Jailer OTT: ರಜನಿಕಾಂತ್- ಶಿವಣ್ಣ ನಟನೆಯ 'ಜೈಲರ್' ಓಟಿಟಿ ರಿಲೀಸ್ ಎಲ್ಲಿ, ಯಾವಾಗ?
ರಜನಿಕಾಂತ್ ನಟನೆಯ 'ಜೈಲರ್' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಸೂಪರ್ ಸ್ಟಾರ್ ಸ್ಟ್ರಾಂಗ್ ಸ್ಕ್ರೀನ್ ಪ್ರಸೆನ್ಸ್, ನೆಲ್ಸನ್ ಡೈರೆಕ್ಷನ್‌ಗೆ ಸಿನಿರಸಿಕರು ಫಿದಾ ಆಗಿದ್ದಾರೆ. ಶಿವಣ್ಣ ಗೆಸ್ಟ್ ಅಪಿಯರೆನ್ಸ್ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್ ಆಗಿದೆ. ಆಕ್ಷನ್ ಎಂಟರ್‌ಟೈನರ್ ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕ್ಲಾಸ್, ಮಾಸ್ ಆಡಿಯನ್ಸ್ ಮನಗೆದ್ದಿದೆ.
ಸನ್ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಕಲೈನಿಧಿ ಮಾರನ್ 'ಜೈಲರ್' ಸಿನಿಮಾ ನಿರ್ಮಾಣ ಮಾಡಿದ್ದಾರೆ. ಮೋಹನ್ ಲಾಲ್, ರಮ್ಯಾಕೃಷ್ಣ, ಜಾಕಿಶ್ರಾಫ್, ತಮನ್ನಾ, ಸುನಿಲ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಆಕ್ಷನ್ ಜೊತೆಗೆ 'ಜೈಲರ್' ಚಿತ್ರದಲ್ಲಿರುವ ಕಾಮಿಡಿ ಕೂಡ ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ. ಒಂದೊಳ್ಳೆ ಮೆಸೇಜ್ ಕೂಡ ಚಿತ್ರದಲ್ಲಿದ್ದು ಕಂಪ್ಲೀಟ್ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ ಎನಿಸಿಕೊಳ್ತಿದೆ. ರಾಜ್ಯದಲ್ಲೂ ಚಿತ್ರಕ್ಕೆ ದೊಡ್ಡ ಓಪನಿಂಗ್ ಸಿಗುವ ನಿರೀಕ್ಷೆಯದೆ. ಶಿವಣ್ಣ ನಟಿಸಿರೋದ್ರಿಂದ ಬಹಳ ಅದ್ಧೂರಿಯಾಗಿಯೇ ಸಿನಿಮಾ ಇಲ್ಲಿ ಬಿಡುಗಡೆಯಾಗಿದೆ.

ಕಥೆ ಹಳೆಯದ್ದೇ ಅನ್ನಿಸಿದರೂ ಹೊಸ ರೀತಿಯಲ್ಲಿ ತೆರೆಗೆ ತಂದು ನೆಲ್ಸನ್ ಸಕ್ಸಸ್ ಕಂಡಿದ್ದಾರೆ. ಫ್ಯಾಮಿಲಿ ಆಡಿಯನ್ಸ್, ಫ್ಯಾನ್ಸ್ ಹೀಗೆ ಎಲ್ಲರಿಗೂ ಇಷ್ಟವಾಗುವಂತೆ ಬ್ಯಾಲೆನ್ಸ್ ಮಾಡಿ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಅದಕ್ಕೆ ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಸಾಥ್ ಸಿಕ್ಕಿದೆ. ಎಲ್ಲಾ ವಿಭಾಗದಲ್ಲೂ ಒಳ್ಳೆ ಅಂಕ ಗಳಿಸಿರುವ ಸಿನಿಮಾ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ಉಣಬಡಿಸುತ್ತಿದೆ.
ಜೈಲರ್ ಓಟಿಟಿಗೆ ಯಾವಾಗ?
ಇತ್ತೀಚಿಗೆ ಥಿಯೇಟರ್‌ಗೆ ಬರುವ ಸಿನಿಮಾಗಳು ಅಷ್ಟೇ ಬೇಗ ಓಟಿಟಿಗೆ ಬಂದುಬಿಡುತ್ತವೆ. ದೊಡ್ಡ ದೊಡ್ಡ ಸಿನಿಮಾಗಳೇ ರಿಲೀಸ್ ಆಗಿ ತಿಂಗಳು ಕಳೆಯುವ ಮುನ್ನ ಡಿಜಿಟಲ್ ಫ್ಲಾಟ್‌ಪಾರ್ಮ್‌ನಲ್ಲಿ ದರ್ಶನ ಕೊಡುತ್ತಿವೆ. ಓಟಿಟಿಗೆ ದೊಡ್ಡ ವೀಕ್ಷಕ ವರ್ಗ ಇದೆ. ಅಷ್ಟೇ ಅಲ್ಲ, ಇದರಿಂದ ಒಳ್ಳೆ ಆದಾಯವೂ ಸಿನಿಮಾಗಳಿಗೆ ಸಿಗುತ್ತಿದೆ. ಅದೇ ಕಾರಣಕ್ಕೆ ಓಟಿಟಿ ರಿಲೀಸ್ ಇತ್ತೀಚೆಗೆ ಮಹತ್ವ ಪಡೆದುಕೊಳ್ಳುತ್ತಿದೆ. ಈಗಾಗಲೇ ಥಿಯೇಟರ್‌ನಲ್ಲಿ ಸಿನಿಮಾ ನೋಡಿರುವವರು, ನೋಡದೇ ಇರುವವರು ಓಟಿಟಿಯಲ್ಲಿ ಸಿನಿಮಾ ನೋಡುತ್ತಾರೆ. 'ಜೈಲರ್' ಮುಂದಿನ ತಿಂಗಳೇ ಸ್ಮಾಲ್‌ಸ್ಕ್ರೀನ್(ಓಟಿಟಿ)ಗೆ ಬಂದ್ರು ಅಚ್ಚರಿಪಡಬೇಕಿಲ್ಲ.

