Kalki 2898 AD OTT; ಕೊನೆಗೂ ಪ್ರಭಾಸ್ 'ಕಲ್ಕಿ 2898 AD' ಓಟಿಟಿ ಸ್ಟ್ರೀಮಿಂಗ್ ಡೇಟ್ ಘೋಷಣೆ
ಸೂಪರ್ ಹಿಟ್ 'ಕಲ್ಕಿ 2898 AD' ಸಿನಿಮಾ ಓಟಿಟಿಗೆ ಬರುವ ಸಮಯ ಹತ್ತಿರವಾಗಿದೆ. ಜೂನ್ 27ಕ್ಕೆ ತೆರೆಗೆ ಬಂದಿದ್ದ ಸಿನಿಮಾ 1000 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಸಿನಿಮಾ 50 ದಿನಗಳ ಹೊಸ್ತಿಲಲ್ಲಿದೆ. ಇಂತಹ ಹೊತ್ತಲ್ಲೇ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ.
ನಾಗ್ ಅಶ್ವಿನ್ ನಿರ್ದೇಶನದ ಎಪಿಕ್ ಸೈನ್ಸ್ ಫಿಕ್ಷನ್ 'ಕಲ್ಕಿ 2898 AD' ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೂ ಬಹಳ ದಿನಗಳ ಬಳಿಕ ಬಂದ ದೊಡ್ಡ ಚಿತ್ರ ಎನ್ನುವ ಕಾರಣಕ್ಕೆ ಜನ ಸಿನಿಮಾ ನೋಡಲು ಮುಗಿಬಿದ್ದರು. ಐಪಿಎಲ್, ಎಲೆಕ್ಷನ್ ದರ್ಬಾರ್ ಬಳಿಕ 'ಕಲ್ಕಿ' ಬಂದಿದ್ದ. ಹಾಗಾಗಿ ನೆಗೆಟಿವ್ ಟಾಕ್ ನಡುವೆಯೂ ಸಿನಿಮಾ ಪ್ರೇಕ್ಷಕರನ್ನು ಸೆಳೆದಿತ್ತು.

ವೈಜಯಂತಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಅಶ್ವಿನಿ ದತ್ 'ಕಲ್ಕಿ 2898 AD' ಚಿತ್ರವನ್ನು ನಿರ್ಮಿಸಿದ್ದರು. ಅಂದಾಜು 500 ಕೋಟಿ ರೂ. ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗಿತ್ತು. ಬಹಳ ಹಿಂದೆ ಸೆಟ್ಟೇರಿದ್ದ ಸಿನಿಮಾ ಕಾರಣಾಂತರಗಳಿಂದ ತೆರೆಗೆ ಬರುವುದು ತಡವಾಗಿತ್ತು. ಇನ್ನು 'ಸಲಾರ್' ಸಿನಿಮಾ ಮಾಡಿ ಗೆದ್ದಿದ್ದ ಪ್ರಭಾಸ್ ಕಲ್ಕಿಯಾಗಿ ಮತ್ತೊಮ್ಮೆ ಬಾಕ್ಸಾಫೀಸ್ ಶೇಕ್ ಮಾಡಿದ್ದರು.
ಮಿಶ್ರ ಪ್ರತಿಕ್ರಿಯೆ ಸಿಕ್ಕ ಸಿನಿಮಾ 1000 ಕೋಟಿ ರೂ. ಕಲೆಕ್ಷನ್ ಮಾಡಿದೆ ಎನ್ನುವುದನ್ನು ಕೆಲವರು ನಂಬಲು ಸಿದ್ಧರಿಲ್ಲ. ಆದರೆ ಚಿತ್ರತಂಡವೇ ಘೋಷಣೆ ಮಾಡಿದೆ. ಕುರುಕ್ಷೇತ್ರ ಹಾಗೂ ಕಲ್ಕಿ ಪುರಾಣಕ್ಕೂ ಲಿಂಕ್ ಮಾಡಿ 'ಕಲ್ಕಿ 2898 AD' ಚಿತ್ರವನ್ನು ನಾಗ್ ಅಶ್ವಿನ್ ಕಟ್ಟಿಕೊಟ್ಟಿದ್ದರು. ಆದರೆ ಕಥೆಯಲ್ಲಿ ಇನ್ನು ಕಲ್ಕಿಯ ಆಗಮನವೇ ಆಗಿಲ್ಲ. ಎರಡೂ ಭಾಗಗಳಾಗಿ ಸಿನಿಮಾ ತೆರೆಗೆ ಬರಲಿದೆ. ಹಾಗಾಗಿ ಎರಡನೇ ಭಾಗದಲ್ಲಿ ಇನ್ನುಳಿದ ಕಥೆ ಹೇಳಲಿದ್ದಾರೆ.
ಸದ್ಯಕ್ಕೆ ಪ್ರಭಾಸ್ ಬೇರೆ ಬೇರೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ನಾಗ್ ಅಶ್ವಿನ್ ಕೂಡ ಮತ್ತೊಂದು ಸಿನಿಮಾ ಬಳಿಕ ಪ್ರಭಾಸ್ ಜೊತೆ ಕಲ್ಕಿ ಸೀಕ್ವೆಲ್ ಮಾಡುವ ಲೆಕ್ಕಾಚಾರಲ್ಲಿದ್ದಾರೆ. ಅಂದಹಾಗೆ 'ಕಲ್ಕಿ 2898 AD' ಚಿತ್ರದಲ್ಲಿ ಪ್ರಭಾಸ್ ಜೊತೆ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ರೀತಿಯ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಅಶ್ವತ್ಥಾಮನಾಗಿ ಬಿಗ್‌ಬಿ ಅಂತೂ ಪ್ರಭಾಸ್‌ಗಿಂತ ಹೆಚ್ಚು ಸ್ಕೋರ್ ಮಾಡಿದ್ದಾರೆ.

