'ದೇವರ' ಓಟಿಟಿ ಪಾರ್ಟ್ನರ್ ಯಾರು? ಯಾವಾಗ ಸ್ಟ್ರೀಮಿಂಗ್? ನಿರ್ಮಾಪಕರೇ ಕೊಟ್ರು ಮಾಹಿತಿ
ತೆಲುಗು ನಟ ಜ್ಯೂ. ಎನ್‌ಟಿಆರ್ ನಟನೆಯ 'ದೇವರ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಏಪ್ರಿಲ್ 5ಕ್ಕೆ ಸಿನಿಮಾ ತೆರೆಗಪ್ಪಳಿಸಲಿದೆ. ಇದೀಗ ಚಿತ್ರದ ಓಟಿಟಿ ಡಿಟೈಲ್ಸ್ ಸಿಕ್ಕಿದೆ. ಅರೇ ಸಿನಿಮಾ ಬಿಡುಗಡೆಗೆ ಇನ್ನು 4 ತಿಂಗಳು ಬಾಕಿಯಿದೆ. ಇಷ್ಟು ಬೇಗ ಓಟಿಟಿ ಕಥೆ ಯಾಕೆ? ಎನ್ನುವ ಪ್ರಶ್ನೆ ಮೂಡುವುದು ಸಹಜ.
ಸಾಮಾನ್ಯವಾಗಿ ಸಿನಿಮಾ ಬಿಡುಗಡೆ ಆಗುವವರೆಗೂ ಓಟಿಟಿ ಪಾರ್ಟ್ನರ್ ಯಾರು? ಎನ್ನುವ ಬಗ್ಗೆ ಚಿತ್ರತಂಡ ಕುತೂಹಲ ಉಳಿಸಿಕೊಳ್ಳುತ್ತದೆ. ಆದರೆ 'ದೇವರ' ಸಿನಿಮಾ ನಿರ್ಮಾಪಕ ತಾರಕ್ ಸಹೋದರ ಕಲ್ಯಾಣ್ ರಾಮ್ ಮಾಹಿತಿ ನೀಡಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಹಳ ದೊಡ್ಡದಾಗಿ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ತೆರೆಗೆ ಬರುತ್ತಿದೆ. ಅದಕ್ಕೆ ತಕ್ಕಂತೆ ಓಟಿಟಿ ಡೀಲ್ ಕೂಡ ಕುದುರಿಸಿರುವ ಬಗ್ಗೆ ಗುಸುಗುಸು ಕೇಳಿಬರ್ತಿದೆ.

ಕೊರಟಾಲ ಶಿವ ನಿರ್ದೇಶನದ ಆಕ್ಷನ್ ಡ್ರಾಮಾ 'ದೇವರ' ಚಿತ್ರದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರವನ್ನು ಎರಡು ಭಾಗಗಳಾಗಿ ತೆರೆಗೆ ತರುವುದಾಗಿ ಚಿತ್ರತಂಡ ಘೋಷಿಸಿದೆ. ಸೈಫ್ ಅಲಿಖಾನ್ ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸುತ್ತಿದ್ದಾರೆ. ಪ್ರಕಾಶ್ ರಾಜ್, ಶ್ರೀಕಾಂತ್, ಮುರಳಿ ಶರ್ಮಾ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಇತ್ತೀಚೆಗೆ ಬಿಡುಗಡೆಯಾದ ಚಿತ್ರದ ಟೀಸರ್‌ಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು.
ಯುವಸುಧಾ ಆರ್ಟ್ಸ್ ಹಾಗೂ ಎನ್‌ಟಿಆರ್ ಆರ್ಟ್ಸ್ ಬ್ಯಾನರ್‌ಗಳಲ್ಲಿ ಕಲ್ಯಾಣ್ ರಾಮ್ ಹಾಗೂ ಸುಧಾಕರ್ ಮಿಕ್ಕಿನೇನಿ ಜಂಟಿಯಾಗಿ 'ದೇವರ' ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಮೊದಲ ಭಾಗದ ಚಿತ್ರೀಕರಣ 80ರಷ್ಟು ಮುಕ್ತಾಯವಾಗಿದೆ. ಇನ್ನು ಚಿತ್ರದಲ್ಲಿ 5 ಭಾಷೆಗಳ ಓಟಿಟಿ ರೈಟ್ಸ್ ನೆಟ್‌ಫ್ಲಿಕ್ಸ್ ಕೊಂಡುಕೊಂಡಿರುವುದಾಗಿ ನಿರ್ಮಾಪಕರು ಹೇಳಿದ್ದಾರೆ. ಆದರೆ ಎಷ್ಟು ಮೊತ್ತಕ್ಕೆ ಎನ್ನುವುದನ್ನು ಹೇಳಿಲ್ಲ.
ಟಾಲಿವುಡ್‌ನಲ್ಲಿ ಕೇಳಿಬರುತ್ತಿರುವ ವದಂತಿ ಪ್ರಕಾರ ಅಂದಾಜು 150 ಕೋಟಿ ರೂ.ಗೆ 'ದೇವರ' ಡಿಜಿಟಲ್ ರೈಟ್ಸ್ ಬಿಕರಿಯಾಗಿದೆ. ಏಪ್ರಿಲ್ 5ಕ್ಕೆ ಸಿನಿಮಾ ತೆರೆಗೆ ಬಂದರೆ ಮೇ ಕೊನೆ ವಾರ ಅಥವಾ ಜೂನ್ ಮೊದಲ ವಾರದಲ್ಲಿ ಓಟಿಟಿಗೆ ಬರುವ ಸಾಧ್ಯತೆಯಿದೆ. ಸಾಮಾನ್ಯವಾಗಿ ದೊಡ್ಡ ಸಿನಿಮಾಗಳು ಥಿಯೇಟರ್‌ಗೆ ಬಂದ 7 ವಾರಗಳ ಬಳಿಕ ಡಿಜಿಟಲ್ ಸ್ಟ್ರೀಮಿಂಗ್ ಒಪ್ಪಂದ ನಡೆಯುತ್ತದೆ.

