Hostel Hudugaru OTT: ಓಟಿಟಿಯಲ್ಲಿ ಕ್ವಾಟ್ಲೆ ಕೊಟ್ಟು ಹಾವಳಿ ಇಡೋಕೆ ಬಂದೇಬಿಟ್ರು ತುಂಗಾ ಹಾಸ್ಟೆಲ್ ಬಾಯ್ಸ್
ಥಿಯೇಟರ್‌ಗಳಲ್ಲಿ ಹೊಟ್ಟೆ ಹುಣ್ಣಾಗುವಂತೆ ನಗಿಸಿದ ಹಾಸ್ಟೆಲ್ ಹುಡುಗರು ಓಟಿಟಿಗೆ ಎಂಟ್ರಿ ಕೊಡುತ್ತಿದ್ದಾರೆ. ಜುಲೈ 21ಕ್ಕೆ ರಿಲೀಸ್ ಆಗಿದ್ದ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಖತ್ ಸದ್ದು ಮಾಡಿತ್ತು. ಹೊಸ ಹುಡುಗರ ಪ್ರಯತ್ನಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಕನ್ನಡ ಬಳಿಕ ತೆಲುಗಿಗೂ ಡಬ್ ಆಗಿ ಸಿನಿಮಾ ಆಂಧ್ರ, ತೆಲಂಗಾಣ ಹಾಗೂ ಓವರ್‌ಸೀಸ್‌ನಲ್ಲಿ ಪ್ರೇಕ್ಷಕರನ್ನು ರಂಜಿಸಿತ್ತು.
ಬಹುತೇಕ ಹೊಸ ಪ್ರತಿಭೆಗಳೇ ಸೇರಿ ಮಾಡಿದ್ದ ಚಿತ್ರಕ್ಕೆ ಸ್ಯಾಂಡಲ್‌ವುಡ್ ತಾರೆಯರ ಬೆಂಬಲ ಸಿಕ್ಕಿತ್ತು. ಪುನೀತ್ ರಾಜ್‌ಕುಮಾರ್ ಆರಂಭದಿಂದಲೂ ಚಿತ್ರತಂಡದ ಬೆಂಬಲಕ್ಕೆ ನಿಂತಿದ್ದರು. ಚಿತ್ರದ ಟೈಟಲ್ ರಿವೀಲ್ ಮಾಡಿದ್ದರು. ಇನ್ನು ರಕ್ಷಿತ್ ಶೆಟ್ಟಿ ತಮ್ಮದೇ ಪರಂವಃ ಬ್ಯಾನರ್ ಮೂಲಕ ಸಿನಿಮಾ ಅರ್ಪಿಸಿದ್ದರು. ರಿಷಬ್ ಶೆಟ್ಟಿ, ಪವನ್ ಕುಮಾರ್, ದಿಗಂತ್, ರಮ್ಯಾ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಕೂಡ ಸಿನಿಮಾ ನೋಡಿ ಚಿತ್ರತಂಡದ ಬೆನ್ನು ತಟ್ಟಿದ್ದರು. ಕನ್ನಡದಲ್ಲಿ ಸಿನಿಮಾ ಅಂದಾಜು 15 ರಿಂದ 20 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು. ನಿರ್ದೇಶಕ ನಿತಿನ್ ಕೃಷ್ಣಮೂರ್ತಿ ಚೊಚ್ಚಲ ಪ್ರಯತ್ನದಲ್ಲೇ ಕಮಾಲ್ ಮಾಡಿದ್ದರು. ಸಣ್ಣ ಪಾತ್ರದಲ್ಲೂ ನಟಿಸಿ ಗಮನ ಸೆಳೆದರು. ವರುಣ್ ಸ್ಟುಡಿಯೋಸ್ ಹಾಗೂ ಗುಲ್ ಮೊಹರ್ ಫಿಲ್ಮ್ಸ್ ಬ್ಯಾನರ್‌ನಲ್ಲಿ ಪ್ರಜ್ವಲ್, ವರುಣ್, ನಿತಿನ್ ಕೃಷ್ಣಮೂರ್ತಿ ಹಾಗೂ ಅರವಿಂದ್ ಕಶ್ಯಪ್ ಈ ಸಿನಿಮಾ ನಿರ್ಮಿಸಿದ್ದರು.
