ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದ 'ಕಂಗುವ' ಓಟಿಟಿ ಸ್ಟ್ರೀಮಿಂಗ್ ಡೇಟ್ ಫಿಕ್ಸ್!
ತಮಿಳಿನ 'ಕಂಗುವ' ಸಿನಿಮಾ ಈ ವರ್ಷ ಭಾರೀ ಸದ್ದು ಮಾಡಿದ್ದು ಗೊತ್ತೇಯಿದೆ. ಸೂರ್ಯ ನಟನೆಯ ಫ್ಯಾಂಟಸಿ ಸಿನಿಮಾ ಪ್ರೇಕ್ಷಕರ ನಿರೀಕ್ಷೆ ಹುಸಿಯಾಗಿಸಿತ್ತು. ಬಹುಕೋಟಿ ವೆಚ್ಚದ ಸಿನಿಮಾ ಹೀನಾಯವಾಗಿ ಸೋತಿತ್ತು. ಮೊದಲ ಶೋನಿಂದಲೇ ನೆಗೆಟಿವ್ ಟಾಕ್ ಬಂದು ಸಿನಿಮಾ ಸೋಲಿನ ಹಾದಿ ಹಿಡಿಯಿತು.
ಕಾಲ್ಪನಿಕ ಕಥಾಹಂದರದ 'ಕಂಗುವ' ಚಿತ್ರವನ್ನು 3D, 2D ಹಾಗೂ ಐಮ್ಯಾಕ್ಸ್ ವರ್ಷನ್‌ಗಳಲ್ಲಿ ತೆರೆಗೆ ತರಲಾಗಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗಿತ್ತು. ದ್ವಿಪಾತ್ರದಲ್ಲಿ ನಟ ಸೂರ್ಯ ಅಬ್ಬರಿಸಿದ್ದರು. ಆದರೆ ಸಿನಿಮಾ ನೋಡಿದ ಪ್ರೇಕ್ಷಕರ ಬೇಸರಗೊಂಡಿದ್ದರು. ಕೆಲವರು ಮಾತ್ರ ಚಿತ್ರತಂಡದ ಶ್ರಮವನ್ನು ಕೊಂಡಾಡಿದ್ದರು.

ಬಹುತೇಕರು ಸಿನಿಮಾ ನೋಡಲು ಚಿತ್ರಮಂದಿರಗಳಿಗೆ ಹೋಗಲೇ ಇಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ನೋಡಿದವರ ರೆಸ್ಪಾನ್ಸ್ ನೋಡಿ ಸುಮ್ಮನಾಗಿದ್ದರು. ಹಾಗಾಗಿ ಓಟಿಟಿ ಸ್ಟ್ರೀಮಿಂಗ್‌ಗಾಗಿ ಸಾಕಷ್ಟು ಜನ ಕಾಯುತ್ತಿದ್ದಾರೆ. ಅಮೇಜಾನ್ ಪ್ರೈಂ ಸಂಸ್ಥೆ 'ಕಂಗುವ' ಓಟಿಟಿ ರೈಟ್ಸ್ ಕೊಂಡುಕೊಂಡಿರುವುದು ಗೊತ್ತೇಯಿದೆ. ಚಿತ್ರ ಹೀನಾಯವಾಗಿ ಸೋತಿರುವುದರಿಂದ ಆದಷ್ಟೆ ಬೇಗ ಓಟಿಟಿಗೆ ಬರಲಿದೆ.
'ಕಂಗುವ' ಚಿತ್ರಕ್ಕೆ ಶಿವ ಆಕ್ಷನ್ ಕಟ್ ಹೇಳಿದ್ದಾರೆ. ವರ್ತಮಾನ ಹಾಗೂ 1000 ವರ್ಷಗಳ ಹಿಂದಿನ ಕಥೆಯನ್ನು ಸೇರಿಸಿ ಒಂದು ವಿಭಿನ್ನ ಪ್ರಯತ್ನ ಮಾಡಲಾಗಿದೆ. ಪುನರ್ಜನ್ಮದ ಕಲ್ಪನೆಯಲ್ಲಿ 'ಕಂಗುವ' ಸಿನಿಮಾ ಕಥೆ ಸಾಗುತ್ತದೆ. ಫ್ಲ್ಯಾಶ್‌ಬ್ಯಾಕ್ ಎಪಿಸೋಡ್‌ನಲ್ಲಿ 5 ಬೇರೆ ಬೇರೆ ಬುಡಕಟ್ಟು ಸಮುದಾಯಗಳ ಕಥೆಯನ್ನು ಹೇಳಲಾಗಿದೆ. 'ಕಂಗುವ' ಆಗಿ ಸೂರ್ಯ ಅಬ್ಬರಿಸಿದ್ದಾರೆ. ಉಧಿರನ್ ಆಗಿ ಬಾಬಿ ಡಿಯೋಲ್ ಸವಾಲು ಹಾಕಿದ್ದಾರೆ.
ದಿಶಾ ಪಟಾನಿ ನಾಯಕಿಯಾಗಿ ನಟಿಸಿದ್ದು ಇನ್ನುಳಿದಂತೆ ನಟರಾಜನ್, ಯೋಗಿ ಬಾಬು, ಕೊವೈ ಸರಳ, ಮನ್ಸೂರ್ ಅಲಿಖಾನ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಅಂದಾಜು 300 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ 100 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಲು ತಿಣುಕಾಡುವಂತಾಗಿದೆ. ಸ್ಟುಡಿಯೋ ಗ್ರೀನ್ ಹಾಗೂ ಯುವಿ ಕ್ರಿಯೇಷನ್ಸ್ ಬ್ಯಾನರ್‌ಗಳ ಅಡಿಯಲ್ಲಿ ಜ್ಞಾನವೇಲ್ ರಾಜ, ವಂಶಿ ಕೃಷ್ಣ ರೆಡ್ಡಿ ಹಾಗೂ ಪ್ರಮೋದ್ ಚಿತ್ರವನ್ನು ನಿರ್ಮಿಸಿದ್ದಾರೆ.

