'ರಾಘವೇಂದ್ರ ಸ್ಟೋರ್ಸ್' ಫುಲ್ ಮೀಲ್ಸ್‌ಗೆ ಪ್ರೇಕ್ಷಕರು ಫಿದಾ: ಓಟಿಟಿ, ಟಿವಿಗೆ ಎಲ್ಲಿ, ಯಾವಾಗ?
ನವರಸ ನಾಯಕ ಜಗ್ಗೇಶ್ ನಟನೆಯ 'ರಾಘವೇಂದ್ರ ಸ್ಟೋರ್ಸ್' ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಪ್ರೇಕ್ಷಕರು ಹಯವದನನ ಮದುವೆ ಪ್ರಸಂಗ ನೋಡಿ ಹೊಟ್ಟೆ ಹುಣ್ಣಾಗುವಂತೆ ನಕ್ಕು ಖುಷಿಪಡುತ್ತಿದ್ದಾರೆ. ಮನರಂಜನೆಯ ಜೊತೆಗೆ ಒಂದೊಳ್ಳೆ ಸಂದೇಶವನ್ನು ಕೂಡ ಸಿನಿಂಆ ದಾಟಿಸಿದೆ. ಸಂತೋಷ್ ಆನಂದ್‌ರಾನ್ ಒಂದು ಸದಭಿರುಚಿ ಸಿನಿಮಾ ಕಟ್ಟಿಕೊಟ್ಟು ಗೆದ್ದಿದ್ದಾರೆ. ರಾಜ್ಯಾದ್ಯಂತ 'ರಾಘವೇಂದ್ರ ಸ್ಟೋರ್ಸ್' ಅಡುಗೆ ಗಮನ ಪಸರಿಸಿದೆ.
ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಕಳೆದ ವರ್ಷ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿ ಸಿನಿಮಾ ರಿಲೀಸ್ ಆಗಬೇಕಿತ್ತು. ರಿಲೀಸ್ ಡೇಟ್ ಕೂಡ ಘೋಷಣೆ ಆಗಿತ್ತು. ಆದರೆ ನಂತರ ಸಿನಿಮಾ ರಿಲೀಸ್ ಮುಂದೂರಿ ಹೊಂಬಾಳೆ ಸಂಸ್ಥೆ 'ಕಾಂತಾರ' ಸಿನಿಮಾ ತೆರೆಗೆ ತಂದಿತ್ತು. ರಿಷಬ್ ಶೆಟ್ಟಿ ಆರ್ಭಟದಿಂದ ಜಗ್ಗಣ್ಣನ ಸಿನಿಮಾ ಪ್ರೇಕ್ಷಕರ ಮುಂದೆ ಬರುವುದು ತಡವಾಯಿತು. ಈ ನಡುವೆ ಈ ಸಿನಿಮಾ ನೇರವಾಗಿ ಓಟಿಟಿಗೆ ಬರುತ್ತೆ ಎನ್ನುವ ಗುಸುಗುಸು ಶುರುವಾಗಿತ್ತು. ಆದರೆ ಅದನ್ನು ಸುಳ್ಳು ಮಾಡಿ ಚಿತ್ರತಂಡ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತಂದಿದೆ.

ಅಂತು ಇಂತೂ ಈ ವಾರ 'ರಾಘವೇಂದ್ರ ಸ್ಟೋರ್ಸ್' ಓಪನ್ ಆಗಿದೆ. ರುಚಿಕರವಾದ ಹಾಸ್ಯ ರಸಾಯಣ ಉಂಡು ಪ್ರೇಕ್ಷಕರು ಖುಷಿಪಡುತ್ತಿದ್ದಾರೆ. 35 ವರ್ಷ ಮೇಲ್ಪಟ್ಟವರು ಮದುವೆ ಆಗಲು ಏನೆಲ್ಲಾ ಸರ್ಕಸ್ ಮಾಡುತ್ತಾರೆ? ಮದುವೆ ನಂತರ ಕೆಲವರಿಗೆ ಎದುರಾಗುವಂತಹ ಸಮಸ್ಯೆಗಳ ಬಗ್ಗೆಯೂ ಸಿನಿಮಾದಲ್ಲಿ ಚರ್ಚಿಸಲಾಗಿದೆ. ಹೊಂಬಾಳೆ ಫಿಲ್ಮ್ಸ್ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನು ಚಿತ್ರದ ಡಿಜಿಟಲ್ ರೈಟ್ಸ್ ಅಮೇಜಾನ್ ಪ್ರೈಮ್ ಪಾಲಾಗಿದೆ. ಜೊತೆಗೆ ಸ್ಯಾಟಲೈಟ್(ಟಿವಿ) ರೈಟ್ಸ್ ಸ್ಟಾರ್ ಸುವರ್ಣ ಕೊಂಡುಕೊಂಡಿದೆ.
ಯಾವುದೇ ಸಿನಿಮಾ ಆದರೂ ಥಿಯೇಟರ್‌ಗಳಲ್ಲಿ ರಿಲೀಸ್ ಆಗಿ 47 ದಿನಗಳ ನಂತರ ಓಟಿಟಿಗೆ ಬರುವಂತೆ ಒಪ್ಪಂದವಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ದೊಡ್ಡ ದೊಡ್ಡ ಸಿನಿಮಾಗಳೇ ತಿಂಗಳಿಗೂ ಮುನ್ನ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಬರ್ತಿದೆ. ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆಯ 'ಗುರುದೇವ್ ಹೊಯ್ಸಳ' ಸಿನಿಮಾ ಕೂಡ ಇದೇ ಹಾದಿ ಹಿಡಿದಿತ್ತು. ಇದೀಗ 'ರಾಘವೇಂದ್ರ ಸ್ಟೋರ್ಸ್' ಸಿನಿಮಾ ಅಮೇಜಾನ್ ಪ್ರೈಮ್‌ನಲ್ಲಿ ಯಾವಾಗ ಸ್ಟ್ರೀಮಿಂಗ್ ಆಗುತ್ತದೆ ಎನ್ನುವ ಬಗ್ಗೆ ಕುತೂಹಲ ಕೆರಳಿದೆ. ಜೂನ್‌ನಲ್ಲಿ ಸಿನಿಮಾ ಓಟಿಟಿಗೆ ಬರುವ ಸಾಧ್ಯತೆಯಿದೆ.

