ಸದ್ದಿಲ್ಲದೇ ಓಟಿಟಿಗೆ ಬಂತು ಬೆಚ್ಚಿ ಬೀಳಿಸುವ ಹಾರರ್ ಸಿನಿಮಾ, ಮಿಸ್ ಮಾಡ್ಬೇಡಿ
ಪ್ರತಿ ವಾರ ಒಂದಲ್ಲ ಬದಲಿಗೆ ಕಡಿಮೆ ಅಂದರೂ ಅರ್ಧ ಡಜನ್ ಚಿತ್ರಗಳು ಓಟಿಟಿಗೆ ಬರುತ್ತವೆ. ಕೇವಲ ಭಾರತೀಯ ಸಿನಿಮಾ ಮಾತ್ರ ಅಲ್ಲ. ವಿಶ್ವದ ಬೇರೆ ಬೇರೆ ಭಾಷೆಯ ಚಿತ್ರಗಳು ಕೂಡ ಓಟಿಟಿಗೆ ಪ್ರತಿ ವಾರ ದಾಂಗುಡಿ ಇಡುತ್ತಾವೆ. ಹೀಗಾಗಿ ಯಾವ ಚಿತ್ರ ಮೊದಲು ನೋಡಬೇಕು..? ಯಾವ ಓಟಿಟಿ ಪ್ಲಾಟ್ಫಾರ್ಮ್ ನಲ್ಲಿ ನೋಡಬೇಕು..? ಎನ್ನುವ ಗೊಂದಲ ಹಲವರಲ್ಲಿರುತ್ತೆ.
ಈ ವಾರ ಕೂಡ ಇದೇ ಗೊಂದಲ ಮುಂದುವರೆಯಲಿದ್ದು ಈ ವಾರ ಕೂಡ ಹಲವು ಚಿತ್ರಗಳು ಓಟಿಟಿಗೆ ಲಗ್ಗೆ ಇಡುತ್ತಿವೆ. ಆ ಪೈಕಿ ಬಾಲಿವುಡ್‌ನ ಕೃಷ್ಣ ಸುಂದರಿ ಕಾಜೋಲ್ ಅಭಿನಯದ ''ಮಾ''ಚಿತ್ರ ಕೂಡ ಒಂದು.

ಹೌದು, ಪುರುಷ ಪ್ರಧಾನ ಚಿತ್ರರಂಗದಲ್ಲಿ ಮಹಿಳಾ ಪ್ರಧಾನ ಚಿತ್ರಗಳು ಬರುವುದು ತುಂಬಾನೇ ಕಡಿಮೆ. ನಾಯಕಿಯ ಸುತ್ತ ಕಥೆ ಸುತ್ತಿದರೆ ಪ್ರೇಕ್ಷಕರ ತಲೆ ಸುತ್ತಿ ಬರುತ್ತೆ ಎನ್ನುವ ಹಲವರ ನಂಬಿಕೆಯೇ ಇದಕ್ಕೆ ಮೂಲ ಕಾರಣ. ಹೀಗಾಗಿಯೇ ಹಲವರು ನಾಯಕಿಯರು ಅಂದರೆ ಕೇವಲ ಮರ ಸುತ್ತಲು, ಚಿತ್ರದ ಗ್ಲ್ಯಾಮರ್ ಹೆಚ್ಚಿಸಲು ಅಷ್ಟೇ ಲಾಯಕ್ಕು ಎಂದುಕೊಂಡಿದ್ದಾರೆ.
ಆದರೆ.. ಇವರ ಈ ಮಾತುಗಳನ್ನು. ನಂಬಿಕೆಯನ್ನ .. ಅವಕಾಶ ಸಿಕ್ಕಾಗ ಹಲವರು ಇಲ್ಲಿಯವರೆಗೆ ಸುಳ್ಳಾಗಿಸಿದ್ದಾರೆ. ಮಹಿಳಾ ಪ್ರಧಾನ ಚಿತ್ರಗಳಲ್ಲಿ ಮಿಂಚಿದ್ದಾರೆ. ಆ ಪೈಕಿ ಕಾಜೋಲ್ ಕೂಡ ಒಬ್ಬರು.
ಅಜಯ್ ದೇವಗನ್ ಜೊತೆ ಮದುವೆಯಾದ ನಂತರ ಕೆಲ ವರ್ಷ ಚಿತ್ರರಂಗದಿಂದ ದೂರ ಇದ್ದ ಕಾಜೋಲ್ ತಮ್ಮ ಎರಡನೇ ಇನಿಂಗ್ಸ್‌ನಲ್ಲಿ ಮಹಿಳಾ ಕೇಂದ್ರಿತ ಚಿತ್ರಗಳನ್ನು ಮಾಡುತ್ತಿದ್ದಾರೆ. ಪಾತ್ರಕ್ಕೆ ಒತ್ತು ಇರುವ ಚಿತ್ರಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
ಹೀಗೆ ಕಾಜೋಲ್ ಆಯ್ಕೆ ಮಾಡಿಕೊಂಡಿದ್ದ ಕಳೆದ ಜೂನ್‌ನಲ್ಲಿ ಚಿತ್ರಮಂದಿರದಲ್ಲಿ ತೆರೆಗೆ ಬಂದಿದ್ದ ''ಮಾ'' ಚಿತ್ರ ಸದ್ಯ ಓಟಿಟಿ ಅಂಗಳಕ್ಕೆ ಬರುತ್ತಿದೆ.

