3 ಹೊಸ ಕನ್ನಡ ಚಿತ್ರಗಳು ಓಟಿಟಿಗೆ ಬಂದಿದೆ; ಭಾನುವಾರ ಮನೆಯಲ್ಲೇ ಸಿನಿಮಾ ನೋಡಿ
ಓಟಿಟಿಗೆ ಕನ್ನಡ ಸಿನಿಮಾ ಹಾಗೂ ವೆಬ್ ಸೀರಿಸ್‌ಗಳು ಬರೋದೇ ಅಪರೂಪ. ಈ ವಾರ ದೊಡ್ಡ ಸಿನಿಮಾಗಳು ತೆರೆಗೆ ಬಂದಿಲ್ಲ. 'ಪಪ್ಪಿ' ಎಂಬ ಮಕ್ಕಳ ಸಿನಿಮಾವೊಂದು ತೆರೆಗೆ ಬಂದು ಸದ್ದು ಮಾಡ್ತಿದೆ. ಇನ್ನುಳಿದಂತೆ ಐಪಿಎಲ್ ಫೀವರ್ ಜೋರಾಗಿದೆ. ಇದೆಲ್ಲದರ ನಡುವೆ 3 ಕನ್ನಡ ಚಿತ್ರಗಳು ಓಟಿಟಿಗೆ ಲಗ್ಗೆ ಇಟ್ಟಿದೆ.
ಕನ್ನಡ ಸಿನಿಮಾಗಳನ್ನು ಕೊಂಡುಕೊಳ್ಳಲು ಓಟಿಟಿಗೆ ಸಂಸ್ಥೆಗಳು ಹಿಂದೇಟು ಹಾಕುತ್ತಿವೆ. ಸ್ಟಾರ್ ನಟರ ಸಿನಿಮಾಗಳನ್ನು ಮಾತ್ರ ಕೇಳ್ತಾರೆ. ಇನ್ನುಳಿದಂತೆ ಚಿತ್ರಮಂದಿರಗಳಲ್ಲಿ ಒಳ್ಳೆ ರೆಸ್ಪಾನ್ಸ್ ಗಿಟ್ಟಿಸಿದ ಸಿನಿಮಾಗಳನ್ನು ಕೊಂಡುಕೊಳ್ಳಲು ಮೀನಾಮೇಷ ಎಣಿಸುತ್ತಾರೆ. ಇದೇ ಕಾರಣಕ್ಕೆ ಕಳೆದ ವರ್ಷ ಬಿಡುಗಡೆಯಾಗಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದ್ದ ಸಿನಿಮಾಗಳು ಈ ವಾರ ಓಟಿಟಿಗೆ ಬರುವಂತಾಗಿದೆ.

ಈ ವಾರ ಮೂರು ಕನ್ನಡ ಸಿನಿಮಾಗೂ ಓಟಿಟಿಗೆ ಬಂದಿವೆ. ಅದರಲ್ಲಿ ಒಂದು ಚಿತ್ರವನ್ನು 99 ರೂಪಾಯಿ ಪಾವತಿಸಿ ವೀಕ್ಷಿಸಬೇಕಿದೆ. ಇನ್ನುಳಿದ 2 ಸಿನಿಮಾಗಳನ್ನು ಉಚಿತವಾಗಿ ನೋಡಬಹುದು. ಮುಂದೆ ಓದಿ.
ಕಾಲಪತ್ಥರ್
ವಿಕ್ಕಿ ವರುಣ್ ನಿರ್ದೇಶಿಸಿ ನಟಿಸಿದ್ದ 'ಕಾಲಪತ್ಥರ್' ಸಿನಿಮಾ ಸದ್ದಿಲ್ಲದೇ ಓಟಿಟಿಗೆ ಬಂದಿದೆ. ಸತ್ಯಪ್ರಕಾಶ್ ಕಥೆ ಬರೆದಿದ್ದ ಚಿತ್ರದಲ್ಲಿ ಧನ್ಯಾ ರಾಮ್‌ಕುಮಾರ್ ನಾಯಕಿಯಾಗಿ ಮಿಂಚಿದ್ದರು. ಕಳೆದ ವರ್ಷ ಸೆಪ್ಟೆಂಬರ್ 13ಕ್ಕೆ ಈ ರೊಮ್ಯಾಂಟಿಕ್ ಆಕ್ಷನ್ ಡ್ರಾಮಾ ಸಿನಿಮಾ ತೆರೆಗೆ ಬಂದಿತ್ತು. ಟಿ. ಎಸ್ ನಾಗಾಭರಣ, ಅಚ್ಯುತ್‌ಕುಮಾರ್, ರಾಜೇಶ್ ನಟರಂಗ ತಾರಾಗಣದಲ್ಲಿದ್ದಾರೆ. ಅನೂಪ್ ಸಿಳೀನ್ ಸಂಗೀತ ಚಿತ್ರಕ್ಕಿದೆ.
ಉತ್ತರ ಕರ್ನಾಟಕದ ಮೂಡಲಪುರದ ಯುವಕ ಶಂಕ್ರ ಸೈನ್ಯ ಸೇರಿಸುತ್ತಾನೆ. ಊರಿನ ಜನ ಅವನನ್ನು ಮಹಾನ್ ಸಾಹಸಿ, ಬಂದೂಕು ಹಿಡಿದು ದೇಶ ಕಾಯುತ್ತಾನೆ ಎಂದೇ ಭಾವಿಸಿರುತ್ತಾರೆ. ಆದರೆ ಆತ ಕಾಶ್ಮೀರದ ಸೇನಾ ಬೆಟಾಲಿಯನ್‌ನಲ್ಲಿ ಅಡುಗೆ ಮಾಡುವ ಕೆಲಸ ಮಾಡಿಕೊಂಡಿರುತ್ತಾನೆ. ಅದೊಂದು ದಿನ ಉಗ್ರರ ವಿರುದ್ಧ ಸೆಣಸಾಗಿ ಶಂಕ್ರ ಹೀರೊ ಆಗಿಬಿಡುತ್ತಾನೆ. ಹುಟ್ಟೂರಲ್ಲಿ ಅವನ ಮೂರ್ತಿ ಎದ್ದು ನಿಲ್ಲುತ್ತದೆ. ಮುಂದೆ ಏನೆಲ್ಲಾ ಆಗುತ್ತದೆ ಎನ್ನುವುದು ಇನ್ನುಳಿದ ಸಿನಿಮಾ ಕಥೆ. ಸನ್‌ನೆಕ್ಸ್ಟ್ ಓಟಿಟಿಯಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ.

