Idli Kadai OTT: 'ಕಾಂತಾರ- 1' ಎದುರು ಸೋತ ಧನುಷ್ 'ಇಡ್ಲಿ ಕಡೇ' ಓಟಿಟಿಗೆ ಬಂದೇಬಿಡ್ತು
ಧನುಷ್ ನಿರ್ದೇಶಿಸಿ ನಟಿಸಿದ್ದ 'ಇಡ್ಲಿ ಕಡೇ' ಸಿನಿಮಾ ಇದೀಗ ಓಟಿಟಿಗೆ ಬರ್ತಿದೆ. ಅಕ್ಟೋಬರ್ 1ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಿತ್ತು. ಫೀಲ್ ಗುಡ್ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು. ಆದರೂ ಬಾಕ್ಸಾಫೀಸ್‌ನಲ್ಲಿ ಸಿನಿಮಾ ಗೆಲ್ಲಲಿಲ್ಲ. ಇದೀಗ ತಿಂಗಳಿಗೂ ಮುನ್ನ ಓಟಿಟಿಗೆ ಎಂಟ್ರಿ ಕೊಡ್ತಿದೆ.
ಚಿತ್ರದಲ್ಲಿ ಅರುಣ್ ವಿಜಯ್ ವಿಲನ್ ಆಗಿ ಅಬ್ಬರಿಸಿದ್ದಾರೆ. ನಿತ್ಯಾ ಮೆನನ್ ನಾಯಕಿಯಾಗಿ ನಟಿಸಿದ್ದು ಸತ್ಯರಾಜ್, ರಾಜ್‌ಕಿರಣ್, ಶಾಲಿನಿ ಪಾಂಡೆ, ಪಾರ್ಥಿಬನ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. 'ಇಡ್ಲಿ ಕಡೇ' ಪ್ರೇಕ್ಷಕರು, ವಿಮರ್ಶಕರಿಂದ ಒಳ್ಳೆ ಅಂಕ ಸಿಕ್ಕರೂ ಮರುದಿನ ಬಿಡುಗಡೆಯಾದ 'ಕಾಂತಾರ -1' ಆರ್ಭಟದ ನಡುವೆ ಮುಗ್ಗರಿಸಿತ್ತು. ತಮಿಳುನಾಡಿನಲ್ಲಿ ಒಂದು ಹಂತಕ್ಕೆ ಸಿನಿಮಾ ಗೆಲುವು ಕಂಡಿತ್ತು.

ತಮಿಳುನಾಡಿನಲ್ಲಿ 'ಇಡ್ಲಿ ಕಡೇ' ಚಿತ್ರಕ್ಕಿಂತ 'ಕಾಂತಾರ-1' ಹೆಚ್ಚು ಕಲೆಕ್ಷನ್ ಮಾಡಿ ಯಶಸ್ವಿ ಪ್ರದರ್ಶನ ಮುಂದುವರೆಸಿದೆ. ಕರೂರು ಕಾಲ್ತುಳಿತ ಪ್ರಕರಣದ ಬೆನ್ನಲ್ಲೇ 'ಇಡ್ಲಿ ಕಡೇ' ಸಿನಿಮಾ ಬಿಡುಗಡೆ ಆಗಿದ್ದು ಕೂಡ ಹಿನ್ನಡೆಗೆ ಕಾರಣವಾಗಿತ್ತು. ದೀಪಾವಳಿಗೆ ಬಂದಿದ್ದರೆ ಸಿನಿಮಾ ಇನ್ನು ಹೆಚ್ಚು ಕಲೆಕ್ಷನ್ ಮಾಡ್ತಿತ್ತು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. 'ಕಾಂತಾರ-1' ಚಿತ್ರವನ್ನು ಗಂಭೀರವಾಗಿ ಪರಿಗಣಿಸದೇ ಧನುಷ್ ಸಿನಿಮಾ ರಿಲೀಸ್ ಮಾಡಿ ತಪ್ಪು ಮಾಡಿದ್ರು ಎನ್ನುವ ಚರ್ಚೆ ಕೂಡ ನಡೀತಿದೆ.
