Emmy Awards 2023: ಕಾಮಿಡಿ ಶೋಗಾಗಿ ಪ್ರತಿಷ್ಠಿತ ಎಮ್ಮಿ ಅವಾರ್ಡ್ಸ್ ಪಡೆದ ವೀರ್ ದಾಸ್
ಸಿನಿಮಾಗಳಿಗೆ ಆಸ್ಕರ್ ಪ್ರಶಸ್ತಿ ನೀಡುವಂತೆ ಟಿವಿ ಶೋಗಳಿಗೆ ನೀಡುವ ಅತ್ಯುತ್ತಮ ಪ್ರಶಸ್ತಿ ಎಂದರೆ ಅದು ಎಮ್ಮಿ ಪ್ರಶಸ್ತಿಗಳು. ಸದ್ಯ 2023ರ ಇಂಟರ್ನ್ಯಾಷನಲ್ ಎಮ್ಮಿ ಅವಾರ್ಡ್ಸ್ ಸಮಾರಂಭದಲ್ಲಿ ಭಾರತಕ್ಕೆ ಪ್ರಶಸ್ತಿ ಲಭಿಸಿದೆ. ಅತ್ಯುತ್ತಮ ಹಾಸ್ಯ ವಿಭಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಮೂಲಕ ಹಾಸ್ಯನಟ ವೀರ್ ದಾಸ್ ಇತಿಹಾಸವನ್ನು ನಿರ್ಮಿಸಿದ್ದಾರೆ.
ನೆಟ್‌ಫ್ಲಿಕ್ಸ್ ವೇದಿಕೆಯಲ್ಲಿ ಸ್ಟ್ರೀಮ್ ಆಗುತ್ತಿರುವ 'ವೀರ್ ದಾಸ್: ಲ್ಯಾಂಡಿಂಗ್' ಶೋಗೆ ವೀರ್ ದಾಸ್ ವಿಶಿಷ್ಟ ಹಾಸ್ಯ ವಿಶೇಷ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಈ ಪ್ರತಿಷ್ಠಿತ ಪ್ರಶಸ್ತಿಯನ್ನು 'ಡೆರಿ ಗರ್ಲ್ಸ್ - ಸೀಸನ್ 3' ಶೋ ಜೊತೆಗೆ ಹಂಚಿಕೊಂಡಿದ್ದಾರೆ. ಇಬ್ಬರ ನಡುವೆ ಅವಾರ್ಡ್‌ಗಾಗಿ ಟೈ ಆಗಿತ್ತು.

