War- 2 OTT: ಕೊನೆಗೂ ಓಟಿಟಿಗೆ ಬಂದೇ ಬಿಡ್ತು ಹೃತಿಕ್- ತಾರಕ್ ಆಕ್ಷನ್ ಥ್ರಿಲ್ಲರ್ 'ವಾರ್- 2'
ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ಬಿಡುಗಡೆಯಾಗಿದ್ದ 'ವಾರ್- 2' ಸಿನಿಮಾ ಇದೀಗ ಓಟಿಟಿಗೆ ಬರ್ತಿದೆ. ಅಧಿಕೃತವಾಗಿ ಈ ಬಗ್ಗೆ ಮಾಹಿತಿ ಸಿಕ್ಕಿದೆ. ಅಯಾನ್ ಮುಖರ್ಜಿ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ತಾರಕ್ ನಟಿಸಿದ್ದು ಆಂಧ್ರ, ತೆಲಂಗಾಣದಲ್ಲಿ ಚಿತ್ರವನ್ನು ತಕ್ಕ ಮಟ್ಟಿಗೆ ಗೆಲ್ಲಿಸಿತ್ತು. ಆದರೂ ನಷ್ಟ ತಪ್ಪಲಿಲ್ಲ.
ಯಶ್ ರಾಜ್ ಫಿಲ್ಮ್ಸ್ ಸ್ಪೈ ಥ್ರಿಲ್ಲರ್ ಸಿನಿಮ್ಯಾಟಿಕ್ ಯೂನಿವರ್ಸ್‌ನಲ್ಲಿ ಬಂದಿದ್ದ 'ವಾರ್' ಸಿನಿಮಾ ಗೆದ್ದಿತ್ತು. ಹಾಗಾಗಿ ಸೀಕ್ವೆಲ್ ಮಾಡುವ ಪ್ರಯತ್ನ ನಡೀತು. ಈ ಬಾರಿ ಹೃತಿಕ್ ಜೊತೆ ಬಾಲಿವುಡ್ ನಟನ ಬದಲು ತೆಲುಗು ನಟ ಜ್ಯೂ. ಎನ್‌ಟಿಆರ್ ಕೈ ಜೋಡಿಸಿದ್ದರು. ಕಿಯಾರಾ ಅದ್ವಾನಿ ನಾಯಕಿಯಾಗಿ ಮಿಂಚಿದ್ದರು. ಅಂದಾಜು 300-400 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿತ್ತು.

ಆಗಸ್ಟ್ 14ಕ್ಕೆ 'ವಾರ್- 2' ಸಿನಿಮಾ ತೆರೆಗಪ್ಪಳಿಸಿತ್ತು. ಅದೇ ದಿನ ತಮಿಳಿನ 'ಕೂಲಿ' ಸಿನಿಮಾ ಪ್ರೇಕ್ಷಕರ ಮುಂದೆ ಬಂದಿತ್ತು. ಎರಡೂ ಸಿನಿಮಾಗಳ ನಡುವೆ ಬಾಕ್ಸಾಫೀಸ್ ಕ್ಲ್ಯಾಶ್ ಏರ್ಪಟ್ಟಿತ್ತು. ಆದರೆ ಎರಡೂ ಚಿತ್ರಗಳಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾ 600 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಹೇಳಲಾಗಿತ್ತು. ಆದರೆ 'ವಾರ್- 2' ಚಿತ್ರ ಗಳಿಸಿದ್ದು 300 ಕೋಟಿ ರೂ. ಮಾತ್ರ.
ಬಹುಕೋಟಿ ವೆಚ್ಚದಲ್ಲಿ ಯಶ್ ರಾಜ್ ಫಿಲ್ಮ್ಸ್ ಸಂಸ್ತೆ ಚಿತ್ರವನ್ನು ನಿರ್ಮಾಣ ಮಾಡಿತ್ತು. ಪ್ರೀತಮ್ ಸಂಗೀತದಲ್ಲಿ 2 ಹಾಡು ಸದ್ದು ಮಾಡಿತ್ತು. 'ಜನಾಬ್-ಎ-ಆಲಿ' ಹಾಡಿಗೆ ಹೃತಿಕ್ ಹಾಗೂ ತಾರಕ್ ಪೈಪೋಟಿಗೆ ಬಿದ್ದು ಹೆಜ್ಜೆ ಹಾಕಿದ್ದರು. ಸಾಂಗ್ ಹಿಟ್ ಆಗಿತ್ತು. ಆದರೂ ಸಿನಿಮಾ ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿತ್ತು. ಆಂಧ್ರ, ತೆಲಂಗಾಣದಲ್ಲಿ ಸಿನಿಮಾ ಬಿಡುಗಡೆ ಮಾಡಿದವರು ಕೈಸುಟ್ಟುಕೊಂಡಿದ್ದರು.
ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾ 25ಕ್ಕೆ ದಿನಕ್ಕೆ ಓಟಿಟಿಗೆ ಬಂದಿತ್ತು. ಆದರೆ 'ವಾರ್- 2' ಇಂದು(ಅಕ್ಟೋಬರ್ 8) ಮಧ್ಯರಾತ್ರಿ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ಹಿಂದಿ ಜೊತೆಗೆ ತೆಲುಗು ಹಾಗೂ ತಮಿಳು ವರ್ಷನ್ ಕೂಡ ಓಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ.
RAW ಏಜೆಂಟ್ ಕಬೀರ್ (ಹೃತಿಕ್ ರೋಷನ್) ಕಾಂಟ್ರಾಕ್ಟ್ ಕಿಲ್ಲರ್ ಆಗಿ ಪ್ರತಿಷ್ಠಿತ ವ್ಯಕ್ತಿಗಳನ್ನು ಟಾರ್ಗೆಟ್ ಮಾಡುತ್ತಿರುತ್ತಾನೆ. ಮತ್ತೊಂದು ಕಡೆ ಕೆಲ ಶಕ್ತಿಶಾಲಿ ರಾಷ್ಟ್ರಗಳು ಸೇರಿ 'ಕಾಳಿ' ಎಂಬ ಕಾರ್ಟೆಲ್ ಅನ್ನು ರಚಿಸುತ್ತವೆ. ಇದಕ್ಕೆ ಕಬೀರ್ ಸರಿಯಾದ ವ್ಯಕ್ತಿ ಎಂದು 'ಕಾಳಿ' ಆತನಿಗೆ ಭಾರತ ಮತ್ತು RAW ಎರಡನ್ನೂ ಮಟ್ಟ ಹಾಕುವ ಜವಾಬ್ದಾರಿ ವಹಿಸುತ್ತದೆ. ಕಬೀರ್‌ಗೆ ಮತ್ತೊಬ್ಬ RAW ಏಜೆಂಟ್ ವಿಕ್ರಮ್ (ಜೂನಿಯರ್ NTR) ಅವನನ್ನು ಸೆಡ್ಡು ಹೊಡೆಯುತ್ತಾನೆ. ಈ ಹಾದಿಯಲ್ಲಿ ಗೆದ್ದವರು ಯಾರು? ಎನ್ನುವುದು 'ವಾರ್- 2' ಚಿತ್ರದ ಇನ್ನುಳಿದ ಕಥೆ.
ವೈಆರ್‌ಎಫ್ ಸ್ಪೈ ಸರಣಿ ಸಿನಿಮಾ ಆಗಿದ್ದರೂ 'ವಾರ್- 2' ಪ್ರೇಕ್ಷಕರನ್ನು ರಂಜಿಸುವಲ್ಲಿ ಸೋತಿತ್ತು. ರೊಟೀನ್ ಸ್ಟೋರಿ, ಸ್ಕ್ರೀನ್‌ಪ್ಲೇ, ಟ್ರೀಟ್‌ಮೆಂಟ್ ಪ್ರೇಕ್ಷಕರಿಗೆ ಮಜಾ ಕೊಡಲಿಲ್ಲ. ಹೃತಿಕ್-ತಾರಕ್ ಎಂಟ್ರಿ ಸೀನ್ಸ್ ಸೂಪರ್ ಅನ್ನಿಸಿದರೂ ಇನ್ನುಳಿದಂತೆ ಸೀದಾ ಸಾದಾ ಸಿನಿಮಾ ಎನಿಸಿಕೊಂಡಿತ್ತು. ಸಿಜಿ ಕೂಡ ಕೈ ಕೊಟ್ಟಿತ್ತು. ಒಟ್ಟಾರೆ ಸಿನಿಮಾ ಓಕೆ ಓಕೆ ಎನಿಸಿಕೊಂಡಿತ್ತು. ವಾಹ್ ಮೊಮೆಂಟ್ಸ್ ಇಲ್ಲದೇ ದೊಡ್ಡದಾಗಿ ಸದ್ದು ಮಾಡಲಿಲ್ಲ.
ಸಾಕಷ್ಟು ಜನ ಓಟಿಟಿಯಲ್ಲಿ 'ವಾರ್- 2' ಸಿನಿಮಾ ನೋಡಲು ಕಾಯುತ್ತಿದ್ದಾರೆ. ಮಧ್ಯರಾತ್ರಿಯಿಂದಲೇ ಆ ಅವಕಾಶ ಸಿಗುತ್ತಿದೆ. ಹೃತಿಕ್, ತಾರಕ್, ಕಿಯಾರಾ ಜೊತೆಗೆ ಅಶುತೋಷ್ ರಾಣಾ, ಅನಿಲ್ ಕಪೂರ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ.


Click it and Unblock the Notifications