'ಕಂಗುವ' ಸೋಲು ಸೂರ್ಯ ನಟನೆಯ ಮುಂದಿನ ಸಿನಿಮಾಗಳ ಪ್ರಭಾವ ಬೀರಿದೆ. ಸೂರ್ಯ ನಟಿಸಬೇಕಿದ್ದ 'ಕರ್ಣನ್' ಎಂಬ ಬಹುಕೋಟಿ ವೆಚ್ಚದ ಸಿನಿಮಾ ನಿಂತೇಹೋಗ್ತಿದೆ ಎನ್ನುವ ಮಾತುಗಳು ಕೇಳಿ ಬರ್ತಿದೆ. ಇನ್ನು ಈ ಬೇಸರದ ನಡುವೆಯೂ ಸೂರ್ಯ ನಟನೆಯ ಹೊಸ ಸಿನಿಮಾ ಸೆಟ್ಟೇರಿದೆ. ಆರ್. ಬಾಲಾಜಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.
ಅಂದಹಾಗೆ 'ಕಂಗುವ' ಸಿನಿಮಾ ಡಿಸೆಂಬರ್ ಎರಡನೇ ವಾರ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಡಿಸೆಂಬರ್ 13ಕ್ಕೆ ಸಿನಿಮಾ ಪ್ರೈಂ ವೀಡಿಯೋಗೆ ಬರಬಹುದು ಎನ್ನಲಾಗ್ತಿದೆ. ತಮಿಳು, ಕನ್ನಡ, ತೆಲುಗು, ಮಲಯಾಳಂ ವರ್ಷನ್ ವೀಕ್ಷಣೆಗೆ ಸಿಗಲಿದೆ. ಇನ್ನು ಹಿಂದಿ ವರ್ಷನ್ ಮಾತ್ರ ಜನವರಿಯಲ್ಲಿ ನೆಟ್‌ಫ್ಲಿಕ್ಸ್‌ಗೆ ಬರುವ ಸಾಧ್ಯತೆಯಿದೆ ಎಂದು ಹೇಳಲಾಗ್ತಿದೆ.
ಇತ್ತೀಚೆಗೆ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾಗಿದ್ದ ಧನಂಜಯನ್ 'ಕಂಗುವ' ಸೋಲಿನ ಬಗ್ಗೆ ಪ್ರತಿಕ್ರಿಯಿಸಿದ್ದರು. ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡಿದ್ದರು. ಚಿತ್ರದ ಸೌಂಡ್ ಕೊಂಚ ಅಧಿಕವಾಯಿತು ಎನ್ನುವುದು ಬಿಟ್ಟರೆ ಅಂತಹ ಮೈನಸ್ ಏನು ಇರಲಿಲ್ಲ. ಸುಖಾ ಸುಮ್ಮನೆ ನೆಗೆಟಿವ್ ಕಾಮೆಂಟ್ಸ್ ಮಾಡಿ ಸಿನಿಮಾ ಸೋಲಿಸಿದರು ಎಂದು ಬೇಸರ ವ್ಯಕ್ತಪಡಿಸಿದ್ದರು. ಇಬ್ಬರು ಸ್ಟಾರ್ ನಟರ ಅಭಿಮಾನಿಗಳು ಬೇಕೆಂದೆ 'ಕಂಗುವ' ಚಿತ್ರದ ಬಗ್ಗೆ ನೆಗೆಟಿವ್ ರಿವ್ಯೂ ಹರಡಿದರು. ನಟ ಸೂರ್ಯ ಅವರ ಏಳಿಗೆ ಸಹಿಸದೇ ಈ ರೀತಿ ಮಾಡಿದ್ದಾರೆ ಎಂದಿದ್ದರು.
Disclaimer:
ಡಿಸೆಂಬರ್ 13ಕ್ಕೆ ಸಿನಿಮಾ ಓಟಿಟಿಗೆ ಬರಬಹುದು ಎನ್ನುವ ಮಾತುಗಳು ಕೇಳಿಬರ್ತಿದೆ. ಆದರೆ ಈ ಬಗ್ಗೆ ಅಮೇಜಾನ್ ಪ್ರೈಂ ವೀಡಿಯೋ ಯಾವುದೇ ಅಧಿಕೃತ ಮಾಹಿತಿ ಕೊಟ್ಟಿಲ್ಲ.


Click it and Unblock the Notifications