ಕಮಿಡಿಯನ್ ವೀರ್ ದಾಸ್‌ಗೆ ಎಮ್ಮಿ ಅವಾರ್ಡ್ಸ್
ಗೋವಾದಲ್ಲಿ ಭಾರತದ ಅಂತಾರಾಷ್ಟ್ರಿಯ ಚಲನಚಿತ್ರೋತ್ಸವ ನಡೆಯುತ್ತಿರುವ ಈ ಸಂದರ್ಭದಲ್ಲಿ, ಹಾಸ್ಯನಟ ಮತ್ತು ನಟ ವೀರ್ ದಾಸ್ ಅವರು ನೆಟ್‌ಫ್ಲಿಕ್ಸ್‌ನ 'ವೀರ್ ದಾಸ್: ಲ್ಯಾಂಡಿಂಗ್' ಗಾಗಿ ಅಂತರಾಷ್ಟ್ರೀಯ ಎಮ್ಮಿ ಪ್ರಶಸ್ತಿಯನ್ನು ಎತ್ತಿ ಹಿಡಿದಿದ್ದಾರೆ. ಇದು ಅವರ ವೃತ್ತಿಜೀವನದಲ್ಲಿ ಮಹತ್ವದ ಮೈಲಿಗಲ್ಲು.
ಪ್ರಶಸ್ತಿ ಪ್ರದಾನ ಸಮಾರಂಭದ ಮತ್ತು ಅವಾರ್ಡ್ ಹಿಡಿದು ವೀರ್ ದಾಸ್ ಫೋಟೋಗೆ ಫೋಸ್ ನೀಡಿದ್ದಾರೆ. "ಭಾರತಕ್ಕಾಗಿ.. ಭಾರತೀಯ ಹಾಸ್ಯಕ್ಕಾಗಿ... ಪ್ರತಿ ಉಸಿರು, ಪ್ರತಿ ಪದ... ಈ ನಂಬಲಾಗದ ಗೌರವಕ್ಕಾಗಿ ಎಮ್ಮಿ ಅವಾರ್ಡ್‌ಗೆ ಧನ್ಯವಾದಗಳು" ಎಂದು ಪ್ರಶಸ್ತಿ ಗೆದ್ದ ಖುಷಿಯನ್ನು ಹಂಚಿಕೊಂಡಿದ್ದಾರೆ.
ಭಯೋತ್ಪಾದಕ ಎಂದು ಕರೆದ ದಿನವೇ ಪ್ರಶಸ್ತಿಗೆ ನಾಮನಿರ್ದೇಶನ
ಪ್ರಶಸ್ತಿ ಪ್ರದಾನ ಸಮಾರಂಭದ ಒಂದು ದಿನ ಮುಂಚಿತವಾಗಿ, ವೀರ್ ದಾಸ್ ಒಂದು ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಅದರಲ್ಲಿ ಅವರು 'ನನ್ನನ್ನು ಭಯೋತ್ಪಾದಕ ಎಂದು ಕರೆದ ದಿನ, ನಾನು ಅಂತರರಾಷ್ಟ್ರೀಯ ಎಮ್ಮಿ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿದ್ದೆ' ಎಂದು ಹೇಳಿದ್ದಾರೆ.
ವೀರ್ ದಾಸ್ ಅವರ ಕೆಲವು ಕಾಮಿಡಿ ಶೋಗಳು ವಿವಾದಕ್ಕೆ ಕಾರಣವಾಗಿವೆ. ವಿದೇಶಗಳಲ್ಲಿ ಭಾರತದ ಬಗ್ಗೆ ತಮ್ಮ ಶೋಗಳಲ್ಲಿ ಅವಮಾನವಾಗುವಂತೆ ಮಾತನಾಡಿದ್ದಾರೆ ಎಂದು ಆರೋಪ ಮಾಡಲಾಗಿತ್ತು. ಹಲವೆಡೆ ದೂರು ಸಹ ದಾಖಲಾಗಿತ್ತು. ಇಷ್ಟೇ ಅಲ್ಲದೇ ಅವರನ್ನು ಭಯೋತ್ಪಾದಕ ಎಂದೂ ಕರೆಯಲಾಗಿತ್ತು.

ಶೆಫಾಲಿ ಶಾ ಮತ್ತು ಜಿಮ್ ಸರ್ಭ್
ವೀರ್ ದಾಸ್ ಎಮ್ಮಿ ಅವಾರ್ಡ್‌ಗೆ ವೀರ್ ದಾಸ್ ಜೊತೆಗೆ ನಟಿ ಶೆಫಾಲಿ ಶಾ ಮತ್ತು ಜಿಮ್ ಸರ್ಭ್ ಅವರಂತಹ ಪ್ರತಿಭಾನ್ವಿತ ನಟರು ನಾಮನಿರ್ದೇಶನಗೊಂಡಿದ್ದರು. ಶೆಫಾಲಿ ಶಾ ದೆಹಲಿ ಕ್ರೈಮ್ ಮತ್ತು ಜಿಮ್ ಸರ್ಭ್ ಅವರು ರಾಕೆಟ್ ಬಾಯ್ಸ್‌ನಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಮತ್ತು ಅತ್ಯುತ್ತಮ ನಟ ಪ್ರಶಸ್ತಿಗೆ ನಾಮಿನೇಟ್ ಆಗಿದ್ದರು. ಆದರೆ, ಪ್ರಶಸ್ತಿ ದೊರೆತಿಲ್ಲ.
ಡೈವ್ ಚಿತ್ರದಲ್ಲಿನ ಪಾತ್ರಕ್ಕಾಗಿ ಮೆಕ್ಸಿಕನ್ ನಟಿ ಕಾರ್ಲಾ ಸೋಜಾ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು. ದಿ ರೆಸ್ಪಾಂಡರ್‌ನಲ್ಲಿನ ಪಾತ್ರಕ್ಕಾಗಿ ಬ್ರಿಟನ್‌ನ ಮಾರ್ಟಿನ್ ಫ್ರೀಮನ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ. ಈ ವರ್ಷದ 14 ವಿಭಾಗಗಳಲ್ಲಿ 20 ದೇಶಗಳ 56 ಸ್ಪರ್ಧಿಗಳು ನಾಮಿನೇಟ್ ಆಗಿದ್ದರು.


Click it and Unblock the Notifications