'ದೇವರ' ಚಿತ್ರದಲ್ಲಿ ತಾರಕ್ ತಂದೆ ಮಗನಾಗಿ ಡಬಲ್ ರೋಲ್ ಪ್ಲೇ ಮಾಡಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ. ಕಳೆದ ವಾರ ಆಕ್ಷನ್ ಪ್ಯಾಕ್ಡ್ ಟೀಸರ್ ರಿಲೀಸ್ ಆಗಿ ಸದ್ದು ಮಾಡಿತ್ತು. ಬಹುಕೋಟಿ ವೆಚ್ಚದಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗುತ್ತಿದೆ. ಕರಾವಳಿ ಭಾಗದಲ್ಲಿ ನಡೆಯುವ ಕಥೆ ಇದಾಗಿದ್ದು ನಂದಮೂರಿ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ಗ್ಯಾರೆಂಟಿ ಎನ್ನಬಹುದು. ಇನ್ನು ಕನ್ನಡಕ್ಕೆ ಸ್ವತಃ ತಾರಕ್ ಡಬ್ಬಿಂಗ್ ಮಾಡಲಿದ್ದು ಕುತೂಹಲ ಮೂಡಿಸಿದೆ.
'ದೇವರ' ಮೊದಲ ಭಾಗ ಬಳಿಕ ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರದಲ್ಲಿ ಎನ್‌ಟಿಆರ್ ನಟಿಸಲಿದ್ದಾರೆ. ಜೊತೆಗೆ ಬಾಲಿವುಡ್‌ನಲ್ಲಿ ಹೃತಿಕ್ ರೋಷನ್ ಜೊತೆ 'ವಾರ್- 2' ಚಿತ್ರದಲ್ಲಿ ನಟಿಸಬೇಕಿದೆ. ಆ ಬಳಿಕ ಶೆಡ್ಯೂಲ್ ನೋಡಿಕೊಂಡು 'ದೇವರ'- 2 ಶೂಟಿಂಗ್ ಮಾಡುವುದಾಗಿಯೂ ಕಲ್ಯಾಣ್ ರಾಮ್ ತಿಳಿಸಿದ್ದಾರೆ. ಒಟ್ಟಾರೆ ತಾರಕ್ ಅಭಿಮಾನಿಗಳಂತೂ 'ದೇವರ' ದರ್ಶನಕ್ಕೆ ಕಾತರದಿಂದ ಕಾಯುತ್ತಿದ್ದಾರೆ.
ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟ ಕೊರಟಾಲ ಶಿವ 'ಆಚಾರ್ಯ' ಸಿನಿಮಾ ಮಾಡಿ ಸೋತಿದ್ದರು. ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು. ಇದೀಗ 'ದೇವರ' ಸಿನಿಮಾ ಮಾಡಿ ಭರ್ಜರಿ ಕಂಬ್ಯಾಕ್ ಮಾಡುವ ಲೆಕ್ಕಾಚಾರದಲ್ಲಿದ್ದಾರೆ. ಇನ್ನು ಬಾಲಿವುಡ್‌ನಲ್ಲಿ ಸಕ್ಸಸ್ ಕಾಣದ ಜಾನ್ವಿ ಕಪೂರ್ ಇದೀಗ ಸೌತ್ ಕಡೆ ಮುಖ ಮಾಡಿದ್ದು 'ದೇವರ' ಜೊತೆ ಅದೃಷ್ಟಪರೀಕ್ಷೆಗೆ ಇಳಿದಿದ್ದಾರೆ.


Click it and Unblock the Notifications