ತುಂಗಾ ಬಾಯ್ಸ್ ಹಾಸ್ಟೆಲ್‌ನಲ್ಲಿ ಬರೀ ಒಂದು ರಾತ್ರಿಯಲ್ಲಿ ನಡೆಯುವ ಕತೆಯನ್ನು ಚಿತ್ರದಲ್ಲಿ ತೆರೆಗೆ ತರಲಾಗಿತ್ತು. ಪ್ರಜ್ವಲ್, ಮಂಜುನಾಥ್ ನಾಯಕ್, ಚೇತನ್ ದುರ್ಗ ಚಿತ್ರದ ತಾರಾಗಣದಲ್ಲಿದ್ದಾರೆ. ಹಾಸ್ಟೆಲ್‌ನ ಕೂಳೆ ಹುಡುಗರ ಕ್ವಾಟ್ಲೆ ಪ್ರೇಕ್ಷಕರಿಗೆ ಸಖತ್ ಮಜಾ ಕೊಟ್ಟಿತ್ತು. ಅರವಿಂದ್ ಕಶ್ಯಪ್ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಮ್ಯೂಸಿಕ್ ಚಿತ್ರಕ್ಕೆ ಪ್ಲಸ್ ಆಗಿತ್ತು.

ಅನ್ನಪೂರ್ಣ ಸ್ಟುಡಿಯೋಸ್ ಹಾಗೂ ಚಾಯ್ ಬಿಸ್ಕತ್ ಬ್ಯಾನರ್‌ನಲ್ಲಿ ಸಿನಿಮಾ ತೆಲುಗಿಗೆ ಡಬ್ ಆಗಿ ಆಗಸ್ಟ್ 26ರಂದು ರಿಲೀಸ್ ಆಗಿತ್ತು. ಅಕ್ಕಿನೇನಿ ನಾಗಚೈತನ್ಯ ಸಹ ಸಿನಿಮಾ ನೋಡಿ ಕೊಂಡಾಡಿದ್ದರು. ರಮ್ಯಾ ಬದಲು ರಶ್ಮಿ ಗೌತಮ್, ದಿಗಂತ್ ಬದಲು ತರುಣ್ ಭಾಸ್ಕರ್ ತೆಲುಗು ವರ್ಷನ್‌ನಲ್ಲಿ ಕಾಣಿಸಿಕೊಂಡಿದ್ದರು. ತೆಲುಗು ಪ್ರೇಕ್ಷಕರಿಗೂ ಕೂಡ ಸಿನಿಮಾ ಇಷ್ಟವಾಗಿತ್ತು.
ಥಿಯೇಟರ್‌ಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ ಹಾಸ್ಟೆಲ್ ಹುಡುಗರು ಸಿನಿಮಾ ಏಕಕಾಲಕ್ಕೆ ಕನ್ನಟ ಹಾಗೂ ತೆಲುಗಿನಲ್ಲಿ ಡಿಜಿಟಲ್ ಸ್ಟ್ರೀಮಿಂಗ್ ಆಗುತ್ತಿದೆ. ಈ ಶುಕ್ರವಾರ(ಸೆಪ್ಟೆಂಬರ್ 15)ವೇ ಜೀ 5ನಲ್ಲಿ ರಿಲೀಸ್ ಆಗುತ್ತಿದೆ. ಈಗಾಗಲೇ ಥಿಯೇಟರ್‌ಗಳಲ್ಲಿ ಹಾಸ್ಟೆಲ್ ಹುಡುಗರ ಹಾವಳಿ ನೋಡಿದವರು, ನೋಡದೇ ಇರುವವರು ಸಿನಿಮಾ ನೋಡಿ ಎಂಜಾಯ್ ಮಾಡಬಹುದು.
