ಕಿಚ್ಚನ 'ಮ್ಯಾಕ್ಸ್' ರೀತಿ 'ಸಂಕ್ರಾಂತಿಕಿ ವಸ್ತುನ್ನಾಂ' ಓಟಿಟಿ ಲೆಕ್ಕಾಚಾರ?
ಸುಗ್ಗಿ ಸಂಭ್ರಮದಲ್ಲಿ ಬಂದಿದ್ದ ತೆಲುಗಿನ 'ಸಂಕ್ರಾಂತಿಕಿ ವಸ್ತುನ್ನಾಂ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಫ್ಯಾಮಿಲಿ ಕಾಮಿಡಿ ಎಂಟರ್‌ಟೈನರ್ ಸಿನಿಮಾ 300 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದ ಸದ್ದು ಮಾಡಿತ್ತು. ಬಹಳ ದಿನಗಳ ಬಳಿಕ ವಿಕ್ಟರಿ ವೆಂಕಟೇಶ್ ಒಂದೊಳ್ಳೆ ಹಿಟ್ ಕೊಟ್ಟು ಗೆದ್ದಿದ್ದಾರೆ.
ಅನಿಲ್ ರಾವಿಪುಡಿ ನಿರ್ದೇಶನದ 'ಸಂಕ್ರಾಂತಿಕಿ ವಸ್ತುನ್ನಾಂ' ಚಿತ್ರವನ್ನು ಶಿರೀಶ್ ನಿರ್ಮಿಸಿದ್ದರು. ಐಶ್ವರ್ಯಾ ರಾಜೇಶ್ ಹಾಗೂ ಮೀನಾಕ್ಷಿ ಚೌಧರಿ ಚಿತ್ರದಲ್ಲಿ ನಾಯಕಿಯರಾಗಿ ಮಿಂಚಿದ್ದರು. ಲಾಜಿಕ್ ಪಕ್ಕಕ್ಕಿಟ್ಟು ಬರೀ ನಗುವುದಕ್ಕೆ ಮಾಡಿದಂತಹ ಸಿನಿಮಾ ಇದು. ಹಾಗಾಗಿ ಹಬ್ಬದ ಸಂಭ್ರಮದಲ್ಲಿ ಫ್ಯಾಮಿಲಿ ಸಮೇತ ಜನ ಸಿನಿಮಾ ನೋಡಲು ಮುಗಿಬಿದ್ದರು.

ಸಂಕ್ರಾಂತಿ ಹಬ್ಬಕ್ಕೆ ತೆಲುಗಿನ 'ಗೇಮ್ ಚೇಂಜರ್', 'ಡಾಕು ಮಹಾರಾಜ್' ರೀತಿಯ ಮಾಸ್ ಸಿನಿಮಾಗಳು ತೆರೆಗೆ ಬಂದಿದ್ದವು. ಆದರೆ ಅದನ್ನೆಲ್ಲಾ ಹಿಂದಿಕ್ಕಿ ಈ ಕಾಮಿಡಿ ಎಂಟರ್‌ಟೈನರ್ ಗೆದ್ದಿಬಿಟ್ಟಿತ್ತು. ಒಂದೂವರೆ ತಿಂಗಳಾದರೂ ಸಿನಿಮಾ ಇನ್ನು ಓಟಿಟಿಗೆ ಬಂದಿಲ್ಲ. ಇದೀಗ ನೇರವಾಗಿ ಚಿತ್ರವನ್ನು ಟಿವಿಯಲ್ಲಿ ಪ್ರೀಮಿಯರ್ ಮಾಡಲಾಗುತ್ತಿದೆ. ಮಾರ್ಚ್ 1ರಂದು ಸಂಜೆ 6 ಗಂಟೆಗೆ ಜೀ ತೆಲುಗು ವಾಹಿನಿಯಲ್ಲಿ ಸಿನಿಮಾ ಪ್ರಸಾರವಾಗಲಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿದೆ.
ಓಟಿಟಿಗೂ ಮುನ್ನ ಟಿವಿಯಲ್ಲಿ ಬರುತ್ತಾ? ಹಾಗಿದ್ದರೆ ಡಿಜಿಟಲ್ ಸ್ಟ್ರೀಮಿಂಗ್ ಯಾವಾಗ? ಎನ್ನುವ ಪ್ರಶ್ನೆ ಎದ್ದಿದೆ. ಜೀ ಸಂಸ್ಥೆ ಚಿತ್ರದ ಸ್ಯಾಟಲೈಟ್ ಹಾಗೂ ಓಟಿಟಿ ರೈಟ್ಸ್ ಕೊಂಡುಕೊಂಡಿದೆ. ಹಾಗಾಗಿ ಒಂದೇ ದಿನ ಇತ್ ಟಿವಿ ಹಾಗೂ ಅತ್ತ ಓಟಿಟಿಯಲ್ಲಿ 'ಸಂಕ್ರಾಂತಿಕಿ ವಸ್ತುನ್ನಾಂ' ಸಿನಿಮಾ ಬರುವ ಲೆಕ್ಕಾಚಾರ ಆರಂಭವಾಗಿದೆ. ಇತ್ತೀಚೆಗೆ ಸುದೀಪ್ ನಟಿಸಿದ 'ಮ್ಯಾಕ್ಸ್' ಚಿತ್ರದ ವಿಚಾರದಲ್ಲಿ ಇದೇ ನಡೆದಿತ್ತು.
ಸಾಮಾನ್ಯವಾಗಿ ಸಿನಿಮಾ ತೆರೆಗೆ ಬಂದ ಒಂದು ತಿಂಗಳ ಬಳಿಕ ಓಟಿಟಿಗೆ ಬರುತ್ತದೆ. ಆ ನಂತರ ಕೆಲ ದಿನಗಳ ಬಳಿಕ ಟಿವಿಯಲ್ಲಿ ಬರುತ್ತದೆ. ಆದರೆ ಓಟಿಟಿ ಟ್ರೆಂಡ್ ಹೆಚ್ಚಿದ ಬಳಿಕ ಜನ ಜಾಹೀರಾತುಗಳ ನಡುವೆ ಟಿವಿಯಲ್ಲಿ ಸಿನಿಮಾ ನೋಡಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೇ ಓಟಿಟಿಯಲ್ಲಿ ತಮಗೆ ಇಷ್ಟಬಂದ ಸಮಯದಲ್ಲಿ ಇಷ್ಟ ಬಂದ ಜಾಗದಲ್ಲಿ ಸಿನಿಮಾ ನೋಡಬಹುದು. ಟಿವಿಯಲ್ಲಿ ಬಂದರೆ ಟಿವಿ ಎದುರೇ ಕೂರಬೇಕು. ಮಧ್ಯೆ ಮಧ್ಯೆ ಜಾಹೀರಾತುಗಳನ್ನು ಸಹಿಸಿಕೊಳ್ಳಬೇಕು.

