ಅಮಿತಾಬ್ ಬಚ್ಚನ್ ಸಿನಿಮಾ ಒಟಿಟಿಗೆ: ಗರಂ ಆದ ಐನಾಕ್ಸ್
ಅಮಿತಾಬ್ ಬಚ್ಚನ್ ಹಾಗೂ ಆಯುಷ್ಮಾನ್ ಖುರಾನಾ ನಟಿಸಿರುವ ಗುಲಾಬೊ ಸಿತಾಬೊ ಸಿನಿಮಾವನ್ನು ನೇರವಾಗಿ ಒಟಿಟಿಗೆ ಬಿಡುಗಡೆ ಮಾಡುವುದಾಗಿ ಇಂದು ಚಿತ್ರತಂಡ ಘೋಷಣೆ ಮಾಡಿದೆ.
Recommended Video
ಇದರ ವಿರುದ್ಧ ಚಿತ್ರಮಂದಿರಗಳ ಸಂಘ, ವಿತರಕರು, ಪ್ರದರ್ಶಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಖ್ಯಾತ ಮಲ್ಟಿಫ್ಲೆಕ್ಸ್ ಸಂಸ್ಥೆ ಐನಾಕ್ಸ್ ಸಹ ತನ್ನ ಅಸಮಾಧಾನ ವ್ಯಕ್ತಪಡಿಸಿದೆ.
ಗುಲಾಬೊ ಸಿತಾಬೊ ಸಿನಿಮಾವನ್ನು ಚಿತ್ರಮಂದಿರಕ್ಕೆ ತರದೆ ನೇರವಾಗಿ ಒಟಿಟಿ ಗೆ ಬಿಡುಗಡೆ ಮಾಡಿದ ವಿಚಾರಕ್ಕೆ ಅಧಿಕೃತ ಹೇಳಿಕೆಯನ್ನು ಐನಾಕ್ಸ್ ಇಂದು ಬಿಡುಗಡೆ ಮಾಡಿದೆ.
ಸಿನಿಮಾ ನಿರ್ಮಾಣ ಸಂಸ್ಥೆಯೊಂದು ಚಿತ್ರಮಂದಿರಕ್ಕೆ ಸಿನಿಮಾ ಬಿಡುಗಡೆ ಮಾಡದೆ ನೇರವಾಗಿ ಒಟಿಟಿಗೆ ಬಿಡುಗಡೆ ಮಾಡಿರುವುದು ಅತ್ಯಂತ ಬೇಸರದ ಸಂಗತಿ ಎಂದು ತನ್ನ ಹೇಳಿಕೆಯಲ್ಲಿ ಐನಾಕ್ಸ್ ಹೇಳಿದೆ.

ನೋಡುಗರನ್ನು ಒದಗಿಸುವ ಕಾರ್ಯ ಮಾಡುತ್ತಿದ್ದೇವೆ: ಐನಾಕ್ಸ್
ಚಿತ್ರಮಂದಿರಗಳು ಮತ್ತು ಸಿನಿಮಾ ನಿರ್ಮಾಣ ಸಂಸ್ಥೆಗಳು ಪರಸ್ಪರ ಅನ್ಯೋನ್ಯವಾದ ಒಳ ಒಪ್ಪಂದದಲ್ಲಿದ್ದರು. ಉತ್ತಮ ಕಂಟೆಂಟ್ ಗೆ ನೋಡುಗರನ್ನು ಒದಗಿಸುವ ಕಾರ್ಯವನ್ನು ಚಿತ್ರಮಂದಿರಗಳು ಅಥವಾ ಮಲ್ಟಿಫ್ಲೆಕ್ಸ್‌ಗಳು ಮಾಡುತ್ತಿದ್ದವು. ಆದರೆ ಒಟಿಟಿಗಳಿಂದ ಇದು ತಪ್ಪಿದಂತಾಗಿದೆ ಎಂದು ಅವರು ಹೇಳಿದ್ದಾರೆ.

ಅತ್ಯುತ್ತಮ ಗುಣಮಟ್ಟದ ಸಿನಿಮಾ ವೀಕ್ಷಣೆ ಅನುಭವ
ಅತ್ಯುತ್ತಮ ಗುಣಮಟ್ಟದ ಸಿನಿಮಾ ವೀಕ್ಷಣೆಯ ಅನುಭವವನ್ನು ನೋಡುಗರಿಗೆ ನೀಡುವ ಸಲುವಾಗಿ ಐನಾಕ್ಸ್ ಕೋಟ್ಯಂತರ ಬಂಡವಾಳ ಹೂಡಿ ದೇಶದಾದ್ಯಂತ ಗುಣಮಟ್ಟದ ಸ್ಕ್ರೀನ್‌ಗಳನ್ನು ನಿರ್ಮಿಸುತ್ತಿದೆ ಎಂದು ಐನಾಕ್ಸ್ ಹೇಳಿದೆ.

ಚಿತ್ರೋದ್ಯಮವು ಒಂದಕ್ಕೊಂದು ಪೂರಕವಾಗಿದೆ
ಚಿತ್ರೋದ್ಯಮವು ಸರಪಳಿಯ ರೀತಿಯಲ್ಲಿ ಒಂದಕ್ಕೊಂದು ಸಂಬಂಧ ಹೊಂದಿದ್ದು, ಈ ವ್ಯವಹಾರವು ಕೋಟ್ಯಾಂತರ ಮಂದಿಗೆ ಉದ್ಯೋಗ ಒದಗಿಸಿದೆ. ಸಿನಿಮಾ ನಿರ್ಮಾತೃಗಳಿಗೆ ಕೋಟ್ಯಂತರ ಲಾಭವನ್ನು ಮಾಡಿಕೊಡುವ ಕಾರ್ಯವನ್ನು ಚಿತ್ರಮಂದಿರಗಳು, ಮಲ್ಟಿಫ್ಲೆಕ್ಸ್‌ಗಳು ಮಾಡುತ್ತಾ ಬಂದಿವೆ ಎಂದು ಐನಾಕ್ಸ್ ಹೇಳಿದೆ.

ನೇರವಾಗಿ ಒಟಿಟಿಗೆ ಬಿಡುಗಡೆ ಬೇಡ: ಐನಾಕ್ಸ್
ಸಿನಿಮಾ ನಿರ್ಮಾಣ ಸಂಸ್ಥೆಗಳು ಚಿತ್ರಮಂದಿರಗಳನ್ನು ಪಕ್ಕಕ್ಕೆ ಸರಿಸಿ ನೇರವಾಗಿ ಒಟಿಟಿ ಗಳಿಗೆ ಬಿಡುಗಡೆ ಮಾಡಬಾರದೆಂದು ಐನಾಕ್ಸ್ ಮನವಿ ಮಾಡಿದೆ. ಈ ರೀತಿ ಮಾಡುವುದು ಸಿನಿಮಾದ ಅನುಭವವನ್ನು ಕುಂಠಿತಗೊಳಿಸಿ ಕೊನೆಗೆ ಸಿನಿಮಾ ಉದ್ಯಮಕ್ಕೆ ದೊಡ್ಡ ಧಕ್ಕೆ ತರುತ್ತದೆ ಎಂದಿದ್ದಾರೆ.


Click it and Unblock the Notifications











