'ರಾಘವೇಂದ್ರ ಸ್ಟೋರ್ಸ್': ಮಧ್ಯರಾತ್ರಿ ಸ್ವೀಟ್ ಶಾಕ್ ಕೊಟ್ಟ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ
ನವರಸ ನಾಯಕ ಜಗ್ಗೇಶ್ ನಟನೆಯ 'ರಾಘವೇಂದ್ರ ಸ್ಟೋರ್ಸ್' ಸಿನಿಮಾ ಥಿಯೇಟರ್‌ಗಳಲ್ಲಿ ಯಶಸ್ವಿ ಪ್ರದರ್ಶನ ಕಾಣ್ತಿದೆ. ಏಪ್ರಿಲ್ 28ಕ್ಕೆ ರಿಲೀಸ್ ಆಗಿದ್ದ ಸಿನಿಮಾ ಫ್ಯಾಮಿಲಿ ಆಡಿಯನ್ಸ್‌ನ ಸೆಳೆದಿತ್ತು. ಉತ್ತಮ ಗಳಿಕೆಯೊಂದಿಗೆ ಪ್ರದರ್ಶನ ಕಂಡಿತ್ತು. ಸಂತೋಷ್ ಆನಂದ್ ರಾಮ್ ನಿರ್ದೇಶನ, ಜಗ್ಗಣ್ಣನ ಅಭಿನಯಕ್ಕೆ ಸಿನಿರಸಿಕರು ಫಿದಾ ಆಗಿದ್ದಾರೆ. ಹೊಂಬಾಳೆ ಸಂಸ್ಥೆ ಒಂದೊಳ್ಳೆ ಚಿತ್ರವನ್ನು ಪ್ರೇಕ್ಷಕರ ಮುಂದಿಟ್ಟಿದೆ.
ವಯಸ್ಸು 40 ದಾಟಿದ್ರು ಮದುವೆ ಆಗದ ಹಯವದನನ ಕಥೆ ಸಿನಿರಸಿಕರಿಗೆ ಇಷ್ಟವಾಗಿದೆ. ಚಿತ್ರದಲ್ಲಿ ಜಗ್ಗೇಶ್ ಜೋಡಿಯಾಗಿ ಶ್ವೇತಾ ಶ್ರೀವಾಸ್ತವ್ ಮಿಂಚಿದ್ದಾರೆ. ತಂದೆ ಪಾತ್ರದಲ್ಲಿ ದತ್ತಣ್ಣ, ಸ್ನೇಹಿತರ ಪಾತ್ರದಲ್ಲಿ ರವಿಶಂಕರ್ ಗೌಡ, ಮಿತ್ರಾ ಕಾಣಿಸಿಕೊಂಡಿದ್ದಾರೆ. ಅಚ್ಯುತ್ ಕುಮಾರ್ ಕೂಡ ಮುಖ್ಯ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ. ಐಪಿಎಲ್, ಚುನಾವಣೆ ಭರಾಟೆ ನಡುವೆಯೂ ಹೊಂಬಾಳೆ ಸಂಸ್ಥೆ ಸಿನಿಮಾ ರಿಲೀಸ್ ಮಾಡುವ ಸಾಹಸ ಮಾಡಿತ್ತು. ಆದರೂ ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು.

ಇದೀಗ ದಿಢೀರನೇ 'ರಾಘವೇಂದ್ರ ಸ್ಟೋರ್ಸ್' ಸಿನಿಮಾ ಓಟಿಟಿಗೆ ಬಂದಿದೆ. ಹೌದು ಈಗಾಗಲೇ ಅಮೇಜಾನ್ ಪ್ರೈಮ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಆ ಮೂಲಕ ಹೊಂಬಾಳೆ ಸಂಸ್ಥೆ ಸ್ವೀಟ್ ಶಾಕ್ ಕೊಟ್ಟಿದೆ. ರಿಲೀಸ್ ಡೇಟ್ ಅನೌನ್ಸ್ ಮಾಡದೇ ಏಕಾಏಕಿ ಸ್ಟ್ರೀಮಿಂಗ್ ಶುರು ಮಾಡಲಾಗಿದೆ. ಸಿನಿಮಾ ಓಟಿಟಿಗೆ ಬಂದರೂ ಕೆಲವಡೆ ಥಿಯೇಟರ್‌ಗಳಲ್ಲಿ ಸಿನಿಮಾ ಪ್ರದರ್ಶನ ಮುಂದುವರೆದಿದೆ. ಥಿಯೇಟರ್‌ನಲ್ಲಿ ರಿಲೀಸ್ ಆದ 20 ದಿನಕ್ಕೆ ಸಿನಿಮಾ ಓಟಿಟಿಗೆ ಬಂದಿರೋದು ಅಚ್ಚರಿ ಮೂಡಿಸಿದೆ.
