ರಮ್ಯಾಕೃಷ್ಣ ಸೆಕೆಂಡ್ ಲವ್; ಮತ್ತೆ ಬನ್ನಿ ಪ್ರೀತ್ಸೋಣ ಎನ್ನುತ್ತಿರುವ ಶಿವಗಾಮಿ
ತಮಿಳು ನಟಿ ರಮ್ಯಾಕೃಷ್ಣ ಕನ್ನಡ ಸಿನಿರಸಿಕರಿಗೂ ಚಿರಪರಿಚಿಯ ಹೆಸರು. ದಕ್ಷಿಣದ 4 ಭಾಷೆಗಳ ಸಿನಿಮಾಗಳಲ್ಲಿ ನಟಿಸಿ ಮೋಡಿ ಮಾಡಿದಾಕೆ. ಬಾಲಿವುಡ್ ಸಿನಿಮಾಗಳಲ್ಲಿ ಮಿಂಚಿ ಬಂದಿದ್ದಾರೆ. ಒಂದ್ಕಾಲದಲ್ಲಿ ಬಿಂದಾಸ್ ಪಾತ್ರಗಳಲ್ಲಿ ನಟಿಸಿ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದ ರಮ್ಯಾಕೃಷ್ಣ ಸದ್ಯ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇದೆಲ್ಲದರ ನಡುವೆ ಒಂದು ರಿಯಾಲಿಟಿ ಶೋ ಮೂಲಕ ಹೊಸ ಅವತಾರದಲ್ಲಿ ಅಭಿಮಾನಿಗಳ ಮುಂದೆ ಬರಲಿದ್ದಾರೆ.
ರಮ್ಯಾಕೃಷ್ಣ ಈಗಾಗಲೇ ಕೆಲ ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಓಟಿಟಿ ವೆಬ್ ಸೀರಿಸ್‌ನಲ್ಲಿ ಸಹ ನಟಿಸಿದ್ದಾರೆ. ಇದೀಗ ಬನಿಜಯ್ ಏಷ್ಯಾ ಸಂಸ್ಥೆ ತಮಿಳಿನಲ್ಲಿ 'ಸೆಕೆಂಡ್ ಲವ್' ಎಂಬ ಡೇಟಿಂಗ್ ಶೋ ಪ್ಲ್ಯಾನ್ ಮಾಡಿದೆ. ರಮ್ಯಾಕೃಷ್ಣ ಕಾರ್ಯಕ್ರಮ ಹೋಸ್ಟ್ ಮಾಡಲಿದ್ದಾರೆ. ಜಿಯೋ ಹಾಟ್‌ಸ್ಟರ್‌ನಲ್ಲಿ ಈ ಶೋ ಸ್ಟ್ರೀಮಿಂಗ್ ಆಗಲಿದೆ. ಈಗಾಗಲೇ ಓಟಿಟಿಯಲ್ಲಿ ಸಾಕಷ್ಟು ಶೋಗಳು ಸ್ಟ್ರೀಮಿಂಗ್ ಆಗುತ್ತಿವೆ. ಕೆಲ ಶೋಗಳು ವಿವಾದಕ್ಕೂ ಕಾರಣವಾಗಿದೆ. ಸದ್ಯ ಶುರವಾಗುವ ಮುನ್ನ 'ಸೆಕೆಂಡ್ ಲವ್' ಶೋ ಚರ್ಚೆ ಹುಟ್ಟಾಕ್ಕಿದೆ.

ಬ್ರೇಕ್ ಆಗಿರುವ ಹಾರ್ಟ್‌ಗೆ ಬ್ಯಾಂಡೇಜ್ ಹಾಕುವ ಕೆಲಸವನ್ನು ಈ ಶೋನಲ್ಲಿ ಮಾಡಲಾಗ್ತಿದೆ. ಲವ್ ಬ್ರೇಕಪ್ ಆಗಿರುವ 12 ಮಂದಿ ಒಂಟಿ ಸ್ಪರ್ಧಿಗಳು ಈ ಶೋನಲ್ಲಿ ಭಾಗವಹಿಸಲಿದ್ದಾರೆ. ಸ್ಪರ್ಧಿಗಳು ಪರಸ್ಪರ ಭಾವನಾತ್ಮಕ ಮಾತು, ಆಟ ಹಾಗೂ ಅರ್ಥಪೂರ್ಣ ಅನುಭವದ ಮೂಲಕ ಮತ್ತೆ ಪ್ರೀತಿ ಕಂಡುವಂತಹ ಪ್ರಯತ್ನ ಮಾಡುವ ಶೋ ಇದು. ಒಂದರ್ಥದಲ್ಲಿ ಮತ್ತೆ ಪ್ರೀತಿಯಲ್ಲಿ ಬೀಳುವ ವಿಚಾರ ಶೋನಲ್ಲಿ ಇರಲಿದೆ. ರಮ್ಯಾಕೃಷ್ಣ ಹೇಗೆ ಶೋ ನಿರೂಪಣೆ ಮಾಡ್ತಾರೆ ಎನ್ನುವುದೇ ಕುತೂಹಲ ಮೂಡಿಸಿದೆ. ಬ್ಯಾಂಡೇಜ್ ಆಗಿರುವ ಒಡೆದ ಹೃದಯವನ್ನು ರಮ್ಯಾಕೃಷ್ಣ ಕೈಯಲ್ಲಿ ಹಿಡಿದಿದ್ದು ಹಿಂದೆ ಒಂದಷ್ಟು ಜೋಡಿಗಳು ಇರುವಂತೆ ಪೋಸ್ಟರ್ ರಿಲೀಸ್ ಆಗಿದೆ.
