುರಾಸಿಕ್ ವರ್ಲ್ಡ್: ರೀಬರ್ತ್' ಸಿನಿಮಾ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಹುಬ್ಬೇರಿಸಿತ್ತು. ಮಿಷನ್ ಇಂಪಾಸಿಬಲ್ ಬಳಿಕ ಈ ವರ್ಷ ಭಾರತದಲ್ಲಿ ಹೆಚ್ಚು ಗಳಿಕೆ ಕಂಡ ಸಿನಿಮಾ ಎನಿಸಿಕೊಂಡಿದೆ. ವಿಶ್ವದಾದ್ಯಂತ 700 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸದ್ದು ಮಾಡ್ತಿದೆ.

ಚಿತ್ರದ ಕಥೆ
3 ಅಪರೂಪದ ಡೈನೋಸಾರ್‌ಗಳ ರಕ್ತದಿಂದ ತಯಾರಿಸಿದ ಔಷಧವು ಹೃದಯ ಸಮಸ್ಯೆ ಸೇರಿದಂತೆ ಮಾನವನ ಹಲವು ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಹೊಂದಿರುತ್ತೆ ಎಂದು ವಿಜ್ಞಾನಿಗಳು ಕಂಡುಕೊಳ್ಳುತ್ತಾರೆ. ಹಾಗಂತ ಸತ್ತಿರುವ ಡೈನೋಸಾರ್‌ಗಳಿಂದ ರಕ್ತ ಸಂಗ್ರಹಿಸಿದರೆ ಪ್ರಯೋಜನವಿಲ್ಲ. ಜೀವಂತ ಡೈನೋಸಾರ್‌ಗಳ ದೇಹದಲ್ಲಿ ಹರಿಯುವ ರಕ್ತವೇ ಆಗಬೇಕು ಎಂದು ತಿಳಿದುಕೊಳ್ಳುತ್ತಾರೆ. ಹೀಗೆ ಡೈನೊಸಾರ್‌ಗಳ ರಕ್ತ ಸಂಗ್ರಸುವ ಪ್ರಯತ್ನಕ್ಕೆ ಫಾರ್ಮಾಸ್ಯೂಟಿಕಲ್ಸ್ ಪ್ರತಿನಿಧಿ ಮಾರ್ಟಿನ್ (ರೂಪರ್ಟ್ ಫ್ರೆಂಡ್), ಸಾಹಸಿ ಜೋರಾ ಬೆನೆಟ್ (ಸ್ಕಾರ್ಲೆಟ್ ಜೋಹಾನ್ಸನ್) ಜೊತೆ ಒಪ್ಪಂದ ಮಾಡಿಕೊಳ್ಳುತ್ತಾರೆ. ಈಕ್ವೆಡಾರ್ ಭಾಗದಲ್ಲಿ ಮಾತ್ರ ಕಾಣಸಿಗುವ ಆ ಭಯಾನಕ ಡೈನೋಸಾರ್‌ಗಳನ್ನು ಗುರ್ತಿಸಿ ರಕ್ತ ಸಂಗ್ರಹಿಸಲು ಡಾಕ್ಟರ್ ಹೆನ್ರಿ(ಜೊನಾಥನ್ ಬೈಲಿ), ಸಾಹಸಿಗ ಡಂಕನ್(ಮಹೆರ್ಷಲಾ ಅಲಿ) ಸೇರಿ ಒಂದು ತಂಡವಾಗಿ ಹೊರಡುತ್ತಾರೆ. ಮುಂದೆ ತಮ್ಮ ಪ್ರಯತ್ನದಲ್ಲಿ ಗೆಲ್ತಾರಾ? ಇಲ್ವಾ? ಎನ್ನುವುದು ಇನ್ನುಳಿದ ಕಥೆ.
ಓಟಿಟಿ ಸ್ಟ್ರೀಮಿಂಗ್
ಸಿನಿಮಾ ತೆರೆಗೆ ಬಂದ ತಿಂಗಳಿಗೆ ಅಮೇಜಾನ್ ಪ್ರೈಂ ವೀಡಿಯೋಗೆ ಬಂದಿದೆ. ಆದರೆ ಸದ್ಯಕ್ಕೆ ವಿದೇಶಗಳಲ್ಲಿರುವ ಪ್ರೈಂ ಚಂದಾದಾರರು ಮಾತ್ರ ಹಣ ಪಾವತಿಸಿ ಸಿನಿಮಾ ವೀಕ್ಷಿಸಬಹುದಾಗಿದೆ. ಈ ವೀಕೆಂಡ್ ವೇಳೆಗೆ ಭಾರತದಲ್ಲಿ ಕೂಡ ಸಿನಿಮಾ ನೋಡಲು ಸಿಗುವ ಸಾಧ್ಯತೆ ದಟ್ಟವಾಗಿದೆ. ಆಪಿಲ್ ಪ್ಲಸ್ ಟಿವಿ ಓಟಿಟಿ ವೇದಿಕೆಯಲ್ಲಿ ಕೂಡ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ.
ಮಕ್ಕಳಿಗೆ ತೋರಿಸಿ
ಡೈನೋಸಾರ್‌ಗಳ ಸಿನಿಮಾಗಳು ಮಕ್ಕಳಿಗೆ ಬಹಳ ಇಷ್ಟವಾಗುತ್ತದೆ. 'ಜುರಾಸಿಕ್ ವರ್ಲ್ಡ್: ರೀಬರ್ತ್' ಸಿನಿಮಾ ದೊಡ್ಡವರಿಗೆ ಅಷ್ಟೇನು ಥ್ರಿಲ್ ಕೊಡಲ್ಲ. ಮಕ್ಕಳು ಎಂಜಾಯ್ ಮಾಡ್ತಾರೆ. ಓಟಿಟಿಯಲ್ಲಿ ವೀಕ್ಷಣೆಗೆ ಸಿಗುತ್ತಿದ್ದಂತೆ ತೋರಿಸಿ.


Click it and Unblock the Notifications