ಈ ಹಿಂದೆ ಕೂಡ ಚಿತ್ರವನ್ನು ನೇರವಾಗಿ ಓಟಿಟಿಯಲ್ಲಿ ರಿಲೀಸ್ ಮಾಡುವ ಬಗ್ಗೆ ಗುಸುಗುಸು ಶುರುವಾಗಿತ್ತು. ಆದರೆ ಚಿತ್ರತಂಡ ಇದನ್ನು ಅಲ್ಲಗಳೆದಿತ್ತು. ಥಿಯೇಟರ್‌ಗಾಗಿ ಮಾಡಿರುವ ಸಿನಿಮಾ ಥಿಯೇಟರ್‌ನಲ್ಲೇ ಪ್ರೇಕ್ಷಕರು ನೋಡಬೇಕು ಎಂದಿತ್ತು. ಅದರಂತೆ ಚಿತ್ರವನ್ನು ಏಪ್ರಿಲ್ ಕೊನೆ ವಾರದಲ್ಲಿ ತೆರೆಗೆ ತರಲಾಗಿತ್ತು. ಸಾಧಾರಣ ಓಪನಿಂಗ್ ಪಡೆದುಕೊಂಡಿದ್ದ ಸಿನಿಮಾ ನಿಧಾನವಾಗಿ ಪ್ರೇಕ್ಷಕರನ್ನು ಥಿಯೇಟರ್‌ಗಳಿಗೆ ಸೆಳೆದಿತ್ತು. ಸಿನಿಮಾ ನೋಡಿದವರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದರು. ಒಳ್ಳೆ ಸಂದೇಶ ಕೂಡ ಈ ಸಿನಿಮಾದಲ್ಲಿದೆ.
ಸಿನಿಮಾ ಕಲೆಕ್ಷನ್ ಎಷ್ಟು?
'ರಾಘವೇಂದ್ರ ಸ್ಟೋರ್ಸ್' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಸಿನಿಮಾ ಒಳ್ಳೆ ಕಲೆಕ್ಷನ್ ಕೂಡ ಮಾಡಿದೆ. 4 ದಿನಗಳ ಲಾಂಗ್ ವೀಕೆಂಡ್‌ನಲ್ಲಿ ಚಿತ್ರ ಒಳ್ಳೆ ಗಳಿಕೆ ಕಂಡಿತ್ತು. ಆದರೆ ಸಿನಿಮಾ ಬಾಕ್ಸಾಫೀಸ್ ಕಲೆಕ್ಷನ್ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ನೀಡಲಿಲ್ಲ. ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಂಡಿತ್ತು. ಇದೀದ ಸಿನಿಮಾ 3ನೇ ವಾರಕ್ಕೆ ಕಾಲಿಟ್ಟಿದೆ. ಅಷ್ಟರಲ್ಲೇ ಓಟಿಟಿಗೆ ಬಂದು ಅಚ್ಚರಿ ಮೂಡಿಸಿದೆ. ಜೂನ್ ಮೊದಲ ವಾರದಲ್ಲಿ ಪ್ರೈಂ ವಿಡಿಯೋಗೆ ಬರುವ ನಿರೀಕ್ಷೆ ಇತ್ತು. ಅದಕ್ಕಿಂತ ಬಹಳ ಬೇಗ ಬಂದಿರೋದು ಅಚ್ಚರಿ ಮೂಡಿಸಿದೆ.
ಕಳೆದ ವರ್ಷವೇ ರಿಲೀಸ್ ಆಗಬೇಕಿತ್ತು
ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಕಳೆದ ವರ್ಷ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿ 'ರಾಘವೇಂದ್ರ ಸ್ಟೋರ್ಸ್' ತೆರೆಗೆ ಬರಬೇಕಿತ್ತು. ಸ್ವತಃ ಹೊಂಬಾಳೆ ಸಂಸ್ಥೆ ರಿಲೀಸ್ ಡೇಟ್ ಘೋಷಣೆ ಮಾಡಿತ್ತು. ಕೊನೆಗೆ ರಿಲೀಸ್ ಕ್ಯಾನ್ಸಲ್ ಮಾಡಲಾಗಿತ್ತು. ಆ ನಂತರ ಸೆಪ್ಟಂಬರ್ ಕೊನೆ ವಾರದಲ್ಲಿ ಅದೇ ಸಂಸ್ಥೆಯ 'ಕಾಂತಾರ' ಸಿನಿಮಾ ರಿಲೀಸ್ ಆಗಿ ಸದ್ದು ಮಾಡಿತ್ತು. ಆರೇಳು ತಿಂಗಳು 'ಕಾಂತಾರ' ಹವಾ ಜೋರಾಗಿತ್ತು.
ಸ್ಟಾರ್ ಸುವರ್ಣದಲ್ಲಿ 'ರಾಘವೇಂದ್ರ ಸ್ಟೋರ್ಸ್'
ಇನ್ನು ಸ್ಟಾರ್ ಸುವರ್ಣ ವಾಹಿನಿ 'ರಾಘವೇಂದ್ರ ಸ್ಟೋರ್ಸ್' ಸ್ಯಾಟಲೈಟ್ ರೈಟ್ಸ್ ಕೊಂಡುಕೊಂಡಿದೆ. ಓಟಿಟಿಗೆ ಇಷ್ಟು ಬೇಗ ಬಂದಿರುವುದು ನೋಡ್ತಿದ್ದರೆ ಟಿವೆಗೆ ಬರೋದು ಕೂಡ ತಡವಾಗಲ್ಲ ಅನ್ನಿಸುತ್ತಿದೆ. ಇನ್ನು ಫ್ಯಾಮಿಲಿ ಎಂಟರ್‌ಟೈನರ್ ಆಗಿರುವುದರಿಂದ ಟಿವಿ ಪ್ರೀಮಿಯರ್‌ಗೂ ಒಳ್ಳೆ ರೆಸ್ಪಾನ್ಸ್ ಸಿಗುವ ಸಾಧ್ಯತೆಯಿದೆ.


Click it and Unblock the Notifications