ಸನ್ ನೆಕ್ಸ್ಟ್‌ನಲ್ಲಿ 'ಜೈಲರ್'
ದೊಡ್ಡ ದೊಡ್ಡ ಸಿನಿಮಾಗಳನ್ನು ನೆಟ್‌ಫ್ಲಿಕ್ಸ್ ಹಾಗೂ ಅಮೇಜಾನ್ ಪ್ರೈಂ ಸಂಸ್ಥೆಗಳು ಖರೀದಿ ಮಾಡುತ್ತವೆ. ಆದರೆ 'ಜೈಲರ್' ಸನ್ ಪಿಕ್ಚರ್ಸ್ ಬ್ಯಾನರ್ ಸಿನಿಮಾ. ಅದೇ ಸಂಸ್ಥೆಯ ಸನ್ ನೆಕ್ಸ್ಟ್ ಡಿಜಿಟಲ್ ಫ್ಲಾಟ್‌ಪಾರ್ಮ್, ಆಪ್ ಇದೆ. ಹಾಗಾಗಿ 'ಜೈಲರ್' ಸಿನಿಮಾ ಅದರಲ್ಲೇ ಸ್ಟ್ರೀಮಿಂಗ್ ಆಗಲಿದೆ. ಸಾಮಾನ್ಯವಾಗಿ ಸಿನಿಮಾ ರಿಲೀಸ್ ಆಗಿ 27 ದಿನಗಳ ಬಳಿಕ ಓಟಿಟಿಗೆ ಬರುತ್ತದೆ. ಹಾಗಾಗಿ ಸೆಪ್ಟೆಂಬರ್ ಕೊನೆಗೆ 'ಜೈಲರ್' ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಸಿಗಲಿದೆ. ಇನ್ನು ಸನ್ ಟಿವಿಯಲ್ಲೇ ಸಿನಿಮಾ ಪ್ರಸಾರವಾಗಲಿದೆ. ಕನ್ನಡಕ್ಕೂ ಡಬ್ ಆಗಿರುವ ಸಿನಿಮಾ ಉದಯ ಟಿವಿಯಲ್ಲಿ ದಸರಾ ವೇಳೆಗೆ ಟಿವಿಗೆ ಬರಲಿದೆ.
ಜೈಲರ್ ಕಥೆ ಏನು?
ನಿವೃತ್ತ 'ಜೈಲರ್' ಮುತ್ತುವೇಲ್ ಪಾಂಡಿಯನ್ ತನ್ನ ಫ್ಯಾಮಿಲಿ ಜೊತೆ ಜೀವನ ಸಾಗಿಸುತ್ತಿರುತ್ತಾನೆ. ಮಗ ಅರ್ಜುನ್‌ನನ್ನು ಪೊಲೀಸ್ ಇಲಾಖೆಗೆ ಸೇರಿಸಿರುತ್ತಾನೆ. ಆತ ಕೂಡ ಬಹಳ ನಿಷ್ಠಾವಂತ ಅಧಿಕಾರಿ. ಆದರೆ ವಿಗ್ರಹಗಳ ಕಳ್ಳ ಸಾಗಣೆ ಗ್ಯಾಂಗ್ ಹಿಂದೆ ಬೀಳುವ ಅರ್ಜುನ್ ದಿಢೀರನೇ ಕಣ್ಮರೆ ಆಗುತ್ತಾನೆ. ಮಗನಿಗಾಗಿ ಮುತ್ತುವೇಲ್ ಹುಡುಕಾಟ ಶುರುವಾಗುತ್ತದೆ. ಮಗ ಸಿಕ್ತಾನಾ? ಕೊನೆಗೆ ಮುತ್ತುವೇಲ್‌ಗೆ ಗೊತ್ತಾಗುವ ಶಾಕಿಂಗ್ ಸಂಗತಿ ಏನು? ಮುಂದೇನಾಗುತ್ತದೆ? ಅನ್ನೋದೇ 'ಜೈಲರ್' ಒನ್‌ಲೈನ್ ಸ್ಟೋರಿ.
ಶಿವಣ್ಣನ ಅಭಿನಯಕ್ಕೆ ಬಹುಪರಾಕ್
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಮಂಡ್ಯದ ಮಾಫಿಯಾ ಡಾನ್ ನರಸಿಂಹ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೇವಲ ಏಳೆಂಟು ನಿಮಿಷ ಮಾತ್ರ ತೆರೆಮೇಲೆ ಕಾಣಿಸಿಕೊಳ್ಳುವ ಶಿವಣ್ಣ ಫುಲ್ ಮಾರ್ಕ್ಸ್ ಗಿಟ್ಟಿಸಿದ್ದಾರೆ. ಅದರಲ್ಲೂ ಕ್ಲೈಮ್ಯಾಕ್ಸ್‌ನಲ್ಲಿ ಶಿವಣ್ಣನ ಎಂಟ್ರಿಗೆ ತಮಿಳು ಪ್ರೇಕ್ಷಕರು ಫಿದಾ ಆಗೋಗಿದ್ದಾರೆ. ಮೋಹನ್ ಲಾಲ್, ಜಾಕಿಶ್ರಾಫ್ ಕೂಡ ಗೆಸ್ಟ್ ಅಪಿಯರೆನ್ಸ್ ಮಾತ್ರ ಗಮನ ಸೆಳೆದಿದ್ದಾರೆ.


Click it and Unblock the Notifications