ಓಟಿಟಿ ಆರ್ಭಟ ಶುರುವಾದ ಬಳಿಕ ಜನ ಟಿವಿಯಲ್ಲಿ ಸಿನಿಮಾ ನೋಡಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೇ ಓಟಿಟಿಗೆ ಬಂದ ಮೇಲೆ HD ಪ್ರಿಂಟ್ ಲೀಕ್ ಆಗಿ ಬಿಡುತ್ತದೆ. ಇದೂ ಸಹಜವಾಗಿಯೇ ಟಿವಿಯಲ್ಲಿ ಸಿನಿಮಾ ಬಂದಾಗ ಟಿಆರ್‌ಪಿ ಮೇಲೆ ಪರಿಣಾಮ ಬೀರುತ್ತಿದೆ. ಹೊಸ ಸಿನಿಮಾಗಳನ್ನು ನಂಬಿ ಜಾಹೀರಾತುಗಳನ್ನು ಕೊಡಲು ಯಾರು ಮುಂದೆ ಬರ್ತಿಲ್ಲ. ಹಾಗಾಗಿ ಟಿವಿ, ಸ್ಯಾಟಲೈಟ್ ಎರಡೂ ರೈಟ್ಸ್ ಕೊಂಡುಕೊಳ್ಳಲು ಜೀ ಸಂಸ್ಥೆ ಮುಂದಾಗಿದೆ.
ಒಮ್ಮೆಲೆ ಟಿವಿ ಹಾಗೂ ಓಟಿಟಿಯಲ್ಲಿ ಸಿನಿಮಾ ಬಂದರೆ ಟಿವಿಯಲ್ಲಿ ನೋಡುವವರು ನೋಡುತ್ತಾರೆ ಎನ್ನುವ ಲೆಕ್ಕಾಚಾರ ಇದು. 'ಮ್ಯಾಕ್ಸ್' ಚಿತ್ರದ ವಿಚಾರದಲ್ಲೇ ಇದೇ ನಡೆದಿತ್ತು. ಇದೀಗ ತೆಲುಗಿನ ಬ್ಲಾಕ್‌ಬಸ್ಟರ್ 'ಸಂಕ್ರಾಂತಿಕಿ ವಸ್ತುನ್ನಾಂ' ಚಿತ್ರದ ವಿಚಾರದಲ್ಲೂ ಇದೇ ರೀತಿ ನಡೆಯುವ ಸಾಧ್ಯತೆಯಿದೆ. ಯಾಕಂದರೆ ಎರಡೂ ರೈಟ್ಸ್ ಜೀ ಬಳಿಯಿದೆ. ಜೀ-ತೆಲುಗು ವಾಹಿನಿ ಜೊತೆಗೆ ಜೀ5ನಲ್ಲಿ ಮಾರ್ಚ್ 1ರಂದು ಸಿನಿಮಾ ಲಭ್ಯವಾಗುತ್ತಾ ಕಾದು ನೋಡಬೇಕಿದೆ.
ಓಟಿಟಿಯಲ್ಲಿ 'ಸಂಕ್ರಾಂತಿಕಿ ವಸ್ತುನ್ನಾಂ' ಸಿನಿಮಾ ನೋಡಲು ಸಾಕಷ್ಟು ಜನ ಕಾಯುತ್ತಿದ್ದಾರೆ. ಸದ್ಯ ಟಿವಿ ಪ್ರೀಮಿಯರ್ ಡೇಟ್ ಘೋಷಣೆ ಆಗಿದೆ. ಓಟಿಟಿ ಸ್ಟ್ರೀಮಿಂಗ್ ಬಗ್ಗೆ ಶೀಘ್ರದಲ್ಲೇ ಜೀ5 ಮಾಹಿತಿ ಕೊಡುವ ನಿರೀಕ್ಷೆಯಿದೆ.


Click it and Unblock the Notifications