ಕೆರೆಬೇಟೆ
ರಾಜ್‌ಗುರು ನಿರ್ದೇಶನದಲ್ಲಿ ಗೌರಿಶಂಕರ್, ಬಿಂದು ಶಿವರಾಮ್ ನಟನೆಯ ಸಿನಿಮಾ 'ಕೆರೆಬೇಟೆ'. ಮಲೆನಾಡಿನ ಭಾಗದ ಕಥೆ ಚಿತ್ರದಲ್ಲಿದೆ. ಕಳೆದ ವರ್ಷ ಮಾರ್ಚ್ 15ಕ್ಕೆ ತೆರೆಗೆ ಬಂದಿದ್ದ ಸಿನಿಮಾ ಯಶಸ್ವಿಯಾಗಿ 50 ದಿನ ಪೂರೈಸಿತ್ತು. ಇದೀಗ ಅಮೇಜಾನ್ ಪ್ರೈಂ ವೀಡಿಯೋದಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಆದರೆ ಸದ್ಯಕ್ಕೆ 99 ರೂಪಾಯಿ ಪಾವತಿಸಿ ಪ್ರೈಂ ಚಂದಾದಾರರು ಸಿನಿಮಾ ವೀಕ್ಷಿಸುವ ಅವಕಾಶವಿದೆ. ಮುಂದಿನ ವಾರದಿಂದ ಉಚಿತವಾಗಿ ಸಿಗುವ ಸಾಧ್ಯತೆಯಿದೆ.
ಮಲೆನಾಡಿನ ಭಾಗದಲ್ಲಿ ಮೀನು ಹಿಡಿಯುವ 'ಕೆರೆಬೇಟೆ' ಪದ್ಧತಿ ಹಾಗೂ ಅಂತರ್ಜಾತಿ ಪ್ರೀತಿಯ ಕಥೆ ಚಿತ್ರದಲ್ಲಿದೆ. ಗೋವಾ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಈ ಸಿನಿಮಾ ಪ್ರದರ್ಶನ ಕಂಡಿತ್ತು. ಸುದೀಪ್ ಚಿತ್ರದ ಟ್ರೈಲರ್ ನೋಡಿ ಮೆಚ್ಚಿದ್ದರು. ಧ್ರುವ ಸರ್ಜಾ ಕೂಡ ಸಿನಿಮಾ ನೋಡಿ ತಂಡದ ಬೆನ್ನು ತಟ್ಟಿದ್ದರು.
ವಿದ್ಯಾಪತಿ
ಡಾಲಿ ಧನಂಜಯ್ ನಿರ್ಮಾಣದ 'ವಿದ್ಯಾಪತಿ' ಸಿನಿಮಾ ಕಳೆದ ತಿಂಗಳು ಪ್ರೇಕ್ಷಕರ ಮುಂದೆ ಬಂದಿತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಚಿತ್ರಕ್ಕೆ ರೆಸ್ಪಾನ್ಸ್ ಸಿಕ್ಕಿರಲಿಲ್ಲ. ಈ ಹಿಂದೆ 'ಇಕ್ಕಟ್' ಎಂಬ ಸಿನಿಮಾ ಕಟ್ಟಿಕೊಟ್ಟಿದ್ದ ಇಶಾಂ ಹಾಗೂ ಹಸೀಂ ಖಾನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಡಾಲಿ ಧನಂಜಯ್ ಕೂಡ ಅತಿಥಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದರು.
ನಾಗಭೂಷಣ್ ಹಾಗೂ ಮಲೈಕಾ ವಸುಪಾಲ್ 'ವಿದ್ಯಾಪತಿ' ಚಿತ್ರದಲ್ಲಿ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಗರುಡ ರಾಮ್ ವಿಲನ್ ಆಗಿ ಅಬ್ಬರಿಸಿದ್ದರು. ಲವಿತ್ ಛಾಯಾಗ್ರಹಣ, ಡಾಸ್ಮೋಡ್ ಸಂಗೀತ, ಮುರಳಿ ನೃತ್ ಸಂಯೋಜನೆ, ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಅರ್ಜುನ್ ಮಾಸ್ಟರ್ ಸ್ಟಂಟ್ಸ್ ಚಿತ್ರಕ್ಕಿದೆ. ಅಮೇಜಾನ್ ಪ್ರೈಂ ವೀಡಿಯೋದಲ್ಲಿ ಸಿನಿಮಾ ನೋಡಬಹುದು.


Click it and Unblock the Notifications