ಹಾಸ್ಟೆಲ್ ಹುಡುಗರ ಕತೆ ಸಿಂಪಲ್. ಆದರೆ ಅದನ್ನು ಪರಿಣಾಮಕಾರಿಯಾಗಿ ಅಷ್ಟೇ ಮಜವಾಗಿ ಹೆಣೆಯಲಾಗಿದೆ. ತುಂಬಾ ಬಾಯ್ಸ್ ಹಾಸ್ಟೆಲ್. ಅಲ್ಲಿ ಹುಡುಗರ ತರಲೆ, ಕ್ಲಾಟ್ಲೆ ಹೆಚ್ಚು. ಹಾಸ್ಟೆಲ್ ಅಂದಮೇಲೆ ಸ್ಟ್ರಿಕ್ಟ್ ವಾರ್ಡನ್ ಕೂಡ ಇರಲೇಬೇಕಲ್ವಾ? ರಮೇಶ್ ಕುಮಾರ್ ಎನ್ನುವ ಒಬ್ಬ ವಾರ್ಡನ್, ಸಿನಿಮಾ ನಿರ್ದೇಶಕನಾಗುವ ಕನಸು ಹೊತ್ತ ಅಜಿತ್ ಒಂದರ್ಥದಲ್ಲಿ ಈ ಚಿತ್ರದ ಹೀರೊ. ಆತ ಮಾಡಿಕೊಂಡ ಕತೆ, ಅದಕ್ಕೆ ದೃಶ್ಯರೂಪ ಕೊಡಲು ಆತ ನಿಜವಾಗಿ ಸೃಷ್ಟಿಸಲು ಪ್ರಯತ್ನಿಸುವ ಸನ್ನಿವೇಶಗಳೇ ಸಿನಿಮಾ ಕತೆ. ಆ ಪ್ರಯತ್ನ ಮುಂದೆ ಹಾಸ್ಟೆಲ್ ಹುಡುಗರನ್ನು ಎಲ್ಲೆಲ್ಲಿಗೆ ಕರೆದುಕೊಂಡು ಹೋಗುತ್ತದೆ ಅನ್ನೋದನ್ನು ಸಿನಿಮಾದಲ್ಲೇ ನೋಡಬೇಕು.
ವಾರ್ಡನ್ ಪಾತ್ರದಲ್ಲಿ ಮಂಜುನಾಥ್ ನಾಯಕ್ ನಟನೆಗೆ ಹೆಚ್ಚಿನ ಅಂಕ ಸಿಕ್ಕಿತ್ತು. ಸಂಭಾಷಣೆ ಪ್ರೇಕ್ಷಕರನ್ನು ಬಿದ್ದು ಬಿದ್ದು ನಗುವಂತೆ ಮಾಡಿತ್ತು. ಒನ್‌ಲೈನರ್‌ಗಳು ಕ್ಲಿಕ್ ಆಗಿತ್ತು. ಚಿತ್ರ 50 ದಿನ ಪೂರೈಸಿದ ಸಂಭ್ರಮವನ್ನು ಇತ್ತೀಚೆಗೆ ಥಿಯೇಟರ್ ಮುಂದೆ ತಂಡ ಆಚರಿಸಿತ್ತು. ಸಾಕಷ್ಟು ಜನ ಸಿನಿಮಾ ಓಟಿಟಿಗೆ ಬರುವುದನ್ನು ಕಾಯುತ್ತಿದ್ದರು. ಈ ವಾರವೇ ಸಿನಿಮಾ ಜೀ 5ಗೆ ಬರ್ತಿದೆ.


Click it and Unblock the Notifications