ಸಣ್ಣ ಹಳ್ಳಿಯಲ್ಲಿ ಶಿವ ಕೇಶವ್ (ರಾಜ್ ಕಿರಣ್) ಇಡ್ಲಿ ಅಂಗಡಿ ನಡೆಸುತ್ತಿರುತ್ತಾನೆ. ಆತ ಮಾಡುವ ಇಡ್ಲಿಗೆ ಭಾರೀ ಬೇಡಿಕೆ ಇರುತ್ತದೆ. ಶಿವ ಕೇಶವ್ ವ್ಯಕ್ತಿಯ ಮಗ ಮುರುಗನ್ (ಧನುಷ್) ದೊಡ್ಡ ಕನಸು ಕಾಣುತ್ತಾನೆ. ಮುರುಗನ್ ಹೋಟೆಲ್ ಮ್ಯಾನೇಜ್‌ಮೆಂಟ್ ಕಲಿತು ಹುಟ್ಟೂರು ಬಿಟ್ಟು ಬ್ಯಾಂಕಾಕ್‌ನಲ್ಲಿರುವ ಪ್ರಸಿದ್ಧ ಆಹಾರ ಉದ್ಯಮಿ ವಿಷ್ಣು ವರ್ಧನ್ (ಸತ್ಯರಾಜ್) ತನ್ನ ವ್ಯವಹಾರವನ್ನು ಅಭಿವೃದ್ಧಿಪಡಿಸುವಲ್ಲಿ ಬೆಂಬಲವಾಗಿ ನಿಲ್ಲುತ್ತಾನೆ. ಹೀಗಾಗಿ, ಅವನು ತನ್ನ ಮಗಳು ಮೀರಾ (ಶಾಲಿನಿ ಪಾಂಡೆ) ಳನ್ನು ಮುರುಗನ್‌ಗೆ ಕೊಟ್ಟು ಮದುವೆ ಮಾಡಲು ಮುಂದಾಗುತ್ತಾನೆ. ಈ ಸಮಯದಲ್ಲಿ ಮುರುಗನ್ ಜೀವನದಲ್ಲಿ ಕಹಿ ಘಟನೆಗಳು ಎದುರಾಗುತ್ತದೆ.
ವಿಷ್ಣುವರ್ಧನ್ ಮಗ ಅಶ್ವಿನ್(ಅರುಣ್ ವಿಜಯ್) ಕೂಡ ಮುರುಗನ್‌ಗೆ ಎದುರಾಗಿ ನಿಲ್ತಾನೆ. ಇಂತಹ ಸಮಯದಲ್ಲಿ ಮುರುಗನ್ ಮತ್ತೆ ಹುಟ್ಟೂರಿಗೆ ಬಂದು ತಂದೆಯ ಇಡ್ಲಿ ಅಂಗಡಿಯನ್ನು ಮತ್ತೆ ತೆರೆಯುತ್ತಾನೆ. ಆತನ ಜೀವನದಲ್ಲಿ ನಡೆದ ಕಹಿ ಘಟನೆಗಳೇನು? ಮುಂದೆ ಆತನ ಜೀವನ ಏನೆಲ್ಲಾ ತಿರುವು ಪಡೆದುಕೊಳ್ಳುತ್ತದೆ ಎನ್ನುವುದು ಇನ್ನುಳಿದ ಸಿನಿಮಾ ಕಥೆ.
ಧನುಷ್ ಚಿತ್ರವನ್ನು ನಿರ್ದೇಶಿಸಿ ನಟಿಸುವುದರ ಜೊತೆಗೆ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾಗಿದ್ದರು. ಜಿ. ವಿ ಪ್ರಕಾಶ್ ಕುಮಾರ್ ಸಂಗೀತ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್ ಆಗಿದೆ. 'ಇಡ್ಲಿ ಕಡೇ' ಸಿನಿಮಾ ಅಕ್ಟೋಬರ್ 29ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿದೆ.
ತಮಿಳು ಜೊತೆಗೆ ಕನ್ನಡ, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ. ಭರ್ಜರಿ ಓಪನಿಂಗ್ ಪಡೆದುಕೊಂಡಿದ್ದ 'ಇಡ್ಲಿ ಕಡೇ' ಸಿನಿಮಾ ಬರೀ ತಮಿಳಿನಲ್ಲಿ 46 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿತ್ತು. ಬಳಿಕ ನಿಧಾನವಾಗಿ ಡಲ್ ಆಗಿತ್ತು. ದೊಡ್ಡಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿತ್ತು. ನಟನಾಗಿ, ನಿರ್ದೇಶಕನಾಗಿ ಧನುಷ್ ಗೆದ್ದರೂ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಯಶಸ್ವಿಯಾಗಲಿಲ್ಲ.
ನವೆಂಬರ್‌ನಲ್ಲಿ 'ಇಡ್ಲಿ ಕಡೇ' ಸಿನಿಮಾ ಓಟಿಟಿಗೆ ಬರುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಬಾಕ್ಸಾಫೀಸ್‌ನಲ್ಲಿ ಹೀನಾಯ ಸೋಲು ಕಂಡ ಬಳಿಕ ಬೇಗ ಡಿಜಿಟಲ್ ಸ್ಟ್ರೀಮಿಂಗ್ ಮಾಡಲಾಗ್ತಿದೆ.


Click it and Unblock the Notifications