ಭಯ... ರಕ್ತ ಮತ್ತು ದ್ರೋಹದಲ್ಲಿ ಬೇರೂರಿವ ರಾಕ್ಷಸನ ಶಾಪದಿಂದ ಮುಕ್ತಿ ಪಡೆಯುವ ಕಥಾ ಹಂದರ ಹೊಂದಿರುವ ಈ ಹಾರರ್ ಚಿತ್ರವನ್ನು ವಿಶಾಲ್ ಫ್ಯೂರಿಯಾ ನಿರ್ದೇಶನ ಮಾಡಿದ್ದಾರೆ. ಜಿಯೋ ಸ್ಟುಡಿಯೋಸ್ ಮತ್ತು ಕುಮಾರ್ ಮಂಗತ್ ಜೊತೆ ಕಾಜೋಲ್ ಪತಿ ಅಜಯ್ ದೇವಗನ್ ಕೂಡ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಕಾಜೋಲ್ ಮಗಳ ಪಾತ್ರದಲ್ಲಿ ಖೇರಿನ್ ಶರ್ಮಾ ಅಭಿನಯಿಸಿದ್ದು ರಾಕ್ಷಸನ ಪಾತ್ರವನ್ನು ರೋನಿತ್ ರಾಯ್ ನಿರ್ವಹಿಸಿದ್ದಾರೆ. ಪುಷ್ಕರ್ ಸಿಂಗ್ ಛಾಯಾಗ್ರಹಣ ಮತ್ತು ಹರ್ಷ್ ಉಪಾಧ್ಯಾಯ.. ರಾಕಿ ಖನ್ನಾ.. ಶಿವ್ ಮಲ್ಹೋತ್ರಾ.. ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.
ಇನ್ನೂ ಇದೇ ಚಿತ್ರದ ಪ್ರಚಾರದ ಸಮಯದಲ್ಲಿ ಕಾಜೋಲ್ ಹೈದರಾಬಾದ್‌ನಲ್ಲಿರುವ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನನಗೆ ತುಂಬಾ ಭಯವಾಗುತ್ತೆ ಒಳ ಹೊದರೆ ಹೊರ ಬಂದರೆ ಸಾಕು ಅನ್ಸುತ್ತೆ ಎಂದು ಹೇಳಿದ್ದರು. ಅಲ್ಲಿ ದೆವ್ವ ಇದೆ ಎಂಬರ್ಥದಲ್ಲಿ ಮಾತನಾಡಿದ್ದರು. ಈ ಮೂಲಕ ನಗೆಪಾಟಲಿಗೀಡಾಗಿದ್ದ ಕಾಜೋಲ್ ಟ್ರೋಲಿಗರ ಬಾಯಿಗೆ ಕೂಡ ಆಹಾರವಾಗಿದ್ದರು.
ಆ ನಂತರ ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ್ದ ಕಾಜೋಲ್ , ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲಿ ನಾನು ಹಲವು ಚಿತ್ರಗಳ ಚಿತ್ರೀಕರಣದಲ್ಲಿ ಭಾಗಿಯಾಗಿದ್ದೇನೆ. ಹಲವು ಬಾರಿ ಅಲ್ಲಿಯೇ ಉಳಿದುಕೊಂಡಿದ್ದೇನೆ. ಚಿತ್ರಗಳ ನಿರ್ಮಾಣಕ್ಕೆ ಹೇಳಿ ಮಾಡಿಸಿದಂತಹ ಜಾಗ ಅದು. ಕುಟುಂಬಗಳಿಗೆ ಮತ್ತು ಮಕ್ಕಳಿಗೆ ಸುರಕ್ಷಿತವಾದ ಜಾಗ ಎಂದು ಹೇಳಿದ್ದರು.
ಅಂದ್ಹಾಗೇ ''ಮಾ'' ಚಿತ್ರ ನಾಳೆಯಿಂದ (ಆಗಸ್ಟ್ 22) ''ನೆಟ್‌ಫ್ಲಿಕ್ಸ್'' ನಲ್ಲಿ ಪ್ರಸಾರವಾಗಲಿದೆ. ಈ ಕುರಿತು ಪ್ರಸಾರಕ್ಕೆ ಕೆಲವೇ ಗಂಟೆಗಳು ಮುನ್ನ ''ನೆಟ್‌ಫ್ಲಿಕ್ಸ್'' ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದು ಬಿಡುಗಡೆಯ ಮಾಹಿತಿಯನ್ನು ಹಂಚಿಕೊಂಡಿದೆ. ಆಸಕ್ತರು ''ಮಾ'' ಚಿತ್ರವನ್ನು ಮನೆಯಲ್ಲಿಯೇ ಕುಳಿತು ನೋಡಬಹುದು.


Click it and Unblock the Notifications











