ಜೀವನದ ಕರಾಳ ಘಟನೆ ಬಿಚ್ಚಿಟ್ಟ ನಟಿ ಕಂಗನಾ ರನೌತ್
ಸಹ ನಟ-ನಟಿಯರ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ ಸುದ್ದಿಯಾಗುವ ನಟಿ ಕಂಗನಾ ರನೌತ್ ಇದೀಗ ತಮ್ಮದೇ ಜೀವನದ ಕರಾಳ ಘಟನೆಯೊಂದನ್ನು ಬಹಿರಂಗಗೊಳಿಸಿದ್ದಾರೆ.
ಲಾಕ್ ಅಪ್ ಹೆಸರಿನ ರಿಯಾಲಿಟಿ ಶೋ ಒಂದನ್ನು ಕಂಗನಾ ರನೌತ್ ನಡೆಸುತ್ತಿದ್ದು, ಶೋನಲ್ಲಿ ತಮ್ಮ ಜೀವನದ ಕರಾಳ ಘಟನೆಯೊಂದನ್ನು ಬಹಿರಂಗಪಡಿಸಿದ್ದಾರೆ. ಶೋನಲ್ಲಿ ಮಾತನಾಡಿರುವ ಕಂಗನಾ, ತಾವು ಸಣ್ಣ ವಯಸ್ಸಿನಲ್ಲಿಯೇ ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗಿರುವ ಘಟನೆಯನ್ನು ಹಂಚಿಕೊಂಡಿದ್ದಾರೆ.
ರಿಯಾಲಿಟಿ ಶೋನಲ್ಲಿ ಯಾವುದೇ ಸ್ಪರ್ಧಿ ಎಲಿಮಿನೇಶನ್‌ಗೆ ಬಂದಾಗ ತಮ್ಮ ಜೀವನದ ಕರಾಳ ಸತ್ಯವನ್ನು ಬಹಿರಂಗಗೊಳಿಸಿ ಶೋನಲ್ಲಿಯೇ ಮುಂದುವರೆಯಬಹುದಾದ ಆಯ್ಕೆ ಇದೆ. ಸ್ಟಾಂಡ್ ಅಪ್ ಕಮಿಡಿಯನ್ ಮುನಾವರ್ ಸಿದ್ಧಿಕಿ ಇದೇ ಶೋನ ಸ್ಪರ್ಧಿಯಾಗಿದ್ದು, ಶೋನಲ್ಲಿ ತಮ್ಮ ಜೀವನದಲ್ಲಿ ನಡೆದ ಕರಾಳ ಅನುಭವದ ಬಗ್ಗೆ ಕಂಗನಾ ಬಳಿ ಹೇಳಿಕೊಂಡಿದ್ದರು.

ತಾವು ಬಾಲ್ಯದಲ್ಲಿ ತಮ್ಮ ಸಂಬಂಧಿಗಳಿಂದಲೇ ಲೈಂಗಿಕ ದೌರ್ಜನ್ಯ ಅನುಭವಿಸಿದ್ದಾಗಿ ಮುನಾವರ್ ಸಿದ್ಧಿಕಿ ಹೇಳಿದರು. ಈ ವಿಷಯ ತಮ್ಮ ತಂದೆಗೂ ಗೊತ್ತಿತ್ತೆಂದು ಮುನಾವರ್ ಹೇಳಿದರು. ಈ ಬಗ್ಗೆ ಯಾರಿಗಾದರೂ ಹೇಳಿ ಪ್ರಯೋಜನವೇನು ಎಂದು ತಾವು ಅಂದುಕೊಂಡಂತೆ ತಮ್ಮ ತಂದೆಯೂ ಅಂದುಕೊಂಡಿರಬೇಕು ಎಂದು ಮುನಾವರ್ ಹೇಳಿದ್ದಾರೆ.
ಮುನಾವರ್ ಮಾತು ಕೇಳಿದ ಕಂಗನಾ, ''ಹಲವಾರು ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ನಾನು ಬಾಲಕಿಯಾಗಿದ್ದಾಗ ನಮ್ಮ ಊರಿನಲ್ಲಿ ಒಬ್ಬ ಹುಡುಗನಿಂದ ದೌರ್ಜನ್ಯಕ್ಕೆ ಒಳಗಾಗಿದ್ದೆ. ಆತ ನನ್ನನ್ನು ಕೆಟ್ಟದಾಗಿ ಮುಟ್ಟುತ್ತಿದ್ದ, ಮುತ್ತು ಕೊಡುವುದು ಇತರೆ ಚೇಷ್ಟೆಗಳನ್ನು ಮಾಡುತ್ತಿದ್ದ, ಆದರೆ ಆಗ ನನಗೆ ಅದರ ಅರ್ಥ ಗೊತ್ತಿರಲಿಲ್ಲ'' ಎಂದಿದ್ದಾರೆ.
ಮುಂದುವರೆದು, ಮತ್ತೊಂದು ಘಟನೆಯನ್ನು ನೆನಪು ಮಾಡಿಕೊಂಡ ಕಂಗನಾ ''ನಾವಿದ್ದ ಏರಿಯಾದಲ್ಲಿ ಹುಡುಗನೊಬ್ಬ ಇದ್ದ ಅವನು ನಮಗಿಂತಲೂ ಕೆಲವು ವರ್ಷ ದೊಡ್ಡವನಾಗಿದ್ದ. ಆಗಷ್ಟೆ ಯೌವ್ವನದ ಕಡೆಗೆ ಹೊರಳುತ್ತಿದ್ದ. ಆಗ ನಾವೆಲ್ಲ ಸಣ್ಣ ಬಾಲಕಿಯರಾಗಿದ್ದೆವು, ಅವನು ನಮ್ಮನ್ನೆಲ್ಲ ಕರೆದು, ನಮ್ಮ ಬಟ್ಟೆಗಳನ್ನು ಬಿಚ್ಚಿಸಿ, ನಮ್ಮನ್ನು ಸಾಲಾಗಿ ನಿಲ್ಲಿಸಿ ಕೆಟ್ಟದಾಗಿ ಮುಟ್ಟುತ್ತಿದ್ದ, ಕೆಟ್ಟದಾಗಿ ವರ್ತಿಸುತ್ತಿದ್ದ. ಆ ವಯಸ್ಸಿನಲ್ಲಿ ನಮಗೆ ಇವೆಲ್ಲ ಅರ್ಥವಾಗುತ್ತಿರಲಿಲ್ಲ. ಆತ ಏನು ಮಾಡುತ್ತಿದ್ದಾನೆ ಎಂಬುದು ಸಹ ನಮಗೆ ಗೊತ್ತಾಗುತ್ತಿರಲಿಲ್ಲ'' ಎಂದು ಕಂಗನಾ ಹೇಳಿದ್ದಾರೆ.
ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯದ ಬಗ್ಗೆ ಶೋನಲ್ಲಿ ಮಾತನಾಡಿದ ಕಾಜಲ್, ''ಈಗಲೂ ಲೆಕ್ಕವಿಲ್ಲದಷ್ಟು ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಮಾಡುವವರು ಪರಿಚಿತರೇ, ಸಂಬಂಧಿಗಳೇ ಆಗಿರುತ್ತಾರೆ. ಈ ರೀತಿಯ ದೌರ್ಜನ್ಯ ಪ್ರಕರಣಗಳು ಮಕ್ಕಳ ಮನಸ್ಸಿನ ಮೇಲೆ ಘಾಡ ಪರಿಣಾಮ ಬೀರುತ್ತವೆ'' ಎಂದಿದ್ದಾರೆ.


Click it and Unblock the Notifications











