IC 814 ವೆಬ್ ಸೀರಿಸ್ ವಿವಾದ; ನೆಟ್‌ಫ್ಲಿಕ್ಸ್‌ಗೆ ಕೇಂದ್ರದಿಂದ ಸಮನ್ಸ್ ಜಾರಿ
ನೈಜ ಘಟನೆಗಳನ್ನು ಆಧರಿಸಿ ಸಿನಿಮಾ, ವೆಬ್ ಸೀರಿಸ್ ನಿರ್ಮಾಣ ಹೆಚ್ಚಾಗುತ್ತಿದೆ. 2 ಗಂಟೆ ಸಿನಿಮಾದಲ್ಲಿ ಹೇಳಲು ಸಾಧ್ಯವಾಗದೇ ಇರುವುದನ್ನು, ಕಮರ್ಷಿಯಲ್ ಅಂಶಗಳು ಇಲ್ಲದೇ ನಡೆದ ಘಟನೆಗಳನ್ನು ಯತಾವತ್ತಾಗಿ ಕಣ್ಣಿಗೆ ಕಟ್ಟಿದ್ದಂತೆ ಹೇಳಲು ವೆಬ್ ಸೀರಿಸ್ ಒಳ್ಳೆ ಮಾಧ್ಯಮ. ಆದರೆ ಇಂತಹ ನೈಜ ಘಟನೆ ಆಧರಿತ ಸಿನಿಮಾ, ವೆಬ್ ಸೀರಿಸ್ ವಿವಾದಗಳಿಗೆ ಕಾರಣವಾಗುತ್ತಿದೆ.
ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ 'IC 814: ದಿ ಕಂದಹಾರ್ ಹೈಜಾಕ್' ವೆಬ್ ಸೀರಿಸ್ ವಿವಾದಕ್ಕೆ ಕಾರಣವಾಗಿದೆ. ಸಾಕಷ್ಟು ಜನ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಆಗಸ್ಟ್ 29ರಂದು ಇದು ಸ್ಟ್ರೀಮಿಂಗ್ ಆರಂಭಿಸಿತ್ತು. ವಿವಾದ ಹೆಚ್ಚಾಗುತ್ತಿದ್ದಂತೆ ಇದೀಗ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ನೆಟ್‌ಫ್ಲಿಕ್ಸ್ ಕಂಟೆಂಟ್ ಹೆಡ್‌ಗೆ ಸಮನ್ಸ್ ನೀಡಿದೆ.

ಡಿಸೆಂಬರ್ 24, 1999 ರಂದು ನಡೆದ ಭಯಾನಕ ನಡೆದ ಉಗ್ರರ ಭಾರೀ ಹೈಜಾಕ್ ಘಟನೆಯನ್ನು ಆಧರಿಸಿ 'IC 814: ದಿ ಕಂದಹಾರ್ ಹೈಜಾಕ್' ಕಟ್ಟಿಕೊಡಲಾಗಿದೆ. ಅಂದು 176 ಪ್ರಯಾಣಿಕರಿದ್ದ ವಿಮಾನವನ್ನು ಪಾಕ್ ಉಗ್ರಗಾಮಿ ಸಂಘಟನೆಯ ಉಗ್ರರು ಅಪಹರಿಸಿದ್ದರು. ಆದರೆ ಇದೀಗ ವೆಬ್ ಸೀರಿಸ್‌ನಲ್ಲಿ ಆ ಉಗ್ರರ ಹೆಸರನ್ನು ಬದಲಿಸಿಲಾಗಿದೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂದು ನೇಪಾಳದ ಕಠ್ಮಂಡು ಇಂದ ದೆಹಲಿಗೆ ಇಂಡಿಯನ್ ಏರ್‌ಲೈನ್ಸ್ ವಿಮಾನ IC814 ಹೊರಟಿತ್ತು. ಪ್ರಯಾಣಿಕರ ರೀತಿ ವಿಮಾನ ಏರಿದ್ದ ಉಗ್ರರು ಕ್ಯಾಪ್ಟನ್‌ಗೆ ಬಂದೂಕು ತೋರಿಸಿ ವಿಮಾನ ಅಪಹರಿಸಿದ್ದರು. ಬಂದೂಕು ಹಿಡಿದು ಪ್ರಯಾಣಿಕರನ್ನು ಬೆದರಿಸಿದ್ದರು. ದೆಹಲಿಯಲ್ಲಿ ಇಳಿಯಬೇಕಿದ್ದ ವಿಮಾನವನ್ನು ಅಫ್ಘಾನಿಸ್ಥಾನ ಕಂದಹಾರ್‌ಗೆ ಹೈಜಾಕ್ ಮಾಡಿದ್ದರು. ಪ್ರಯಾಣಿಕರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದರು. ಮೂವರು ಉಗ್ರರನ್ನು ಬಿಡುಗಡೆ ಮಾಡಿ ಸರ್ಕಾರ ಪ್ರಯಾಣಿಕರನ್ನು ಜೀವಂತವಾಗಿ ಭಾರತಕ್ಕೆ ಕರೆತಂದಿತ್ತು.