ಚಿತ್ರಕ್ಕಾಗಿ ನಾಗ್ ಅಶ್ವಿನ್ ಹೊಸ ಪ್ರಪಂಚವನ್ನೇ ಸೃಷ್ಟಿಸಿದ್ದಾರೆ. ಇನ್ನು ಕ್ಲೈಮ್ಯಾಕ್ಸ್‌ನಲ್ಲಿ ಪ್ರಭಾಸ್‌ನ ಕರ್ಣನಾಗಿ ತೋರಿಸಿ ಹುಬ್ಬೇರುವಂತೆ ಮಾಡಿದ್ದರು. ಇದೀಗ ಸಿನಿಮಾ ಓಟಿಟಿ ಸ್ಟ್ರೀಮಿಂಗ್ ಬಗ್ಗೆ ಚರ್ಚೆ ಶುರುವಾಗಿದೆ. ಒಂದಲ್ಲ ಎರಡೆರಡು ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಪ್ರೈಂ ವೀಡಿಯೋದಲ್ಲಿ ತೆಲುಗು ಸೇರಿದಂತೆ ದಕ್ಷಿಣದ 4 ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ.
ಹಿಂದಿ ವರ್ಷನ್ ಮಾತ್ರ ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಣೆಗೆ ಸಿಗಲಿದೆ. ಆಗಸ್ಟ್ 22ಕ್ಕೆ ಸಿನಿಮಾ ಸ್ಟ್ರೀಮ್ ಆಗುತ್ತದೆ. ಈಗಾಗಲೇ ಅಮೇಜಾನ್ ಪ್ರೈಂ ಸಂಸ್ಥೆ ಇದನ್ನು ಅಧಿಕೃತವಾಗಿ ಘೋಷಿಸಿದೆ. ಇತ್ತೀಚಿಗೆ ದೊಡ್ಡ ದೊಡ್ಡ ಸಿನಿಮಾಗಳೇ 30 ದಿನಕ್ಕೆಲ್ಲಾ ಓಟಿಟಿಗೆ ಬರುತ್ತಿದೆ. ಆದರೆ ಈ ವಿಚಾರದಲ್ಲಿ ನಾಗ್ ಅಶ್ವಿನ್ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದರು. ಸಿನಿಮಾ ಲಾಂಗ್ ರನ್ ಆಗುತ್ತದೆ ಎಂದು ಅಂದಾಜಿಸಿದ್ದರು. ಹಾಗಾಗಿ 8 ವಾರಗಳ ಬಳಿಕ ಓಟಿಟಿ ಸ್ಟ್ರೀಮಿಂಗ್‌ಗೆ ಒಪ್ಪಂದ ಮಾಡಿಕೊಂಡಿದ್ದರು.
ಈಗಾಗಲೇ 'ಕಲ್ಕಿ 2898 AD' ಸಿನಿಮಾ ನೋಡಿರುವವರು ನೋಡದವರು ಓಟಿಟಿಯಲ್ಲಿ ಮತ್ತೆ ವೀಕ್ಷಿಸಲು ಕಾಯುತ್ತಿದ್ದಾರೆ. ಮುಖ್ಯವಾಗಿ ಮಹಾಭಾರತದ ಸಣ್ಣ ಸಣ್ಣ ಝಲಕ್ ನೋಡಲು ಕಾಯುತ್ತಿದ್ದಾರೆ. ಕ್ಲೈಮ್ಯಾಕ್ಸ್‌ನಲ್ಲಿ ಅರ್ಜುನನಾಗಿ ವಿಜಯ್ ದೇವರಕೊಂಡ ಹಾಗೂ ಕರ್ಣನಾಗಿ ಪ್ರಭಾಸ್ ಮುಖಾಮುಖಿ ನೋಡಲು ಕಾತುರರಾಗಿದ್ದಾರೆ.


Click it and Unblock the Notifications