ಒಮ್ಮೊಂದು ಅವಕಾಶ.. ಮತ್ತೊಂದು ಲವ್ ಸ್ಟೋರಿ ಎಂದು ಬರೆದು ಜಿಯೋ ಹಾಟ್‌ಸ್ಟರ್ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟರ್ ಹಂಚಿಕೊಂಡಿದ್ದಾರೆ. ಶೀಘ್ರದಲ್ಲೇ ಶೋ ಆರಂಭವಾಗುವುದಾಗಿ ಮಾಹಿತಿ ನೀಡಿದ್ದಾರೆ. ಕಿರುತೆರೆಯಲ್ಲಿ ಸಾಮಾನ್ಯವಾಗಿ ಸ್ಕ್ರಿಪ್ಟೆಡ್ ಶೋಗಳು ಪ್ರಸಾರ ಆಗುತ್ತವೆ. ಕೆಲವೊಮ್ಮೆ ಸ್ಕ್ರಿಪ್ಟ್ ಇಲ್ಲದೇ ಬಿಗ್‌ಬಾಸ್ ರೀತಿಯ ಶೋಗಳನ್ನ ವೀಕ್ಷಕರ ಮುಂದೆ ತರುತ್ತಾರೆ. ಅಂಥದ್ದೇ ಪ್ರಯತ್ನ 'ಸೆಕೆಂಡ್ ಲವ್'.
ಪ್ರೀತಿಯಲ್ಲಿ ಸೋತವರು, ಲವ್ ಬ್ರೇಕಪ್ ಆಗಿರುವವರನ್ನು ಒಂದು ಮನೆಯಲ್ಲಿ ಕೂಡಿಹಾಕಿ ಬಿಗ್‌ಬಾಸ್ ರೀತಿ ಟಾಸ್ಕ್‌ಗಳನ್ನು ಕೊಟ್ಟು ಆಡಿಸುವ ಶೋ ಇದು ಎನ್ನಲಾಗ್ತಿದೆ. ಶೀಘ್ರದಲ್ಲೇ ಶೋ ಬಗ್ಗೆ ಮತ್ತಷ್ಟು ಮಾಹಿತಿ ಸಿಗಲಿದೆ. ತಮಿಳುನಾಡಿನಲ್ಲಿ ಇಂತಹ ಶೋಗಳನ್ನು ಜನ ಒಪ್ಪುತ್ತಾರಾ ಎನ್ನುವ ಅನುಮಾನ ಮೂಡಿದೆ. ತಮಿಳು ಬಿಗ್‌ಬಾಸ್ ಶೋಗೆ ಆರಂಭದಲ್ಲಿ ವಿರೋಧ ವ್ಯಕ್ತವಾಗಿತ್ತು. 'ಸೆಕೆಂಡ್ ಲವ್' ಕಥೆ ಏನಾಗುತ್ತೋ ಕಾದು ನೋಡಬೇಕು.
ರಮ್ಯಾಕೃಷ್ಣ ಈಗ ಪೋಷಕ ಪಾತ್ರಗಳಲ್ಲಿ ಹೆಚ್ಚು ನಟಿಸುತ್ತಿದ್ದಾರೆ. ಕನ್ನಡದಲ್ಲಿ ಕೊನೆಯದಾಗಿ 'ಅಂಜನಿಪುತ್ರ' ಚಿತ್ರದಲ್ಲಿ ಬಣ್ಣ ಹಚ್ಚಿದ್ದರು. ಪುನೀತ್ ರಾಜ್‌ಕುಮಾರ್ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ತಮಿಳಿನಲ್ಲಿ ರಮ್ಯಾಕೃಷ್ಣ ನಟನೆಯ 'ಜೈಲರ್-2' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. 'ಘಟ್ಟ ಕುಸ್ತಿ-2' ಹಾಗೂ 'ಪಾಕೆಟ್ ನಾವೆಲ್' ಎಂಬ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತೆಲುಗಿನಲ್ಲಿ ದುಲ್ಕರ್ ಸಲ್ಮಾನ್ ನಟನೆಯ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಅಲ್ಲು ಅರ್ಜುನ್ ಜೊತೆ 'ರಾಕಾ' ಚಿತ್ರದಲ್ಲಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಇದೆಲ್ಲದರ ನಡುವೆ 'ಸೆಕೆಂಡ್ ಲವ್' ಶೋ ಬರ್ತಿದೆ.
ದಕ್ಷಿಣದಲ್ಲಿ 'ಸೆಕೆಂಡ್ ಲವ್' ಹೊಸ ಕಾನ್ಸೆಪ್ಟ್ ಇರುವ ಓಟಿಟಿ ರಿಯಾಲಿಟಿ ಶೋ. ಬೇರೆ ಭಾಷೆಗಳಿಗೂ ಡಬ್ ಮಾಡಿ ಪ್ರಸಾರ ಮಾಡು ಸಾಧ್ಯತೆಯಿದೆ. ಒಂದು ವೇಳೆ ಶೋ ಹಿಟ್ ಆಗಿಬಿಟ್ರೆ ತೆಲುಗು, ಕನ್ನಡ ಹಾಗೂ ಮಲಯಾಳಂನಲ್ಲಿ ಕೂಡ ಇಂತಹ ಪ್ರಯತ್ನಗಳು ನಡೆಯಬಹುದು.


Click it and Unblock the Notifications