ನರಿ ಬುದ್ದಿ ತೋರಿಸಿ ಅವತ್ತು ಉಗ್ರರು ಅಟ್ಟಹಾಸ ಮೆರೆದಿದ್ದರು. ಈ ದುಷ್ಕೃತ್ಯದಲ್ಲಿ ಸನ್ನಿ ಅಹ್ಮದ್ ಖಾಜಿ, ಜಹೂರ್ ಮಿಸ್ತ್ರಿ, ಇಬ್ರಾಹಿಂ ಅಖ್ತರ್, ಶಾಹಿದ್ ಅಖ್ತರ್ ಹಾಗೂ ಶಾಖೀರ್ ಎಂಬ ಉಗ್ರರು ಭಾಗಿ ಆಗಿದ್ದಾಗಿ ಹೆಸರುಗಳು ಬಹಿರಂಗವಾಗಿತ್ತು. ಆದರೆ ಈಗ ವೆಬ್ ಸೀರಿಸ್‌ನಲ್ಲಿ ಆ ಉಗ್ರರ ಹೆಸರನ್ನು ಶಂಕರ್, ಡಾಕ್ಟರ್, ಬರ್ಗರ್, ಚೀಫ್, ಭೋಲಾ ಎಂದು ಬದಲಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಅದರಲ್ಲೂ ಉಗ್ರರಿಗೆ ಹಿಂದೂ ಹೆಸರುಗಳನ್ನು ಇಟ್ಟು ತಪ್ಪು ಮಾಹಿತಿ ನೀಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
'IC 814: ದಿ ಕಂದಹಾರ್ ಹೈಜಾಕ್' ವೆಬ್ ಸೀರಿಸ್‌ಗೆ ಅನುಭವ್ ಸಿನ್ಹಾ ಆಕ್ಷನ್ ಕಟ್ ಹೇಳಿದ್ದಾರೆ. ಕ್ಯಾಪ್ಟನ್ ಶರಣ್ ದೇವ್ ಆಗಿ ಮುಖ್ಯ ಪಾತ್ರದಲ್ಲಿ ನಟ ವಿಜಯ್ ವರ್ಮಾ ನಟಿಸಿದ್ದಾರೆ. ಇನ್ನುಳಿದಂತೆ ನಸಿರುದ್ದೀನ್ ಶಾ, ಪಂಕಜ್ ಕಾಪುರ್, ದಿಯಾ ಮಿರ್ಜಾ, ಅರವಿಂದ್ ಸಾಮಿ ಸೇರಿದಂತೆ ದೊಡ್ಡ ತಾರಾಗಣ ಈ ವೆಬ್ ಸೀರಿಸ್‌ನಲ್ಲಿದೆ. ಸದ್ಯ ನೆಟ್‌ಫ್ಲಿಕ್ಸ್‌ಗೆ ಸಮನ್ಸ್ ಜಾರಿ ಮಾಡಿರುವ ಸಚಿವಾಲಯ ಈ ರೀತಿ ಉಗ್ರರ ಹೆಸರು ಬದಲಿಸಿದ್ದು ಯಾಕೆ ಎಂದು ಸ್ಪಷ್ಟನೆ ಕೇಳಿದೆ. ಈ ವಿವಾದ ಯಾವ ಹಂತ ಹೋಗಿ ತಲುಪುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