ಇನ್ನು ಚಿತ್ರದಲ್ಲಿ ಜಗ್ಗಣ್ಣನ ಜೋಡಿಯಾಗಿ ಶ್ವೇತಾ ಶ್ರೀವಾತ್ಸವ್ ಬಣ್ಣ ಹಚ್ಚಿದ್ದಾರೆ. ಹಯವದನನ ತಂದೆಯಾಗಿ ದತ್ತಣ್ಣ ಮಿಂಚಿದ್ರೆ ಸಂಗಡಿಗರಾಗಿ ರವಿಶಂಕರೇ ಗೌಡ ಹಾಗೂ ಮಿತ್ರಾ ನಟಿಸಿದ್ಧಾರೆ. ಮತ್ತೊಂದು ಪ್ರಮುಖ ಪಾತ್ರದಲ್ಲಿ ಅಚ್ಯುತ್ ಕುಮಾರ್ ಕಾಣಿಸಿಕೊಂಡಿದ್ದಾರೆ. ರಸಬಾಳೆ ಅನ್ನುವ ಊರಿನಲ್ಲಿ ನಡೆಯುವ ಕಥೆಯನ್ನು ತೆರೆಗೆ ತರಲಾಗಿದೆ. ಶ್ರೀಶ ಕುದುವಳ್ಳಿ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ.
ಚಿತ್ರರಂಗದಲ್ಲಿ ಜಗ್ಗೇಶ್ 40 ವರ್ಷ ಪೂರೈಸಿದ್ದಾರೆ. ಈ ಸಂಭ್ರಮದಲ್ಲಿ ಹೊಂಬಾಳೆ ಸಂಸ್ಥೆ ಸ್ಪೆಷಲ್ ತ್ರಿಬ್ಯೂಟ್ ನೀಡಿದೆ. ಚಿತ್ರರಂಗದಲ್ಲಿ ಸಾಕಷ್ಟು ಏಳುಬೀಳು ಕಂಡಿರುವ ನವರಸ ನಾಯಕ ಇವತ್ತಿಗೂ ಮಿನಿಮಮ್ ಗ್ಯಾರೆಂಟಿ ನಟ ಎನಿಸಿಕೊಂಡಿದ್ದಾರೆ. 'ರಾಘವೇಂದ್ರ ಸ್ಟೋರ್ಸ್' ಚಿತ್ರಕ್ಕೆ ಸಿಗುತ್ತಿರುವ ರೆಸ್ಪಾನ್ಸ್ ಆ ಮಾತನ್ನು ಮತ್ತೊಮ್ಮೆ ಸಾಬೀತು ಮಾಡಿದೆ. ಇನ್ನು ಸಂತೋಷ್ ಆನಂದ್‌ರಾನ್ ಹೊಂಬಾಳೆ ಸಂಸ್ಥೆಯಲ್ಲೇ ಮತ್ತೊಂದು ಸಿನಿಮಾ ಮಾಡಿ ಸಕ್ಸಸ್ ಕಂಡಿದ್ದಾರೆ.
ಈಗಾಗಲೇ 'ರಾಜಕುಮಾರ', 'ಯುವರತ್ನ' ಸಿನಿಮಾಗಳು ಹೊಂಬಾಳೆ- ಆನಂದ್‌ರಾಮ್ ಕಾಂಬಿನೇಷನ್‌ನಲ್ಲಿ ಮೂಡಿ ಬಂದಿದ್ದವು. 'ರಾಘವೇಂದ್ರ ಸ್ಟೋರ್ಸ್' ನಂತರ 'ಯುವ' ಚಿತ್ರಕ್ಕೂ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಪುನೀತ್ ರಾಜ್‌ಕುಮಾರ್ ಜೊತೆಗೆ ಹ್ಯಾಟ್ರಿಕ್ ಸಿನಿಮಾ ಕೂಡ ಪ್ಲ್ಯಾನ್ ಆಗಿತ್ತು. ಆದರೆ ಅದು ನೆರವೇರಲೇಯಿಲ್ಲ. ಇನ್ನು 'ರಾಘವೇಂದ್ರ ಸ್ಟೋರ್ಸ್' ಸಿನಿಮಾ ಕೊನೆಗೆ ಅಪ್ಪುಗೆ ಚಿತ್ರತಂಡ ವಿಶೇಷವಾಗಿ ನಮನ ಸಲ್ಲಿದಿದೆ.


Click it and Unblock the Notifications











